ನಿನ್ನೆ ಬಿಡುಗಡೆಯಾದ ‘ಗಾಳಿಪಟ 2’ ಸಿನಿಮಾದ Exam Song ಟ್ರೆಂಡಿಂಗ್‌ನಲ್ಲಿದೆ. ಯೋಗರಾಜ್ ಭಟ್ಟರ ಎಂದಿನ ಶೈಲಿಯಲ್ಲಿ ಕಚಗುಳಿ ಇಡುವಂತೆ ಬರೆದಿರುವ ಸಾಲುಗಳಿಗೆ ಸೂಕ್ತವಾಗಿ ಹೊಂದಿಕೆಯಾಗುವಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ತಿಂಗಳೊಪ್ಪತ್ತಿನಲ್ಲಿ ಸಿನಿಮಾ ತೆರೆಗೆ ಬರಲಿದೆ.
ಯೋಗರಾಜ್ ಭಟ್ ಎಂದಾಗ ಥಟ್ಟನೆ ನೆನಪಾಗೋದು ಧಾರಾಕಾರವಾಗಿ ಸುರಿದು ಕನ್ನಡ ಚಿತ್ರರಂಗದ ಕೆರೆ, ಕಟ್ಟೆ ತುಂಬುವಂತೆ ಮಾಡಿದ ‘ಮುಂಗಾರು ಮಳೆ’ ಸಿನಿಮಾ. ಹೆಚ್ಚೂಕಡಿಮೆ ಅದರಷ್ಟೇ ಪ್ರಸಂಸೆ ಗಳಿಸಿದ ಅವರ ಸಿನಿಮಾ 2008ರಲ್ಲಿ ಬಿಡುಗಡೆಯಾಗಿದ್ದ ‘ಗಾಳಿಪಟ’. ಆನಂತರದ ಮನಸಾರೆ, ಪಂಚರಂಗಿ, ಪರಮಾತ್ಮ, ಡ್ರಾಮಾ, ವಾಸ್ತು ಪ್ರಕಾರ, ದನಕಾಯೋನು ಮತ್ತು ಮುಗುಳುನಗೆ ಸಿನಿಮಾಗಳು ಭಟ್ಟರ ಟ್ರೇಡ್‌ಮಾರ್ಕ್ ಸಿನಿಮಾಗಳಿಗೆ ಸಾಕ್ಷ್ಯ ನುಡಿಯುತ್ತವೆ. ಇದೀಗ ಭಟ್ಟರು ‘ಗಾಳಿಪಟ2’ ಚಿತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ.
ಭಟ್ಟರ ಸಿನಿಮಾ ಎಂದರೆ ಅವು ಒಂದು ರೀತಿ ಸೋಲು ಗೆಲುವಿನ ಆಚೆ ನಿಲ್ಲುವಂಥ ಸಿನಿಮಾಗಳೇ. ಸಿನಿಮಾದ ಹಾಡು ಸದಾ ಗುನುಗಬಹುದಾದಂಥ ಸಾಹಿತ್ಯ – ಸಂಗೀತವಿರುತ್ತದೆ. ಯುವ ಜನತೆಯ ನೋವು – ನಲಿವು, ಪ್ರೀತಿ ಪ್ರೇಮ, ತುಮುಲ ಇತ್ಯಾದಿ ವಿಷಯಗಳನ್ನು ಆಪ್ತವಾಗಿ ತೆರೆಯ ಮೇಲೆ ತರುತ್ತಾರೆ. ಅದಕ್ಕಾಗಿಯೇ ಅವರಿಗೆ ವಿಶೇಷ ಅಭಿಮಾನಿ ಬಳಗವಿದೆ. ಪರೋಕ್ಷವಾಗಿ ಅವರ ಸಿನಿಮಾ ಮಾತುಗಳಲ್ಲಿ ಕುಚೇಷ್ಟೆ, ಒಣ ವೇದಾಂತದೊಂದಿಗೆ ಸಮಾಜದ ಹತ್ತಾರು ವಿಷಯಗಳು ಪ್ರಸ್ತಾಪವಾಗುತ್ತವೆ. ತಮ್ಮದೇ ರೀತಿಯಲ್ಲಿ ಭಟ್ಟರು ಅವನ್ನು ಪ್ರೇಕ್ಷಕರಿಗೆ ದಾಟಿಸುತ್ತಾರೆ. ಭಟ್ಟರು ಒಂದೇ ಶೈಲಿಗೆ ಅಂಟಿಕೊಂಡಿದ್ದಾರೆ ಎಂದು ಅವರ ಅಭಿಮಾನಿಗಳಿಗೆ ಅಸಮಾಧಾನವೂ ಇದೆ.
ಕಳೆದ ಬಾರಿ ಯುವಕರು ಮತ್ತು ಹಿರಿಯರ ನಡುವಿನ ಜನರೇಷನ್ ಗ್ಯಾಪ್ ತಿಕ್ಕಾಟವನ್ನು ‘ಪಂಚತಂತ್ರ’ ಸಿನಿಮಾ ಮುಖಾಂತರ ತೆರೆ ಮೇಲೆ ತಂದು ಹೊಸ ದಿಕ್ಕಿನ ಆಲೋಚನೆಯಲ್ಲಿ ಕಾರ್ ರೇಸ್ ಸಿನಿಮಾ ಮಾಡಿದ್ದರು. ಸದ್ಯ ಈಗ ‘ಗಾಳಿಪಟ2’ ತೆರೆಗೆ ತರಲು ಸಜ್ಜಾಗಿದ್ದಾರೆ. ಹದಿನಾಲ್ಕು ವರ್ಷಗಳ ಹಿಂದೆ ತೆರೆಕಂಡ ‘ಗಾಳಿಪಟ’ದಲ್ಲಿ ನಟಿಸಿದ್ದ ಬಹುತೇಕ ಕಲಾವಿದರು ಇಲ್ಲಿದ್ದಾರೆ. ಹೊಸ ಕಲಾವಿದರೂ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಸಿನಿರಸಿಕರ ಗಮನ ಸೆಳೆಯುವಂಥ Motion Poster ಲಾಂಚ್ ಮಾಡಿದ್ದ ಚಿತ್ರತಂಡ ನಿನ್ನೆ Exam Song ರಿಲೀಸ್ ಮಾಡಿದೆ. ‘ಪರೀಕ್ಷೆನಾ ಬಡಿಯಾ, ಕೊಶ್ಚನ್ ಪೇಪರ್‌ಗೆ ಎಂಟ್ಹತ್ತು ನಾಗರಹಾವು ಕಡಿಯಾ’ ಎಂದು ತಮ್ಮ ಎಂದಿನ ಟ್ರೇಡ್ ಮಾರ್ಕ್ ಶೈಲಿಯಲ್ಲೇ ಭಟ್ಟರು ಹಾಡು ಬರೆದಿದ್ದಾರೆ.
ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಹಿನ್ನೆಲೆ ಗಾಯನವಿದೆ. ಜನ್ಯ ಮತ್ತು ಭಟ್ಟರ ಧ್ವನಿಗಳೂ ಈ ಹಾಡಿನಲ್ಲಿವೆ. ಮೊದಲ ಭಾಗದಲ್ಲಿ ನಟಿಸಿದ್ದ ಗಣೇಶ್, ದಿಗಂತ್, ರಂಗಾಯಣ ರಘು, ಅನಂತನಾಗ್, ಪದ್ಮಜಾ ರಾವ್, ಸುಧಾ ಬೆಳವಾಡಿ ಮುಂತಾದವರ ಜೊತೆಗೆ ಪವನ್ ಕುಮಾರ್ ಮೂವರು ನಾಯಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಪುಟ್ಟ ಪಾತ್ರವೊಂದರಲ್ಲಿ ಗಣೇಶ್ ಮಗ ವಿಹಾನ್ ಕೂಡ ಇರುವುದು ವಿಶೇಷ. ನಾಯಕಿಯರಾಗಿ ನಿಶ್ವಿಕಾ ನಾಯ್ಡು, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್ ಮತ್ತು ವೈಭವಿ ಶಾಂಡಿಲ್ಯ ಇದ್ದಾರೆ. ಅಕಾಲಿಕವಾಗಿ ಅಗಲಿದ ಹಾಸ್ಯನಟ ಬುಲೆಟ್ ಪ್ರಕಾಶ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಇದು ಅವರ ಕೊನೆಯ ಸಿನಿಮಾ ಆಗಲಿದೆ. ಚಿತ್ರದಲ್ಲಿ ಜಯಂತ ಕಾಯ್ಕಿಣಿ ಅವರ ರಚನೆಯ ಎರಡು ಹಾಡುಗಳಿವೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದ್ದು, ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಮೇಶ್ ರೆಡ್ಡಿ ಸಿನಿಮಾ ನಿರ್ಮಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ Exam Song ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ಮೇ ತಿಂಗಳ ಕೊನೆಗೆ ಇಲ್ಲವೇ ಜೂನ್ ಆರಂಭಕ್ಕೆ ‘ಗಾಳಿಪಟ2’ ತೆರೆಗೆ ಬರಲಿದೆ.