ಸಂಬಂಧದ ಒಂದು‌ ಎಳೆಯನ್ನೆತ್ತಿ ಮಾಡಿದ ಸಿನಿಮಾ‌ ಕತೆಗಳು ಸಾಕಷ್ಟಿವೆ. ಆದರೆ ಮನುಷ್ಯ ಸಂಬಂಧಗಳ ಬಹು ಆಯಾಮಗಳನ್ನೇ ಕತೆಯ ಕೇಂದ್ರವಾಗಿರಿಸಿ ಬರುತ್ತಿರುವ ಸಿನಿಮಾಗಳ ಸಂಖ್ಯೆ‌ ಇತ್ತೀಚೆಗಂತೂ ತೀರಾ ಕಮ್ಮಿ. ಅಂಥ‌ ವಿರಳ‌ ಚಿತ್ರ ‘ವೆಯಿಲ್’. ಥಿಯೇಟರಲ್ಲಿ ಬಿಡುಗಡೆಯಾದಾಗ ಪ್ರೇಕ್ಷಕರ ‌ಸಂಖ್ಯೆಯೂ ವಿರಳವೇ ಇತ್ತು. ಆದರೂ‌ ನೋಡಿದವರಲ್ಲಿ‌ ಮೆಚ್ಚಿದವರೇ ಹೆಚ್ಚು. ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗಿಗೆ ಬಂದ ಮೇಲೆ ವಿಶಾಲ ವರ್ಗಕ್ಕೆ ಸಿಕ್ಕಿ ಮೆಚ್ಚುಗೆಗೆ ಪಾತ್ರವಾಗಿದೆ.

ತುಂಬಾ ಭಾವುಕತೆಯಿಂದ ಕೂಡಿದ ಸಿನಿಮಾಗಳನ್ನು ಅಷ್ಟಾಗಿ ಇಷ್ಟಪಡದವರಲ್ಲಿ ನಾನೂ ಒಬ್ಬ. ‘ವೆಯಿಲ್‌’ ಎಂಬ ಮಲಯಾಳಂ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಂದ ಕೂಡಲೇ ನೋಡಲು‌ ಕೂರದೇ ಇದ್ದುದಕ್ಕೆ ಅದೇ ಕಾರಣ. ಕೊನೆಗೂ ಒಲ್ಲದ ಮನಸ್ಸಿಂದ ನೋಡಲು ಕೂತವನಿಗೆ ಮರಳಲ್ಲಿ‌ ಕಾಲಿಟ್ಟ ಅನುಭವ. ಪ್ರತಿಯೊಂದು ಅಲೆ ಬಂದು ಹೋಗುವಾಗ‌ ಕಾಲು ನಿಧನಿಧಾನವಾಗಿ ಮರಳಿನೊಳಗೆ ಹೊಗ್ಗುವಂತೆ ಮನಸು ‘ವೆಯಿಲ್’ನೊಳಗೆ ಜಾರಿತು.

ಈ ಸಿನಿಮಾ ತಟಕ್ಕನೆ‌ ಕತೆ ಹೇಳಿಬಿಡುವುದಿಲ್ಲ. ಪಾತ್ರಗಳನ್ನೂ ನೇರಾನೇರ ಪರಿಚಯಿಸುವುದಿಲ್ಲ. ಅಷ್ಟಕ್ಕೂ, ಈ ಸಿನಿಮಾ ಸ್ಪಷ್ಟವಾಗಿ ಏನನ್ನೂ ಹೇಳುವುದಿಲ್ಲ. ಆದರೆ ಒಂದು ಅನುಭವವನ್ನು ಕಟ್ಟಿಕೊಡುತ್ತದೆ. ಒಂದೊಳ್ಳೆಯ ಕಾದಂಬರಿ ಓದಿ ಮುಗಿಸಿದ ಮೇಲೆ ಮನಸ್ಸಲ್ಲಿ ಉಳಿಯುವ ಅದೇ ಭಾವವನ್ನು ಸಿನಿಮಾ ಕೊನೆಯಲ್ಲಿ ಉಳಿಸುತ್ತದೆ.

ಕಾರ್ತಿ ಹಾಗೂ ಸಿದ್ದು (ಶೇನ್ ನಿಗಮ್) ಅಣ್ಣ ತಮ್ಮಂದಿರು. ತಾಯಿ ರಾಧಾ (ಶ್ರೀರೇಖಾ) ವಿಧವೆ. ಆಕೆಗೆ ದೊಡ್ಡ ಮಗ ಕಾರ್ತಿ ಮೇಲೆ ಹೆಚ್ಚು ಒಲವು. ಎರಡನೆಯವ ಸಿದ್ದು ಮೇಲೆ ವಿನಾಕಾರಣ ‌ಸಿಡುಕುತ್ತಿರುತ್ತಾಳೆ. ಸಿದ್ದು ಕೂಡ ಅವಳೆಲ್ಲಾ ಸಿಡುಕಿಗೆ ಅತಿಯೋಗ್ಯ. ಓದುವುದರಲ್ಲಿ ಸದಾ ಹಿಂದೆ, ಗೆಳೆಯರ್ಯಾರೂ ಪಂಡಿತೋತ್ತಮರೇನಲ್ಲ. ಅಮ್ಮ-ಮಗನ ನಡುವೆ ಮಾತೇ‌ ಕಡಿಮೆ. ಆಡುವ ಕೆಲವೇ ಮಾತೂ ಜಗಳ, ಆರೋಪ-ಪ್ರತ್ಯಾರೋಪಕ್ಕೆ ಮೀಸಲು. ಒಟ್ಟೂ ಅಮ್ಮನಿಗೆ ನನ್ನನ್ನು‌ ಕಂಡರಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದ ಮಗನಿಗೆ ಮನೆಯಲ್ಲಿ ಇರಬೇಕು ಅನಿಸುವಷ್ಟು ಒಳ್ಳೆಯ ವಾತಾವರಣವಿಲ್ಲ. ತನ್ನ ಇಬ್ಬರು ಮಕ್ಕಳ ನಡುವೆ ಯಾಕೆ ಆಕೆ ಪಕ್ಷಪಾತ ಮಾಡುತ್ತಾಳೆ ಎಂಬುದು ನಮಗೂ ಪ್ರಶ್ನೆಯಾಗಿ ಕಾಡುತ್ತದೆ.

ಸಿದ್ದು ಕೇಂದ್ರಿತವಾಗಿ ನೋಡಿದರೆ ಕಾಲೇಜಿನಲ್ಲಿ ಸಣ್ಣದೊಂದು ಪ್ರೇಮಕತೆ ನಡೆಯುತ್ತದೆ. ಮೊದಲು ಆಕೆಗೂ ಇವನ ಮೇಲೆ ಒಲವೇ ಇರದು. ಆದರೆ ಅವಳ ಹಿಂದೆ ಬಿದ್ದ‌ ಮತ್ತೋರ್ವ ಹುಡುಗ ಸಿದ್ದು ಜತೆಗೆ ತಿಕ್ಕಾಟಕ್ಕೆ ಬಿದ್ದಾಗ ಸಿದ್ದು ಕೈಕೈ‌ ಮಿಲಾಯಿಸಬೇಕಾಗುತ್ತದೆ. ಅವಳ‌ ಮೇಲಿನ ಒಲವು ಎಂದಲ್ಲ. ಒಂದು, ಸಹಜವಾಗಿ ಬಡಿದಾಡುವ ಪ್ರಾಯ, ಎರಡನೆಯದಾಗಿ, ಎದುರಿನವ ಹೊಡೆದಾಟಕ್ಕೆ ನಿಂತಾಗ ತಾನೂ ನಾಲ್ಕು ಕೊಡದಿದ್ದರೆ ಇವನಿಗೆ ಉಳಿಗಾಲವಿಲ್ಲ. ಆದರೆ ಇಷ್ಟೆಲ್ಲ ಆಗುವಾಗ ಹುಡುಗಿಗೆ ಇವನ ಕಡೆಗೆ ಮನಸು‌ ಜಾರಿಬಿಡುತ್ತದೆ. ಪ್ರೇಮಕತೆ ಎಂದರೆ ಇದು ಕಾಲೇಜ್ ಲವ್ ಸ್ಟೋರಿ ಸಿನಿಮಾಗಳಲ್ಲಿ ಬರುವಂತೆ ಅಲ್ಲ. ಇಲ್ಲಿ‌ ಫಿಲ್ಮಿ ಲವ್‌ಗಿಂತ ಹೆಚ್ಚು ವಾಸ್ತವದ ಘಾಟು ಜೋರಾಗಿ ಬಡಿಯುತ್ತದೆ.‌ ಲವ್ವು ತೀವ್ರಗೊಳ್ಳುವಾಗ ಹುಡುಗಿ ಮನೆ ಕಡೆಯಿಂದ ಬರುವ ಪ್ರಸಾರದಲ್ಲಿ ಅಡಚಣೆಗಾಗಿ ಕ್ಷಮಿಸಿ ಬೋರ್ಡು. ಮೊದಲೇ ಹೇಳಿದಂತೆ ಸಿನಿಮೀಯವಾಗಿ ಲವ್ ಮಾಡುವ ಶಕ್ತಿ ಇಬ್ಬರಲ್ಲೂ ಇಲ್ಲ, ವಾಸ್ತವದ ಬದುಕು ಎತ್ತ ಕೊಂಡೊಯ್ಯುತ್ತದೋ ಅತ್ತ ಹೋಗಲೇಬೇಕು.

ಅಣ್ಣ ಕಾರ್ತಿ‌ ಇವಂತಲ್ಲ, ಬುದ್ಧಿವಂತ. ಮೆಡಿಕಲ್ ಸೀಟು ಪಡೆಯುತ್ತಾನೆ. ಮಗ ಮೆರಿಟ್ ಸೀಟು‌ ಪಡೆದ ಮೇಲೆ ರೇಖಾಗೆ ಅಪಾರ್ಟ್ಮೆಂಟ್ ಕೊಳ್ಳುವ ಬಯಕೆ. ಯಾಕೆ? ಬಹುಶಃ ಅದುವರೆಗೆ ಜೀವನದಲ್ಲಿ ಬಯಸಿದ್ದೇನನ್ನೂ ಆಕೆ ಪಡೆದಿಲ್ಲ. ಬಹುಶಃ ‌ಎಂದು ಹೇಳಲು ಕಾರಣವಿದೆ, ಯಾವುದೇ ದೃಶ್ಯದಲ್ಲಿ ಈ‌ ಸಿನಿಮಾ ಏನನ್ನೂ ವಾಚ್ಯವಾಗಿ ಹೇಳುವುದಿಲ್ಲ. ನಿರ್ದೇಶಕ ಪಾತ್ರಧಾರಿಗಳಿಗೆ ದೃಶ್ಯ ವಿವರಿಸಿ ಆ್ಯಕ್ಷನ್ ಹೇಳುವ ಬದಲು ಕತೆ ನಡೆಯುವಲ್ಲೇ ಹೋಗಿ ಕ್ಯಾಮರಾ ಇರಿಸಿದ್ದಾನೋ ಎಂಬ ಅನುಮಾನ ಬರುವಂತಹ ನಿರೂಪಣೆ. ಅಭಿನಯಿಸುತ್ತಿದ್ದಾರೆ ಎಂದೇ‌ ಅನಿಸದಷ್ಟು ಸಹಜವಾದ ಚಿತ್ರಣ. ಹಾಗಾಗಿ ಚಿತ್ರದ ಬಹುಪಾಲು ಹೊತ್ತು ರೇಖಾ ನಮಗೆ ಕಗ್ಗಂಟು. ಹಾಗೆ ಆಸೆ ಪಟ್ಟು‌ಕೊಳ್ಳಲು ಮುಂಗಡ ಪಡೆದ ಸಂಸ್ಥೆ ಅಪಾರ್ಟ್‌ಮೆಂಟ್ ನೀಡಲು ಹಿಂದು ಮುಂದು ನೋಡುವಾಗ ಈಕೆಯದ್ದು ಸಂಕಷ್ಟದ ಸ್ಥಿತಿ. ವಿಷಯ ತಿಳಿದ ಸಿದ್ದು ಹೋಗಿ ಆ ಕಚೇರಿಯಲ್ಲಿ ರಾದ್ಧಾಂತ ನಡೆಸಿ ಪೊಲೀಸ್ ಸ್ಟೇಶನ್ ಮೆಟ್ಟಿಲೂ ಹತ್ತುವ ಪರಿಸ್ಥಿತಿ. ಈ‌ ಸಮಯದಲ್ಲಿ ಆತನ ಸಹಾಯಕ್ಕೆ ಬರುವವ ರಾಜಕೀಯದವ. ಆತನ ಜತೆಗಿನ ಪುಂಡರ ಬಳಗಕ್ಕೆ ಇವನ ಸೇರ್ಪಡೆ.

ಇಲ್ಲಿಂದ ನಂತರ ಚಿತ್ರದ‌ ಗತಿ ಬದಲಾಗುತ್ತದೆ ಎಂದು ನಿರೀಕ್ಷಿಸಿದ್ದೆ. ಆದರೆ ಆಗಲಿಲ್ಲ. ಇಲ್ಲಿಯೂ ಸಿನಿಮೀಯ ಬದಲಾವಣೆಗಳಿಲ್ಲ‌. ರಾಜಕೀಯದವರ ಪುಂಡರ ಒಂದಷ್ಟು ಜಬರ್ದಸ್ತಿ ಬಿಟ್ಟರೆ ಮಚ್ಚು ಹಿಡಿಯುವ ರೌಡಿಸಂ ಆವರಿಸುವುದಿಲ್ಲ.

ಅಷ್ಟಕ್ಕೂ ರೇಖಾ ಏಕೆ ಆ ರೀತಿ ವರ್ತಿಸುತ್ತಾಳೆ ಎಂದು ಗೊತ್ತಾಗುವ ವೇಳೆಗೆ ತೆರೆಯ‌‌ ಮೇಲೆ ಆಕೆ ಒಬ್ಬಳೇ ಕಾಣುತ್ತಾಳೆ. ಆದರೆ‌ ನೋಡುಗರ‌ ಮನಸೊಳಗೆ ನೂರು ಪಾತ್ರಗಳು ಇಣುಕಿ‌ ನೋಡುತ್ತಿರುತ್ತವೆ. ಗಂಡನ ಜತೆಗೆ ಜೀವನ ಪೂರ್ತಿ‌ ಕಳೆಯಬೇಕು ಎಂದು ಆಸೆಪಟ್ಟು ಮನೆಬಿಟ್ಟು ಬಂದವಳು ಆಕೆ. ಎರಡನೇ ಬಸಿರ ಹೊತ್ತಿಗೆ ಗಂಡನ ದುರ್ಮರಣ. ನಂತರ ಕಷ್ಟ ಪಟ್ಟು ಇಬ್ಬರನ್ನೂ‌ ಬೆಳೆಸುತ್ತಾಳೆ, ನಿಜ. ಆದರೆ ಭಾವನಾತ್ಮಕವಾಗಿ ಆಕೆಗೆ ಸದಾ ಜತೆ ಸಿಗುವುದು ಆಕೆಯೊಬ್ಬಳೇ. ಮೊದಲ ಮಗನಿಗೆ ಅನಾರೋಗ್ಯದ ಕಾರಣ ಆ‌ ಕಡೆಗೆ ಹೆಚ್ಚು ಒಲವು ಸ್ವಾಭಾವಿಕ. ಆದರೆ ಇನ್ನೊಬ್ಬನ ಕಡೆಗೂ ಗಮನ ಕೊಡಬೇಕು ಎಂದು ಸರಿ ಹೊತ್ತಿಗೆ ತಿಳಿಸುವವರು ಯಾರೂ ಇಲ್ಲ. ಆಕೆ ಒಂಟಿ‌ ಮಾನಸಿಕತೆಯ ಸೂಕ್ತ ಪ್ರತಿನಿಧಿ. ಯುವ ವರ್ಗದಲ್ಲಿ ಅದೇ ಮನಸ್ಥಿತಿಯ ಪ್ರತಿನಿಧಿ ಸಿದ್ದು. ಶ್ರೀರೇಖಾ ಮತ್ತು ಶೇನ್ ನಿಗಮ್ ಇಬ್ಬರ ನಟನೆಯೂ ಬಲು ಸೂಕ್ಷ್ಮ, ಅತಿ ಮನೋಜ್ಞ. ಚಿತ್ರಕಥೆ ಬರೆದು‌ ನಿರ್ದೇಶಿಸಿದ ಶರತ್ ಮೆನನ್‌ ಇದು ಆತನ ಚೊಚ್ಚಲ ಚಿತ್ರ ಎಂಬ ಯಾವ ಸುಳಿವನ್ನೂ ಬಿಟ್ಟುಕೊಡುವುದಿಲ್ಲ.

ಈ ಮಧ್ಯೆ‌ ಬರುವ ಅಷ್ಟೂ ಪೋಷಕ ಪಾತ್ರಗಳೂ ಹೆಸರಿಗೆ ತಕ್ಕಂತೆಯೇ‌ ಸಿನಿಮಾಕ್ಕೆ ಒಳ್ಳೆಯ ಪೋಷಣೆ ಕೊಡುತ್ತವೆ. ಕಥಾಭಾಗದ್ದೇ ಹೇಳಿ ಮುಗಿಯದ ಕುಸುರಿ ಕಾರ್ಯಗಳಿದ್ದರೆ ತಾಂತ್ರಿಕ ವಿಭಾಗದ್ದೇ ಮತ್ತೊಂದು ಕತೆ. ಕ್ಯಾಮರಾವಂತೂ ಅದೇನು‌ ಮ್ಯಾಜಿಕ್ ಮಾಡುತ್ತದೆ ಎಂಬುದು ನೋಡಿಯೇ‌ ತಿಳಿಯಬೇಕಾದ ವಿಚಾರ. ಪಾತ್ರಧಾರಿಗಳು ನಟನೆಯೇ ಮಾಡದಿದ್ದರೂ ಆ ದೃಶ್ಯದ ಭಾವ ಸೆರೆಹಿಡಿಯುವಂತಿದೆ ಕ್ಯಾಮರಾ ಚಲನೆ. ಸಂಗೀತ ‌ನಿರ್ದೇಶಕನದ್ದು ಬೇರೆಯದೇ ಛಾಪು. ಮೊದಲಿಗೆ RAP ಧಾಟಿಯ ಹಾಡು ಕೇಳಿದಾಗ ಓಹೋ ಅನಿಸುವ ಸಂಗೀತ, ಕೊನಗೆ ಕೇರಳ ಜಾನಪದ ಬಂದಾಗ ಆಹಾ ಹೇಳಿಸುತ್ತದೆ.

ಈ ಸಿನಿಮಾ ಥಿಯೇಟರಿಗಲ್ಲ, ಒಟಿಟಿಗೇ ಸರಿ. ಏಕೆಂದರೆ ಒಮ್ಮೆ ಮಾತ್ರ ನೋಡಿದರೆ ಚಿತ್ರವನ್ನು ಎಲ್ಲಾ ಆಯಾಮದಿಂದ ಸವಿಯಲು‌‌ ಸಾಧ್ಯವಾಗುವುದಿಲ್ಲ. ಶಾಝ಼್ ಮದಮ್ಮಹ್ ಕೈಯಲ್ಲಿನ ಕ್ಯಾಮರಾ ಬಳಕೆ ನೋಡಿ ಸವಿಯಲು ಮತ್ತೊಮ್ಮೆ ನೋಡಬೇಕು.

LEAVE A REPLY

Connect with

Please enter your comment!
Please enter your name here