ಅಗಲಿದ ಮೇರು ಗಾಯಕಿ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಲತಾಜೀ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಟ ಶಾರುಖ್ ಖಾನ್ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗಾಯಕಿ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯನ್ನು ಮುಂಬೈಯ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಅಂತ್ಯಕ್ರಿಯೆಗೂ ಮುನ್ನ ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಲತಾ ಮಂಗೇಶ್ಕರ್ ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರು ಚಿತಾಗಾರವನ್ನು ಬೆಳಗಿಸಿದರು. ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ಸಚಿವರನೇರಕರು ಶಿವಾಜಿ ಪಾರ್ಕ್‌ಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಚಿತ್ರಸಾಹಿತಿ ಜಾವೆದ್ ಅಖ್ತರ್, ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್, ಅಮೀರ್ ಖಾನ್, ರಣಬೀರ್ ಕಪೂರ್ ಸೇರಿದಂತೆ ಬಾಲಿವುಡ್‌ನ ಖ್ಯಾತನಾಮರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಈ ವೇಳೆ ನಟ ಶಾರುಖ್ ಖಾನ್ ಮತ್ತು ಅವರ ಮ್ಯಾನೇಜರ್ ಪೂಜಾ ಡಡ್ಲಾನಿ ಅಂತಿಮ ನಮನ ಸಲ್ಲಿಸುವ ಸಂದರ್ಭದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲತಾಜೀ ಅವರ ಪಾರ್ಥಿವ ಶರೀರದ ಎದುರು ನಟ ಶಾರುಖ್ ಮುಸ್ಲಿಂ ಸಂಪ್ರದಾಯದಂತೆ ದುವಾ ಮಾಡಿದರೆ, ಪೂಜಾ ಡಡ್ಲಾನಿ ಹಿಂದೂ ಸಂಪ್ರದಾಯದ ಪ್ರಕಾರ ಕೈಜೋಡಿಸಿ ವಿದಾಯ ಹೇಳಿದ ಗೆಸ್ಚರ್‌ನ ಈ ಫೋಟೊವನ್ನು ದೊಡ್ಡ ಸಂಖ್ಯೆಯಲ್ಲಿ ಜನರು ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.
‘ಸೌಹಾರ್ಧತೆ, ವಿವಿಧತೆಯಲ್ಲಿನ ಏಕತೆ, ಭಾವೈಕ್ಯತೆ, ಒಂದು ಫೋಟೊ – ನೂರು ಭಾವ’ ಎನ್ನುವ ವಿಧ ವಿಧ ಒಕ್ಕಣಿಗಳೊಂದಿಗೆ ಫೋಟೊ ವೈರಲ್ ಆಗಿದೆ. ಮೆಚ್ಚುಗೆಯ ಜೊತೆ ವಿವಾದವೂ ಸೇರಿಕೊಂಡಿದೆ! ದುವಾ ಮಾಡಿದ ನಂತರ ಶಾರುಖ್ ಮುಸ್ಲಿಂ ಸಂಪ್ರದಾಯದಂತೆ ತಾವು ಹಾಕಿದ್ದ ಮಾಸ್ಕ್ ತೆಗೆದು ಬಾಗಿ ಗಾಳಿಯಲ್ಲಿ ಊದುತ್ತಾರೆ. ‘ಅವರ ಆತ್ಮಕ್ಕೆ ಶಾಂತಿ ಸಿಗಲಿ, ಪಾಪಕರ್ಮಗಳಿದ್ದರೆ ನಿವಾರಣೆಯಾಗಲಿ’ ಎಂದು ಪಾಲಿಸುವ ಸಂಪ್ರದಾಯವಿದು. ಇದನ್ನು ತಪ್ಪಾಗಿ ಅರ್ಥೈಸಿರುವ ಹಲವರು ಈ ಬಗ್ಗೆ ಚಕಾರ ಎತ್ತಿದ್ದಾರೆ. ಇದಕ್ಕೆ ಸಮರ್ಥನೆಗಳು, ವಾದಗಳು ಕಮೆಂಟ್ ರೂಪದಲ್ಲಿ ಓಡಾಡುತ್ತಿವೆ.