ನಂದಕುಮಾರ್‌ ನಿರ್ದೇಶನದ ‘1990’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಅರುಣ್‌ ಮತ್ತು ರಾಣಿ ವರದ್‌ ಜೋಡಿಯಾಗಿ ನಟಿಸಿರುವ ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಥಿಯೇಟರ್‌ಗೆ ಬರಲಿದೆ.

ಅರುಣ್‌ ಮತ್ತು ರಾಣಿ ವರದ್‌ ಮುಖ್ಯಪಾತ್ರಗಳಲ್ಲಿರುವ ‘1990’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನಂದಕುಮಾರ್‌ ಚಿತ್ರದ ನಿರ್ದೇಶಕ. ಸಿನಿಮಾ ಬಗ್ಗೆ ಮಾತನಾಡುವ ನಂದಕುಮಾರ್‌, ‘ನಾನು ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಸ್ವತಂತ್ರ ನಿರ್ದೇಶಕನಾಗಿ ಇದು ಚೊಚ್ಚಲ ಚಿತ್ರ. ಇದು ತೊಂಭತ್ತರ ದಶಕದಲ್ಲಿ ನಡೆಯುವ ಪ್ರೇಮಕಥೆ. ಅರುಣ್ ಹಾಗೂ ರಾಣಿ ವರದ್ ನಾಯಕ – ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಕಷ್ಟು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದು ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ಚಿತ್ರದ ಶೀರ್ಷಿಕೆಯನ್ನು ‘1990s’ ಎಂದಿದೆ’ ಎನ್ನುತ್ತಾರೆ.

ಚಿತ್ರದ ಹೀರೋ ಅರುಣ್‌ ರಂಗಭೂಮಿ ಹಿನ್ನೆಲೆಯ ಕಲಾವಿದ. ಹಿರಿಯ ಸಂಕಲನಕಾರ ಜನಾರ್ಧನ್‌ ಅವರ ಪುತ್ರ. ಹಿರಿತೆರೆಯಲ್ಲಿ ಇದು ಅವರ ಮೊದಲ ಪ್ರಯತ್ನ. ‘ನಂದಕುಮಾರ್ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಚಿತ್ರ ಹಿಡಿಸುವ ನಂಬಿಕೆ ಇದೆ‌. ಈ ಚಿತ್ರದಲ್ಲಿ ನನ್ನದು ಮುಗ್ಧ ಪ್ರೇಮಿಯ ಪಾತ್ರ’ ಎನ್ನುತ್ತಾರೆ ಅರುಣ್‌. ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಹಾಲೇಶ್‌ ಛಾಯಾಗ್ರಹಣ, ಮಹಾರಾಜ ಸಂಗೀತ ಸಂಯೋಜನೆ, ಕೃಷ್ಣ ಸಂಕಲನ, ಸಾದಿಕ್ ಸರ್ದಾರ್ ನೃತ್ಯ ನಿರ್ದೇಶನವಿದೆ.

LEAVE A REPLY

Connect with

Please enter your comment!
Please enter your name here