ಕನ್ನಡ ನಟ ಧನಂಜಯ್‌ ಬಹುನಿರೀಕ್ಷಿತ ‘ಪುಷ್ಪ’ ತೆಲುಗು ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ನಿನ್ನೆ ನಡೆದ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಅವರು ಚಿತ್ರದ ಕನ್ನಡ ಅವತರಣಿಕೆಯ ಡೈಲಾಗ್‌ ಹೇಳಿ ಗಮನ ಸೆಳೆದರು.

ನಟ ಧನಂಜಯ್‌ ಈ ಹಿಂದೆ ರಾಮ್‌ ಗೋಪಾಲ್‌ ವರ್ಮಾ ನಿರ್ಮಾಣದ ‘ಭೈರವ ಗೀತ’ ಚಿತ್ರದೊಂದಿಗೆ ತೆಲುಗು ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಈಗ ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ’ ತೆಲುಗು ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರವಿದೆ. ‘ಜಾಲಿ ರೆಡ್ಡಿ’ ಪಾತ್ರದೊಂದಿಗೆ ಅವರು ಮತ್ತೊಮ್ಮೆ ತೆಲುಗು ಪ್ರೇಕ್ಷಕರೆದುರು ಬರುತ್ತಿದ್ದಾರೆ. ‘ಪುಷ್ಪ’ ಮೂಲ ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್‌ ಆಗಿಯೂ ಈ ವಾರ ತೆರೆಕಾಣಲಿದೆ. ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ನಿನ್ನೆ ಆಯೋಜನೆಗೊಂಡಿದ್ದ ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಧನಂಜಯ್‌ ಭಾಗಿಯಾಗಿದ್ದರು. ವೇದಿಕೆಯಲ್ಲಿ ಸಿನಿಮಾದ ಕನ್ನಡ ಅವತರಣಿಕೆಯ ಡೈಲಾಗ್‌ ಹೇಳಿ ಅವರು ಜನರನ್ನು ರಂಜಿಸಿದರು. ನಟ ಅಲ್ಲು ಅರ್ಜುನ್‌ ಅವರ ಜೊತೆಗಿನ ಒಡನಾಟ, ನಿರ್ದೇಶಕ ಸುಕುಮಾರ್‌ ಮತ್ತು ನಿರ್ಮಾಣ ಸಂಸ್ಥೆಯನ್ನು ಸ್ಮರಿಸಿದ ಅವರು ಕನ್ನಡದ ಹುಡುಗಿ, ನಟಿ ರಶ್ಮಿಕಾ ಕುರಿತು ಮಾತನಾಡಿದರು.

“ಪುಷ್ಪ’ ಕನ್ನಡ ಅವರಣಿಕೆಯೂ ತೆರೆಕಾಣುತ್ತಿದ್ದು, ಕನ್ನಡದಲ್ಲೇ ವೀಕ್ಷಿಸಿ” ಎಂದರು ಧನಂಜಯ್‌. ಸುಕುಮಾರ್‌ ನಿರ್ದೇಶನದ ‘ಪುಷ್ಪ’ ಎರಡು ಪಾರ್ಟ್‌ಗಳಲ್ಲಿ ತಯಾರಾಗುತ್ತಿದ್ದು, ಮೊದಲ ಪಾರ್ಟ್‌ ಈ ವಾರ ತೆರೆಕಾಣುತ್ತಿದೆ. ಕನ್ನಡ ನಟ ಧನಂಜಯ ಮತ್ತು ಮಲಯಾಳಂ ನಟ ಫಹಾದ್‌ ಫಾಸಿಲ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದೊಂದಿಗೆ ನಿರ್ದೇಶಕ ಸುಕುಮಾರ್ ಮತ್ತು ನಟ ಅಲ್ಲು ಅರ್ಜುನ್ ಮೂರನೇ ಬಾರಿ ಜೊತೆಯಾಗುತ್ತಿದ್ದಾರೆ. ಈ ಹಿಂದೆ ಸುಕುಮಾರ್‌ ನಿರ್ದೇಶನದಲ್ಲಿ ಅಲ್ಲು ಅರ್ಜುನ್‌ರ ‘ಆರ್ಯ’ ಮತ್ತು ‘ಆರ್ಯ 2’ ತೆರೆಕಂಡಿದ್ದವು. ಮೈತ್ರಿ ಮೂವೀ ಮೇಕರ್ಸ್‌ ಮತ್ತು ಮುತ್ತಮ್ ಸೆಟ್ಟಿ ಮೀಡಿಯಾ ನಿರ್ಮಾಣದಲ್ಲಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರಾವ್ ರಮೇಶ್‌, ಅಜಯ್ ಘೋಷ್‌, ಅನಸೂಯ ಭಾರದ್ವಾಜ್‌ ನಟಿಸಿದ್ದಾರೆ. ಸಂಗೀತ ಸಂಯೋಜನೆ ದೇವಿಶ್ರೀಪ್ರಸಾದ್.

Previous articleಅದಿತಿ ‘ಆನ’ ಈ ವಾರ ತೆರೆಗೆ; ಹಾರರ್‌ – ಥ್ರಿಲ್ಲರ್‌ ನಾಯಕಿ ಪ್ರಧಾನ ಸಿನಿಮಾ
Next article‘it is time to run’; ‘ಲೂಪ್‌ ಲಪೇಟಾ’ ಮೋಷನ್‌ ಪೋಸ್ಟರ್‌ ಶೇರ್‌ ಮಾಡಿದ ತಾಪ್ಸಿ

LEAVE A REPLY

Connect with

Please enter your comment!
Please enter your name here