ಐತಿಹಾಸಿಕ ದೃಶ್ಯಕಾವ್ಯ, ಮಾನವೀಯ ಹಾಗೂ ಕಂಟೆಂಟ್ ಸಿನಿಮಾಗಳ ಕತೆಗಳ ಮಿಶ್ರಣದಿಂದ ಪ್ರೇಕ್ಷಕರನ್ನು ಥಿಯೇಟರ್‌ಗೆ ಆಕರ್ಷಿಸಬಹುದು ಎನ್ನುವುದು ಸಾಬೀತಾಯ್ತು. ನೂರಾರು ಕೋಟಿಗಳನ್ನು ಹೂಡಿ ವಾಪಸು ಪಡೆಯಬಹುದು ಎನ್ನುವ ಧೈರ್ಯವೂ ಸಿಕ್ಕಿದೆ.
ಕೆಲವು ದೊಡ್ಡ ಯಶಸ್ಸುಗಳೊಂದಿಗೆ ಈ ವರ್ಷ ಬಾಲಿವುಡ್ ಗರಿಗೆದರಿತು. ಭಿನ್ನ ಜಾನರ್‌ನ ಸಿನಿಮಾಗಳು ತೆರೆಕಂಡು ಪ್ರೇಕ್ಷಕರಿಗೆ ಉತ್ತಮ ಅನುಭವ ನೀಡಿದವು. ಐತಿಹಾಸಿಕ ಸಿನಿಮಾ ‘ಛಾವಾ’ ಬಹುದೊಡ್ಡ ಗೆಲುವು ಕಂಡರೆ ‘ಸೈಯಾರಾ’ ರೊಮ್ಯಾಂಟಿಕ್ ಸಿನಿಮಾ ಹದಿಹರೆಯದ ಸಿನಿಪ್ರಿಯರನ್ನು ಅಪಾರವಾಗಿ ರಂಜಿಸಿತು. ದುಬಾರಿ ಬಜೆಟ್‌ನ ಐತಿಹಾಸಿಕ ಸಿನಿಮಾ, ಸ್ಟಾರ್ ಪವರ್ ಜೊತೆ ಚಿಕ್ಕ ಬಜೆಟ್‌ನ ಕಂಟೆಂಟ್ ಸಿನಿಮಾಗಳೂ ಉದ್ಯಮಕ್ಕೆ ಬೇಕಾಗಿದೆ ಎನ್ನುವುದು ಈ ಬಾರಿ ಮತ್ತೊಮ್ಮೆ ಸಾಬೀತಾಯ್ತು. ಉದ್ಯಮದ ಉಳಿವಿಗೆ ಭಿನ್ನ ಜಾನರ್‌ನ ಸಿನಿಮಾಗಳ ಅವಶ್ಯಕತೆ ಹೆಚ್ಚಿದೆ ಎನ್ನುವ ಸಿನಿ ವಿಶ್ಲೇಷಕರ ಅಭಿಪ್ರಾಯಕ್ಕೆ ಇಂಬು ಸಿಕ್ಕಿತು.
ವಿಕ್ಕಿ ಕೌಶಲ್ ಅಭಿನಯದ ಐತಿಹಾಸ ಸಿನಿಮಾ ‘ಛಾವಾ’ದ ಭಾರತದ ವಹಿವಾಡು 600 ಕೋಟಿ ರೂಪಾಯಿ ದಾಟಿತು. ಇತ್ತೀಚೆಗೆ ಬಾಲಿವುಡ್‌ನಲ್ಲಿ ರೊಮ್ಯಾಂಟಿಕ್ ಸಿನಿಮಾಗಳು ದೊಡ್ಡ ಗೆಲುವು ಕಂಡಿರಲಿಲ್ಲ. ‘ಸೈಯಾರಾ’ ಸಿನಿಮಾ 575 ಕೋಟಿ ರೂಪಾಯಿ ವಹಿವಾಟು ದಾಖಲಿಸುವುದರೊಂದಿಗೆ ಈ ಕೊರತೆ ನೀಗಿಸಿತು. ಅಮೀರ್ ಖಾನ್ ನಿರ್ಮಾಣದ ಫ್ಯಾಮಿಲಿ – ಡ್ರಾಮಾ ‘ಸಿತಾರೆ ಜಮೀನ್ ಪರ್’ ಕೂಡ ಉತ್ತಮ ಗಳಿಕೆಯೊಂದಿಗೆ, ಕಂಟೆಂಟ್ ಸಿನಿಮಾಗಳಿಗೆ ಜೀವ ತುಂಬಿತು. ವಾರ್2 (350 ಕೋಟಿ), ಮಹಾವತಾರ ನರಸಿಂಹ (325 ಕೋಟಿ), ರೈಡ್ 2 (240 ಕೋಟಿ), ಈ ವರ್ಷ ಹೆಚ್ಚು ವಹಿವಾಟು ನಡೆಸಿದ ಇತರೆ ಕೆಲವು ಸಿನಿಮಾಗಳು.
ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ನಟನೆಯ ‘Jolly LLB3’ ಕೋರ್ಟ್‌ರೂಂ – ಡ್ರಾಮಾ ಗೆಲುವು ಸಾಧಿಸಿತು. ಇದು ಫ್ರಾಂಚೈಸಸ್‌ಗಳ ಸರಣಿ ಮುಂದುವರೆಸಿದ್ದಲ್ಲದೆ ಕಂಟೆಂಟ್ ಸಿನಿಮಾಗಳ ಶಕ್ತಿಯನ್ನು ಸಾಬೀತು ಮಾಡಿತು. ‘Housefull 5’ ಕೂಡ ಇದೇ ಸಾಲಿಗೆ ಸೇರುವಂಥದ್ದು. ಹಾರರ್ – ಕಾಮಿಡಿ ‘ಥಮ’ ಗೆಲುವು ಕೂಡ ಗಮನಾರ್ಹ. ಆದರೆ ಭಾರಿ ನಿರೀಕ್ಷೆಯಿಟ್ಟಿದ್ದ ಕೆಲವು ಸಿನಿಮಾಗಳು ಆರಂಭದಲ್ಲಿ ದೊಡ್ಡ ಸದ್ದು ಮಾಡಿ ನಂತರ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದವು. ಹೃತಿಕ್ ರೋಷನ್ ಮತ್ತು ಜ್ಯೂನಿಯರ್ ಎನ್‌ಟಿಆರ್ ನಟನೆಯ ‘ವಾರ್ 2’ ಭಾರಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ. ಬಜೆಟ್‌ಗೆ ಹೋಲಿಸಿದರೆ ಬಾಕ್ಸ್ ಆಫೀಸ್‌ನ ಗಳಿಕೆ ಆಶಾದಾಯಕವಾಗಿರಲಿಲ್ಲ. ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರದ್ದೂ ಇದೇ ಕತೆಯಾಯ್ತು.
ಸಿನಿಮಾ ಹೊರತಾಗಿ ಕೆಲವು ವಿಷಯಗಳು ಚಿತ್ರರಂಗವನ್ನು ಸುದ್ದಿಯಲ್ಲಿಟ್ಟಿದ್ದವು. ನಟ ಸೈಫ್ ಅಲಿ ಖಾನ್ ಅವರ ಮೇಲಿನ ದಾಳಿ ಬಾಲಿವುಡ್ ಸೆಲೆಬ್ರಿಟಿಗಳ ನಿದ್ದೆಗೆಡಿಸಿತು. ಕಂಗನಾ ರನಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ನಿಷೇಧ, ಪ್ರತಿಭಟನೆ ಎದುರಿಸಬೇಕಾಯ್ತು. ಚರ್ಚ್‌ನ ಸನ್ನಿವೇಶವೊಂದು ನಿರ್ದಿಷ್ಟ ಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ‘ಜಾತ್’ ಸಿನಿಮಾ ವಿರುದ್ಧ FIR ದಾಖಲಾಯ್ತು. ಇವುಗಳ ಮಧ್ಯೆ ಸಿನಿಮಾದ ನಟ – ನಟಿಯರ ಮಧ್ಯೆಯ ವಯಸ್ಸಿನ ಅಂತರದ ಬಗ್ಗೆಯೂ ಚರ್ಚೆ ನಡೆದವು. ನಿರ್ದೇಶಕರ ಸೃಜನಶೀಲ ಸ್ವಾತಂತ್ರ್ಯ, ಐತಿಹಾಸಿಕ ಸಂಗತಿಗಳನ್ನು ಮರೆಮಾಚುತ್ತಾ ಪ್ರೊಪೊಗಾಂಡಾ ಸಿನಿಮಾಗಳನ್ನು ಮಾಡುವವರ ವಿರುದ್ಧವೂ ಪರ – ವಿರೋಧದ ಚರ್ಚೆಗಳು ನಡೆದವು.
ಒಟ್ಟಾರೆಯಾಗಿ ಹೇಳುವುದಾದರೆ, ಐತಿಹಾಸಿಕ ದೃಶ್ಯಕಾವ್ಯ, ಮಾನವೀಯ ಹಾಗೂ ಕಂಟೆಂಟ್ ಸಿನಿಮಾಗಳ ಕತೆಗಳ ಮಿಶ್ರಣದಿಂದ ಪ್ರೇಕ್ಷಕರನ್ನು ಥಿಯೇಟರ್‌ಗೆ ಆಕರ್ಷಿಸಬಹುದು ಎನ್ನುವುದು ಸಾಬೀತಾಯ್ತು. ನೂರಾರು ಕೋಟಿಗಳನ್ನು ಹೂಡಿ ವಾಪಸು ಪಡೆಯಬಹುದು ಎನ್ನುವ ಧೈರ್ಯವೂ ಸಿಕ್ಕಿದೆ. ಸಂಕೀರ್ಣ ಸಾಮಾಜಿಕ, ರಾಜಕೀಯ ಚರ್ಚೆಗಳ ಜೊತೆಜೊತೆಗೇ ಭವಿಷ್ಯದ ಸಿನಿಮಾ ಪ್ರಯತ್ನಗಳಿಗೆ ಉತ್ತಮ ವೇದಿಕೆ ನಿರ್ಮಾಣವಾದಂತಾಗಿದೆ.










