ನಟ, ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ, ಬರಹಗಾರ, ಟಿವಿ ಶೋಗಳ Host, ಪ್ರೇರಣಾತ್ಮಕ ಮಾತುಗಾರ ಇತ್ಯಾದಿ ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ  ಜನಪ್ರಿಯರಾಗಿರುವ ರಮೇಶ್ ಅರವಿಂದ್ ಅವರು Mr. Nice ಎಂದೇ ಕರೆಯಲ್ಪಡುತ್ತಾರೆ. ಆಕರ್ಷಕ ವ್ಯಕ್ತಿತ್ವ ಮತ್ತು ಭಾವಪೂರ್ಣ ನಟನೆಗೆ ಹೆಸರಾಗಿರುವ ಇವರು, ದಕ್ಷಿಣ ಭಾರತ ಸಿನೆಮಾ ರಂಗದ ಪ್ರಮುಖ ನಟರಲ್ಲೊಬ್ಬರು. ಸರಳತೆ ಮತ್ತು ಸಮಂಜಸ ನಡವಳಿಕೆಯಿಂದ ಕರ್ನಾಟಕದ ಜನರ ಮನಗೆದ್ದಿರುವ ರಮೇಶ್ ಅರವಿಂದ್, ಕನ್ನಡಿಗರ ಮನೆ ಮಗನಾಗಿದ್ದಾರೆ. ನಟ ರಮೇಶ್ ಅರವಿಂದ್ ಜನ್ಮದಿನದ ಈ ಸಂದರ್ಭದಲ್ಲಿ, ಅವರ ಬದುಕು ಮತ್ತು ಸಾಧನೆಗಳ ಬಗ್ಗೆ ಒಂದು ಪಕ್ಷಿ ನೋಟ ಇಲ್ಲಿದೆ.

ರಮೇಶ್ ಹುಟ್ಟಿದ್ದು 1964ರ ಸೆಪ್ಟಂಬರ್ 10ರಂದು. ರಮೇಶ್ ತಂದೆ ಗೋವಿಂದಾಚಾರಿ, ತಾಯಿ ಸರೋಜ. ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದ ರಮೇಶ್, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ. ‘ನಾಟಕದ ಕಾಲೇಜು’ ಎಂದೇ ಹೆಸರಾಗಿದ್ದ ನ್ಯಾಷನಲ್ ಕಾಲೇಜಿನಿಂದಲೇ ರಮೇಶ್ ಅವರ ನಟನೆಯ ದಿನಗಳು ಆರಂಭವಾಗಿದ್ದವು. SSLC ಮತ್ತು PUCಯಲ್ಲಿ Rankಗಳಿಸಿದ್ದ ರಮೇಶ್, ಆ ನಂತರ ಪ್ರತಿಷ್ಠಿತ UVCE ಸೇರಿ ಇಂಜಿನಿಯರಿಂಗ್ ಪದವಿ ಪಡೆದರು. ಕಾಲೇಜಿನಲ್ಲಿ ಓದುತ್ತಿದ್ದಾಗ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ರಮೇಶ್, ಪ್ರಶಸ್ತಿ ಪ್ರದಾನ ಮತ್ತಿತರ ಸಮಾರಂಭಗಳ ನಿರೂಪಣೆ ಮಾಡುವ ಮೂಲಕ ಹೆಸರಾಗಿದ್ದರು.

ಆ ಬಳಿಕ ರಮೇಶ್ ಅವರಿಗೆ, ಬೆಂಗಳೂರು ದೂರದರ್ಶನದ ‘ಪರಿಚಯ’ ಕಾರ್ಯಕ್ರಮ ನಡೆಸಿಕೊಡುವ ಅವಕಾಶ ದೊರಕಿತು. ದಿವಂಗತ ಶಂಕರ್ ನಾಗ್ ನಡೆಸಿಕೊಡುತ್ತಿದ್ದ ಈ ಕಾರ್ಯಕ್ರಮವನ್ನು ಮುಂದುವರಿಸಿದ ರಮೇಶ್, ತಮ್ಮ ಲವಲವಿಕೆಯಿಂದ ಕೂಡಿದ ನಿರೂಪಣೆಯಿಂದ ಹೆಸರಾದರು.

ಆ ಬಳಿಕ ರಮೇಶ್ ಅವರಿಗೆ ಮೌನ ಗೀತೆ ಸಿನೆಮಾದಲ್ಲಿ ನಟಿಸುವ ಅವಕಾಶ ದೊರಕಿತು. ಅದೇವೇಳೆ ಹೆಸರಾಂತ ನಿರ್ದೇಶಕ ಕೆ.ಬಾಲಚಂದರ್ ಅವರ ಕಣ್ಣಿಗೆ ಬಿದ್ದ ರಮೇಶ್ ಅವರ ಬದುಕು ಹೊಸ ತಿರುವು ಪಡೆಯಿತು. 1986ರಲ್ಲಿ ತೆರೆಕಂಡ ಕೆ.ಬಾಲಚಂದರ್ ನಿರ್ದೇಶನದ ‘ಸುಂದರ ಸ್ವಪ್ನಗಳು’ ಸಿನೆಮಾ Superhit ಆಯಿತು. ರಮೇಶ್ ಅವರನ್ನು ಕನ್ನಡಿಗರು ಗಮನಿಸುವಂತೆ ಮಾಡಿತು. ಅಲ್ಲಿಂದ ಒಂದು ದಶಕದ ಅವಧಿಯಲ್ಲಿ ಹಲವಾರು ಯಶಸ್ವಿ ತಮಿಳು ಮತ್ತು ತೆಲುಗು ಸಿನೆಮಾಗಳಲ್ಲೂ ಅಭಿನಯಿಸಿದ ರಮೇಶ್, ನಟನಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.

1990ರಲ್ಲಿ ‘ಪಂಚಮ ವೇದ’, 1992ರ ‘ಬೆಳ್ಳಿಮೋಡಗಳು’, ‘ಕರ್ಪೂರದ ಗೊಂಬೆ’(1996). ಆ ಬಳಿಕ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ‘ನಮ್ಮೂರ ಮಂದಾರ ಹೂವೆ’, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕ ಅಮೆರಿಕ’(1997), ಎನ್.ಎಸ್.ಶಂಕರ್ ಅವರ ‘ಉಲ್ಟಾಪಲ್ಟಾ’, ದಿನೇಶ್ ಬಾಬು ನಿರ್ದೇಶನದ ‘ಅಮೃತ ವರ್ಷಿಣಿ’ ಸಿನೆಮಾಗಳು ರಮೇಶ್ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು. ರಮೇಶ್ ಅವರು ಚಿತ್ರಕಥೆ ರಚಿಸಿದ ‘ಹೂ ಮಳೆ’(1998) ಸಿನೆಮಾ ರಾಷ್ಟ್ರಪ್ರಶಸ್ತಿ ಗಳಿಸಿತು. ಆ ದಿನಗಳಲ್ಲಿ ಅಭಿನಯಿಸಿದ ಬಹುತೇಕ ಸಿನೆಮಾಗಳಲ್ಲಿ ಸ್ನೇಹಿತನಿಗಾಗಿ ತಮ್ಮ ಪ್ರೀತಿಯನ್ನು ತ್ಯಾಗ ಮಾಡುವ ಪಾತ್ರಗಳನ್ನು ಮಾಡಿದ್ದ ರಮೇಶ್ ಅವರು ‘ತ್ಯಾಗರಾಜ’ಎಂದೇ ಹೆಸರಾಗಿದ್ದರು.

ಆ ಬಳಿಕ, ‘ಕುರಿಗಳು ಸಾರ್ ಕುರಿಗಳು’(2001), ‘ಕೋತಿಗಳು ಸಾರ್ ಕೋತಿಗಳು’, ‘ಕತ್ತೆಗಳು ಸಾರ್ ಕತ್ತೆಗಳು’(2003) ಸಿನೆಮಾಗಳು ಬಂದವು. 2004 ಸೂಪರ್ ಹಿಟ್ ಸಿನೆಮಾ ‘ಆಪ್ತಮಿತ್ರ’ದಲ್ಲಿ ರಮೇಶ್ ಅವರು ವಿಷ್ಣುವರ್ಧನ್ ಜೊತೆಯಲ್ಲಿ ಅಭಿನಯಿಸಿದ್ದರು. 2005ರಲ್ಲಿ ರಮೇಶ್ ಅವರು ‘ರಾಮ ಶ್ಯಾಮ ಭಾಮ’ ಸಿನೆಮಾ ನಿರ್ದೇಶಿಸಿ ಗೆದ್ದರು, ಇದರಲ್ಲಿ ರಮೇಶ್ ಜೊತೆಗೆ ಕಮಲ್ ಹಾಸನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಆ ನಂತರವೂ ನಿರ್ದೇಶನ ಮುಂದುವರಿಸಿದ ರಮೇಶ್ ಅವರ ‘ಸತ್ಯವಾನ್ ಸಾವಿತ್ರಿ’(2007), ‘ವೆಂಕಟ ಇನ್ ಸಂಕಟ’(2009), ‘ನಮ್ಮಣ್ಣ ಡಾನ್’(2012) ಚಿತ್ರಗಳು ಸಾಕಷ್ಟು ಹೆಸರು ಮಾಡಿದವು. 2014ರಲ್ಲಿ ಬಂದ ‘ಮಹಾಶರಣ ಹರಳಯ್ಯ’ ಸಿನೆಮಾದಲ್ಲಿ ರಮೇಶ್ ಅವರು  ‘ಬಸವಣ್ಣನ’ ಪಾತ್ರ ವಹಿಸಿದ್ದರು. 2015ರಲ್ಲಿ ಕಮಲ್ ಹಾಸನ್ ಅಭಿನಯದ ತಮಿಳು ಸಿನೆಮಾ ‘ಉತ್ತಮ ವಿಲನ್’ ನಿರ್ದೇಶಿಸಿ ರಮೇಶ್ ಅಪಾರ ಪ್ರಶಂಸೆ ಪಡೆದಿದ್ದರು.

2020ರ ಆರಂಭದಲ್ಲಿ ತೆರೆಕಂಡ ರಮೇಶ್ ನಟನೆಯ ‘ಶಿವಾಜಿ ಸುರತ್ಕಲ್’ ಸಿನೆಮಾ ಭರ್ಜರಿ ಯಶಸ್ಸು ಗಳಿಸಿತ್ತು. ರಮೇಶ್ ಅವರೇ ನಿರ್ದೇಶಿಸಿ, ಅಭಿನಯಿಸಿರುವ ‘100’ ಶೀರ್ಷಿಕೆಯ ಸಿನೆಮಾ ಬಿಡುಗಡೆಗಾಗಿ ಕಾಯುತ್ತಿದೆ, ರಮೇಶ್ ಅವರ ಮತ್ತೊಂದು ಹೊಸ ಚಿತ್ರ ‘ಭೈರಾದೇವಿ’ ಕೂಡ ತೆರೆಗೆ ಬರಲು ಸಜ್ಜಾಗುತ್ತಿದೆ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಿನೆಮಾ ರಂಗದಲ್ಲಿರುವ ರಮೇಶ್ ಕನ್ನಡ, ತಮಿಳು, ತೆಲುಗು, ಮಲೆಯಾಳಮ್, ಹಿಂದಿ ಸೇರಿದಂತೆ 6 ಭಾಷೆಗಳ ಸುಮಾರು 150 ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ.

ದಕ್ಷಿಣ ಭಾರತದ ಸಿನೆಮಾ ರಂಗದಲ್ಲಿ Action ಸಿನೆಮಾಗಳು ಹೆಚ್ಚು ಯಶಸ್ವಿ ಆಗುತ್ತಿದ್ದ ಸಮಯದಲ್ಲೂ ಕೂಡ ರಮೇಶ್ ತಮ್ಮದೇ ಆದ ಭಿನ್ನ ಹಾದಿಯನ್ನು ಹಿಡಿದಿದ್ದರು. Comedy, Drama, Romance, Philosophical ಸಿನೆಮಾಗಳ ಜೊತೆಗೆ, ಸಾಮಾಜಿಕ ಸಂದೇಶ ಹೊಂದಿರುವ ಸಿನೆಮಾಗಳಲ್ಲೂ ನಟಿಸುತ್ತಾ ಬಂದ ರಮೇಶ್ ಅರವಿಂದ್, ಅವುಗಳ ಮೂಲಕವೇ ಗೆಲುವು ಸಾಧಿಸಿ, ತಮ್ಮ ವ್ಯಾಪ್ತಿ ಮತ್ತು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡರು.

ಇದೆಲ್ಲದರ ಜೊತೆಗೆ, ರಮೇಶ್ ಅವರು ಹಲವಾರು ಟಿವಿ ಶೋಗಳನ್ನು ನಡೆಸಿಕೊಡುವುದರ ಮೂಲಕವೂ ರಾಜ್ಯದಲ್ಲಿ ಮನೆಮಾತಾಗಿದ್ದಾರೆ. ಅವುಗಳಲ್ಲಿ 2009ರಲ್ಲಿ ಕಸ್ತೂರಿ ಟಿ.ವಿ ಗಾಗಿ ‘ಪ್ರೀತಿಯಿಂದ ರಮೇಶ್’ ಮತ್ತು ಈ ಟಿವಿ ಕನ್ನಡಕ್ಕಾಗಿ ‘ರಾಜ ರಾಣಿ ರಮೇಶ್’ Game Showಗಳು ಸೇರಿವೆ. ನಂತರ ಬಂದ ನಾಡಿನ ಸಾಧಕರನ್ನು ಪರಿಚಯಿಸುವ ‘ವೀಕ್ ಎಂಡ್ ವಿತ್ ರಮೇಶ್’ ಕಾರ್ಯಕ್ರಮ, ಕರ್ನಾಟಕದ ಅತ್ಯಂತ ಜನಪ್ರಿಯ ಟಿ.ವಿ ಕಾರ್ಯಕ್ರಮಗಳಲ್ಲೊಂದು. ರಮೇಶ್ ಅವರು ನಡೆಸಿಕೊಡುತ್ತಿದ್ದ ಮತ್ತೊಂದು ಟಿವಿ ಶೋ ‘ಕನ್ನಡದ ಕೋಟ್ಯಧಿಪತಿ’ ಕೂಡ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.

ದಿವಂಗತ ನಟ ವಿಷ್ಣುವರ್ಧನ್ ಅವರಿಗೆ ಆಪ್ತರಾಗಿದ್ದ ರಮೇಶ್, ಪ್ರಸಿದ್ಧ ನಟ ಕಮಲ್ ಹಾಸನ್ ಅವರಿಗೂ ಆತ್ಮೀಯರಾಗಿದ್ದಾರೆ. ಕಮಲ್ ಹಾಸನ್ ಅವರು ಹೊಸ ಕವಿತೆ ಬರೆದಾಗ ರಮೇಶ್ ಅವರಿಗೆ ಫೋನ್ ಮೂಲಕ ಓದಿ ಹೇಳುತ್ತಾರಂತೆ.

ಒಟ್ಟಿನಲ್ಲಿ ಬುದ್ಧಿವಂತ, ಮಾತುಗಾರ, ಕ್ರಿಯಾಶೀಲ, ಪ್ರತಿಭಾವಂತ ಎಂದೆಲ್ಲ ಕರೆಸಿಕೊಳ್ಳುವುದರ ಜೊತೆಗೆ, ಉತ್ತಮ ವ್ಯಕ್ತಿ ಅನ್ನಿಸಿಕೊಂಡಿರುವ ರಮೇಶ್ ಅರವಿಂದ್ ಅವರಿಗೆ ‘ಮಾಧ್ಯಮ ಅನೇಕ’ದ ವತಿಯಿಂದ ಜನ್ಮದಿನದ ಶುಭ ಹಾರೈಕೆಗಳು.

LEAVE A REPLY

Connect with

Please enter your comment!
Please enter your name here