ಪ್ರತಿಷ್ಠಿತ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಕಾಂತಾರ’ ಸಿನಿಮಾ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಪಾತ್ರವಾಗಿದೆ. ‘ಕಾಂತಾರ’ ಕಳೆದ ವರ್ಷ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಪಡೆಯುವುದರ ಜೊತೆಗೆ, ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿ ಹಲವು ಭಾಷೆಗಳಿಗೆ ಡಬ್‍ ಆಗಿತ್ತು.

ನಿನ್ನೆ (ಮಂಗಳವಾರ) ಗೋವಾದಲ್ಲಿ ಮುಕ್ತಾಯವಾದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್‍ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ. ಕನ್ನಡ ಚಿತ್ರವೊಂದು ಈ ಪ್ರಶಸ್ತಿಗೆ ಭಾಜನವಾಗಿರುವುದು ಇದೇ ಮೊದಲು. ಈ ಬಾರಿ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 15 ಚಿತ್ರಗಳು ಕಣದಲ್ಲಿದ್ದವು. ಈ ಪೈಕಿ ಭಾರತದಿಂದ ‘ಕಾಂತಾರ’ ಸೇರಿದಂತೆ ಒಟ್ಟು ಮೂರು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ವಿಭಾಗದಲ್ಲಿ ‘ಕಾಂತಾರ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂ ನಗದನ್ನು ಪ್ರಶಸ್ತಿ ಒಳಗೊಂಡಿದೆ.

ತಮ್ಮ ಸಿನಿಮಾಗೆ ಸಿಕ್ಕಿರುವ ಗೌರವದ ಬಗ್ಗೆ ಮಾತನಾಡಿರುವ ರಿಷಭ್‌ ಶೆಟ್ಟಿ, ‘ಕಳೆದ ವರ್ಷ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದೆವು. ಈ ಬಾರಿ ನಮ್ಮ ಚಿತ್ರ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಸ್ಪರ್ಧಿಸಿ, ತೀರ್ಪುಗಾರರ ವಿಶೇಷ ಪ್ರಶಸ್ತಿ ಗೆದ್ದಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ’ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ‘ಕಾಂತಾರ’ ಕಳೆದ ವರ್ಷ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಪಡೆಯುವುದರ ಜೊತೆಗೆ, ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿ ಹಲವು ಭಾಷೆಗಳಿಗೆ ಡಬ್‍ ಆಗಿತ್ತು. ರಿಷಭ್‍ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್‍ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಅಜನೀಶ್‍ ಲೋಕನಾಥ್‍ ಸಂಗೀತ, ಅರವಿಂದ್‍ ಕಶ್ಯಪ್‍ ಛಾಯಾಗ್ರಹಣವಿದೆ.

LEAVE A REPLY

Connect with

Please enter your comment!
Please enter your name here