ಮಲಯಾಳಂ ಮತ್ತು ತಮಿಳು ಸಿನಿಮಾ ನಟ ನೆಡುಮುಡಿ ವೇಣು (73 ವರ್ಷ) ಇಂದು ತಿರುವನಂತಪುರಂನಲ್ಲಿ ಅಗಲಿದ್ದಾರೆ. ಉತ್ತಮ ನಟನೆಗೆ ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಅವರು 500ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ರಂಗಭೂಮಿ ಹಿನ್ನೆಲೆಯ ನಟ ನೆಡುಮುಡಿ ವೇಣು ಅವರು ಜಿ.ಅರವಿಂದನ್‌ ನಿರ್ದೇಶನದ ‘ತಂಬು’ ಮಲಯಾಳಂ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದರು. ಗಂಭೀರ ಮತ್ತು ಹಾಸ್ಯ ಪಾತ್ರಗಳಿಗೆ ಘನತೆ ತಂದುಕೊಟ್ಟ ವೇಣು ಅವರ ಬಗ್ಗೆ ಮಲಯಾಳಂ ಚಿತ್ರರಂಗದ ವಲಯದಲ್ಲಿ ಅಪಾರ ಗೌರವವಿದೆ. ಅರವಂ, ವಿಡಾಪರಯಂ ಮುನ್ಪೆ, ಕಲ್ಲನ್ ಪವಿತ್ರನ್‌, ಚಾಮರನ್‌, ಭರತನ್‌, ಚಿತ್ರಂ, ಥೆನ್ಮಾವಿನ್‌ ಕೊಂಬತ್‌, ಹಿಸ್ ಹೈನೆಸ್ ಅಬ್ದುಲ್ಲಾ, ಮಾರ್ಗಮ್‌, ಅರಿಂಪರ… ಅವರ ಅಭಿನಯದ ಕೆಲವು ಪ್ರಮುಖ ಮಲಯಾಳಂ ಚಿತ್ರಗಳು. ಮಲಯಾಳಂ ಮತ್ತು ತಮಿಳು ಭಾಷೆಯ 500ಕ್ಕೂ ಹೆಚ್ಚು ಚಿತ್ರಗಳ ವೈವಿಧ್ಯಮಯ ಪಾತ್ರಗಳಲ್ಲಿ ವೇಣು ಅಭಿನಯಿಸಿದ್ದಾರೆ.

ಕಟ್ಟತ್ತೆ ಕಿಲಿಕ್ಕೂಡು, ತೀರ್ಥಂ, ಶ್ರುತಿ, ಅಂಬಾಡ ನಿಜಾನೆ, ಒರು ಕಥಾ ಒರು ನುನ್ನಕ್ಕಥಾ, ಸವಿಧಂ, ಅಂಗಾನೆ ಒರು ಅವಧಿಕ್ಕಲಥು.. ಮಲಯಾಳಂ ಸಿನಿಮಾಗಳಿಗೆ ಚಿತ್ರಕಥೆ ರಚಿಸಿದ್ದಾರೆ. ಉತ್ತಮ ನಟನೆಗೆ ಮೂರು ರಾಷ್ಟ್ರಪ್ರಶಸ್ತಿ ಪಡೆದಿರುವ ವೇಣು ಅವರಿಗೆ ಆರು ಕೇರಳ ರಾಜ್ಯ ಪ್ರಶಸ್ತಿ ಗೌರವ ಸಂದಿದೆ. ಉತ್ತಮ ಮೃದುಂಗ ವಾದಕರೂ ಆಗಿದ್ದ ನೆಡುಮುಡಿ ವೇಣು ಅವರ ನಿಧನಕ್ಕೆ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖರು ಕಂಬನಿ ಮಿಡಿದಿದ್ದಾರೆ.

LEAVE A REPLY

Connect with

Please enter your comment!
Please enter your name here