ವಿಮರ್ಶೆ | ಕನ್ನಡ ಸಿನಿಮಾ | ಕೋಟಿಗೊಬ್ಬ 3
“ಅವನು ಕಿಲಾಡಿ, ಕೇಡಿ ಅಲ್ಲ!” – ಚಿತ್ರದ ಹೀರೋ ಕುರಿತಾಗಿ ಪೊಲೀಸ್ ಅಧಿಕಾರಿ ಇಂಥದ್ದೊಂದು ಅಭಿಪ್ರಾಯಕ್ಕೆ ಬರುತ್ತಾರೆ. ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಖಳನನ್ನು ಹೊಡೆದುರುಳಿಸುವಾಗ ಒಮ್ಮೆಗೇ ತೆರೆಯ ಮೇಲೆ ಕತ್ತಲು ಕವಿಯುತ್ತದೆ. ಅರೆಕ್ಷಣಗಳ ನಂತರ ಬೆಳಕು ಹರಿಯುತ್ತಿದ್ದಂತೆ ಅಲ್ಲಿ ಹೀರೋ ಮಾಯ! “ಅವನು ನಮ್ಮ ಕಸ್ಟಡಿಗಿಂತ ಹೊರಗೆ ಓಡಾಡಿಕೊಂಡಿದ್ದರೇ ಒಳ್ಳೇದು. ಸಮಾಜಘಾತಕರಿಗೆ ಭಯವಿರುತ್ತೆ” ಅಂತಾರೆ ಇಂಟರ್‌ಪೋಲ್ ಅಧಿಕಾರಿ. ‘ಕೋಟಿಗೊಬ್ಬ’ ಸಿನಿಮಾ ಸೀಕ್ವೆಲ್ ಮುಂದುವರಿಸುವ ಇರಾದೆಯಿಂದಲೇ ಚಿತ್ರತಂಡ ಚಿತ್ರಕಥೆಯಲ್ಲಿ ಇಂಥದ್ದೊಂದು ಟ್ವಿಸ್ಟ್ ಇಟ್ಟಿದೆ. ಇದೆಲ್ಲಾ ಓಕೆ. ಸೀಕ್ವೆಲ್ ಮುಂದುವರಿಸುವ ಉದ್ದೇಶದ ಜೊತೆ ಚಿತ್ರಕಥೆಯ ಬಂಧ ಇನ್ನಷ್ಟು ಗಟ್ಟಿಯಾಗಿದ್ದಿದ್ದರೆ ಸಿನಿಮಾದ ತೂಕ ಹೆಚ್ಚಾಗುತ್ತಿತ್ತು.
ಭರ್ಜರಿ ಆಕ್ಷನ್, ಒಂದಿಷ್ಟು ರೊಮ್ಯಾನ್ಸ್, ಮಧ್ಯೆ ಸೆಂಟಿಮೆಂಟ್… ಕಮರ್ಷಿಯಲ್ ಸಿನಿಮಾಗೆ ಬೇಕಾದ ಫಾರ್ಮುಲಾ ವರ್ಕ್ ಮಾಡಿದ್ದಾರೆ ನಿರ್ದೇಶಕರು. ಹಿಂದಿನ ‘ಕೋಟಿಗೊಬ್ಬ 2’ ಸಿನಿಮಾದ ಕತೆಯ ಮುಂದುವರಿಕೆಯನ್ನು ತೋರಿಸುವ ಅನಿವಾರ್ಯತೆಯೂ ಅವರಿಗಿತ್ತು. ಹಾಗಾಗಿ ಈ ಚಿತ್ರದ ಮೊದಲರ್ಧದಲ್ಲಿ ಸತ್ಯ/ಶಿವ ಇಬ್ಬರೋ, ಇಲ್ಲಾ ಎರಡು ವೇಷ ತೊಟ್ಟು ಪೊಲೀಸರನ್ನು ಯಾಮಾರಿಸುವ ಒಬ್ಬನೋ ಎನ್ನುವ ಗೊಂದಲ ಪ್ರೇಕ್ಷಕರಷ್ಟೇ ನಿರ್ದೇಶಕರನ್ನೂ ಕಾಡಿದಂತಿದೆ! ಇಲ್ಲೇ ಚಿತ್ರಕಥೆಗೆ ಕೊಂಚ ಬಿಗಿ ಬೇಕಿದ್ದುದು. ಈ ಮಿತಿಯಲ್ಲಿಯೇ ಪ್ರೇಕ್ಷಕರ ರಿಲೀಫ್‌ಗೆ ಕಾಮಿಡಿ ತರುವ ಪ್ರಯತ್ನವನ್ನೂ ಅವರು ಮಾಡಿದ್ದಾರೆ. ಆದರೆ ಅಲ್ಲಿ ಹೆಚ್ಚು ಸ್ಕೋಪ್ ಸಿಕ್ಕಿಲ್ಲ. ಈ ಹಂತದಲ್ಲಿ ಹೀರೋ-ಹಿರೋಯಿನ್ ಪ್ರೀತಿಯ ಸನ್ನಿವೇಶಗಳು ಪ್ರೇಕ್ಷಕರಿಗೆ ಕೊಂಚ ರಿಲೀಫ್ ನೀಡುತ್ತವೆ.
‘ಕೋಟಿಗೊಬ್ಬ’ ಇಲ್ಲಿ ಇಂಟರ್‌ನ್ಯಾಷನಲ್ ಕಿಲಾಡಿ. ಬೆಂಗಳೂರಿನಿಂದ ಶುರುವಾದ ಅವನ ಖಳರ ಬೇಟೆ ಪೋಲ್ಯಾಂಡ್ ದೇಶದಲ್ಲಿ ಸಮಾಪ್ತಿಯಾಗುತ್ತದೆ. ದ್ವಿತಿಯಾರ್ಧದ ಬಹುಪಾಲು ಸನ್ನಿವೇಶಗಳು ಪೋಲ್ಯಾಂಡ್ ದೇಶದಲ್ಲಿ ಚಿತ್ರಣಗೊಂಡಿವೆ. ಸತ್ಯ, ಶಿವನ ಜೊತೆ ಅಲ್ಲಿ ‘ಘೋಸ್ಟ್’ ಎನ್ನುವ ಮತ್ತೊಂದು ಪಾತ್ರವೂ ಸೃಷ್ಟಿಯಾಗುತ್ತದೆ. ಸ್ಥಳೀಯ ಕಲಾವಿದರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡಿಕೊಂಡಿದ್ದು, ಇಂಗ್ಲೀಷೂ ಹೆಚ್ಚೇ ಇದೆ. ಅವನು ಸತ್ಯನೋ, ಇವನು ಶಿವನೋ ಎಂದು ಪ್ರೇಕ್ಷಕರು ತಲೆಗೆ ಹುಳ ಬಿಟ್ಟುಕೊಳ್ಳಲು ಪುರುಸೊತ್ತಾಗದಂತೆ ಕಾರು, ಬೈಕ್ ಚೇಸಿಂಗ್ ಸನ್ನಿವೇಶಗಳು ಬಂದುಹೋಗುತ್ತವೆ. ಕೊನೆಗೆ ಅವ ನಮ್ಮವ, ಇವನೂ ನಮ್ಮವ ಎನ್ನುವ ಅನುಕಂಪದಿಂದ ಪ್ರೇಕ್ಷಕರು ಭಾವಿಸುವಂತಹ ಫ್ಲಾಶ್‌ಬ್ಯಾಕ್ ಸೆಂಟಿಮೆಂಟೊಂದನ್ನು ನಿರ್ದೇಶಕರು ತೋರಿಸಿಬಿಡುತ್ತಾರೆ!
ಅಫ್‌ಕೋರ್ಸ್, ಇದು ಹೀರೋ ಸುದೀಪ್ ಅವರ ಇಮೇಜಿಗೆ ಸೂಕ್ತವಾಗಿ ಹೊಂದಿಕೊಳ್ಳುವ ಕಂಟೆಂಟ್. ಲೋಕಲ್‌ನಲ್ಲಿ ಅನಾಥಾಶ್ರಮ ನಡೆಸುವ ಯುವಕನಾಗಿ, ನಂತರ ಇಂಟರ್‌ನ್ಯಾಷನಲ್ ಕಿಲಾಡಿಯಾಗಿ ಪಾತ್ರ ನಿಭಾಯಿಸುವಾಗ ಬೇಕಾದ ಬಾಡಿ ಲಾಂಗ್ವೇಜ್, ಟೈಮಿಂಗ್ ಅನ್ನು ಅವರು ಸೊಗಸಾಗಿ ಹ್ಯಾಂಡಲ್ ಮಾಡಿದ್ದಾರೆ. ಆ ಮಟ್ಟಿಗೆ ಚಿತ್ರಕಥೆಯಲ್ಲಿನ ಮಿತಿಗಳನ್ನು ಅವರ ಸ್ಕ್ರೀನ್‌ಪ್ರಸೆನ್ಸ್ ಕಾಪಾಡಿದೆ. ನಾಯಕಿ ಮಡೋನ್ನಾ ಸೆಬಾಸ್ಟಿಯನ್ ಬರೀ ಹಾಡುಗಳಿಗಷ್ಟೇ ಸೀಮಿತರಾಗಿಲ್ಲ. ಕನ್ನಡದಲ್ಲಿ ಅವರಿಗಿದು ಒಳ್ಳೆಯ ಪದಾರ್ಪಣೆ. ಇಂಟರ್‌ಪೋಲ್ ಅಧಿಕಾರಿಗಳಾಗಿ ಬಾಲಿವುಡ್ ತಾರೆಯರಾದ ಅಫ್ತಬ್ ಶಿವದಾಸಾನಿ ಮತ್ತು ಶ್ರದ್ಧಾ ದಾಸ್ ಪಾತ್ರಗಳ ಹದವರಿತು ನಟಿಸಿದ್ದಾರೆ. ಹಿಂದಿನ ‘ಕೋಟಿಗೊಬ್ಬ 2’ ವೀಕ್ಷಿಸಿದವರಿಗೆ, ನಟ ರವಿಶಂಕರ್ ಅವರ ಕಾಮಿಡಿ ಟೈಮಿಂಗ್‌ಗೆ ಇನ್ನೂ ಹೆಚ್ಚಿನ ಸ್ಪೇಸ್ ಸಿಗಬೇಕಿತ್ತು ಎಂದು ಅನಿಸುವುದು ಹೌದು.
ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಸುದೀಪ್ – ಮಡೋನ್ನಾ ಜೋಡಿಯ ‘ನೀ ಕೋಟಿಯಲ್ಲಿ ಒಬ್ಬನೆ’ ಹಾಡು, ಪಿಕ್ಚರೈಸೇಷನ್ ಹಿತವೆನಿಸುತ್ತದೆ. ಆಕ್ಷನ್ ಸನ್ನಿವೇಶಗಳ ಅಬ್ಬರ ಪರಿಣಾಮಕಾರಿಯಾಗಿದೆ ಎಂದರೆ ಅದಕ್ಕೆ ಶೇಖರ್ ಚಂದ್ರ ಅವರ ಕ್ಯಾಮರಾ ಕೆಲಸಕ್ಕೆ ಅಭಿನಂದನೆ ಸಲ್ಲಬೇಕು. ಒಟ್ಟಾರೆ, ಚಿತ್ರದ ಮೊದಲರ್ಧ ನೋಡಿ ‘ಏನೋ, ಅಷ್ಟಾಗಿ ಮಜಾ ಸಿಗ್ಲಿಲ್ಲ’ ಎಂದು ಗೊಣಗಿಕೊಳ್ಳುವ ಸುದೀಪ್‌ರ ಅಭಿಮಾನಿಗಳು ದ್ವಿತಿಯಾರ್ಧದ ನಂತರ ‘ಪರವಾಗಿಲ್ಲ, ಪೈಸಾ ವಸೂಲ್ ಆಯ್ತು’ ಎಂದುಕೊಳ್ಳಬಹುದು.
ನಿರ್ಮಾಪಕ : ಸೂರಪ್ಪ ಬಾಬು | ನಿರ್ದೇಶನ : ಶಿವಕಾರ್ತಿಕ್ | ಛಾಯಾಗ್ರಹಣ : ಶೇಖರ್ ಚಂದ್ರು | ಸಂಗೀತ : ಅರ್ಜುನ್ ಜನ್ಯ | ತಾರಾಬಳಗ : ಸುದೀಪ್, ಮಡೋನ್ನಾ ಸೆಬಾಸ್ಟಿಯನ್, ರವಿಶಂಕರ್, ಶ್ರದ್ಧಾ ದಾಸ್, ಅಫ್ತಬ್ ಶಿವದಾಸಾನಿ, ನವಾಬ್ ಷಾ ಇತರರು.