ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ, ಲೇಖಕ ಜಿ.ಕೆ.ಗೋವಿಂದರಾವ್‌ ಇಂದು ಬೆಳಗ್ಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಂಗಭೂಮಿ, ಸಿನಿಮಾ, ಕಿರುತೆರೆ, ಸಾಹಿತ್ಯಿಕ ಚಟುವಟಿಕೆ, ಪ್ರಗತಿಪರ ಹೋರಾಟಗಳ ಮೂಲಕ ಅವರು ಕನ್ನಡಿಗರಿಗೆ ಚಿರಪರಿಚಿತರಾಗಿದ್ದರು.

ಕನ್ನಡ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ನಟ, ಲೇಖಕ ಜಿ.ಕೆ.ಗೋವಿಂದರಾವ್ (84 ವರ್ಷ) ಇಂದು ಮುಂಜಾನೆ ಅಗಲಿದ್ದಾರೆ. ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಜಿ.ಕೆ.ಗೋವಿಂದರಾವ್ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ನಾಟಕ ರಚನೆ, ವಿಮರ್ಶೆ, ಅನುವಾದ.. ಹೀಗೆ ಹಲವು ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದ ಅವರು ನಟನೆಗೆ ತೆರೆದುಕೊಂಡಿದ್ದು ಹವ್ಯಾಸಿ ರಂಗಭೂಮಿಯಲ್ಲಿ. ಡಿ.ಆರ್‌.ಅಂಕುರ್‌ ನಿರ್ದೇಶನದ ‘ಸಂಸ್ಕಾರ’ ನಾಟಕದಲ್ಲಿ ನೀಡಿದ ಪರಿಣಾಮಕಾರಿ ಅಭಿನಯ ಅವರ ಚಿತ್ರರಂಗ ಪ್ರವೇಶಕ್ಕೆ ನಾಂದಿಯಾಯ್ತು. 1976ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಕಥಾಸಂಗಮ’ದ ಒಂದು ಭಾಗವಾದ ‘ಹಂಗು’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದರು.

ಮುಂದೆ ‘ಗ್ರಹಣ’, ‘ಅರಿವು’ ಕಲಾತ್ಮಕ ಚಿತ್ರಗಳಲ್ಲಿ ಸಂಕೀರ್ಣವಾದ ಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟವು. ಕಾಲೇಜುರಂಗ, ತುಳಸೀದಳ, ಡಾಕ್ಟರ್ ಕೃಷ್ಣ, ಕಾನೂರು ಹೆಗ್ಗಡತಿ, ನಿಶ್ಯಬ್ಧ, ಭೂಮಿ ತಾಯಿಯ ಚೊಚ್ಚಲ ಮಗ.. ಅವರ ನಟನೆಯ ಕೆಲವು ಪ್ರಮುಖ ಸಿನಿಮಾಗಳು. ಶಂಕರ್‌ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್‌’ ಹಿಂದಿ ಸರಣಿ, ಟಿ.ಎನ್‌.ಸೀತಾರಾಂ ನಿರ್ದೇಶನದ ‘ಮಹಾಪರ್ವ’ ಸೇರಿದಂತೆ ಕೆಲವು ಕಿರುತೆರೆ ಸರಣಿಗಳಲ್ಲೂ ಅಭಿನಯಿಸಿದ್ದಾರೆ.

ಖ್ಯಾತ ರಂಗಕರ್ಮಿ ಪ್ರಸನ್ನ ನಿರ್ದೇಶನದ ‘ಮ್ಯಾಕ್‌ಬೆತ್‌’ ನಾಟಕದ ಶೀರ್ಷಿಕೆ ಪಾತ್ರದಲ್ಲಿ ರಂಗಾಸಕ್ತರು ಅವರನ್ನು ಅಪಾರವಾಗಿ ಮೆಚ್ಚಿಕೊಂಡಿದ್ದರು. ರಂಗಾಯಣಕ್ಕೆ ‘ಕಿಂಗ್ ಲಿಯರ್’ ನಾಟಕ ನಿರ್ದೇಶಿಸಿದ್ದರು. ನಟರಂಗ ತಂಡಕ್ಕಾಗಿ ಬಿ.ವಿ.ಕಾರಂತ ಅವರು ನಿರ್ದೇಶಿಸಿದ ‘ಚೆಗುವಾರ’ ನಾಟಕದ ಸ್ಕ್ರಿಪ್ಟ್ ಜಿ.ಕೆ.ಜಿ ಅವರದೆ. ಸಿ.ಆರ್‌.ಸಿಂಹ ಈ ನಾಟಕದ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದರು. ತಾವು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸೇಂಟ್ ಜೋಸೆಫ್‌ ಕಾಲೇಜಿನ ಕನ್ನಡ ಸಂಘಕ್ಕೆ ಅವರು ಹತ್ತಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ.

“ಸಮುದಾಯ ರಂಗತಂಡದಲ್ಲಿ ಗೋವಿಂದರಾವ್ ನಟಿಸಿದ ಹಲವು ನಾಟಕಗಳಿಗೆ ನಾನು ಬ್ಯಾಕ್‌ಸ್ಟೇಜ್‌ನಲ್ಲಿ ಕೆಲಸ ಮಾಡಿದ್ದೇನೆ. ಶ್ರೇಷ್ಠ ಕಲಾವಿದರು. ನಾಟಕಕಾರ ಶೇಕ್ಸ್‌ಪಿಯರ್‌ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಲೇಖಕರಲ್ಲಿ ಜಿಕೆಜಿ ಒಬ್ಬರು. ಕಾಲೇಜಿನಲ್ಲಿ ಅವರು ಶೇಕ್ಸಪಿಯರ್ ನಾಟಕಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವಾಗ ಪುಸ್ತಕ ನೋಡಿ ಪಾಠ ಮಾಡುತ್ತಿರಲಿಲ್ಲ. ವೇದಿಕೆ ಮೇಲೆ ಅಭಿನಯಿಸಿ ಪಾಠ ಮಾಡುತ್ತಿದ್ದರು. ನನ್ನಲ್ಲಿ ಪ್ರಗತಿಪರ ಚಿಂತನೆ ಮೂಡಿಸುವಲ್ಲಿ ಅವರ ಪಾತ್ರ ದೊಡ್ಡದು. ಅವರು ಅಭಿನಯಿಸಿದ ನಾಟಕಗಳಲ್ಲಿ ಬ್ಯಾಕ್‌ಸ್ಟೇಜ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನಮಗೆ ಹೆಮ್ಮೆಯ ಸಂಗತಿ” ಎನ್ನುತ್ತಾರೆ ಹಿರಿಯ ರಂಗಕರ್ಮಿ ಗುಂಡಣ್ಣ. “ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ‘ಕಾಡು’ ಚಿತ್ರದಲ್ಲಿ ಅವರು ಪ್ರಮುಖ ಕಲಾವಿದರಾಗಿದ್ದರು. ಮುಂದೆ ನನ್ನ ಚೊಚ್ಚಲ ನಿರ್ದೇಶನದ ‘ಗ್ರಹಣ’ದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ನನ್ನ ಸಿನಿಮಾದ ಚಿತ್ರೀಕರಣ ಕೊಂಚ ವಿಳಂಬವಾಯ್ತು. ಆಗೆಲ್ಲಾ ಯಾವುದೇ ರೀತಿಯ ಬೇಸರ ಮಾಡಿಕೊಳ್ಳದೆ ಬಂದು ನಟಿಸಿದ್ದರು” ಎಂದು ಹಿರಿಯ ಚಿತ್ರನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಗೋವಿಂದರಾವ್‌ರನ್ನು ಸ್ಮರಿಸಿಕೊಳ್ಳುತ್ತಾರೆ.

LEAVE A REPLY

Connect with

Please enter your comment!
Please enter your name here