ಪುನೀತ್ ಅಭಿಮಾನಿಗಳು ದಯಮಾಡಿ ಭಾವೋದ್ರೇಕಕ್ಕೆ ಒಳಗಾಗಿ ಪ್ರಾಣಹಾನಿ ಮಾಡಿಕೊಳ್ಳಬಾರದು ಎಂದು ನಟ ಶಿವರಾಜಕುಮಾರ್ ಮನವಿ ಮಾಡಿದ್ದಾರೆ. ಇಂದು ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಹೋದರ, ನಟ ಪುನೀತ್ ಅಗಲಿಕೆಯ ನೋವಿನಲ್ಲಿರುವ ಶಿವರಾಜಕುಮಾರ್ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಪ್ರಮುಖವಾಗಿ ಅಭಿಮಾನಿಗಳು ಯಾವುದೇ ರೀತಿಯಲ್ಲೂ ಭಾವೋದ್ರೇಕಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಮಾಡಿಕೊಳ್ಳಬಾರದು ಎನ್ನುವುದು ಅವರ ಕಾಳಜಿಯಾಗಿತ್ತು. “ಚಿಕ್ಕವಯಸ್ಸಿಗೆ ಪುನೀತ್ ಅಗಲಿದ್ದು ಸಹಜವಾಗಿಯೇ ಎಲ್ಲರಿಗೂ ನೋವು ತಂದಿದೆ. ಕುಟುಂಬದವರಿಗಿಂತ ಅಭಿಮಾನಿಗಳು ಹೆಚ್ಚು ಸಂಕಟ ಪಡುತ್ತಿದ್ದಾರೆ. ದಯಮಾಡಿ ಯಾರೂ ಕೂಡ ಇದನ್ನು ಮನಸ್ಸಿಗೆ ಹಚ್ಚಿಕೊಂಡು ಪ್ರಾಣಹಾನಿ ಮಾಡಿಕೊಳ್ಳುವಂತಹ ಕೆಟ್ಟ ನಿರ್ಧಾರ ಕೈಗೊಳ್ಳಬಾರದು. ಎಲ್ಲರಿಗೂ ಕುಟುಂಬಗಳಿರುತ್ತವೆ. ಅವರು ನೋವು ಪಡುವಂತಾಗಬಾರದು. ನಾವು ನೋವು ನುಂಗಿ ಬದುಕೋದನ್ನು ಕಲೀಬೇಕು ಅಷ್ಟೇ” ಎಂದು ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಅವರು ಮನವಿ ಮಾಡಿದರು.
ಕಳೆದೆರೆಡು ದಿನ ಶಾಕ್‌ನಲ್ಲಿದ್ದ ಶಿವರಾಜಕುಮಾರ್ ಇಂದು ಕೊಂಚ ಸುಧಾರಿಸಿಕೊಂಡಿದ್ದರು. “ರಾಜ್ಯದ ಅನೇಕ ಭಾಗಗಳಿಂದ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಲಕ್ಷಾಂತರ ಜನರು ಬಂದು ಪುನೀತ್ ದರ್ಶನ ಪಡೆದರು. ಅಪ್ಪಾಜಿ ಅದೆಷ್ಟು ಪ್ರೀತಿ ಸಂಪಾದಿಸಿ ಹೋಗಿದ್ದಾರೆ. ಅಪ್ಪು ಕೂಡ ಅಷ್ಟೇ ಪ್ರೀತಿ ಸಂಪಾದಿಸಿದ್ದ. ಇದು ನಮ್ಮ ಕುಟುಂಬದ ಪುಣ್ಯ. ನಾಳೆ ಕುಟುಂಬದ ‘ಹಾಲು – ತುಪ್ಪ’ ಸಂಪ್ರದಾಯ ಮುಗಿದನಂತರ ಅಪ್ಪು ಸಮಾಧಿ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ” ಎನ್ನುವ ಅವರು ಎಂದಿನಂತೆ ಸಿನಿಮಾ ಚಟುವಟಿಕೆಗಳು ಮುಂದುವರೆಯಲಿ ಎಂದು ಆಶಿಸಿದರು. “ಸಿನಿಮಾಗಳು ಎಂದಿನಂತೆ ಪ್ರದರ್ಶನಗೊಳ್ಳಬೇಕು, ಹೊಸ ಸಿನಿಮಾಗಳು ಶುರುವಾಗಬೇಕು. ಶೋ ಮಸ್ಟ್ ಗೋ ಆನ್. ಎಲ್ಲರ ಬದುಕೂ ನಡೆಯಬೇಕು. ಎಲ್ಲರಿಗೂ ಜವಾಬ್ದಾರಿಗಳು ಇರುತ್ತವೆ. ಯಾರಿಗೂ ತೊಂದರೆಯಾಗಕೂಡದು” ಎಂದರು ಶಿವರಾಜಕುಮಾರ್.
ಅಗಲಿದ ನಂತರ ಪುನೀರ್‌ರ ಸಾಮಾಜಿಕ ಸೇವಾಕಾರ್ಯಗಳ ಕುರಿತು ಹೆಚ್ಚೆಚ್ಚು ಚರ್ಚೆಯಾಗುತ್ತಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವರಾಜ್, “ಹೌದು, ಎಲ್ಲರೂ ಇಂತಹ ಕಾರ್ಯಗಳನ್ನು ಮಾಡಬೇಕು. ಅಪ್ಪು ಅಷ್ಟೊಂದು ಕೆಲಸ ಮಾಡುತ್ತಿರುವ ಬಗ್ಗೆ ನಮಗೂ ಮಾಹಿತಿ ಇರಲಿಲ್ಲ. ನಾವು ಮಾಡುವ ಸೇವೆಯ ಬಗ್ಗೆ ಯಾರಲ್ಲೂ ಹೇಳಿಕೊಳ್ಳಕೂಡದು ಎಂದು ಅಪ್ಪಾಜಿ ಹೇಳುತ್ತಿದ್ದರು. ಅಪ್ಪು ಅದನ್ನು ಅನುಸರಿಸುತ್ತಿದ್ದ ಎನಿಸುತ್ತದೆ. ಇವತ್ತು ಅವನ ಕೆಲಸಗಳು ಎಲ್ಲರಿಗೂ ಗೊತ್ತಾಗುತ್ತಿದೆ. ಅವನ ಬಗ್ಗೆ ಹೆಮ್ಮೆ ಅನಿಸುತ್ತಿದೆ” ಎನ್ನುವ ಶಿವರಾಜಕುಮಾರ್, ಅಪ್ಪು ಅವರ ಸಿನಿಮಾಗಳ ಕುರಿತೂ ಮಾತನಾಡಿದರು. “ಅಪ್ಪು ನಟನೆಯ ಜೆಮ್ಸ್‌ಸಿನಿಮಾ ಆಲ್‌ಮೋಸ್ಟ್ ಪೂರ್ಣವಾಗಿದೆ. ಒಂದಿಷ್ಟು ಪ್ಯಾಚ್‌ವರ್ಕ್ ಇರಬಹುದು. ಹೊಸ ಸಿನಿಮಾ ಈ ವೇಳೆಗಾಗಲೇ ಶುರುವಾಗಬೇಕಿತ್ತು. ಕಾರಣಾಂತರಗಳಿಂದ ಮುಂದಕ್ಕೆ ಹೋಯ್ತು” ಎನ್ನುವ ಅವರು, ಅಗತ್ಯ ಬಿದ್ದರೆ ಸಿನಿಮಾದಲ್ಲಿ ಪುನೀತ್‌ರಿಗೆ ವಾಯ್ಸ್ ಕೊಡುವುದಾಗಿ ಹೇಳಿದರು.