ಶಿವಕಾರ್ತಿಕೇಯನ್ ನಟನೆಯ ‘ಡಾಕ್ಟರ್’ ಆಕ್ಷನ್ – ಥ್ರಿಲ್ಲರ್ ತಮಿಳು ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೂರು ಕೋಟಿ ರೂಪಾಯಿ ವಹಿವಾಟು ದಾಖಲಿಸಿದೆ. ಚಿತ್ರವಿತರಕರು ಮತ್ತು ಪ್ರದರ್ಶಕರು ಸಂತಸದಲ್ಲಿದ್ದಾರೆ. ಸದ್ಯದಲ್ಲೇ ತೆರೆಕಾಣಲಿರುವ ರಜನೀಕಾಂತ್ ಅವರ ‘ಅಣ್ಣಾತ್ತೆ’ ಮತ್ತಷ್ಟು ಚೈತನ್ಯ ತುಂಬಲಿದೆ ಎನ್ನುವುದು ಉದ್ಯಮದ ಆಶಯ.
ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದಲ್ಲಿ ಶಿವಕಾರ್ತಿಕೇಯನ್ ನಟಿಸಿರುವ ‘ಡಾಕ್ಟರ್’ ತಮಿಳು ಸಿನಿಮಾದ ವಹಿವಾಟು ನೂರು ಕೋಟಿ ದಾಟಿದೆ. ಕೋವಿಡ್ನಿಂದ ಬಸವಳಿದಿದ್ದ ಚಿತ್ರೋದ್ಯಮಕ್ಕೆ ಇದು ಆಶಾದಾಯಕ ಬೆಳವಣಿಗೆ. ಕೆಜೆಆರ್ ಸ್ಟುಡಿಯೋ ಮತ್ತು ನಟ ಶಿವಕಾರ್ತಿಕೇಯನ್ ಜೊತೆಗೂಡಿ ನಿರ್ಮಿಸಿರುವ ಚಿತ್ರವಿದು. ಇಂದು ನಿರ್ಮಾಪಕರು ಟ್ವಿಟರ್ನಲ್ಲಿ ಈ ಸಿಹಿ ಸುದ್ದಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಅಕ್ಟೋಬರ್ 9ರಂದು ತೆರೆಕಂಡ ಸಿನಿಮಾಗೆ ಉತ್ತಮ ಆರಂಭ ಸಿಕ್ಕಿತ್ತು. ಚಿತ್ರವಿಮರ್ಶಕರು ಮತ್ತು ಪ್ರೇಕ್ಷಕರು ಸಿನಿಮಾ ಮೆಚ್ಚಿದ್ದರು. ಉತ್ತಮ ನಿರೂಪಣೆಯ ಜೊತೆ ಉತ್ತಮ ಸಂದೇಶವೂ ಇದೆ ಎಂದು ಜನರು ಮಾತನಾಡಿಕೊಂಡರು.
ಶಿವಕಾರ್ತಿಕೇಯನ್ ಮತ್ತು ಪ್ರಿಯಾಂಕಾ ಅರುಲ್ ಮೋಹನ್ ಅವರ ಅಭಿನಯಕ್ಕಾಗಿ ಎಲ್ಲರಿಂದ ಪ್ರಶಂಸೆ ಸಿಕ್ಕಿತು. ಆಕ್ಷನ್ ಸನ್ನಿವೇಶಗಳು, ಛಾಯಾಗ್ರಾಹಕ ವಿಜಯ್ ಕಾರ್ತಿಕ್ ಕಣ್ಣನ್ ಅವರ ಕೆಲಸ ಮತ್ತು ಅನಿರುದ್ಧ್ ರವಿಚಂದರ್ ಅವರ ಸಂಯೋಜನೆ (ಹಾಡುಗಳು ಮತ್ತು ಹಿನ್ನೆಲೆ ಸ್ಕೋರ್) ಸಾಮಾಜಿಕ ಮಾಧ್ಯಮಗಳಲ್ಲಿ ಹೊಗಳಿಕೆಗೆ ಪಾತ್ರವಾಗಿ ಜನರು ಚಿತ್ರಮಂದಿರಗಳಿಗೆ ಧಾವಿಸಿದರು. ಆ ಆಕ್ಷನ್ ಥ್ರಿಲ್ಲರ್ನಲ್ಲಿ ಯೋಗಿ ಬಾಬು, ವಿನಯ್ ರೈ, ಮಿಲಿಂದ್ ಸೋಮನ್ ಮತ್ತು ಅರ್ಚನಾ ಚಾಂಧೋಕೆ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಸಿನಿಮಾ ಮೂರ್ನಾಲ್ಕು ತಿಂಗಳ ಹಿಂದೆಯೇ ತೆರೆಕಾಣಬೇಕಿತ್ತು. ಆದರೆ, ಕೋವಿಡ್ ಎರಡನೇ ಅಲೆ ಮತ್ತು ಲಾಕ್ ಡೌನ್ನಿಂದಾಗಿ ನಿರ್ಮಾಪಕರು ಯೋಜನೆ ಮುಂದೂಡಿದ್ದರು. ಈ ಚಿತ್ರವು ಮಿಲಿಟರಿ ವೈದ್ಯ ವರುಣ್ ಇತರ ಆರು ಸ್ನೇಹಿತರೊಂದಿಗೆ ಮಾನವ ಕಳ್ಳಸಾಗಣೆಯ ಹಿಂದೆ ಬೀಳುವ ಕಥೆಯನ್ನು ಹೊಂದಿದೆ.