ಶಾಹೀದ್ ಕಪೂರ್ ನಟನೆಯ ‘ಜೆರ್ಸಿ’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ನಾನಿ ಮತ್ತು ಶ್ರದ್ಧಾ ಶ್ರೀನಾಥ್ ಜೋಡಿಯ ಇದೇ ಶೀರ್ಷಿಕೆಯಡಿ ತೆರೆಕಂಡ ಯಶಸ್ವೀ ತೆಲುಗು ಸಿನಿಮಾದ ರೀಮೇಕಿದು. ಮೃಣಾಲ್ ಠಾಕೂರ್ ಅವರು ಶಾಹೀದ್‌ಗೆ ಜೋಡಿಯಾಗಿ ನಟಿಸಿದ್ದಾರೆ.
ಶಾಹೀದ್ ಕಪೂರ್ ಅಭಿನಯದ ‘ಜೆರ್ಸಿ’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ನಿನ್ನೆ ಅವರು ಸಿನಿಮಾದ ಫಸ್ಟ್ ಲುಕ್ ಹಂಚಿಕೊಂಡಿದ್ದರು. ಇಂದು ಟ್ರೈಲರ್ ಬಿಡುಗಡೆಯಾಗಿದ್ದು, ಮೂಲ ತೆಲುಗು ಸಿನಿಮಾದಲ್ಲಿದ್ದಂತಹ ದೃಶ್ಯಗಳು ಯಥಾವತ್ತಾಗಿ ಕಾಣಿಸುತ್ತವೆ. ಡಿಸೆಂಬರ್ 31ರಂದು ಸಿನಿಮಾ ತೆರೆಕಾಣಲಿದೆ. ‘ಕಬೀರ್ ಸಿಂಗ್ʼ ಯಶಸ್ಸಿನ ನಂತರ ಶಾಹೀದ್ ಕಪೂರ್ ‘ಜೆರ್ಸಿʼ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿನ್ನೆ ಫಸ್ಟ್ ಲುಕ್ ಹಂಚಿಕೊಂಡಿದ್ದ ಅವರು, “ಈ ದಿನಕ್ಕಾಗಿ ನಾವು ಎರಡು ವರ್ಷ ಕಾಯಬೇಕಾಗಿ ಬಂತು” ಎಂದು ಬರೆದುಕೊಂಡಿದ್ದಾರೆ. ಕೋವಿಡ್‌ನಿಂದಾಗಿ ಸಿನಿಮಾದ ಚಿತ್ರೀಕರಣ ಸಾಕಷ್ಟು ವಿಳಂಬವಾಗಿತ್ತು.
2019ರಲ್ಲಿ ತೆಲುಗು ‘ಜೆರ್ಸಿʼ ಸಿನಿಮಾ ತೆರೆಕಂಡಿತ್ತು. ನಾನಿ ಜೊತೆ ಕನ್ನಡತಿ ಶ್ರದ್ಧಾ ಶ್ರೀನಾಥ್ ಪರದೆ ಹಂಚಿಕೊಂಡಿದ್ದರು. ಕ್ರಿಕೆಟ್ ಥೀಮ್ ಇರುವ ಚಿತ್ರವಿದು. ನಾನಿಯವರ ನಟನೆ ನೋಡಿ ಶಾಹೀದ್ ಕಪೂರ್‌ಕಣ್ಣೀರಿಟ್ಟಿದ್ದರಂತೆ. ಸಿನಿಮಾ ತಮ್ಮ ನಿಜ ಜೀವನಕ್ಕೆ ತುಂಬಾ ಹತ್ತಿರವಾಗಿದ್ದು, ಸಿನಿ ಕೆರಿಯರ್‌ನಲ್ಲಿ ತಮಗೆ ಯಶಸ್ಸು ತಡವಾಗಿ ಸಿಕ್ಕ ಬಗ್ಗೆ ಶಾಹೀದ್ ಉಲ್ಲೇಖಿಸುತ್ತಾರೆ. ತಮಗೂ ‘ಜೆರ್ಸಿʼಯ ಅರ್ಜುನ್‌ನಂತಹ ಪಾತ್ರ ಮಾಡಬೇಕೆಂಬ ಆಸೆ ಇದ್ದು, ಈಗ ಅದು ನೆರವೇರಿದೆ ಎನ್ನುತ್ತಾರೆ. ಶಾಹೀದ್‌ರಿಗೆ ‘ಜರ್ಸಿʼಯಲ್ಲಿ ಅಭಿನಯಿಸಬೇಡ ಎಂದು ಕೆಲವರು ಸಲಹೆ ನೀಡಿದ್ದರಂತೆ. ಆದರೆ ಶಾಹೀದ್ ಕಪೂರ್ ಮಾತ್ರ ‘ಜೆರ್ಸಿʼ ಸಿನಿಮಾವನ್ನು ಸವಾಲಾಗಿ ತೆಗೆದುಕೊಂಡಿದ್ದರು. ಅಲ್ಲು ಅರವಿಂದ್ ನಿರ್ಮಾಣದ ಸಿನಿಮಾ. ಮೂಲ ತೆಲುಗು ಚಿತ್ರವನ್ನು ನಿರ್ದೇಶಿಸಿದ್ದ ಗೌತಮ್ ತಿನ್ನಾನೂರು ಹಿಂದಿ ಅವತರಣಿಕೆಯ ಸಾರಥ್ಯ ವಹಿಸಿದ್ದಾರೆ. ಸಿನಿಮಾ ಡಿಸೆಂಬರ್ 31ರಂದು ತೆರೆಕಾಣಲಿದೆ.