‘ದಿ ಫ್ಯಾಮಿಲಿ ಮ್ಯಾನ್‌-2’ ವೆಬ್‌ ಸರಣಿಯಲ್ಲಿ ಮನೋಜ್‌ ಬಾಜಪೈ ಜೊತೆ ಸಮಂತಾ ರುತ್‌ ಪ್ರಭು ಪರದೆ ಹಂಚಿಕೊಂಡಿದ್ದರು. ತಮ್ಮ ಸಹನಟಿಯನ್ನು ಮನೋಜ್‌ ಬಾಜ್‌ಪೈ ಮನಸಾರೆ ಹೊಗಳಿದ್ದು, ಅವರು ದೊಡ್ಡ ಸ್ಟಾರ್‌ ಅಲ್ಲದೆ ಶ್ರೇಷ್ಠ ನಟಿ ಎಂದಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್‌-2ʼ ವೆಬ್‌ ಸರಣಿ ವರ್ಷದ ಆರಂಭದಲ್ಲಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಿತ್ತು. ಇದು ಸಮಂತಾ ಅಭಿನಯದ ಚೊಚ್ಚಲ ವೆಬ್‌ ಸರಣಿ. ಸರಣಿಯಲ್ಲಿ ನಟಿ ಸಮಂತಾ ಶ್ರೀಲಂಕಾದ ತಮಿಳು ಸ್ವಾತಂತ್ರ್ಯ ಹೋರಾಟಗಾರ್ತಿ ರಾಜಿ ಪಾತ್ರಕ್ಕೆ ಜೀವ ತುಂಬಿದ್ದರು. ಇನ್ನು ಮನೋಜ್‌ ಬಾಜ್‌ಪೈ ಅವರು ಶ್ರೀಕಾಂತ್‌ ತಿವಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ದಿ ಫ್ಯಾಮಿಲಿ ಮ್ಯಾನ್‌-2ʼ ಸರಣಿಯನ್ನು ತಾವು ಹಲವು ಬಾರಿ ವೀಕ್ಷಿಸಿದ್ದು, ಸಮಂತಾರ ಅಭಿನಯಕ್ಕೆ ಮನಸೋತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಸರಣಿ ಹಲವು ವಿಭಾಗಗಳಲ್ಲಿ ಫಿಲಂಫೇರ್‌ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು. “ಸಮಂತಾರವರು ರಾಜಿ ಪಾತ್ರಕ್ಕಾಗಿ ತಮ್ಮನ್ನು ತಾವು ಪಳಗಿಸಿಕೊಂಡ ಪರಿ ಅದ್ಭುತವಾಗಿತ್ತು. ರಾಜಿ ಪಾತ್ರದ ಕುರಿತಾಗಿ ಅವರು ಅನೇಕ ಸಂಶೋಧನೆಗಳನ್ನು ಮಾಡಿದನ್ನು ನಾನು ಗಮನಿಸಿದ್ದೇನೆ. ಅವರೊಬ್ಬ ಬಿಗ್‌ ಸ್ಟಾರ್‌ ಆಗಿದ್ದರೂ, ತುಂಬಾ ತಯಾರಿ ಮಾಡಿಕೊಂಡೇ ಪಾತ್ರಕ್ಕೆ ಇಳಿದಿದ್ದಾರೆ” ಎಂದು ಮನೋಜ್‌ ಬಾಜ್‌ಪೈ ಸಮಂತಾರ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Connect with

Please enter your comment!
Please enter your name here