2022ರ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡಿದ್ದ ‘ಪೆಬಲ್ಸ್‌’ (ಕೂಝಂಗಳ್‌) ತಮಿಳು ಸಿನಿಮಾ ಸ್ಪರ್ಧೆಯಿಂದ ಹೊರಬಿದ್ದಿದೆ. ಮತ್ತೊಂದೆಡೆ ‘ರೈಟಿಂಗ್‌ ವಿಥ್‌ ಫೈರ್‌’ ಡಾಕ್ಯುಮೆಂಟರಿ ಸಿನಿಮಾ ಮುಂದಿನ ಹಂತಕ್ಕೆ ಆಯ್ಕೆಯಾಗಿದೆ.

ತೊಂಬತ್ನಾಲ್ಕನೇ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗಿದ್ದ ‘ಪೆಬಲ್ಸ್‌’ (ಕೂಝಂಗಳ್‌) ತಮಿಳು ಸಿನಿಮಾ ಸ್ಪರ್ಧೆಯಿಂದ ಹೊರಬಿದ್ದಿದೆ. ಈ ಮೂಲಕ ಫೀಚರ್‌ ಸಿನಿಮಾ ವಿಭಾಗದಲ್ಲಿ ಆಸ್ಕರ್‌ ಕನಸು ಮತ್ತೊಮ್ಮೆ ಕಮರಿದಂತಾಗಿದ್ದು, ಹಲವರು ಸೋಷಿಯಲ್‌ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ನಿರಾಸೆಯ ಮಧ್ಯೆ ‘ರೈಟಿಂಗ್‌ ವಿಥ್‌ ಫೈರ್‌’ ಡಾಕ್ಯುಮೆಂಟರಿ ಸಿನಿಮಾ ಮುಂದಿನ ಹಂತಕ್ಕೆ ಆಯ್ಕೆಯಾಗಿರುವುದು ಸಮಾಧಾನದ ಸಂಗತಿ. ಪಿ.ಎಸ್‌.ವಿನೋದ್‌ ರಾಜ್‌ ನಿರ್ದೇಶನದ ‘ಪೆಬಲ್ಸ್‌’ ತಮಿಳು ಸಿನಿಮಾ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡಿತ್ತು. ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಸಿನಿಮಾ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಕುಡುಕ ಗಂಡ, ಆತನ ಕಾಟ ತಡೆಯಲಾರದೆ ಮನೆ ಬಿಡುವ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ಆತನ ಪತ್ನಿ, ದೂರವಾದ ಪತ್ನಿಯನ್ನು ಪುತ್ರನ ಜೊತೆ ಸೇರಿ ಹುಡುಕುವ ಕುಡುಕ ಪತಿ… ಇದು ‘ಪೆಬಲ್ಸ್‌’ ಕಥಾಹಂದರ. ನಿರ್ದೇಶಕ ವಿಘ್ನೇಶ್ ಶಿವನ್ ಮತ್ತು ನಟಿ ನಯನತಾರಾ ದಂಪತಿ ನಿರ್ಮಿಸಿರುವ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆಯಿದೆ.

ಅಂತಾರಾಷ್ಟ್ರೀಯ ಫೀಚರ್‌ ಸಿನಿಮಾ ವಿಭಾಗದಲ್ಲಿ ಇನ್ನೂ ಹದಿನೈದು ಸಿನಿಮಾಗಳು ಆಸ್ಕರ್‌ ಅಂಗಳದಲ್ಲಿ ಸ್ಪರ್ಧಿಸುತ್ತಿವೆ. 92 ದೇಶಗಳ ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. ಜಪಾನೀಸ್‌ ಸಿನಿಮಾ ‘ಡ್ರೈವ್‌ ಮೈ ಕಾರ್‌’, ಡೆನ್ಮಾರ್ಕ್‌ನ ‘ಫ್ಲೀ’, ಅಸ್ಗರ್‌ ಫರ್ಹಾದಿ ನಿರ್ದೇಶನದ ಇರಾನಿ ಸಿನಿಮಾ ‘ಎ ಹೀರೋ’, ಇಟಲಿಯ ‘ದಿ ಹ್ಯಾಂಡ್‌ ಆಫ್‌ ಗಾಡ್‌’ ಪ್ರಶಸ್ತಿ ಗೆಲ್ಲುವ ನೆಚ್ಚಿನ ಚಿತ್ರಗಳ ಪಟ್ಟಿಯಲ್ಲಿವೆ ಎಂದು ವಿಶ್ಲೇಷಕರು ಅಂದಾಜಿಸುತ್ತಿದ್ದಾರೆ. ಇನ್ನು ಸ್ಪರ್ಧೆಯಲ್ಲಿರುವ ಭಾರತದ ‘ರೈಟಿಂಗ್‌ ವಿಥ್‌ ಫೈರ್‌’ ರಿಂತು ಥಾಮಸ್‌ ಮತ್ತು ಸುಷ್ಮಿತ್‌ ಘೋಷ್‌ ನಿರ್ದೇಶನದ ಡಾಕ್ಯುಮೆಂಟರಿ ಸಿನಿಮಾ. ದಲಿತ ಮಹಿಳೆಯರೇ ನಡೆಸುವ ‘ಖಬರ್‌ ಲಹರಿಯಾ’ ಗ್ರಾಮೀಣ ದಿನಪತ್ರಿಕೆ ಕುರಿತ ಸಾಕ್ಷ್ಯಚಿತ್ರ. ಪ್ರಸ್ತುತ ಆಯ್ಕೆಯಾಗಿರುವ ಹದಿನೈದು ಡಾಕ್ಯುಮೆಂಟರಿಗಳ ಪಟ್ಟಿಯಲ್ಲಿ ‘ರೈಟಿಂಗ್‌ ವಿಥ್‌ ಫೈರ್‌’ ಇದೆ. ಮುಂದಿನ ಹಂತಕ್ಕೆ ಸಾಕ್ಷ್ಯಚಿತ್ರ ಆಯ್ಕೆಯಾಗಿ ಭಾರತಕ್ಕೆ ಅಕಾಡೆಮಿ ಗೌರವ ತರಲಿ ಎನ್ನುವುದು ಸಿನಿಪ್ರಿಯರ ಆಶಯ.

LEAVE A REPLY

Connect with

Please enter your comment!
Please enter your name here