ಯುವ ತಂತ್ರಜ್ಞರು ಮತ್ತು ಕಲಾವಿದರ ತಂಡದ ‘ಡಿಸೆಂಬರ್ 24’ ಚಿತ್ರದ ಮೋಷನ್ ಪೋಸ್ಟರ್ ಮತ್ತು ಆಡಿಯೋ ಬಿಡುಗಡೆಯಾಗಿದೆ. ಹುಲಿಯೂರು ದುರ್ಗದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ನಾಗರಾಜ್ ಗೌಡ ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ಈ ಸಿನಿಮಾ ನಿರ್ದೇಶಿಸಿದ್ದಾರೆ.
ನೈಜ ಘಟನೆಗಳನ್ನು ಆಧರಿಸಿ ಕತೆ ಹೆಣೆದು ಸಿನಿಮಾ ಮಾಡುವ ಪಟ್ಟಿಗೆ ಹೊಸ ಸೇರ್ಪಡೆ ‘ಡಿಸೆಂಬರ್ 24’. ಹುಲಿಯೂರು ದುರ್ಗದಲ್ಲಿ ನಡೆದ ಘಟನೆ ಈ ಚಿತ್ರಕ್ಕೆ ವಸ್ತುವಾಗಿದೆ. “ಉಸಿರಾಟದ ತೊಂದರೆಯಿಂದ ಮರಣ ಹೊಂದುತ್ತಿರುವ ಮಕ್ಕಳನ್ನು ರಕ್ಷಿಸಲು ಮೆಡಿಕಲ್ ರೀಸರ್ಚ್‌ಗೆಂದು ಏಳು ವೈದ್ಯಕೀಯ ವಿದ್ಯಾರ್ಥಿಗಳು ಕಾಡಿಗೆ ತೆರಳುತ್ತಾರೆ. ಅಲ್ಲಿ ಅವರಿಗೆ ವಿವಿಧ ರೀತಿಯ ಸಮಸ್ಯೆ ಎದುರಾಗುತ್ತವೆ. ಈ ಸಮಸ್ಯೆಗಳೇನು? ಅದರ ಹಿಂದೆ ಯಾರಿದ್ದಾರೆ? ಎನ್ನುವ ಸಸ್ಪೆನ್ಸ್ ಅಂಶಗಳೊಂದಿಗೆ ‘ಡಿಸೆಂಬರ್ 24’ ಸಿನಿಮಾ ಮಾಡಿದ್ದಾರೆ ನಿರ್ದೇಶಕ ನಾಗರಾಜ್ ಗೌಡ. ಸಿನಿಮಾದ ಕತೆ, ಚಿತ್ರಕಥೆ ಮತ್ತು ಸಂಭಾಷಣೆಯೂ ಅವರದೆ. 2015ರಿಂದ 2019ರೊಳಗೆ ನಾಲ್ಕು ವರ್ಷಗಳ ಅಂತರದಲ್ಲಿ ನಡೆದ ಕೆಲ ನೈಜ ಘಟನೆಗಳು ಚಿತ್ರಕ್ಕೆ ಸ್ಫೂರ್ತಿ ಎನ್ನುತ್ತಾರವರು.
ಸಸ್ಪೆನ್ಸ್ ಜೊತೆ ಫ್ರೆಂಡ್‌ಶಿಪ್‌ನ ಸೆಲೆಬ್ರೇಷನ್ ಕೂಡ ಸಿನಿಮಾದಲ್ಲಿದೆ. ಚಿತ್ರದ ಮೋಷನ್ ಪೋಸ್ಟರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ನಟ ಶ್ರೀನಗರ ಕಿಟ್ಟಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, “ಹೊಸಬರ ತಂಡ ಉತ್ಸಾಹದಿಂದ ಸಿನಿಮಾ ಮಾಡಿದೆ. ಅವರ ಐಡಿಯಾಗಳು ಚಿತ್ರರಂಗಕ್ಕೆ ಹೊಸತನ ತರಲಿ” ಎಂದು ಶುಭ ಹಾರೈಸಿದರು. ಎಂ.ಜಿ.ಎನ್ ಪ್ರೊಡಕ್ಷನ್ ನಡಿ ತಯಾರಾಗುತ್ತಿರುವ ಚಿತ್ರದೊಂದಿಗೆ ದೇವು ಹಾಸನ್ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಹುಲಿಯೂರು ದುರ್ಗ ಹಾಗೂ ದಾಂಡೇಲಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಪ್ರವೀಣ್ ನಿಕೇತನ್ ಹಾಗೂ ವಿಶಾಲ್ ಆಲಾಪ್ ಸಂಗೀತ ಸಂಯೋಜಿಸಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್, ವಿಶಾಲ್ ಆಲಾಪ್ ಹಾಗೂ ಗೀತಾ ಆನಂದ್ ಪಟೇಲ್ ಗೀತರಚನೆಯಿದೆ. ಅಪ್ಪು ಬಡಿಗೇರ, ರವಿ ಕೆ.ಆರ್.ಪೇಟೆ, ರಘು ಶೆಟ್ಟಿ, ಜಗದೀಶ್ ದೊಡ್ಡಿ, ಸಾಗರ್, ಭೂಮಿಕಾ ರಮೇಶ್, ಮಿಲನಾ ರಮೇಶ್, ದಿವ್ಯ ಆಚಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.