ಅಕಾಲಿಕವಾಗಿ ನಮ್ಮನ್ನಗಲಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅಭಿನಯದ ಕೊನೆಯ ಚಿತ್ರಗಳಲ್ಲೊಂದು ‘ಪುಕ್ಸಟ್ಟೆ ಲೈಫು’. ಅರವಿಂದ ಕುಪ್ಳೀಕರ್ ನಿರ್ದೇಶನದ ಈ ಸಿನಿಮಾ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ನಾಳೆಯಿಂದ ZEE5 ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.

ಇದೇ ವರ್ಷದ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಥಿಯೇಟರ್‌ಗೆ ಬಂದಿದ್ದ ‘ಪುಕ್ಸಟ್ಟೆ ಲೈಫು’ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಕಾಲಿಕವಾಗಿ ನಮ್ಮನ್ನು ಅಗಲಿದ ನಟ ಸಂಚಾರಿ ವಿಜಯ್ ವೃತ್ತಿ ಬದುಕಿನ ಅತ್ಯುತ್ತಮ ಚಿತ್ರಗಳಲ್ಲೊಂದು ಎಂದೇ ಸಿನಿಪ್ರಿಯರು ಮಾತನಾಡಿದ್ದರು. ಆಗಷ್ಟೇ ಕೋವಿಡ್‌ ತಿಳಿಯಾಗಿತ್ತಾದ್ದರಿಂದ ಒಮ್ಮೆಗೇ ಸಾಕಷ್ಟು ಚಿತ್ರಗಳು ಥಿಯೇಟರ್‌ಗೆ ಧಾವಿಸಿದವರು. ‘ಪುಕ್ಸಟ್ಟೆ ಲೈಫು’ ಕುರಿತಂತೆ ಒಳ್ಳೆಯ ವಿಮರ್ಶೆಗಳು ಬಂದವು. ಸಿನಿಮಾ ನೋಡಿದವರು ಮೆಚ್ಚಿ ಮಾತನಾಡಿದರು. ಜನರು ದೊಡ್ಡ ಸಂಖ್ಯೆಯಲ್ಲಿ ಸಿನಿಮಾ ನೋಡಬೇಕು ಎನ್ನುವಷ್ಟರಲ್ಲಿ ಥಿಯೇಟರ್‌ ಲಭ್ಯತೆ ಸಮಸ್ಯೆ ಎದುರಾಯ್ತು. ‘ಪುಕ್ಸಟ್ಟೆ ಲೈಫು’ ವೀಕ್ಷಿಸಬೇಕು ಎಂದುಕೊಂಡಿದ್ದ ಬಹಳಷ್ಟು ಜನರಿಗೆ ಸಿನಿಮಾ ಸಿಗಲಿಲ್ಲ. ಅವರೆಲ್ಲಾ ಈಗ ZEE5 ಓಟಿಟಿಯಲ್ಲಿ ಸಿನಿಮಾ ನೋಡಬಹುದು. ನಾಳೆಯಿಂದ ZEE5 ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

“ಇದು ವಿಜಯ್ ಅವರಿಂದಲೇ ಶುರುವಾದ ಸಿನಿಮಾ. ಕತೆಯ ಎಳೆ ಹೇಳಿದವರೇ ವಿಜಯ್‌. ಈ ಕತೆ ಎಂ.ಎಸ್‌.ರಮೇಶ್‌ ಅವರಲ್ಲಿತ್ತು. ಅವರಲ್ಲಿಗೆ ಹೋಗಿ ಸಿನಿಮಾ ಮಾಡುವುದಾಗಿ ಹೇಳಿ ಕತೆ ಪಡೆದೆವು. ವಿಜಯ್ ಉತ್ಸಾಹದಿಂದ ಚಿತ್ರದಲ್ಲಿ ತೊಡಗಿಸಿಕೊಂಡರು. ಅವರಿಗೆ ಪಾತ್ರ ಅತ್ಯಂತ ಸೂಕ್ತವಾಗಿ ಹೊಂದಿಕೆಯಾಗಿತ್ತು. ಅವರಿಲ್ಲದ ಸಂಕಟ ಕಾಡುತ್ತಲೇ ಇದೆ” ಎನ್ನುತ್ತಾರೆ ‘ಪುಕ್ಸಟ್ಟೆ ಲೈಫು’ ನಿರ್ದೇಶಕ ಅರವಿಂದ ಕುಪ್ಳೀಕರ್‌. ಸಂಚಾರಿ ವಿಜಯ್ ಅವರೊಂದಿಗೆ ಅರವಿಂದ ಕುಪ್ಳೀಕರ್‌ ‘ಹರಿವು’, ‘ನಾನು ಅವನಲ್ಲ ಅವಳು’ ಚಿತ್ರಗಳಲ್ಲಿ ಅಭಿನಯಿಸಿದ್ದರು. ‘ಪುಕ್ಸಟ್ಟೆ ಲೈಫು’ ಚಿತ್ರದಲ್ಲೂ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಸಂಚಾರಿ ವಿಜಯ್‌ ನಟಿಸಿದ್ದ ‘ಒಗ್ಗರಣೆ’ ಚಿತ್ರಕ್ಕೆ ಇವರು ಬರಹಗಾರರಾಗಿ ಕೆಲಸ ಮಾಡಿದ್ದರು. “ವಿಜಯ್ ಅವರು ನನಗೆ ತೀರಾ ಹತ್ತಿರದ ಒಡನಾಡಿ. ಅವರು ನಮ್ಮೊಂದಿಗೆ ಇರಬೇಕಿತ್ತು..” ಎಂದು ನಿಡುಸುಯ್ಯುತ್ತಾರೆ ಕುಪ್ಳೀಕರ್‌.

LEAVE A REPLY

Connect with

Please enter your comment!
Please enter your name here