ನಟ ಅಜಯ್ ರಾವ್ ನಗರಕೇಂದ್ರಿತ ಕತೆಗಳಲ್ಲಿ ಕಾಣಿಸಿಕೊಂಡದ್ದೇ ಹೆಚ್ಚು. ಈ ಬಾರಿ ‘ಶೋಕಿವಾಲ’ ಸಿನಿಮಾದೊಂದಿಗೆ ಹಳ್ಳಿ ಹೈದನಾಗಿ ತೆರೆಗೆ ಬರುತ್ತಿದ್ದಾರೆ. ಸಿನಿಮಾಗೆ ಸೆನ್ಸಾರ್ ಆಗಿ ಥಿಯೇಟರ್‌ಗೆ ಬರಲು ಸಿದ್ಧವಾಗಿದೆ.
“ನನ್ನ ವೃತ್ತಿ ಬದುಕಿನಲ್ಲಿ ಇದೊಂದು ವಿಶೇಷ ಸಿನಿಮಾ. ಹಳ್ಳಿ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಕುರಿತು ಎಕ್ಸೈಟ್ ಆಗಿದ್ದೇನೆ. ಪಕ್ಕಾ ಹಳ್ಳಿ ಸೊಗಡಿನ ಕತೆ ಸುಂದರ ಕೌಟುಂಬಿಕ ಚಿತ್ರವಾಗಿ ಜನರಿಗೆ ಇಷ್ಟವಾಗಲಿದೆ ಎನ್ನುವ ವಿಶ್ವಾಸವಿದೆ” ಎನ್ನುತ್ತಾರೆ ನಟ ಅಜಯ್ ರಾವ್. ತಿಂಗಳುಗಳ ಹಿಂದೆ ಚಿತ್ರದ ಲಿರಿಕಲ್ ವೀಡಿಯೋ ರಿಲೀಸ್ ಆಗಿತ್ತು. ಈಗ ಪ್ರೊಮೋಷನ್ ಅಂಗವಾಗಿ ಮತ್ತೊಂದು ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಸಿನಿಮಾ ಈ ತಿಂಗಳಲ್ಲೇ ಬಿಡುಗಡೆಯಾಗಬೇಕಿತ್ತು. ಕೋವಿಡ್‌ನಿಂದಾಗಿ ಈಗ ಥಿಯೇಟರ್‌ಗಳಲ್ಲಿ ಶೇ. 50 ಆಕ್ಯುಪೆನ್ಸಿ ಇದೆ. ಈ ನಿಯಮ ಸಡಿಲಗೊಂಡು ವಾತಾವರಣ ತಿಳಿಯಾದಾಕ್ಷಣ ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮತ್ತು ನಿರ್ದೇಶಕ ಜಾಕಿ ಅವರ ಯೋಜನೆ.
ಅಜಯ್ ರಾವ್ ಅವರಿಗೆ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ, ತಬಲಾ ನಾಣಿ, ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ, ಚಂದನ, ಲಾಸ್ಯ, ನಾಗರಾಜಮೂರ್ತಿ ಚಿತ್ರದ ಇತರೆ ಕಲಾವಿದರು. ಚನ್ನಪಟ್ಟಣ, ಹೊಂಗನೂರು, ವಿರುಪಾಕ್ಷೀಪುರ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು ,ಮಾಗಡಿಯಲ್ಲಿ ಸಿನಿಮಾಗೆ ಚಿತ್ರೀಕರಣ ನಡೆದಿದೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಅವರು ರಚಿಸಿರುವ ಹಾಡುಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ನವೀನ್ ಕುಮಾರ್ ಎಸ್. ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಪ್ರಶಾಂತ್ ರಾಜಪ್ಪ ಸಂಭಾಷಣೆ, ವಿಕ್ರಮ್ ಮೋರ್ ಸಾಹಸ ಚಿತ್ರಕ್ಕಿದೆ.