ಫೆಬ್ರವರಿಗೆ ವಿವಿಧ OTT ಪ್ಲಾಟ್‌ಫಾರ್ಮ್‌ಗಳಲ್ಲಿ ವೆಬ್ ಸರಣಿ, ಸಿನಿಮಾಗಳು ಸ್ಟ್ರೀಮ್ ಆಗಲಿವೆ. ದೀಪಿಕಾ ಪಡುಕೋಣೆ ನಟನೆಯ ‘ಗೆಹ್ರಾಯಿಯಾ’, ‘ದಿ ಗ್ರೇಟ್ ಇಂಡಿಯನ್ ಮರ್ಡರ್’ ಸೇರಿದಂತೆ ಹಲವಾರು ಗಮನ ಸೆಳೆಯುವಂತ ಸಿನಿಮಾ, ಸರಣಿಗಳ ಪಟ್ಟಿ ಇಲ್ಲಿದೆ.
2022ರ ನೂತನ ವರ್ಷ ಕೆಲವು ಗಮನಾರ್ಹ ಸರಣಿಗಳೊಂದಿಗೆ ಶುರುವಾಯ್ತು. ನೆಟ್‌ಫ್ಲಿಕ್ಸ್‌ನಲ್ಲಿನ ‘ಯೆಹ್ ಕಾಲಿ ಕಾಲಿ ಆಂಖೇ’, ಆಪಲ್ ಟೀವಿಯಲ್ಲಿನ ‘ದಿ ಟ್ರ್ಯಾಜಿಡಿ ಆಫ್ ಮ್ಯಾಕ್‌ಬೆತ್’, SonyLIVನಲ್ಲಿನ ‘ಭೂತಕಾಲಂ’ ವೀಕ್ಷಕರ ಮನಗೆದ್ದವು. ಇದೀಗ ಫೆಬ್ರವರಿಯಲ್ಲಿ ಹತ್ತಾರು ಸರಣಿ, ಸಿನಿಮಾಗಳು ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್‌ಗೆ ಸಿದ್ಧವಾಗಿವೆ.
ಲೂಪ್ ಲಪೇಟಾ (ನೆಟ್‌ಫ್ಲಿಕ್ಸ್, ಫೆ.4ರಿಂದ)
ಆಕಾಶ್ ಭಾಟಿಯಾ ನಿರ್ದೇಶನದ ‘ಲೂಪ್ ಲಪೇಟಾ’ ಸಿನಿಮಾ ಫೆಬ್ರವರಿ 4ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಟಾಮ್ ಟಿಕ್ವರ್ ನಿರ್ದೇಶನದ ಜರ್ಮನ್ ಕ್ಲಾಸಿಕ್ ‘ರನ್ ಲೋಲಾ ರನ್’ ಹಿಂದಿ ಅವತರಣಿಕೆಯಿದು. ‘ರನ್ ಲೋಲಾ ರನ್’ ಸಿನಿಮಾದಲ್ಲಿ ಫ್ರಾಂಕಾ ಪೊಟೆಂಟ್ ಮತ್ತು ಮಾರಿಟ್ಜ್ ಬ್ಲೀಬ್‌ಟ್ರ್ಯೂ ನಟಿಸಿದ್ದರು. ಹಿಂದಿ ಅವತರಣಿಕೆಯಲ್ಲಿ ತಾಪ್ಸಿ ಈ ಪಾತ್ರ ನಿರ್ವಹಿಸುತ್ತಿದ್ದಾರೆ. ತೊಂದರೆಗೆ ಸಿಲುಕಿರುವ ಬಾಯ್‌ಫ್ರೆಂಡ್‌ನನ್ನು ರಕ್ಷಿಸುವ ಯುವತಿಯ ಅಡ್ವೆಂಚರಸ್ ಕತೆ. ಈ ಹಾದಿಯಲ್ಲಿನ ಘಟನೆಗಳು ಆಕೆಯ ಬದುಕಿಗೆ ತಿರುವಾಗುತ್ತವೆ. ತಾಪ್ಸಿ ‘ಸವಿ’ ಮತ್ತು ನಟ ತಾಹೀರ್ ಆಕೆಯ ಲವರ್ ‘ಸತ್ಯ’ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ, ಎಲಿಪ್ಸಿಸ್ ಎಂಟರ್‌ಟೇನ್‌ಮೆಂಟ್ ಮತ್ತು ಆಯುಷ್ ಮಹೇಶ್ವರಿ ಸಿನಿಮಾ ನಿರ್ಮಿಸಿದ್ದಾರೆ.
ದಿ ಫೇಮ್ ಗೇಮ್ (ನೆಟ್‌ಫ್ಲಿಕ್ಸ್, ಫೆ.25ರಿಂದ)
ಮಾಧುರಿ ದೀಕ್ಷಿತ್ ಡಿಜಿಟಲ್ ಡೆಬ್ಯೂ ಮಾಡುತ್ತಿರುವ ಈ ವೆಬ್ ಸರಣಿಗೆ ಮೊದಲು ‘ಫೈಂಡಿಂಗ್ ಅನಾಮಿಕ’ ಎನ್ನುವ ಶೀರ್ಷಿಕೆ ನಿಗದಿಯಾಗಿತ್ತು. ನಂತರ ಟೈಟಲ್ ‘ದಿ ಫೇಮ್ ಗೇಮ್’ ಎಂದು ಬದಲಾಯ್ತು. “ಸ್ಟಾರ್‌ಡಮ್ ಮತ್ತು ಖ್ಯಾತಿಯ ಹಿಂದೆ ಸಾಕಷ್ಟು ಗುಟ್ಟುಗಳಿರುತ್ತವೆ. ಬಾಲಿವುಡ್‌ನ ದೊಡ್ಡ ಸ್ಟಾರ್ ಅನಾಮಿಕ ಆನಂದ್ ಬದುಕಿನಲ್ಲಿ ಅಂತಹ ಏನೆಲ್ಲಾ ರಹಸ್ಯಗಳಿವೆ? ಶೀಘ್ರದಲ್ಲೇ ನೀವು ನೋಡಲಿದ್ದೀರಿ..” ಎನ್ನುವುದು ಸರಣಿ ನಿರ್ಮಾಪಕ ಕರಣ್ ಜೋಹರ್ ಅವರ ಮಾತು. ಈ ವೆಬ್ ಸರಣಿ ಮೂಲಕ ಸುಮಾರು ಎರಡು ದಶಕಗಳ ನಂತರ ಮಾಧುರಿ ದೀಕ್ಷಿತ್ ಮತ್ತು ಸಂಜಯ್ ಕಪೂರ್ ಜೊತೆಯಾಗಿ ನಟಿಸುತ್ತಿದ್ದಾರೆ. ಬೆಜಾಯ್ ನಂಬಿಯಾರ್ ಮತ್ತು ಕರಿಶ್ಮಾ ಕೊಹ್ಲಿ ನಿರ್ದೇಶನದ ಸರಣಿ ಫೆಬ್ರವರಿ 25ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.
83 (ನೆಟ್‌ಫ್ಲಿಕ್ಸ್)
ಕಬೀರ್ ಖಾನ್ ನಿರ್ದೇಶನದ ’83’ ಹಿಂದಿ ಸಿನಿಮಾ ಈ ತಿಂಗಳು ನೆಟ್‌ಫ್ಲಿಕ್ಸ್‌ಗೆ ಬರಲಿದೆ. ದಿನಾಂಕವಿನ್ನೂ ನಿಗದಿಯಾಗಿಲ್ಲ. 1983ರ ಭಾರತದ ಐತಿಹಾಸಿಕ ಕ್ರಿಕೆಟ್ ವಿಶ್ವಕಪ್ ಯಶೋಗಾಥೆಯನ್ನು ನಿರೂಪಿಸಿರುವ ಚಿತ್ರವಿದು. ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯ್ತು. ಚಿತ್ರದಲ್ಲಿ ಆಲ್‌ರೌಂಡರ್ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಅಭಿನಯಿಸಿದ್ದಾರೆ. ಸಕೀಬ್ ಸಲೀಂ, ಹ್ಯಾರ್ಡಿ ಸಂಧು, ಅಮ್ಮಿ ವಿರ್ಕ್, ಪಂಕಜ್ ತ್ರಿಪಾಠಿ, ಜತಿನ್ ಸರ್ನಾ, ಸಾಹಿಲ್ ಕಟ್ಟರ್, ಜೀವಾ ಮತ್ತು ದೀಪಿಕಾ ಪಡುಕೋಣೆ ಚಿತ್ರದ ಇತರೆ ಪಾತ್ರಗಳಲ್ಲಿ ನಟಿಸಿದ್ದಾರೆ.
ಮಿಥ್ಯಾ (ZEE5)
ರೋಹನ್ ಸಿಪ್ಪಿ ನಿರ್ದೇಶನದ ಸೈಕಾಲಾಜಿಕಲ್ ಥ್ರಿಲ್ಲರ್ – ಡ್ರಾಮಾ ‘ಮಿಥ್ಯಾ’ ZEE5ನಲ್ಲಿ ಫೆಬ್ರವರಿಯಲ್ಲಿ ಸ್ಟ್ರೀಮ್ ಆಗಲಿದೆ. ನಟಿ ಭಾಗ್ಯಶ್ರೀ ಪುತ್ರಿ ಆವಂತಿಕಾ ದಾಸಾನಿ ಈ ವೆಬ್ ಸರಣಿಯೊಂದಿಗೆ ಎಂಟರ್‌ಟೇನ್‌ಮೆಂಟ್ ಮೀಡಿಯಾಗೆ ಪದಾರ್ಪಣೆ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಆವಂತಿಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, “Who really is responsible for this web of lies?! #Mithya coming soon on @zee5. Humbled, grateful and esctatic to announce my very first webseries!” ಎನ್ನುವ ಒಕ್ಕಣಿಯೊಂದಿಗೆ ನಟಿ ಹ್ಯೂಮಾ ಖುರೇಷಿ ಜೊತೆಗಿರುವ ‘ಮಿಥ್ಯಾ’ ಫಸ್ಟ್‌ಲುಕ್ ಶೇರ್ ಮಾಡಿದ್ದರು. ಸ್ಟ್ರೀಮಿಂಗ್ ದಿನಾಂಕ ಸದ್ಯದಲ್ಲೇ ಘೋಣೆಯಾಗಲಿದೆ.
ದಿ ಗ್ರೇಟ್ ಇಂಡಿಯನ್ ಮರ್ಡರ್ (ಡಿಸ್ನೀಪ್ಲಸ್ ಹಾಟ್‌ಸ್ಟಾರ್, ಫೆ.4ರಿಂದ)
ಮರ್ಡರ್ ಮಿಸ್ಟರಿ ‘ದಿ ಗ್ರೇಟ್ ಇಂಡಿಯನ್ ಮರ್ಡರ್’ ಡಿಸ್ನೀಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಫೆಬ್ರವರಿ 4ರಿಂದ ಸ್ಟ್ರೀಮ್ ಆಗಲಿದೆ. ಬಾಲಿವುಡ್ ನಟಿ ರಿಚಾ ಛಡ್ಡಾ ಸರಣಿಯಲ್ಲಿ ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರಿಗಿಲ್ಲಿ ಪ್ರಭಾವಿ ರಾಜಕಾರಣಿ (ಅಶುತೋಷ್ ರಾಣಾ) ಪುತ್ರ ವಿಕ್ಕಿ ರಾಯ್ ಕೊಲೆಯ ಸುಳಿವನ್ನು ಪತ್ತೆ ಹಚ್ಚುವ ಟಾಸ್ಕ್ ಇದೆ. CBI ಆಫೀಸರ್ ಸೂರಜ್ ಯಾದವ್ ಪಾತ್ರದಲ್ಲಿದ್ದಾರೆ ನಟ ಪ್ರತೀಕ್ ಗಾಂಧಿ. ವಿಕಾಸ್ ಸ್ವರೂಪ್ ರಚನೆಯ ‘ಸಿಕ್ಸ್ ಸಸ್ಪೆಕ್ಟ್ಸ್’ ಕೃತಿಯನ್ನು ಆಧರಿಸಿ ತಯಾರಾಗಿರುವ ಈ ಸರಣಿಯನ್ನು ನಟ ಅಜಯ್ ದೇವಗನ್ ಮತ್ತು ರೀಲ್ ಲೈಫ್ ಎಂಟರ್‌ಟೇನ್‌ಮೆಂಟ್ ಜೊತೆಗೂಡಿ ನಿರ್ಮಿಸಿದ್ದಾರೆ. ರಘುವೀರ್ ಯಾದವ್, ಶಶಾಂಕ್ ಅರೋರಾ, ಶರೀಬ್ ಹಶ್ಮಿ, ಅಶುತೋಷ್ ರಾಣಾ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಗೆಹ್ರಾಯಿಯಾ (ಅಮೇಜಾನ್ ಪ್ರೈಮ್ ವೀಡಿಯೊ, ಫೆ.11ರಿಂದ)
ಮಾಡ್ರನ್ ಡೇ ರಿಲೇಷನ್‌ಶಿಪ್ ಕುರಿತ ರೊಮ್ಯಾಂಟಿಕ್ ಡ್ರಾಮಾ ‘ಗೆಹ್ರಾಯಿಯಾ’. ಧರ್ಮ ಪ್ರೊಡಕ್ಷನ್ಸ್‌ನಡಿ ಶಕುನ್ ಬಾತ್ರಾ ನಿರ್ದೇಶಿಸಿರುವ ಸಿನಿಮಾದ ಪ್ರಮುಖ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಟ್ರೈಲರ್, ಸಾಂಗ್‌ನೊಂದಿಗೆ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ‘ಸ್ಟೂಡೆಂಟ್ ಆಫ್ ದಿ ಯಿಯರ್ 2’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಅನನ್ಯಾ ಪಾಂಡೆ ‘ಗೆಹ್ರಾಯಿಯಾ’ ಚಿತ್ರದ ಪ್ರಮುಖ ಪಾತ್ರಧಾರಿಗಳಲ್ಲೊಬ್ಬರು. ಸಿದ್ಧಾಂತ್ ಚತುರ್ವೇದಿ, ಧೈರ್ಯ ಕಾರ್ವಾ, ನಾಸಿರುದ್ದೀನ್ ಷಾ, ರಜತ್ ಕಪೂರ್ ಚಿತ್ರದ ಇತರೆ ಕಲಾವಿದರು.
ಒನ್ ಕಟ್ ಟೂ ಕಟ್ (ಅಮೇಜಾನ್ ಪ್ರೈಮ್ ವೀಡಿಯೊ, ಫೆ.3ರಿಂದ)
ನಟ ಪುನೀತ್ ರಾಜಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನಿಂದ ಅಮೇಜಾನ್ ಪ್ರೈಮ್ ವೀಡಿಯೋಗೆ ನಿರ್ಮಾಣಗೊಂಡ ಸಿನಿಮಾ. ಕಾಮಿಡಿ – ಡ್ರಾಮಾ ಜಾನರ್‌ನ ಸಿನಿಮಾದ ಪ್ರಮುಖ ಪಾತ್ರದಲ್ಲಿ ಡ್ಯಾನಿಷ್ ಸೇಠ್ ನಟಿಸಿದ್ದಾರೆ. ವಂಶೀಧರ್ ಭೊಗರಾಜ್ ನಿರ್ದೇಶನದ ಸಿನಿಮಾದ ಇತರೆ ಪಾತ್ರಗಳಲ್ಲಿ ಪ್ರಕಾಶ್ ಬೆಳವಾಡಿ, ಸಂಯುಕ್ತ ಹೊರನಾಡು, ಸಂಪತ್ ಮೈತ್ರೇಯ ಇದ್ದಾರೆ. “ಇದೊಂದು ಲೈಟ್ ಹಾರ್ಟೆಡ್ ಕಾಮಿಡಿ. ನಾನು ಆರ್ಟ್ ಅಂಡ್ ಕ್ರಾಫ್ಟ್ ಟೀಚರ್ ಪಾತ್ರದಲ್ಲಿ ನಟಿಸಿದ್ದೇನೆ. ಟೆರರಿಸ್ಟ್ ಅಟ್ಯಾಕ್‌ನಿಂದ ಮಕ್ಕಳನ್ನು ಪಾರು ಮಾಡುವ ಸಂದರ್ಭದಲ್ಲಿ ನಡೆಯುವ ಘಟನಾವಳಿಗಳು ಚಿತ್ರದ ವಸ್ತು” ಎನ್ನುತ್ತಾರೆ ಚಿತ್ರದ ಹೀರೋ ಡ್ಯಾನಿಷ್ ಸೇಠ್.
ರಾಕೆಟ್ ಬಾಯ್ಸ್ (SonyLIV, ಫೆ.4ರಿಂದ)
ಭಾರತ ಕಂಡ ಇಬ್ಬರು ಲೆಜೆಂಡರಿ ನ್ಯೂಕ್ಲಿಯರ್ ಸೈಂಟಿಸ್ಟ್‌ಗಳಾದ ಡಾ.ವಿಕ್ರಂ ಸಾರಾಭಾಯ್ ಮತ್ತು ಡಾ.ಹೋಮಿ ಜೆ. ಬಾಬಾ ಅವರ ಜೀವನ – ಸಾಧನೆಯ ಕತೆ ಹೇಳುವ ಸರಣಿ. ಆಧುನಿಕ ಭಾರತ ನಿರ್ಮಾಣದಲ್ಲಿ ಇವರ ಕೊಡುಗೆ ಸ್ಮರಣೀಯವಾದುದು. ಇಶ್ವಕ್ ಸಿಂಗ್ ಅವರು ಡಾ.ಸಾರಾಭಾಯ್ ಪಾತ್ರ ನಿರ್ವಹಿಸಿದ್ದರೆ, ಜಿಮ್ ಸರ್ಬ್ ಅವರು ಡಾ.ಹೋಮಿ ಜೆ ಬಾಬಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಖಿಲ್ ಅಡ್ವಾನಿ ನಿರ್ಮಾಣದ ಸರಣಿಯನ್ನು ಅಭಯ್ ಪನ್ನು ನಿರ್ದೇಶಿಸಿದ್ದಾರೆ. ರೆಗಿನಾ ಕ್ಯಾಸಂದ್ರಾ, ರಜತ್ ಕಪೂರ್, ದಿವ್ಯೇಂದು ಭಟ್ಟಾಚಾರ್ಯ, ಸಬಾ ಆಜಾದ್, ಅರ್ಜುನ್ ರಾಧಾಕೃಷ್ಣನ್ ಇತರೆ ಪಾತ್ರಗಳಲ್ಲಿದ್ದಾರೆ.
ರಕ್ತಾಂಚಲ್ 2 (MX Player)
ನಿಕಿತಿನ್ ಧೀರ್, ಕ್ರಾಂತಿ ಪ್ರಕಾಶ್ ಝಾ, ಮಹೀ ಗಿಲ್, ಆಶಿಷ್ ವಿದ್ಯಾರ್ಥಿ, ಕರಣ್ ಪಟೇಲ್, ಸೌಂದರ್ಯಾ ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪೊಲಿಟಿಕಲ್ ಡ್ರಾಮಾ. “Iss baar Ranneeti nahi, Rajneeti banayega Purvanchal ko Raktanchal” ಎಂದು ಸರಣಿಯ ಅಫಿಷಿಯಲ್ ಸಿನಾಪ್ಸಿಸ್ ಹೇಳುತ್ತದೆ. ರೀತಮ್ ಶ್ರೀವಾತ್ಸವ್ ನಿರ್ದೇಶನದ ಸರಣಿ ಅಧಿಕಾರ, ಸೇಡು, ಪವರ್ ಗೇಮ್ ಸುತ್ತ ಸುತ್ತುತ್ತದೆ.