ಇಷ್ಟು ದಿನ ಬರೀ ಕಾಲ್ಪನಿಕ ಪಾತ್ರಗಳ ಮೂಲಕವೇ ಎಲ್ ಜಿ ಬಿ ಟಿ ಕ್ಯು ಸಮುದಾಯದ ಕಥೆಗಳನ್ನು ಕೇಳುತ್ತಿದ್ದ ವೀಕ್ಷಕರಿಗೆ ಈಗ ನಿಜವಾಗಿ ಅದೇ ಸಮುದಾಯದ ಪ್ರತಿನಿಧಿಗಳ ಮೂಲಕ ಅವರ ವ್ಯಥೆಗಳು, ಹೋರಾಟಗಳು, ಸವಾಲುಗಳು ಎಂಥವು ಎನ್ನುವುದರ ಚಿತ್ರಣ ಸಿಗುವಂತ ಸರಣಿ ಮಾಡಿರುವುದು ನಿಜಕ್ಕೂ ವಿಶೇಷ. ವಿಭಿನ್ನ ಒಳನೋಟ ಮತ್ತು ಉತ್ತಮ ಸಂದೇಶ ನೀಡುವ ಸಾಕ್ಷ್ಯಚಿತ್ರ ಸರಣಿ ‘ರೈನ್‌ಬೋ ರಿಷ್ತಾ’ ಆಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಈಗಿನ ವ್ಯಾವಹಾರಿಕ ಜಗತ್ತಿನಲ್ಲಿ ನಿಜವಾದ ಪ್ರೀತಿ ದೊರಕುವುದೇ ಒಂದು ಕಷ್ಟದ ಕೆಲಸ. ಅಕಸ್ಮಾತ್ ಸಿಕ್ಕರೂ ಕೊನೆಯವರೆಗೂ ಅದನ್ನು ಜೋಪಾನ ಮಾಡಿಕೊಳ್ಳುವುದು ಮತ್ತೊಂದು ಸವಾಲು. ಅದರಲ್ಲೂ ಸಲಿಂಗಪ್ರೇಮ, ಮಂಗಳಮುಖಿ ಮೊದಲಾದ ಲೈಂಗಿಕ ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಸಮಾಜ ನಿಮ್ಮನ್ನು ಸೇರಿಸಿಬಿಟ್ಟರಂತೂ ಬಹಳವೇ ಕಷ್ಟಸಾಧ್ಯ. ಸದಾಕಾಲ ಕುಟುಂಬ ಮತ್ತು ಸಮಾಜದ ದೃಷ್ಟಿಯಲ್ಲಿ ಮೂಲೆಗುಂಪಾಗುತ್ತಾ ತಮ್ಮ ಅಸ್ತಿತ್ವಕ್ಕೆ, ಮೂಲಭೂತ ಹಕ್ಕುಗಳಿಗೆ ಹೋರಾಡುತ್ತಾ ಮಡಿವಂತರ ನಡುವೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವಂತ ಪ್ರೀತಿಯನ್ನು ದಕ್ಕಿಸಿಕೊಳ್ಳುವುದು ಒಂದು ಹೋರಾಟವೇ ಸರಿ.

ಈಗ ಆಮೇಜಾನ್ ಪ್ರೈಮ್‌ನಲ್ಲಿ ನಿಜಜೀವನದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಆರು ಜೋಡಿಗಳನ್ನು ಇಟ್ಟುಕೊಂಡು ಒಂದು ಡಾಕ್ಯುಸೀರೀಸ್ ಮಾದರಿಯ ಸಾಕ್ಷ್ಯಚಿತ್ರಸರಣಿ ಬಿಡುಗಡೆಯಾಗಿದ್ದು ಇದರಲ್ಲಿ ಹೇಗೆ ಎಲ್ ಜಿ ಬಿ ಟಿ ಕ್ಯು ಸಮುದಾಯದ ಪ್ರತಿನಿಧಿಗಳು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತಾರೆ, ಕುಟುಂಬದ ಮುಂದೆ ತೆರೆದುಕೊಳ್ಳುತ್ತಾರೆ, ಹೇಗೆ ಅವರ ಜೀವನದ ದಾರಿಯನ್ನು ಅವರೇ ರೂಪಿಸಿಕೊಂಡು ತಮ್ಮ ಕಷ್ಟಸುಖ ಹಂಚಿಕೊಳ್ಳುವ ಜೊತೆಗಾರರನ್ನು ಹುಡುಕಿಕೊಳ್ಳುತ್ತಾರೆ, ಹೇಗೆ ಸಮಾಜ ತಮ್ಮ ದೌರ್ಬಲ್ಯಗಳು ಎಂದು ನೋಡುವ ಮೌಲ್ಯಗಳನ್ನು ತಮ್ಮ ಶಕ್ತಿಯಾಗಿಸಿಕೊಂಡು ತಮ್ಮ ಛಾಪನ್ನು ಸ್ಥಾಪಿಸುತ್ತಾರೆ, ತಾವುಗಳೂ ತಾವಿಷ್ಟ ಪಟ್ಟವರನ್ನು ಪ್ರೀತಿಸಬಹುದು, ಒಟ್ಟಿಗೆ ಜೀವಿಸಬಹುದು, ಮದುವೆಯಾಗುವ ಕನಸನ್ನು ಕಾಣಬಹುದು ಎನ್ನುವುದೆಲ್ಲವುಗಳ ಮನೋಜ್ಞ ಚಿತ್ರಣವನ್ನು ಕಾಣಬಹುದು.

ಅನೀಜ್ ಮತ್ತು ಸನಮ್ ಗೌಹಾತಿ ನಗರದಲ್ಲಿ ವಾಸಿಸುವ ಜೋಡಿ. ಅವರದ್ದೇ ಊರಿನಲ್ಲಿ ಒಟ್ಟಿಗೆ ವಾಸಿಸಲು ಫ್ಲಾಟ್ ಒಂದರ ಹುಡುಕಾಟದಲ್ಲಿ ಇರುತ್ತಾರೆ. ಆದರೆ ಅವರ ಮಡಿವಂತ ಸಮಾಜದಲ್ಲಿ ಅದಕ್ಕೆ ಅವಕಾಶವಿರದೆ ಒಂದರ ಹಿಂದೆ ಒಂದಂತೆ ಎಲ್ಲ ಸ್ಥಳಗಳಲ್ಲಿಯೂ ಅವರಿಗೆ ಮನೆ ನೀಡಲು ನಿರಾಕರಿಸಲಾಗುತ್ತದೆ. ಮತ್ತೊಂದು ಪಾತ್ರದಲ್ಲಿ ಭಾರತದ ಮೊತ್ತ ಮೊದಲ ಟ್ರಾನ್ಸ್‌ಜೆಂಡರ್‌ ಸಮುದಾಯದ ವೈದ್ಯೆ ಎಂದು ಖ್ಯಾತರಾಗಿರುವ ಮತ್ತು ಈಗ ನಟಿಯಾಗಿಯೂ ಜನಪ್ರಿಯ ಆಗುತ್ತಿರುವ ತ್ರಿನೇತ್ರ ಹಾಲ್ದಾರ್ ಅವರು ಅವರ ಅಸ್ತಿತ್ವವನ್ನು ಒಪ್ಪಿ ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಸಿಗುವುದು ಎಷ್ಟು ಕಷ್ಟ ಎನ್ನುವುದನ್ನು ಹೇಳುತ್ತಾ ಹೋಗುತ್ತಾರೆ. ಮತ್ತೊಬ್ಬರು ಲಶ್ ಮಾನ್ಸೂನ್ ಹೆಸರಲ್ಲಿ ದೆಹಲಿಯ ಕ್ಲಬ್ಬುಗಳಲ್ಲಿ ಪ್ರಖ್ಯಾತರಾಗಿರುವ ಡ್ರ್ಯಾಗ್ ಕ್ವೀನ್ ಹೇಗೆ ಮೇಕಪ್ ಬಣ್ಣ ಕಳಚಿದ ನಂತರ ರಾಂಚಿಯ ಅಯುಷ್ಮಾನ್ ಆಗಿ ತನ್ನ ಹೆತ್ತವರ ಮುಂದೆ ತನ್ನ ನಿಜವಾದ ಅಸ್ತಿತ್ವದ ಕುರಿತು ಹೇಳುವುದು? ಅವರು ತನ್ನನ್ನು ಒಪ್ಪುತ್ತಾರಾ ಅಥವಾ ನಿರಾಕರಿಸುತ್ತಾರಾ ಎಂಬ ಗೊಂದಲ ಮತ್ತು ಅಸಹಾಯಕತೆಯನ್ನು ಹೇಳಿಕೊಳ್ಳುತ್ತಾರೆ.

ಮತ್ತೊಬ್ಬರು ಇಂಪಾಲದ ಸದಾಮ್ ಮುಂಬೈ ನಗರದಲ್ಲಿ ತನ್ನ ಹೊಸ ಸಂಗಾತಿಯನ್ನು ಭೇಟಿ ಮಾಡಲು ಕಾತುರದಿಂದ ಕಾಯುತ್ತಾ ತಮ್ಮ ಅಂತರಂಗವನ್ನು ಹಂಚಿಕೊಳ್ಳುತ್ತಾರೆ. ಇನ್ನು ಸೋಹಮ್ ಮತ್ತು ಸುರೇಶ್ ದಂಪತಿ ಬಹುಕಾಲದಿಂದ ಒಟ್ಟಿಗೆ ವಾಸಿಸುತ್ತಿದ್ದು ಮಗುವನ್ನು ದತ್ತು ತೆಗೆದುಕೊಂಡು ಕುಟುಂಬವನ್ನು ಬೆಳೆಸಬೇಕೆಂಬ ಕನಸನ್ನು ಹೊಂದಿರುವ ದಂಪತಿ. ಸಮಾಜ ಅದಕ್ಕೆ ಅವಕಾಶ ಕೊಡುತ್ತದಾ? ಈ ನಿಟ್ಟಿನಲ್ಲಿ ಅವರು ಮಾಡಬೇಕಾದ ಹೋರಾಟ, ಎದುರಿಸಬೇಕಾದ ಸವಾಲುಗಳು ಎಂಥದ್ದು ಎಂಬುದನ್ನು ಹಂಚಿಕೊಳ್ಳುತ್ತಾರೆ. ಜಯದೀಪ್ ಸರ್ಕಾರ್ ಅವರ ಕಲ್ಪನೆಯ ಕೂಸಾಗಿರುವ ಈ ಸರಣಿಯನ್ನು ಸರ್ಕಾರ್, ಶುಭ ಚಟರ್ಜಿ ಮತ್ತು ಹೃದಯೇ ನಾಗಪಾಲ್ ನಿರ್ದೇಶಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಸಲಿಂಗ ಜೋಡಿಗಳ ವಿವಾಹದ ಕುರಿತಾಗಿ ಋಣಾತ್ಮಕ ತೀರ್ಪು ಹೊರಬಂದಿರುವ ಸಮಯದಲ್ಲಿ ಈ ತೀರ್ಪು ಹೇಗೆ ಈ ಸಮುದಾಯದ ಜೋಡಿಗಳ ಕನಸುಗಳಿಗೆ, ಆಕಾಂಕ್ಷೆಗಳಿಗೆ ದೊಡ್ಡ ಹೊಡೆತ ನೀಡಿದೆ ಎನ್ನುವುದನ್ನು ತೋರಿಸಲಾಗಿದೆ.

ಮುಂಬೈ ಹೊರವಲಯದ ಪ್ರದೇಶದಲ್ಲಿ ವಾಸಿಸುವ ಟ್ರಾನ್ಸ್‌ವುಮನ್‌ ಡೇನಿಯೆಲ್ಲಾ ಅವರ ಪರಿಚಯ ಮಾಡಿದ್ದಾರೆ. ಸಾಧಾರಣ ಕುಟುಂಬದ ಹಿನ್ನೆಲೆ ಇರುವ ಡೇನಿಯೆಲ್ಲಾ ಮತ್ತು ಅವರೊಂದಿಗೆ ವಿವಾಹ ನಿಶ್ಚಯವಾಗಿರುವ ಜೊಯೆಲ್ ಜೋಡಿ ಹೇಗೆ ತಮ್ಮ ವಿವಾಹದ ಸರಳ ಆಚರಣೆಯನ್ನು ಕುರಿತು ಕನಸುಗಳನ್ನು ಹೆಣೆದು ಯೋಜಿಸುತ್ತಿದ್ದಾರೆ ಎನ್ನುವುದರ ಸುಂದರ ಚಿತ್ರಣವಿದೆ. ಜೀವನದಲ್ಲಿ ಬಹಳ ನೋವುಂಡ ವ್ಯಕ್ತಿಯಾದ ಡೇನಿಯೆಲ್ಲಾ ಹೇಗೆ ಹಳೆಯ ನೋವುಗಳನ್ನು ಮರೆತು ಭರವಸೆಯ ಭವಿಷ್ಯದತ್ತ ಎದುರು ನೋಡುತ್ತಿದ್ದಾರೆ ಎನ್ನುವುದರ ಚಿತ್ರಣವಿದೆ.

ಇದು ಒಂದು ರೀತಿ ವಿಭಿನ್ನವಾದ ಸಾಕ್ಷ್ಯಚಿತ್ರ ಸರಣಿ. ಇಲ್ಲಿ ನಿಜಜೀವನದ ವ್ಯಕ್ತಿಗಳೇ ಪಾತ್ರಗಳು. ಆದ್ದರಿಂದ ಕೆಲವೊಂದು ಕಡೆ ನಿರೂಪಣೆ ಭಾವ ಕಡಿಮೆ ಎನಿಸಿ ಬರೀ ಯಾರದ್ದೋ ಬದುಕಿನ ಕಥೆ ಕೇಳುತ್ತಿದ್ದೀವೇನೋ ಎಂಬಂತೆ ಭಾಸವಾಗುತ್ತದೆ. ಆದರೆ ಇಷ್ಟು ದಿನ ಬರೀ ಕಾಲ್ಪನಿಕ ಪಾತ್ರಗಳ ಮೂಲಕವೇ ಎಲ್ ಜಿ ಬಿ ಟಿ ಕ್ಯು ಸಮುದಾಯದ ಕಥೆಗಳನ್ನು ಕೇಳುತ್ತಿದ್ದ ವೀಕ್ಷಕರಿಗೆ ಈಗ ನಿಜವಾಗಿ ಅದೇ ಸಮುದಾಯದ ಪ್ರತಿನಿಧಿಗಳ ಮೂಲಕ ಅವರ ವ್ಯಥೆಗಳು, ಹೋರಾಟಗಳು, ಸವಾಲುಗಳು ಎಂಥವು ಎನ್ನುವುದರ ಚಿತ್ರಣ ಸಿಗುವಂತ ಸರಣಿ ಮಾಡಿರುವುದು ನಿಜಕ್ಕೂ ವಿಶೇಷ.

ಅವರ ಕಥೆಗಳು ಮನಸ್ಸನ್ನು ಮುಟ್ಟುತ್ತವೆ. ಅವರಿಗಾಗಿ ಮರುಗುವಂತೆ ಮಾಡುತ್ತವೆ. ಅವರ ಅಸ್ತಿತ್ವವನ್ನು ಗೌರವಿಸುವಂತೆ ಮಾಡುತ್ತವೆ. ಅವರ ಸವಾಲುಗಳಿಗೆ, ಹೋರಾಟಗಳಿಗೆ ಹೆಗಲು ನೀಡುವಂತೆ ಪ್ರೇರೇಪಿಸುತ್ತವೆ. ಅವರೂ ಎಲ್ಲರೊಳಗೊಂದಾಗಿ ಸಾಮಾನ್ಯವಾಗಿ ಬದುಕುವಂತ ಪರಿಸ್ಥಿತಿ ಆದಷ್ಟು ಬೇಗ ನಿರ್ಮಾಣವಾಗಲಿ ಎಂದು ಹಾರೈಸುವಂತಾಗುತ್ತದೆ. ವಿಭಿನ್ನ ಒಳನೋಟ ಮತ್ತು ಉತ್ತಮ ಸಂದೇಶ ನೀಡುವ ಸಾಕ್ಷ್ಯಚಿತ್ರ ಸರಣಿ ‘ರೈನ್‌ಬೋ ರಿಷ್ತಾ’ ಆಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here