ವೃತ್ತಿ ರಂಗಭೂಮಿ ಹಿನ್ನೆಲೆಯ ಸಿನಿಮಾ ನಟ ಟಿ.ಆರ್.ಅಶ್ವತ್ಥ ನಾರಾಯಣ ಇಂದು ಬೆಳಗ್ಗೆ ಅಗಲಿದ್ದಾರೆ. ಬಾಲನಟನಾಗಿ ರಂಗಭೂಮಿ ಪ್ರವೇಶಿಸಿದ ಅವರು ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ವೃತ್ತಿ ರಂಗಭೂಮಿಯಿಂದ ಬೆಳ್ಳಿತೆರೆಗೆ ಪರಿಚಯವಾಗಿ ಇತ್ತೀಚಿನವರೆಗೂ ಅಭಿನಯದಲ್ಲಿ ಸಕ್ರಿಯರಾಗಿದ್ದ ಹಿರಿಯ ನಟ ಟಿ.ಆರ್.ಅಶ್ವತ್ಥ ನಾರಾಯಣ (90 ವರ್ಷ) ಅಗಲಿದ್ದಾರೆ. ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಕಾಲವಾದರು. ಅಶ್ವತ್ಥ ನಾರಾಯಣ ಅವರು ಬಾಲನಟನಾಗಿ ರಂಗಭೂಮಿಗೆ ಪರಿಚಯವಾದವರು. ಐದಾರರ ಹರೆಯದಲ್ಲೇ ಬಣ್ಣ ಹಚ್ಚಿದ ಅವರು ಗುಬ್ಬಿ ಕಂಪನಿ ಸೇರಿದಂತೆ ನಾಡಿನ ಪ್ರಮುಖ ವೃತ್ತಿ ನಾಟಕ ಕಂಪನಿಗಳಲ್ಲಿ ದಶಕಗಳ ಕಾಲ ಅಭಿನಯಿಸುತ್ತಾ ಬಂದಿದ್ದರು. ಸಿ.ಆರ್.ರಾವ್ ನಿರ್ದೇಶನದ ‘ವಾಲ್ಮೀಕಿ’ ಚಿತ್ರದೊಂದಿಗೆ ಅವರ ಬೆಳ್ಳಿತೆರೆ ಅಭಿಯಾನ ಶುರುವಾಯ್ತು.
ತರಾಸು ಅವರ ಕೃತಿಯನ್ನು ಆಧರಿಸಿ ಟಿ.ವಿ.ಸಿಂಗ್ ಠಾಕೂರ್ ನಿರ್ದೇಶಿಸಿದ ‘ಚಂದವಳ್ಳಿಯ ತೋಟ’ ಅಶ್ವತ್ಥ ನಾರಾಯಣ ಅವರ ಸಿನಿಮಾ ಬದುಕಿಗೆ ತಿರುವು ನೀಡಿದ ಸಿನಿಮಾ. ಈ ಚಿತ್ರದಲ್ಲಿನ ಅವರ ನೆಗೆಟೀವ್ ಶೇಡ್‌ನ ಪಾತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯ್ತು. ಮುಂದೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಾ ಬಂದ ಅವರಿಗೆ ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರಗಳು ಸಿಕ್ಕಿದ್ದು ಕಡಿಮೆ ಎಂದೇ ಹೇಳಬೇಕು. ವರನಟ ಡಾ.ರಾಜಕುಮಾರ್ ಅವರಿಗೆ ಆಪ್ತರಾಗಿದ್ದ ಅವರು ರಾಜಕುಮಾರ್ ಸಂಸ್ಥೆ ನಿರ್ಮಾಣದ ಬಹಳಷ್ಟು ಚಿತ್ರಗಳಲ್ಲಿ ಪಾತ್ರ ಮಾಡಿದ್ದಾರೆ.ಮೂರು ತಲೆಮಾರಿನ ನಾಯಕನಟರ ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಶ್ವತ್ಥ ನಾರಾಯಣ ಅಭಿನಯಸಿದ್ದಾರೆ. ಭಲೇ ಹುಚ್ಚ, ಮಣ್ಣಿನ ಮಗ, ದಂಗೆ ಎದ್ದ ಮಕ್ಕಳು, ಕವಿರತ್ನ ಕಾಳಿದಾಸ, ಬಬ್ರುವಾಃನ, ಜೀವನ ಚೈತ್ರ, ನಂಜುಂಡಿ ಕಲ್ಯಾಣ, ಓಂ ಅವರ ನಟನೆಯ ಕೆಲವು ಪ್ರಮುಖ ಸಿನಿಮಾಗಳು.
ದಾಖಲೆ | ಡಾ.ರಾಜಕುಮಾರ್ ಕುಟುಂಬದ ನಾಲ್ಕು ತಲೆಮಾರುಗಳೊಂದಿಗೆ ನಟಿಸಿರುವ ವಿಶಿಷ್ಟ ದಾಖಲೆ ನಟ ಅಶ್ವತ್ಥ ನಾರಾಯಣ ಅವರ ಹೆಸರಿನಲ್ಲಿದೆ. ಡಾ.ರಾಜ್ ಅವರ ತಂದೆ, ಖ್ಯಾತ ರಂಗಭೂಮಿ ನಟ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರೊಂದಿಗೆ ನಾಟಕಗಳಲ್ಲಿ ಅಶ್ವತ್ಥ ನಾರಾಯಣ ಅವರು ಬಾಲನಟನಾಗಿ ಅಭಿನಯಿಸಿದ್ದರು. ಮುಂದೆ ಡಾ.ರಾಜಕುಮಾರ್ ಅಭಿನಯದ ಹಲವಾರು ಚಿತ್ರಗಳಲ್ಲಿ ನಟಿಸುತ್ತಾ ಬಂದ ಅವರು ರಾಜ್‌ರ ಮೂವರು ಪುತ್ರರ ಚಿತ್ರಗಳಲ್ಲೂ ನಟಿಸಿದ್ದಾರೆ. ಪುಟ್ಟಸ್ವಾಮಯ್ಯನವರ ನಾಲ್ಕನೇ ತಲೆಮಾರು, ರಾಘವೇಂದ್ರ ರಾಜಕುಮಾರ್ ಅವರ ಪುತ್ರ ವಿನಯ್ ರಾಜ್ ಅಭಿನಯದ ‘ಸಿದ್ದಾರ್ಥ’ ಚಿತ್ರದಲ್ಲಿ ಪಾತ್ರ ಮಾಡಿದ್ದರು. ಕಲಾಬದುಕಿನಲ್ಲಿ ಇದೊಂದು ಅಪರೂಪದ ದಾಖಲೆ.