ಭಾರತೀಯ ಚಿತ್ರರಂಗದ ಮೇರು ಗಾಯಕಿ ಲತಾ ಮಂಗೇಶ್ಕರ್‌ ಅಗಲಿದ್ದಾರೆ. ಕೊರೋನಾ ಸೋಂಕು ತಗಲಿದ್ದ ಹಿನ್ನೆಲೆಯಲ್ಲಿ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ.

ಭಾರತ ರತ್ನ, ದಾದಾ ಸಾಹೇಬ್‌ ಫಾಲ್ಕೆ ಪುರಸ್ಕೃತ ಮೇರು ಗಾಯಕಿ ಲತಾ ಮಂಗೇಶ್ಕರ್‌ (92 ವರ್ಷ) ಇಂದು ಬೆಳಗ್ಗೆ ಅಗಲಿದ್ದಾರೆ. ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ಜನವರಿ 8ರಂದು ದಾಖಲಿಸಲಾಗಿತ್ತು. ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಲತಾ ಅಗಲಿಕೆಗೆ ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.

‘ಭಾರತದ ಕೋಗಿಲೆ’ ಎಂದೇ ಕರೆಸಿಕೊಂಡಿದ್ದ ಲತಾ ಮಂಗೇಶ್ಕರ್‌ ಭಾರತೀಯ ಸಿನಿಮಾ ಐಕಾನ್‌. ಪ್ರಮುಖವಾಗಿ ಹಿಂದಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳ ಮೂವತ್ತು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಗಾಯನ ಕುಟುಂಬದಲ್ಲಿ ಹುಟ್ಟಿ ಬೆಳೆದ ಲತಾ ಕೆಲವು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದು, ಚಿತ್ರನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದರು. 1929ರಲ್ಲಿ ಜನಿಸಿದ ಲತಾ ಐವರು ಮಕ್ಕಳಲ್ಲಿ ಹಿರಿಯವರು. ತಂದೆ, ಶಾಸ್ತ್ರೀಯ ಗಾಯಕ ಪಂಡಿತ್‌ ದೀನಾನಾಥ ಮಂಗೇಶ್ಕರ್‌ ಅವರಿಂದ ಲತಾರಿಗೆ ಮೊದಲ ಸಂಗೀತ ಶಿಕ್ಷಣ ಸಿಕ್ಕಿತು. ತಂದೆಯ ಅಕಾಲಿಕ ನಿಧನದಿಂದ ಮನೆಯ ಜವಾಬ್ದಾರಿ ಹೆಗಲೇರಿತು. ಹದಿಮೂರರ ಹರೆಯದಲ್ಲೇ ಮರಾಠಿ ಸಿನಿಮಾಗಳಲ್ಲಿ ನಟನೆ, ಗಾಯನದಲ್ಲಿ ತೊಡಗಿಸಿಕೊಂಡರು.

ಮಧುಬಾಲಾ ನಟನೆಯ ‘ಮಹಲ್‌’ (1945) ಸಿನಿಮಾದ ‘ಆಯೇಗಾ ಆನೇವಾಲಾ’ ಅವರ ಮೊದಲ ಹಿಟ್‌ ಸಾಂಗ್‌. ಶಾಸ್ತ್ರೀಯ ಗಾಯನದ ಹಿನ್ನೆಲೆಯಿದ್ದ ಅವರು ಅಲ್ಲಿಂದ ಮುಂದೆ ಜನಪ್ರಿಯ ಗಾಯಕಿಯಾಗಿ ಹೊರಹೊಮ್ಮಿದರು. ನೌಶಾದ್‌ ಸಂಗೀತ ಸಂಯೋಜನೆಯಲ್ಲಿ ‘ಬೈಜು ಬಾವ್ರಾ’, ‘ಮದರ್‌ ಇಂಡಿಯಾ’, ‘ಮುಘಲ್‌ ಎ ಅಜಾಮ್‌’, ಸಂಗೀತ ನಿರ್ದೇಶಕರಾದ ಶಂಕರ್‌ – ಜೈಕಿಶನ್‌ ಸಂಯೋಜನೆಯಲ್ಲಿನ ಮೆಲೋಡಿ ಹಿಟ್ಸ್‌ ‘ಬರ್ಸಾತ್‌’ ಮತ್ತು ‘ಶ್ರೀ 420’ ಸಿನಿಮಾಗಳ ಗಾಯನದಿಂದಾಗಿ ಭಾರತೀಯ ಸಿನಿಮಾರಸಿಕರಿಗೆ ಚಿರಪರಿಚಿತರಾದರು.

ಸಲೀಲ್‌ ಚೌಧರಿ ಸಂಯೋಜನೆಯ ‘ಮಧುಮತಿ’ ಸೇರಿದಂತೆ ‘ಬೀಸ್‌ ಸಾಲ್‌ ಬಾದ್‌’, ‘ಖಾಂದಾನ್‌’ ಮತ್ತು ‘ಜೀನೇ ಕಿ ರಾಝ್‌’ ಚಿತ್ರಗಳ ಉತ್ತಮ ಗಾಯನಕ್ಕಾಗಿ ಅವರಿಗೆ ಫಿಲ್ಮ್‌ಫೇರ್‌ ಪುರಸ್ಕಾರಗಳು ಸಂದಿವೆ. ‘ಪರಿಚಯ್‌’, ‘ಕೋರಾ ಕಾಗಝ್‌’ ಮತ್ತು ‘ಲೇಕಿನ್‌’ ಚಿತ್ರಗಳಲ್ಲಿನ ಗಾಯನಕ್ಕಾಗಿ ಮೂರು ಬಾರಿ ಅತ್ಯುತ್ತಮ ಗಾಯಕಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ‘ಪಾಕೀಝಾ’, ‘ಅಭಿಮಾನ್‌’, ‘ಅಮರ್‌ ಪ್ರೇಮ್‌’, ‘ಆಂಧಿ’, ‘ಸಿಲ್ಸಿಲಾ’, ‘ಚಾಂದಿನಿ’, ‘ಸಾಗರ್‌’, ‘ರುಡಾಲಿ’, ‘ದಿಲ್‌ವಾಲೇ ದುಲ್ಹನಿಯಾ ಲೇ ಜಾಯೆಂಗೆ’ ಲತಾರ ಕೆಲವು ಜನಪ್ರಿಯ ಸಿನಿಮಾಗಳು.

ಹಲವಾರು ದೇಶಭಕ್ತಿ ಗೀತೆಗಳನ್ನು ಲತಾ ಹಾಡಿದ್ದಾರೆ. ಈ ಪಟ್ಟಿಯಲ್ಲಿ ‘ಆಯೇ ಮೇರೆ ವತನ್‌ ಕೆ ಲೋಗೊ’ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. 1962ರ ಚೀನಾ ಯುದ್ಧದಲ್ಲಿ ಮಡಿದ ವೀರ ಯೋಧರ ಸ್ಮರಣೆಯಲ್ಲಿ ಸಂಯೋಜಿಸಿದ್ದ ಗೀತೆಯಿದು. 1963ರಲ್ಲಿ ದೆಲ್ಲಿಯ ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ಎಸ್‌.ರಾಧಾಕೃಷ್ಣನ್‌ ಮತ್ತು ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಸಮ್ಮುಖದಲ್ಲಿ ಲತಾ ಈ ಗೀತೆ ಹಾಡಿದ್ದರು.

ಕೆಲವು ಮರಾಠಿ ಸಿನಿಮಾಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ‘ಸಾಧಿ ಮನಸೆ’ (1965) ಮರಾಠಿ ಸಿನಿಮಾದ ಉತ್ತಮ ಸಂಗೀತ ಸಂಯೋಜನೆಗಾಗಿ ಅವರಿಗೆ ಮಹಾರಾಷ್ಟ್ರ ಸರ್ಕಾರದಿಂದ ಪ್ರಶಸ್ತಿ ಸಂದಿದೆ. ‘ಲೇಕಿನ್‌’ (1990) ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಪದ್ಮಭೂಷಣ, ಪದ್ಮವಿಭೂಷಣ, ಭಾರತರತ್ನ ಮತ್ತು ಭಾರತೀಯ ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್‌ ಫಾಲ್ಕೆ ಗೌರವಗಳು ಅವರಿಗೆ ಸಂದಿವೆ. ಲತಾರ ಅಗಲಿಕೆಯಿಂದಾಗಿ ಭಾರತೀಯ ಸಿನಿಮಾರಂಗದ ಮೂರು ತಲೆಮಾರುಗಳನ್ನು ಬೆಸೆದಿದ್ದ ಕೊಂಡಿಯೊಂದು ಕಳಚಿದಂತಾಗಿದೆ. ಭೌತಿಕವಾಗಿ ಅವರು ಇಲ್ಲವಾದರೂ ತಮ್ಮ ಹಾಡುಗಳ ಮೂಲಕ ಸದಾ ಕಾಲಕ್ಕೂ ನೆನಪಿನಲ್ಲುಳಿಯಲಿದ್ದಾರೆ.

LEAVE A REPLY

Connect with

Please enter your comment!
Please enter your name here