ನಾಗರಾಜ್‌ ಮಂಜುಳೆ ನಿರ್ದೇಶನದಲ್ಲಿ ಅಮಿತಾಭ್‌ ಬಚ್ಚನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಝುಂಡ್‌’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನಾಗಪುರ ಮೂಲದ ಫುಟ್‌ಬಾಲ್‌ ಕೋಚ್‌ ವಿಜಯ್‌ ಬರ್ಸೆ ಅವರ ಜೀವನ – ಸಾಧನೆ ಆಧರಿಸಿದ ಸ್ಫೂರ್ತಿದಾಯಕ ಸಿನಿಮಾ ಮಾರ್ಚ್‌ 4ರಂದು ತೆರೆಕಾಣಲಿದೆ.

ಅಮಿತಾಭ್‌ ಬಚ್ಚನ್‌ ಅಭಿನಯದ ‘ಝುಂಡ್‌’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ‘ಫಾಂಡ್ರಿ’, ‘ಸೈರಾಟ್‌’ ಸಿನಿಮಾಗಳ ನಿರ್ದೇಶಕ ನಾಗರಾಜ್‌ ಮಂಜುಳೆ ನಿರ್ದೇಶನದ ಮೊದಲ ಹಿಂದಿ ಚಿತ್ರವಿದು. ಮೊನ್ನೆ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದ ಚಿತ್ರತಂಡ ಇಂದು ಟೀಸರ್‌ ಬಿಡುಗಡೆಗೊಳಿಸಿದೆ. ಸ್ಲಂ ಮಕ್ಕಳನ್ನು ಗುರಿಯೆಡೆಗೆ ಕರೆದೊಯ್ಯುವ ಅಮಿತಾಭ್‌ ಬಚ್ಚನ್‌ ದೃಶ್ಯಾವಳಿ ಟೀಸರ್‌ನಲ್ಲಿದೆ. ಹಿನ್ನೆಲೆಯಲ್ಲಿ ದೇಸಿ ವಾದ್ಯಗಳ ಸಂಗೀತ ಕೇಳಿಸುತ್ತಿದ್ದು ನಾಗರಾಜ್‌ ಮಂಜುಳೆ ತಮ್ಮ ಎಂದಿನ ಶೈಲಿಯಲ್ಲಿ ಕತೆ ಹೇಳಿರುವ ಸೂಚನೆಗಳು ಸಿಗುತ್ತವೆ. ಹಿರಿಯ ನಟ ಅಮಿತಾಭ್‌ ಬಚ್ಚನ್‌ ಚಿತ್ರದಲ್ಲಿ ಸ್ಲಂ ಫುಟ್‌ಬಾಲ್‌ ತಂಡವನ್ನು ಕಟ್ಟುವ ನಾಗಪುರ ಮೂಲದ ಕೋಚ್‌ ವಿಜಯ್‌ ಬರ್ಸೆ ಪಾತ್ರ ನಿರ್ವಹಿಸುತ್ತಿದ್ದಾರೆ. ಬೀದಿ ಮಕ್ಕಳ ಫುಟ್‌ಬಾಲ್‌ ತಂಡ ಕಟ್ಟಿ ಅವರ ಬದುಕಿಗೆ ಸ್ಫೂರ್ತಿ ತುಂಬುವ ತರಬೇತುದಾರನ ಪಾತ್ರವಿದು.

T-ಸೀರೀಸ್‌, ತಾಂಡವ್‌ ಫಿಲ್ಮ್ಸ್‌ ಎಂಟರ್‌ಟೇನ್‌ಮೆಂಟ್‌ ಮತ್ತು ಆಟ್‌ಪಾಟ್‌ ಬ್ಯಾನರ್‌ನಡಿ ಭೂಷಣ್‌ ಕುಮಾರ್‌, ಕೃಷ್ಣ ಕುಮಾರ್‌, ರಾಜ್‌ ಹಿರೇಮಠ್‌, ನಾಗರಾಜ್‌ ಮಂಜುಳೆ, ಮೀನಾ ಅರೋರಾ, ಗಾರ್ಗಿ ಕುಲಕರ್ಣಿ ನಿರ್ಮಿಸಿರುವ ಸಿನಿಮಾ ತೀರಾ ವಿಳಂಬವಾಗಿ ತೆರೆಕಾಣುತ್ತಿದೆ. ಕೋವಿಡ್‌ನಿಂದಾಗಿ ಸಿನಿಮಾ ಬಿಡುಗಡೆ ವಿಳಂಬವಾದಾಗ OTTಯಲ್ಲಿ ಚಿತ್ರವನ್ನು ರಿಲೀಸ್‌ ಮಾಡಲು ಚಿತ್ರತಂಡ ಆಲೋಚಿಸಿತ್ತು. ಕಾಪಿರೈಟ್‌ಗೆ ಸಂಬಂಧಿಸಿದಂತೆ ತಕರಾರುಗಳು ಆಗಿದ್ದರಿಂದ ಓಟಿಟಿ ಬಿಡುಗಡೆ ಸಾಧ್ಯವಾಗಲಿಲ್ಲ. ಇದೀಗ ಅಂತಿಮವಾಗಿ ಸಿನಿಮಾ ಮಾರ್ಚ್‌ 4ರಂದು ಥಿಯೇಟರ್‌ಗೆ ಬರುತ್ತಿದೆ.

LEAVE A REPLY

Connect with

Please enter your comment!
Please enter your name here