ಬಾಲಿವುಡ್‌ನ ಖ್ಯಾತ ಸಂಗೀತ ಸಂಯೋಜಕ, ಗಾಯಕ ಬಪ್ಪಿ ಲಹರಿ ಇಂದು ಇಹಲೋಕ ತ್ಯಜಿಸಿದ್ದಾರೆ. ಜನಪ್ರಿಯ ಗಾಯಕ, ನಟ ಕಿಶೋರ್‌ ಕುಮಾರ್‌ ಅವರ ‘ಬಡ್ತಿ ಕಾ ನಾಮ್‌ ದಾದಿ’ ಹಿಂದಿ ಚಿತ್ರದಲ್ಲಿ ಅವರು ನಟಿಸಿದ್ದರು ಎನ್ನುವ ಸಂಗತಿ ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ.

ಇಂದು ಬೆಳಗ್ಗೆ ನಮ್ಮನ್ನಗಲಿದ ಸಂಗೀತ ಸಂಯೋಜಕ, ‘ಡಿಸ್ಕೋ ಕಿಂಗ್‌’ ಎಂದೇ ಕರೆಸಿಕೊಳ್ಳುತ್ತಿದ್ದ ಬಪ್ಪಿ ಲಹಿರಿ ಅವರದ್ದು ವರ್ಣರಂಜಿತ ಬದುಕು. ಚಿನ್ನವೆಂದರೆ ಅವರಿಗೆ ಅಪಾರ ಪ್ರೀತಿ. ಸಾರ್ವಜನಿಕ ಸಮಾರಂಭಗಳಿಗೆ ಅವರು ಕೊರಳಿಗೆ ತರಹೇವಾರಿ ಚಿನ್ನದ ಸರಗಳು, ಕೈಗೆ ಕಡಗ, ಬೆರಳುಗಳಿಗೆ ಉಂಗುರಗಳನ್ನು ಹಾಕಿಕೊಂಡು ಬರುತ್ತಿದ್ದರು. ಹಾಗಾಗಿ ಬಪ್ಪಿ ಲಹಿರಿ ಎಂದಾಕ್ಷಣ ಸಿನಿಪ್ರೇಮಿಗಳಿಗೆ ‘ಚಿನ್ನದ ಮನುಷ್ಯ’ ಕಣ್ಮುಂದೆ ಬರುವುದು! ಇನ್ನು ಸಂಗೀತ ಸಂಯೋಜಕ, ಗಾಯಕರಾಗಿ ಗುರುತಿಸಿಕೊಳ್ಳುವುದಕ್ಕಿಂತ ಮುನ್ನ ಅವರು ನಟನಾಗಿ ಅದೃಷ್ಟ ಪರೀಕ್ಷೆ ನಡೆಸಿದ್ದರು ಎನ್ನುವ ವಿಷಯ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ.

ಬಾಲಿವುಡ್‌ ಕಂಡ ಮೇರು ಗಾಯಕ, ನಟ ಕಿಶೋರ್‌ ಕುಮಾರ್‌ ಅವರು ಬಪ್ಪಿ ಲಹಿರಿ ಅವರಿಗೆ ದೂರದ ಸಂಬಂಧಿ. ಕಿಶೋರ್‌ ಕುಮಾರ್‌ ಅವರನ್ನು ಬಪ್ಪಿ ‘ಮಾಮಾಜಿ’ ಎಂದೇ ಕರೆಯುತ್ತಿದ್ದರು. ಈ ವಿಶ್ವಾಸದ ಮೇರೆಗೆ ಕಿಶೋರ್‌ ಅಭಿನಯದ ‘ಬಡ್ತೀ ಕಾ ನಾಮ್‌ ದಾದಿ’ (1974) ಚಿತ್ರದ ಪಾತ್ರವೊಂದರಲ್ಲಿ ಅವರು ನಟಿಸಿದ್ದರು. ಕಳೆದ ವರ್ಷ ಬಪ್ಪಿ ಲಹಿರಿ ಈ ಚಿತ್ರದ ಫೋಟೊವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ”A Film that I debuted as an actor..⭐️ Directed and Produced by #kishorekumar along with Amit Kumar !!” ಎಂದು ಬರೆದಿದ್ದರು. ಕಿಶೋರ್‌ ಕುಮಾರ್‌ ನಟಿಸಿ, ನಿರ್ದೇಶಿಸಿದ್ದ ಈ ಕಾಮಿಡಿ ಚಿತ್ರದಲ್ಲಿ ಅಶೋಕ್‌ ಕುಮಾರ್‌, ಅಮಿತ್‌ ಕುಮಾರ್‌ ನಟಿಸಿದ್ದರು. ಮುಂದೆ ಸಂಗೀತ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಂಡ ಬಪ್ಪಿ ಲಹಿರಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿಲ್ಲ. ಬಪ್ಪಿ ಲಹಿರಿ ಅವರ ನಿಧನಕ್ಕೆ ಹಿಂದಿ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ.

Previous articleಬಾಲಿವುಡ್‌ ಸಂಗೀತ ಸಂಯೋಜಕ ‘ಡಿಸ್ಕೋ ಕಿಂಗ್‌’ ಬಪ್ಪಿ ಲಹಿರಿ ಇನ್ನಿಲ್ಲ
Next articleಮಾಡೆಲಿಂಗ್‌ನಿಂದ ಬೆಳ್ಳಿತೆರೆಗೆ ಸುಶ್ಮಿತಾ; ತೆರೆಗೆ ಸಿದ್ಧವಾಗಿದೆ ‘ಡಾರ್ಕ್‌ ಫ್ಯಾಂಟಸಿ’ ಸಿನಿಮಾ

LEAVE A REPLY

Connect with

Please enter your comment!
Please enter your name here