YK ನಿರ್ದೇಶನದ ‘ಗಿಲ್ಕಿ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಮೂರು ವಿಶಿಷ್ಟ ಪಾತ್ರಗಳ ಕತೆಯ ಸಿನಿಮಾ. ಕಂಟೆಂಟ್‌ ಸಿನಿಮಾ ಎನ್ನುವುದನ್ನು ಟ್ರೈಲರ್‌ ಬಲವಾಗಿ ಸಾರುತ್ತಿದ್ದು, ಇದೊಂದು ವಿಶಿಷ್ಟ ಪ್ರಯೋಗವಾಗುವ ಸೂಚನೆ ಸಿಗುತ್ತದೆ.

“ಇದೊಂದು ಭಿನ್ನ ಪ್ರಯತ್ನ. ಹೆಚ್ಚು ಬಜೆಟ್ ಹಾಕಿ ಸಿನಿಮಾ ನಿರ್ಮಾಣ ಮಾಡುವವರು ಪ್ರೇಕ್ಷಕನಿಗೆ ಹೊಸ ಪ್ರಪಂಚ ಕಟ್ಟಿಕೊಡುತ್ತಾರೆ. ಆದರೆ ನಾವು ಸೀಮಿತ ಬಜೆಟ್‌ನಲ್ಲೇ ಅಂಥದ್ದೊಂದು ಪ್ರಯೋಗಕ್ಕೆ ಮುಂದಾಗಿದ್ದೇವೆ. ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಗಿಲ್ಕಿ, ನ್ಯಾನ್ಸಿ ಮತ್ತು ಶೇಕ್ಸ್ ಪಿಯರ್ ಪಾತ್ರಗಳ ಮೂಲಕ ನಮ್ಮ ಚಿತ್ರಕಥೆ ಸಾಗುತ್ತದೆ” ಎಂದು ತಮ್ಮ ಚಿತ್ರವನ್ನು ಪರಿಚಯಿಸಿಕೊಂಡರು ನಿರ್ದೇಶಕ YK. ಅವರ ನಿರ್ದೇಶನದ ‘ಗಿಲ್ಕಿ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಇತ್ತೀಚಿನ ಸಿನಿಮಾಗಳ ಪೈಕಿ ಇದು ಕತೆ ಮತ್ತು ಪಾತ್ರಗಳ ಕಾರಣಕ್ಕೆ ಭಿನ್ನವಾಗಿ ನಿಲ್ಲುತ್ತದೆ.

“ಗಿಲ್ಕಿ ನಾಯಕನ ಪಾತ್ರದ ಹೆಸರು. ಈತ ನೋಡಲು ಮಾಮೂಲಿ ತರಹ ಕಾಣುತ್ತಾನೆ. ಆದರೆ ಮಾತನಾಡಲು ಶುರು ಮಾಡಿದರೆ ಆತನ ಸ್ವಭಾವ ತಿಳಿಯುತ್ತದೆ. ನಾನ್ಸಿ ನಾಯಕಿ. ಈಕೆ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಖಾಯಿಲೆಗೆ ತುತ್ತಾಗಿ ತನ್ನ ಕೈ – ಕಾಲುಗಳ ಸ್ವಾಧೀನ ಕಳೆದುಕೊಂಡಿರುತ್ತಾಳೆ. ಇವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ‌. ನಂತರ ಏನಾಗುತ್ತದೆ ಎಂಬುದನ್ನು ಸಿನಿಮಾದಲ್ಲಿ ನೋಡಿ” ಎನ್ನುವ ನಿರ್ದೇಶಕರಿಗೆ ತಮ್ಮ ಸಿನಿಮಾ ಕುರಿತಾಗಿ ಅಪಾರ ಭರವಸೆ ಇದೆ. ಇತ್ತೀಚೆಗಷ್ಟೇ ‘ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್‌’ ಆರಂಭಿಸಿರುವ ನಿರ್ದೇಶಕ ಡಿ.ಸತ್ಯಪ್ರಕಾಶ್‌ ಅವರಿಗೂ ಈ ಸಿನಿಮಾದ ಕಂಟೆಂಟ್‌ ಇಷ್ಟವಾಗಿದೆ. ಅವರು ಕೂಡ ಇಂತಹ ಚಿತ್ರಗಳ ಮೂಲಕವೇ ಕನ್ನಡಿಗರಿಗೆ ಚಿರಪರಿಚಿತರಾದವರು. ಅವರು ‘ಗಿಲ್ಕಿ’ಯನ್ನು ವಿತರಣೆ ಮಾಡುತ್ತಿದ್ದಾರೆ.

ಟ್ರೈಲರ್‌ ಬಿಡುಗಡೆ ಕಾರ್ಯಕ್ರಮಕ್ಕೆ ನಿರ್ದೇಶಕ ಜಯತೀರ್ಥ, ಚಿತ್ರನಿರ್ಮಾಪಕ ಮಂಜುನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. “ನಾನು ಈ ಹಿಂದೆ ಚಿತ್ರದ ಹಾಡುಗಳನ್ನು ನೋಡಿ ಖುಷಿ ಪಟ್ಟಿದ್ದೆ. ಟ್ರೈಲರ್‌ ತುಂಬಾ ಚೆನ್ನಾಗಿದೆ. ಹೊಸ ಪ್ರಯೋಗಕ್ಕೆ ಒಳಿತಾಗಲಿ” ಎಂದು ಜಯತೀರ್ಥ ಹಾರೈಸಿದರು. “ಎಲ್ಲಾ ಪ್ರೇಮಕಥೆ ಆಧಾರಿತ ಸಿನಿಮಾಗಳಲ್ಲಿ ನಾಯಕ ಕಟ್ಟುಮಸ್ತಾಗಿರುತ್ತಾನೆ. ನಾಯಕಿ ಸುಂದರವಾಗಿರುತ್ತಾಳೆ. ಆದರೆ ಅಂಗವಿಕಲೆ ಮತ್ತು ಬುದ್ದಿಮಾಂದ್ಯನ ನಡುವಿನ ಪ್ರೀತಿಯ ಕತೆ ಹೇಳುತ್ತಿರುವ ನಿರ್ದೇಶಕರ ಪ್ರಯತ್ನ ಶ್ಲಾಘನೀ” ಎಂದು ನಿರ್ದೇಶಕ ಡಿ.ಸತ್ಯಪ್ರಕಾಶ್‌ ‘ಗಿಲ್ಕಿ’ ನಿರ್ದೇಶಕರನ್ನು ಅಭಿನಂದಿಸಿದರು.

ಚಿತ್ರದಲ್ಲಿ ಅಂಗವಿಕಲ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ ಚೈತ್ರ. ಟ್ರೈಲರ್‌ನಲ್ಲಿ ನೋಡಿದಾಗ ಅವರ ನಟನೆಯ ಬಗ್ಗೆ ಮೆಚ್ಚುಗೆ ಮೂಡುತ್ತದೆ. “ನನಗೆ ನಿರ್ದೇಶಕರು ಕಥೆ ಹೇಳಲು ಆಹ್ವಾನಿಸಿದಾಗ ನಾನು ಹೋಗಲು ಹಿಂದೆ ಸರಿದಿದೆ. ನಂತರ ಕಥೆ ಕೇಳಿದೆ. ಅವರು ಕಥೆ ಹೇಳುತ್ತಿದಾಗಲೇ ನಾನು ಪಾತ್ರದಲ್ಲಿ ಮುಳಗಿ ಹೋದೆ . ಈ ಪಾತ್ರ ನಾನೇ ಮಾಡಬೇಕೆಂದು ನಿರ್ಧಾರ ಮಾಡಿದೆ. ಟ್ರೈಲರ್‌ ಹಾಗೂ ಹಾಡುಗಳನ್ನು ನೋಡಿದವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ನನಗೂ ಕೂಡ ಈಗಾಗಲೇ ಬೇರೆ ಚಿತ್ರಗಳಲ್ಲಿ ನಟಿಸಲು ಅವಕಾಶಗಳು ಬರುತ್ತಿವೆ” ಎಂದರು ಚೈತ್ರ. ಫೆಬ್ರವರಿ 18ರಂದು ಸಿನಿಮಾ ತೆರೆಕಾಣುತ್ತಿದೆ. ನರಸಿಂಹ ಕುಲಕರ್ಣಿ ನಿರ್ಮಾಣದ ಚಿತ್ರಕ್ಕೆ ಆದಿಲ್ ನದಾಫ್‌ ಸಂಗೀತ, ಕೆಂಪರಾಜ್‌ ಸಂಕಲನವಿದೆ.

LEAVE A REPLY

Connect with

Please enter your comment!
Please enter your name here