ಭಾರತದ ಆಧುನಿಕ ವೈಜ್ಞಾನಿಕ ಸಂಶೋಧನೆಗಳ ಇತಿಹಾಸ ಹೆಸರು-ದಿನಾಂಕಗಳ ನಡುವೆ ಕಳೆದುಹೋಗುವ ಪಠ್ಯ ಪುಸ್ತಕಗಳಲ್ಲಿ ಓದಿದ್ದು ನೆನಪಿಟ್ಟುಕೊಳ್ಳುವುದು ಹೆಚ್ಚಿನವರಿಗೆ ಕಷ್ಟ. ಶಾಲಾದಿನಗಳಲ್ಲಿ‌ ನೆನಪಿನಲ್ಲಿ ಉಳಿಯಲು ಕಷ್ಟವಾದ ಆ ಇತಿಹಾಸವನ್ನು ಸುಲಭವಾಗಿ ಅರ್ಥಮಾಡಿಸುತ್ತದೆ SonyLIV ನಲ್ಲಿ ಸ್ಟ್ರೀಂ ಆಗುತ್ತಿರುವ ‘ರಾಕೆಟ್ ಬಾಯ್ಸ್’.

ವಿಜ್ಞಾನವನ್ನು ಸಿನಿಮಾ ನೋಡಿ ಅರಿಯಲು ಸಾಧ್ಯವಿಲ್ಲ, ಆದರೆ ವಿಜ್ಞಾನ ನಡೆದು ಬಂದ ದಾರಿಯ ಇತಿಹಾಸ ತಿಳಿಯಬಹುದು. ಅಂಥ ದಾರಿಯ ಪರಿಚಯ ಮಾಡಿಸುತ್ತದೆ ‘ರಾಕೆಟ್ ಬಾಯ್ಸ್‌’ ಎಂಬ ಎಂಟು ಎಪಿಸೋಡ್‌ಗಳ ಸರಣಿ. 1962ರ ಚೀನಾ ಆಕ್ರಮಣದ ಹಿನ್ನೆಲೆಯಲ್ಲಿ ಆರಂಭವಾಗುವ ಸರಣಿ ಮೊದಲ ಅಧ್ಯಾಯದಲ್ಲಿ ಭಾರಿ ಕುತೂಹಲ ಕೆರಳಿಸುತ್ತದೆ. ಅಲ್ಲಿಂದ ಮುಂದಕ್ಕೆ ಹಿಮ್ಮುಖವಾಗಿ ಸಾಗುವ ಕತೆ ಭಾರತದ ವೈಜ್ಞಾನಿಕ ಸಂಶೋಧನೆಗಳ ಹಾದಿಯಲ್ಲಿ ಮೈಲುಗಲ್ಲುಗಳಾಗಿರುವ ಮೂವರು ವಿಜ್ಞಾನಿಗಳ ಮುಂದಿದ್ದ ಸವಾಲುಗಳ ಸುತ್ತ ಸಾಗುತ್ತದೆ. ಅಣುವಿನಷ್ಟೇ ಚಲನಶೀಲವಾಗಿದ್ದ ಹೋಮಿ‌ ಭಾಭಾ, ಮೃದು ಸ್ವಭಾವದ ವಿಕ್ರಂ ಸಾರಾಭಾಯ್ ‌ಹಾಗೂ ಸದಾ ವಿದ್ಯಾರ್ಥಿ ಅಬ್ದುಲ್ ಕಲಾಂ ವ್ಯಕ್ತಿತ್ವಗಳ ಪ್ರಮುಖ ಅಂಶಗಳನ್ನು ತೆರೆಗೆ ತಂದಿದೆ. ಇವರ ಮಧ್ಯೆ ಸಿ.ವಿ.ರಾಮನ್ ಕ್ಯಾಂಪಸ್ ಒಳಗೆ ಬಂದು ಹೋಗುತ್ತಾರೆ.

ಭಾರತದ ಆಧುನಿಕ ವೈಜ್ಞಾನಿಕ ಸಂಶೋಧನೆಗಳ ಇತಿಹಾಸ ಹೆಸರು-ದಿನಾಂಕಗಳ ನಡುವೆ ಕಳೆದುಹೋಗುವ ಪಠ್ಯ ಪುಸ್ತಗಳಲ್ಲಿ ಓದಿದ್ದು ನೆನಪಿಟ್ಟುಕೊಳ್ಳುವುದು ಹೆಚ್ಚಿನವರಿಗೆ ಕಷ್ಟ. ಶಾಲಾದಿನಗಳಲ್ಲಿ‌ ನೆನಪಿನಲ್ಲಿ ಉಳಿಯಲು ಕಷ್ಟವಾದ ಆ ಇತಿಹಾಸವನ್ನು ಸುಲಭವಾಗಿ ಅರ್ಥಮಾಡಿಸುತ್ತದೆ ‘ರಾಕೆಟ್ ಬಾಯ್ಸ್’. ಬಹುತೇಕ‌ ಎಲ್ಲ ಕಂತುಗಳ ಆರಂಭದಲ್ಲಿ ಆ ಕಾಲದ ಪರಿಚಯವನ್ನು ರೇಡಿಯೋ ವಾರ್ತೆಯ ಮೂಲಕ ಪರಿಚಯಿಸಿ ಭೂಮಿಕೆ ಸಿದ್ಧಪಡಿಸುವ ತಂತ್ರ ಫಲ‌ ನೀಡಿದೆ.

ಹೋಮಿ ಭಾಭಾ ಹಾಗೂ ವಿಕ್ರಂ ಸಾರಾಭಾಯ್ ಆ ಕಾಲದ ಸಮಾಜದ ಕೆನೆಪದರದಲ್ಲಿದ್ದವರು. ದೊಡ್ಡವರ ಜತೆಗೆದ್ದ ಸಂಪರ್ಕ ಹಾಗೂ ಆಡಳಿತಗಾರರೊಂದಿಗಿನ ಒಡನಾಟ ಅವರಿಗೆ ತಮ್ಮ ಉದ್ದೇಶ ಈಡೇರಿಸಲು ದೊಡ್ಡ ಮಟ್ಟಿನ ಸಹಾಯ ನೀಡಿತ್ತು ಎಂಬುದು ಸತ್ಯ. ‘ರಾಕೆಟ್ ಬಾಯ್ಸ್’ ಈ ವಿಚಾರವನ್ನೂ ಸ್ಪಷ್ಟವಾಗಿ ಚಿತ್ರಿಸಿದೆ. ಅದರ ಜತೆಜತೆಗೇ ಆ ವಿಜ್ಞಾನಿಗಳು ತಮ್ಮ ಉದ್ದೇಶದಲ್ಲಿ‌ ನಿಸ್ವಾರ್ಥಿಗಳಾಗಿದ್ದರು ಎಂಬುದನ್ನು ಯಾವ ಹಂತದಲ್ಲೂ ವಾಚ್ಯವಾಗಿಸದೆ ತೋರಿಸಿರುವುದು ಗಮನಾರ್ಹ ವಿಚಾರ. ಹಾಗಾಗಿ ಕಾಲ್ಪನಿಕವಾದ ರೇಝಾ ಮೆಹ್ದಿ ಎಂಬ ವಿಜ್ಞಾನಿ ನಿರ್ದೇಶಕರಿಗೆ ಕತೆ ಹೇಳಲು‌ ಅಗತ್ಯವಿರುವ ವಿಲನ್ ಎಂದು ಹೆಚ್ಚು ತಲೆಕೆಡಿಸಿಕೊಳ್ಳದೆ ಬದಿಗಿಡಬಹುದಾದ ಪಾತ್ರ.

ಸ್ವತಂತ್ರ ಭಾರತಕ್ಕೆ ಅಗತ್ಯ‌ ವಿದ್ಯುತ್ ಶಕ್ತಿ ಪೂರೈಕೆಗೆ ಅಣುವಿದ್ಯುತ್ ಒಂದೇ ದಾರಿ ಎಂದು ಪ್ರಧಾನಿಗೆ ಹೋಮಿ ಭಾಭಾ ಮನವರಿಕೆ ಮಾಡುವ ರೀತಿ‌ ನೈಜವೋ ಕಾಲ್ಪನಿಕವೋ ಗೊತ್ತಿಲ್ಲ, ಆದರೆ ಪರಿಣಾಮಕಾರಿ ಎಂಬುದಂತೂ ಖರೆ. ಒಂದೆಡೆ ಹೋಮಿ ಭಾಭಾರ ದೂರದೃಷ್ಟಿ ಬೆರಗುಗೊಳಿಸಿದರೆ‌ ಮತ್ತೊಂದೆಡೆ ಅಣುವಿದ್ಯುತ್ ಎಂಬುದು ಇಂದಿಗೂ ನಮ್ಮಲ್ಲಿ ಅಗತ್ಯ ಪ್ರಮಾಣದಲ್ಲಿ ಸಾಧ್ಯವಾಗದೇ ಇರುವುದು ಸೋಜಿಗ. ಆ ದಿನಗಳಲ್ಲೇ ಕನಸಾಗಿ ಉಳಿದಿದ್ದ ಆತ್ಮನಿರ್ಭರ ಭಾರತ‌ ಇಂದಿಗೂ ಸಾಕಾರಗೊಳ್ಳದಿರುವುದು ದುರಂತ. ಹೀಗಿರುವಾಗ ಭಾರತದ ವೈಜ್ಞಾನಿಕ ಪ್ರಯೋಗಗಳು ಯಶಸ್ಸು ಕಾಣದಿರಲು ವಿದೇಶಿ ಬೇಹುಗಾರರು ನಡೆಸುವ ಪ್ರಯತ್ನದ ಪ್ರಸ್ತಾಪವಿದೆಯೇ ಹೊರತು ಅದಕ್ಕೆ ಪೂರ್ಣ ಪ್ರಮಾಣದ ನ್ಯಾಯ ಒದಗಿಸಲಾಗಿಲ್ಲ. ಈ ವಿಭಾಗದಲ್ಲಿ ಹೆಚ್ಚಿನ ಅಧ್ಯಯನ ನಡೆಸಿ ಚಿತ್ರಕತೆ ಸಿದ್ಧಪಡಿಸಿದ್ದರೆ ಇದೊಂದು ಅತ್ಯುತ್ತಮ ಸರಣಿ‌ಯಾಗುತ್ತಿತ್ತು.

ಚೊಚ್ಚಲ ನಿರ್ದೇಶಕ ಅಭಯ್ ಪನ್ನು ಚಿತ್ರಕತೆಯಲ್ಲಿ ವೈಜ್ಞಾನಿಕ ವಿಷಯಗಳನ್ನು ಪ್ರಸ್ತಾಪಿಸುವ ಅಷ್ಟೂ ದೃಶ್ಯಗಳಲ್ಲಿ ಗೆದ್ದಿದ್ದಾರೆ. ಆದರೆ ಸೈನ್ಸಿ‌ನ ಬದಲು‌ ಸೋಶಿಯಾಲಜಿ, ಬಯಾಲಜಿಗೆ ಕೈ ಹಾಕಿದ ದೃಶ್ಯಗಳಲ್ಲೆಲ್ಲ ಧಾರುಣವಾಗಿ ಸೋತಿದ್ದಾರೆ. ವಿಜ್ಞಾನಿಗಳ ಪ್ರೇಮ ಪ್ರಕರಣ ಬಂದ ಕಡೆಗಳಲ್ಲೆಲ್ಲ ಸರಣಿ‌ ಕುಂಟುತ್ತಾ ಸಾಗುವುದು ಅನುಭವಕ್ಕೆ ಬರುತ್ತದೆ. ವಿಜ್ಞಾನಿಗಳ ಲವ್ ಸ್ಟೋರಿಯನ್ನು ಎಷ್ಟೇ ವೈಭವೀಕರಿಸಿ‌ ಹೇಳಹೊರಟರೂ ಅದು ‘ಮುಂಗಾರು ಮಳೆ’ಯಾಗಲು ಸಾಧ್ಯವಿಲ್ಲ. ಸಾರಾಭಾಯ್ ಕೂಡ ಪ್ರೀತಿಸಿ ಮದುವೆಯಾದರು, ಹೋಮಿ ಭಾಭಾ ಜೀವನದಲ್ಲೂ ಪ್ರೇಮ ವೈಫಲ್ಯವಿತ್ತು ಎಂಬುದನ್ನು ಮನದಟ್ಟು ಮಾಡುವಷ್ಟಕ್ಕೇ ಆ ದೃಶ್ಯಗಳು ಸೀಮಿತಗೊಂಡಿದ್ದರೆ ಸರಣಿಗೊಂದು ಸ್ಪಷ್ಟ ವೇಗವಿರುತ್ತಿತ್ತು. ಈ ಕಾರಣಕ್ಕಾಗಿ ಅಬ್ದುಲ್ ಕಲಾಂ ಪ್ರೀತಿಯ ಬಲೆಗೆ, ವಿವಾಹ ಬಂಧನಕ್ಕೆ ಒಳಗಾಗದೇ ಇದ್ದುದಕ್ಕೆ ಪ್ರೇಕ್ಷಕ ಅತೀವ ಸಂತಸಪಡುತ್ತಾನೆ.

ನಿರ್ಮಾಣ ವಿಚಾರಕ್ಕೆ ಬಂದರೆ ಕತೆ ನಡೆಯುವ ಕಾಲಘಟ್ಟವನ್ನು ಹೆಚ್ಚಿನ ಕಡೆ ಉತ್ತಮವಾಗಿ ಚಿತ್ರಿಸಲಾಗಿದೆ. ಆದರೆ ಬೆಂಗಳೂರಿನ ಐಐಎಸ್‌ಸಿ ಎಂದು ತೋರಿಸಿದ ಕಟ್ಟಡ ವಾಸ್ತವದಲ್ಲಿ ಬೆಂಗಳೂರೇ ಅಲ್ಲ ಎಂಬ ಗುಟ್ಟನ್ನು ಹಿನ್ನೆಲೆಯ ಬೆಟ್ಟಗುಡ್ಡ ಬಹುಬೇಗ ಬಿಟ್ಟುಕೊಡುತ್ತದೆ. ಅಲ್ಲದೆ ಭಾಭಾ ಹಾಗೂ ಸಾರಾಭಾಯ್ ಆ ಕಟ್ಟಡದ ಮೇಲಿದ್ದ ಯುನಿಯನ್ ಜಾಕ್ ಕೆಳಗಿಳಿಸಿ ತಿರಂಗಾ ಹಾರಿಸಿದ್ದಾರೆ ಎಂದಾಗ ಅಂಥ ಘಟನೆ ನಿಜಕ್ಕೂ ನಡೆದಿತ್ತೇ‌ ಎಂಬ ಅನುಮಾನ ಕಾಡುತ್ತದೆ. ಅವರಿಬ್ಬರ ವ್ಯಕ್ತಿತ್ವ ಅನುಮಾನಾಸ್ಪದ ಎಂದಲ್ಲ, ಅವರು ಬಾವುಟವನ್ನು ಆರನೇ ಮಹಡಿಯಿಂದ ಹಾರಿಸಿದರು ಎಂದಾಗ ವಿಧಾನ ಸೌಧದ ನಾಲ್ಕನೇ ಮಹಡಿಯಲ್ಲಿ ಕಚೇರಿ ಹೊಂದಿದ್ದ ಕೌ ಇನ್‌ಸ್ಪೆಕ್ಟರ್‌ ಕೃಷ್ಣ ನೆನಪಾಗುತ್ತಾನೆ.

ಇದರ‌ ಜತೆಗೆ ಸಂಭಾಷಣೆಯೂ ಕತೆ ನಡೆಯುವ ಕಾಲಘಟ್ಟಕ್ಕೆ ನ್ಯಾಯ ಒದಗಿಸಿಲ್ಲ. ಎಪ್ಪತ್ತು-ಎಂಭತ್ತು ವರ್ಷಗಳ ಹಿಂದೆ ಬಳಕೆಯಾಗುತ್ತಿದ್ದ ಪದಪುಂಜದ ಬದಲು‌ ಹೆಚ್ಚಿನ ಕಡೆ ಭಾಷೆಯ ಬಳಕೆ ಈಗಿನ ಧಾಟಿಯಲ್ಲಿ ಇರುವುದು ಥಟ್ಟನೆ ಗಮನಕ್ಕೆ ಬರುವಂತಿದೆ. ಈ ತೊಡಕುಗಳನ್ನು ನಿಭಾಯಿಸಿ ಮುಂದಕ್ಕೆ ಸಾಗುವುದು ಜಿಮ್ ಸರ್ಭ ಹಾಗೂ ಇಷ್ವಾಕ್ ಸಿಂಗ್ ಅಭಿನಯ.

LEAVE A REPLY

Connect with

Please enter your comment!
Please enter your name here