ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ‘ಫ್ಯಾಮಿಲಿ ಪ್ಯಾಕ್’ ಚಿತ್ರ ಮನೆಯಲ್ಲಿ ದೊಡ್ಡ ಟಿವಿಯಲ್ಲಿ ಹಾಕಿ ಫ್ಯಾಮಿಲಿ ಜತೆ ಕೂತು ಆನಂದಿಸಬಹುದಾದ ಸಿನಿಮಾ.
ಒಂದೆರಡು ಕೆಟ್ಟ ಸಿನಿಮಾಗಳ ನಂತರ ಪಿಆರ್ಕೆ ಪ್ರೊಡಕ್ಷನ್ಸ್ನಿಂದ ಒಂದೊಳ್ಳೆಯ ಸಿನಿಮಾ ಬಂದಿದೆ. ಭ್ರಾಮಿಕ ಕತೆ, ಸ್ಪಷ್ಟ ಭೂಮಿಕೆಯ ಚಿತ್ರಕತೆ, ಎಲ್ಲಿ ಹೇಗಿರಬೇಕೋ ಅಲ್ಲಿ ಹಾಗಿರುವ ಸಂಭಾಷಣೆ. ಇವುಗಳ ಜತೆಗೆ ಮಿತಿಯೊಳಗಿನ ನಟನೆಯ ಫ್ಯಾಮಿಲಿ ಪ್ಯಾಕ್ ಅತೀವ ಪ್ರೇಮದ ಎರಡು ಕತೆಗಳನ್ನು ಜತೆಜತೆಯಾಗಿ ಹೇಳುವ ಸಿನಿಮಾ.
ಹಾರರ್ ಸಿನಿಮಾ ಎಂಬ ಅನುಮಾನವನ್ನು ಆರಂಭದಲ್ಲಿ ಮೂಡಿಸುವ ‘ಫ್ಯಾಮಿಲಿ ಪ್ಯಾಕ್’ ನಂತರದ ಘಟ್ಟದಲ್ಲಿ ಬೇರೆಯದೇ ದಾರಿ ಹಿಡಿಯುತ್ತದೆ. ಇಬ್ಬರ ಜಗಳದ ಜಡುವೆ ಬಡವಾದ ಕೂಸು ಅಭಿಯ (ಲಿಖಿತ್ ಶೆಟ್ಟಿ) ಒಂಟಿತನದ ಕತೆಯಾಗುತ್ತದೆ. ಶೋಕಿಲಾಲ ತಂದೆ ಮತ್ತು ಬೇಸತ್ತ ಅಮ್ಮನ ನಡುವಿನ ವಿಚ್ಛೇದನದಿಂದಾಗಿ ಆರಾರು ತಿಂಗಳು ಒಬ್ಬೊಬ್ಬರ ಜತೆ ಬದುಕುವ ಕಾಂಟ್ರಾಕ್ಟಿನಲ್ಲಿರುವ ಅಭಿಗೆ ಬದುಕೆಂದರೆ ಒಂದು ಕರಾರು ಎಂಬಷ್ಟೇ ಬೋರು. ವೈದ್ಯಕೀಯ ವಿದ್ಯಾಭ್ಯಾಸದ ಕೊನೆಯ ಹಂತದಲ್ಲಿರುವ ಅವನಿಗೆ ಇಷ್ಟವಾದ ಹುಡುಗಿಗೆ ತನ್ನ ಪ್ರೀತಿ ಹೇಳಿಕೊಳ್ಳಲೂ ಆಗದಷ್ಟು ಹಿಂಜರಿಕೆ. ಇನ್ಸ್ಟಾಗ್ರಾಮ್ ರೀಲ್ಸ್ ಮಾಡುತ್ತಾ ಕ್ರಿಯಾಶೀಲವಾಗಿರುವ ಭೂಮಿಕಾಳ (ಅಮೃತಾ) ಎದುರು ಹೃದಯ ಬಿಚ್ಚಿಡಲು ಯಾರಿಗೇ ಆದರೂ ದೃಢ ಮನಸ್ಸು ಬೇಕೇ ಬೇಕು. ಹೀಗಿದ್ದಾಗ ತನ್ನನ್ನು ಕಣ್ಣೆತ್ತಿಯೂ ನೋಡದ ಹುಡುಗಿಗೆ ಪ್ರೀತಿ ಹೇಳಿಕೊಳ್ಳಲಾರದೆ, ನುಂಗಿಕೊಳ್ಳಲೂ ಆಗದೆ ಎಲ್ಲರಿಂದಲೂ ತಿರಸ್ಕೃತನಾದ ಭಾವನೆ ಬಂದಾಗ ಆತನ ಆಯ್ಕೆ ಆತ್ಮಹತ್ಯೆ.
ಇನ್ನೇನು ಸಾಯಬೇಕು ಎಂದು ನಿರ್ಧರಿಸಿ ಹೊರಟಾಗ ದೇವರಂತೆ ಬಂದು ಕಾಪಾಡುವುದು ದೆವ್ವದ ಪಾತ್ರಧಾರಿ ರಂಗಾಯಣ ರಘು. ಒಂದಾನೊಂದು ಕಾಲದಲ್ಲಿ ತಾನು ಕೆಲಸ ಮಾಡುವ ಅಂಗಡಿ ಮಾಲೀಕನ ಮಗಳನ್ನು ಬಲೆಗೆ ಹಾಕಿ, ಅದು ಅವಳ ಅಪ್ಪನಿಗೆ ತಿಳಿದು ಒಂದು ಗಡಿಬಿಡಿಯ ಸನ್ನಿವೇಶ ಉಂಟಾದಾಗ ಆತ ಸಾವು ನೋಡಬೇಕಾಗುತ್ತದೆ. ಆದರೆ ಅಕಾಲ ಮರಣವಾದ ಕಾರಣ ಆತನಿಗೆ ಪರಲೋಕಕ್ಕೆ ಪ್ರವೇಶ ಸಿಗದೆ ಭೂಲೋಕದಲ್ಲೇ ಉಳಿಯಬೇಕಾಗುವ ಫ್ಯಾಂಟಸಿ ‘ಫ್ಯಾಮಿಲಿ ಪ್ಯಾಕ್’ ಕತೆಯ ಬಂಡಿಯನ್ನು ಮುಂದೊಯ್ಯುವ ಚಕ್ರ. ತರ್ಕವನ್ನು ಮೀರಿದ ಈ ಕತೆಯಲ್ಲಿ ಅಭಿಗೆ ತನ್ನ ಹುಡುಗಿಯನ್ನು ಸೆಳೆಯಲು ಮಂಜುನಾಥ (ರಂಗಾಯಣ ರಘು) ಕೊಡುವ ಸಲಹೆಗಳು ತರ್ಕಬದ್ಧವಾಗಿಯೇ ಇವೆ. ಪ್ರೀತಿಗೆ ಬಂದೊದಗುವ ಆಘಾತವೂ ಅತಾರ್ಕಿಕವಲ್ಲ. ಎರಡು ಕುಟುಂಬಗಳ ನಡುವೆ ಇಬ್ಬರಿಗೂ ಗೊತ್ತಿಲ್ಲದ ಹಳೆಯದೊಂದು ಕನೆಕ್ಷನ್ ಕೊಟ್ಟಿರುವುದು ಎರಡೂ ಫ್ಯಾಮಿಲಿಗಳನ್ನು ಒಂದು ಪ್ಯಾಕ್ನೊಳಗೆ ಹಾಕಿದೆ.
ಹಾಡುಗಳ ವಿಚಾರಕ್ಕೆ ಬಂದರೆ ಸಿನಿಮಾದ ಕೊನೆಯಲ್ಲಿ ಹೆಸರುಗಳು ಬರುವಾಗ ‘ಹಾಡುಗಳು’ ಎಂಬುದನ್ನು ಕಂಡಾಗಲೇ ಈ ಚಿತ್ರದಲ್ಲೂ ಹಾಡುಗಳು ಬಂದು ಹೋಗಿವೆ ಎಂದು ನೆನಪಾಗುವುದು. ಆದರೆ ದೃಶ್ಯಕ್ಕೆ ಒಪ್ಪುವಂಥ ಹಿನ್ನೆಲೆ ಸಂಗೀತ ಅಚ್ಚುಕಟ್ಟಾಗಿದೆ.
ಕತೆ ಹೀರೋ ಮತ್ತು ಹೀರೋಯಿನ್ ಸುತ್ತ ನಡೆದರೂ ಚಿತ್ರಕತೆಯಲ್ಲಿ ಬಹುಪಾಲು ಪಾತ್ರವಿರುವುದು ರಂಗಾಯಣ ರಘುವಿಗೆ. ಮಿತಿಮೀರಿ ಅಭಿನಯಿಸದ ಕಾರಣ ಖುಷಿಕೊಡುವ ಅವರ ಪಾತ್ರ ಸಿನಿಮಾದ ಎಲ್ಲೆಡೆಯೂ ಆವರಿಸಿದೆ. ಹಾಗಾಗಿ ನಾಯಕನ ಪಟ್ಟ ಅವರದೇ ಎಂದರೂ ಅಡ್ಡಿಯಿಲ್ಲ. ನಾಗಭೂಷಣ, ಚಂದು ಗೌಡ ಪಾತ್ರಗಳಿಗೆ ನಟನೆಗೆ ಹೆಚ್ಚಿನ ಅವಕಾಶವಿಲ್ಲ. ಅಚ್ಯುತ ಕುಮಾರ್ ಸಂಭಾಷಣೆ ಹೇಳುವ ಸನ್ನಿವೇಶಗಳಿಗಿಂತ ಮಾತಿಲ್ಲದೇ ಅಭಿನಯಿಸಿದ ಕಡೆಗಳಲ್ಲಿ ಹೆಚ್ಚು ನಗಿಸುತ್ತಾರೆ. ಬೇಜವಾಬ್ದಾರಿ ತಂದೆ, ಲಂಪಟ ಪ್ರೇಮಿಯ ಅವರ ಪಾತ್ರಕ್ಕೆ ಅಭಿನಯದ ಹೊರತು ಬೇರೆ ಪರಿಕರಗಳಿಲ್ಲ. ಆದಾಗ್ಯೂ ಅವರು ಪಾತ್ರಕ್ಕೆ ಒದಗಿಸಿದ ನ್ಯಾಯ ಪ್ರಶಂಸಾರ್ಹ. ಪದ್ಮಜಾ ರಾವ್ ಏರುಶೃತಿಯ ಸಂಭಾಷಣೆ ಬೇಸತ್ತ ತಾಯಿಯ ಪಾತ್ರಕ್ಕೆ ಒಗ್ಗುತ್ತದೆ. ಸಿಹಿಕಹಿ ಚಂದ್ರು ಅಭಿನಯ ಹಾಜ್ಮೋಲಾದಂತೆ, ಸ್ವಲ್ಪ ಹುಳಿ ಸ್ವಲ್ಪ ಸಿಹಿ. ಇವರೆಲ್ಲರ ನಡುವೆ ಹಳೆಯ ಕಾಲದ ಪ್ರೇಯಸಿಯಾಗಿಯೂ ಹೊಸ ಕಾಲದ ತಾಯಿಯಾಗಿಯೂ ಶರ್ಮಿತಾ ಗೌಡ ಇಷ್ಟವಾಗುತ್ತಾರೆ. ನಾಯಕ ಮತ್ತು ನಾಯಕಿಯ ನಟನೆಯನ್ನು ತಕ್ಕಡಿಗೆ ಹಾಕಿದಾಗ ಗೆಲ್ಲುವುದು ಮಾತ್ರ ಅಮೃತಾ.
ಇದೊಂದು ವೇಗದ ಚಿತ್ರಕತೆಯೇನಲ್ಲ. ಆದರೆ ಅನಗತ್ಯ ದೃಶ್ಯಗಳಿಲ್ಲದ ಕಾರಣ ಅಷ್ಟಾಗಿ ನಿಧಾನಗತಿಯೂ ಇಲ್ಲ. ಹಾಗಾಗಿ ನಿರ್ದೇಶಕ ಅರ್ಜುನ್ ಕುಮಾರ್ ಪ್ರಯತ್ನ ಹೆಚ್ಚಿನ ಕಡೆಗಳಲ್ಲಿ ಫಲ ನೀಡಿದೆ. ನಾಯಕ ಲಿಖಿತ್ ಶೆಟ್ಟಿಗೆ ಎರಡು ಫೈಟ್ಗಳನ್ನು ಕೊಟ್ಟಿರುವುದು ಅಭಿನಯದಲ್ಲಿನ ಅವರ ಕೊರತೆಗಳನ್ನು ಮುಚ್ಚುವುದಕ್ಕೋ ಅಥವಾ ನಿರ್ಮಾಣದಲ್ಲೂ ಅವರ ಪಾಲು ಇರುವುದಕ್ಕೋ ಎಂಬ ಪ್ರಶ್ನೆಗೆ ಸತ್ಯ ನುಡಿಯುವುದು ನಿರ್ದೇಶಕರಿಂದ ಮಾತ್ರ ಸಾಧ್ಯ.
ಸಿನಿಮಾ ಮುಗಿದ ಮೇಲೂ ಅಚ್ಚೊತ್ತಿದಂತೆ ನೆನಪಲ್ಲಿ ಉಳಿಯುವುದು ಇಬ್ಬರು. ಒಂದೇ ದೃಶ್ಯದಲ್ಲಿ ಬರುವ ದಿ.ಶಿವರಾಮಣ್ಣ ಒಬ್ಬರಾದರೆ ಯಾವುದೇ ಪಾತ್ರ ನಿರ್ವಹಿಸದೆ ಸೆಟ್ಗೆ ಬಂದು ಹೋಗುವ ದಿ. ಪುನೀತ್ ರಾಜಕುಮಾರ್. ಶೂಟಿಂಗೆ ಸೆಟ್ಗೆ ಅವರು ಬಂದು ಹೋಗಿರುವ ತುಣುಕುಗಳು ಹೃದಯವಂತ ಫ್ಯಾಮಿಲಿ ಮ್ಯಾನ್ನ ಪಾತ್ರಪರಿಚಯವನ್ನು ಮತ್ತೊಮ್ಮೆ ಮಾಡಿಸುತ್ತದೆ.