ತನುಷ್‌ ಶಿವಣ್ಣ ನಿರ್ಮಿಸಿ, ನಟಿಸಿರುವ ‘Mr ನಟ್ವರ್‌ ಲಾಲ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಲವ ನಿರ್ದೇಶನದ ಕ್ರೈಂ – ಥ್ರಿಲ್ಲರ್‌ ಜಾನರ್‌ ಸಿನಿಮಾದ ನಾಯಕಿಯಾಗಿ ಸೋನಾಲ್‌ ಮೊಂಟೆರೊ ನಟಿಸಿದ್ದಾರೆ. ಇದೇ ಫೆಬ್ರವರಿ 23ರಂದು ಸಿನಿಮಾ ತೆರೆಕಾಣಲಿದೆ.

Tanush Cinema ಬ್ಯಾನರ್‌ ಅಡಿಯಲ್ಲಿ ತನುಷ್ ಶಿವಣ್ಣ ನಿರ್ಮಿಸಿ, ನಾಯಕನಾಗಿ ನಟಿಸಿರುವ ‘Mr ನಟ್ವರ್ ಲಾಲ್’ ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಕುಣಿಗಲ್ ಶಾಸಕರಾದ ಡಾ ರಂಗನಾಥ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ನಿರ್ಮಾಪಕರಾದ ಭಾ ಮ ಹರೀಶ್, ಶಿಲ್ಪ ಶ್ರೀನಿವಾಸ್, ಟಿ ಪಿ ಸಿದ್ದರಾಜು, ಚಿಂಗಾರಿ ಮಹದೇವ್, ಕುಶಾಲ್, ಭಾ ಮ ಗಿರೀಶ್, ವಿತರಕರ ವಲಯದ ಅಧ್ಯಕ್ಷರಾದ ವೆಂಕಟೇಶ್, ನಿರ್ದೇಶಕ ಹಾಗೂ ಗೀತರಚನೆಕಾರ ಚೇತನ್ ಮುಂತಾದವರು ಸಮಾರಂಭಕ್ಕೆ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ನಿರ್ದೇಶಕ ವಿ ಲವ ಈ ಕುರಿತು ಮಾತನಾಡಿ, ‘ಇದೊಂದು ಕ್ರೈಂ ಥ್ರಿಲ್ಲರ್, ಆಕ್ಷನ್ ಚಿತ್ರ. ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಈ ಚಿತ್ರಕ್ಕೆ ಸ್ಪೂರ್ತಿ. ಟ್ರೇಲರ್‌ನಲ್ಲಿ ಈ ಚಿತ್ರದ ಎರಡನೇ ಭಾಗ ಬರುವ ಸುಳಿವು ಕೂಡ ನೀಡಿದ್ದೇವೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎನ್ನುತ್ತಾರೆ. ನಾಗಭೂಷಣ, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್, ಸುಂದರರಾಜ್, ಕಾಂತರಾಜು ಕಡ್ಡಿಪುಡಿ, ಸುಜಯ್ ಶಾಸ್ತ್ರಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

ತನುಷ್‌ ಶಿವಣ್ಣ ಅವರು ನಾಯಕನಟನಾಗಿ ನಟಿಸಿರುವ 4ನೇ ಚಿತ್ರವಿದು. ನಿರ್ಮಾಣದ ಹೊಣೆಯೂ ಅವರದೆ. ‘ಚಿತ್ರದಲ್ಲಿ ನಾನು ಎಂಟು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಒಂದು ಹಂತದಲ್ಲಿ ಹಣದ ಸಮಸ್ಯೆಯಿಂದಾಗಿ ಸಿನಿಮಾ ನಿಲ್ಲಿಸಿ ಬಿಡೋಣ ಅಂದುಕೊಂಡೆ. ಆದರೆ ಗೆಳೆಯರ ಸಹಕಾರ ಮತ್ತು ಚಿತ್ರತಂಡದ ಹೊಂದಾಣಿಕೆ ಮನೋಭಾವದಿಂದ ಚಿತ್ರ ಚೆನ್ನಾಗಿ ಬಂದಿದೆ’ ಎನ್ನುತ್ತಾರೆ ತನುಷ್‌. ನಟಿ ಸೋನಾಲ್‌ ಮೊಂಟೆರೊ ಈ ಸಿನಿಮಾದಲ್ಲಿ ನಂದಿನಿ ಹೆಸರಿನ ಪಾತ್ರ ನಿರ್ವಹಿಸಿದ್ದಾರೆ. ಹರಣಿ ಶ್ರೀಕಾಂತ್, ರಘು ರಮಣಕೊಪ್ಪ, ಕಾಕ್ರೋಜ್ ಸುಧೀ, ವಿಜಯ್ ಚೆಂಡೂರ್ ಹಾಗೂ ಛಾಯಾಗ್ರಾಹಕ ವಿಲಿಯಂ ಡೇವಿಡ್ ಚಿತ್ರದ ಕುರಿತು ಮಾತನಾಡಿದರು. ಇದೇ ಫೆಬ್ರವರಿ 23ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here