ನಟ ಗುರುಪ್ರಸಾದ್‌ ತೆರೆಗೆ ಮರಳುತ್ತಿದ್ದಾರೆ. ಅವರ ನಿರ್ದೇಶನದ ‘ಎದ್ದೇಳು ಮಂಜುನಾಥಾ 2’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದ ಕಥಾನಾಯಕ ಅವರೇ ಎನ್ನುವುದು ವಿಶೇಷ. ಕ್ರೈಂ – ಕಾಮಿಡಿ ಜಾನರ್‌ನ ಸಿನಿಮಾದ ನಾಯಕಿಯಾಗಿ ರಚಿತಾ ಮಹಾಲಕ್ಷ್ಮಿ ನಟಿಸಿದ್ದಾರೆ.

‘ಮಠ’, ‘ಎದ್ದೇಳು ಮಂಜುನಾಥಾ!’ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ಗುರುಪ್ರಸಾದ್‌ ಬಹಳ ದಿನಗಳ ನಂತರ ತೆರೆಗೆ ಮರಳುತ್ತಿದ್ದಾರೆ. ಅವರು ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ, ನಿರ್ದೇಶಿಸಿರುವ ಸಿನಿಮಾ ತೆರೆಗೆ ಸಿದ್ಧವಾಗುತ್ತಿದೆ. ತಮ್ಮ ಈ ಹಿಂದಿನ ಜನಪ್ರಿಯ ‘ಎದ್ದೇಳು ಮಂಜುನಾಥಾ!’ ಸಿನಿಮಾದ ಶೀರ್ಷಿಕೆಯ ಮುಂದೆ ಅವರು ‘2’ ಸೇರಿಸಿದ್ದಾರೆ. ಆದರೆ ಇದು ಮೂಲ ಚಿತ್ರದ ಮುಂದುವರಿಕೆ ಅಲ್ಲ. “ಇದು ಹೊಸ ಕತೆ. ಕ್ರೈಂ – ಕಾಮಿಡಿ ಜಾನರ್‌ನ ಕತೆಯಾಗಿದ್ದು, ಹಾಸ್ಯ, ವಿಚಾರ, ವಿಡಂಬನೆಯಿರುತ್ತದೆ” ಎನ್ನುತ್ತಾರೆ ಗುರುಪ್ರಸಾದ್.‌ ಚಿತ್ರದ ಕಥಾನಾಯಕ ಅವರೇ ಎನ್ನುವುದು ವಿಶೇಷ.

ಸುಮಾರು ಏಳೆಂಟು ವರ್ಷಗಳ ಹಿಂದೆ ಅವರು ಮಾಡಿಕೊಂಡಿದ್ದ ಕತೆಯಿದು. ಚಿತ್ರದಲ್ಲಿ ತಾವೇ ನಟಿಸಬೇಕು ಎಂದುಕೊಂಡಿದ್ದರಂತೆ. ಕೋವಿಡ್‌ಗೂ ಮುನ್ನ ಅವರು ಜಗ್ಗೇಶ್‌ ನಾಯಕತ್ವದಲ್ಲಿ ‘ರಂಗನಾಯಕ’ ಸಿನಿಮಾ ಘೋಷಿಸಿದ್ದರು. ಈ ಚಿತ್ರ ಸೆಟ್ಟೇರುತ್ತಿದ್ದಂತೆ ಕೋವಿಡ್‌, ಲಾಕ್‌ಡೌನ್‌ ಸಂಕಷ್ಟಗಳು ಎದುರಾದವು. ಈ ಅವಧಿಯಲ್ಲಿ ಅವರು ‘ಎದ್ದೇಳು ಮಂಜುನಾಥಾ2’ ಸಿನಿಮಾದ ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ಹತ್ತಾರು ಸಮಾನ ಮನಸ್ಕ ಸ್ನೇಹಿತರು ಜೊತೆಗೂಡಿ ಈ ಸಿನಿಮಾ ನಿರ್ಮಾಣಕ್ಕೆ ಕೈಹಾಕಿ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಒಂದು ರೀತಿ ಇದು ಕ್ರೌಡ್‌ ಫಂಡಿಂಗ್‌ ಸಿನಿಮಾ. ಮುಂದಿನ ದಿನಗಳಲ್ಲಿ ಹೀಗೆ ಸ್ನೇಹಿತರ ಸಹಕಾರದಿಂದ ವರ್ಷಕ್ಕೆರೆಡು ಸ್ವಮೇಕ್‌ ಸಿನಿಮಾಗಳನ್ನು ಮಾಡುವು ಯೋಜನೆ ಅವರದು.

“ಈ ಚಿತ್ರದಲ್ಲಿ ಸಾಕಷ್ಟು ಬಾಂಬ್‌ಗಳಿರುತ್ತವೆ!” ಎನ್ನುತ್ತಾರೆ ಗುರುಪ್ರಸಾದ್‌. ಲಾಕ್‌ಡೌನ್‌ ಅವಧಿಯಲ್ಲಿ ಸಿನಿಮಾ ಮಾಡಲು ಬಂದ ನಿರ್ಮಾಪಕರಿಂದ ತಮಗೆ ಮೋಸವಾಗಿದೆ ಎಂದು ಅವರು ಹೇಳಿಕೊಳ್ಳುತ್ತಾರೆ. ಹೀಗೆ ಮೋಸ ಮಾಡಿದ ಚಿತ್ರನಿರ್ಮಾಪಕರು, ಗಾಂಧಿನಗರದ ಮೋಸಗಳು, ಪ್ರಸ್ತುತ ರಾಜಕೀಯ, ಸಾಮಾಜಿಕ ಸಂದರ್ಭಗಳನ್ನು ಅವರು ಈ ಸಿನಿಮಾದಲ್ಲಿ ವಿಡಂಬನೆಯ ರೂಪದಲ್ಲಿ ಹೇಳಲಿದ್ದಾರಂತೆ. ಈ ವಿಚಾರಗಳಿಗೇ ಅವರು ‘ಬಾಂಬ್‌’ಗಳು ಇರುತ್ತವೆ ಎಂದಿರುವುದು. ಈ ಹೇಳಿಕೆಗಳಿಗೆ ವಿರೋಧ ವ್ಯಕ್ತವಾಗದಿರಲು ಗುರಾಣಿಯಾಗಿ ಅವರು ಚಿತ್ರಕಥೆ ರಚನೆ ಸಂದರ್ಭದಲ್ಲೇ ತಮ್ಮ ವಕೀಲರೊಂದಿಗೆ ಚರ್ಚಿಸಿದ್ದಾರೆ.

ಕಳೆದ ಏಳೆಂಟು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿರುವ ರಚಿತಾ ಮಹಾಲಕ್ಷ್ಮಿ ಈ ಸಿನಿಮಾದ ನಾಯಕನಟಿ. ಸದ್ಯ ಅವರು ತಮಿಳು ಕಿರುತೆರೆಯ ಬ್ಯುಸಿ ನಟಿ. ‘ಎದ್ದೇಳು ಮಂಜುನಾಥಾ 2’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. “ಕಲಾವಿದರಿಗೆ ಉತ್ತಮ, ಕ್ರಿಯಾಶೀಲ ನಿರ್ದೇಶಕರು ಸಿಗಬೇಕು. ಗುರುಪ್ರಸಾದ್‌ ಅವರ ರೂಪದಲ್ಲಿ ನನಗೆ ಅಂತಹ ಅವಕಾಶ ಲಭಿಸಿದೆ. ನನ್ನ ಪ್ರಕಾರ ಚಿತ್ರದಲ್ಲಿ ನಾನು ನಿರ್ವಿಸಿರುವ ಪಾತ್ರದ ಚಿತ್ರಣವನ್ನು ಯಾರೂ ಊಹಿಸಿರಲಿಕ್ಕೆ ಸಾಧ್ಯವೇ ಇಲ್ಲ” ಎನ್ನುತ್ತಾರೆ ರಚಿತಾ. ಈ ಹಿಂದೆ ಅವರ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದ ಅನೂಪ್‌ ಸಿಳೀನ್‌ ಅವರ ಸಂಗೀತ ಚಿತ್ರಕ್ಕಿದೆ. ಮುಂದಿನ ಎರಡು ವಾರಗಳಲ್ಲಿ ಟ್ರೈಲರ್‌ ರಿಲೀಸ್‌ ಮಾಡಲಿರುವ ಗುರುಪ್ರಸಾದ್‌ ಏಪ್ರಿಲ್‌ ಕೊನೆಗೆ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.

LEAVE A REPLY

Connect with

Please enter your comment!
Please enter your name here