Biffesಗೆ ‘ಪೆದ್ರೊ’ ಸಿನಿಮಾ ಆಯ್ಕೆಯಾಗಿಲ್ಲ ಎನ್ನುವ ವಿಚಾರಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಸಿನಿಮಾ ಇದೀಗ ಕೇರಳ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ರಿಷಬ್‌ ಶೆಟ್ಟಿ ನಿರ್ಮಾಣ, ನಟೇಶ್‌ ಹೆಗ್ಡೆ ನಿರ್ದೇಶನದಲ್ಲಿ ಸಿನಿಮಾ ಕೇರಳ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ. ತ್ರಿವೆಂಡ್ರಮ್‌ನಲ್ಲಿ ಮಾರ್ಚ್‌ 18ರಿಂದ 25ರವರೆಗೆ ನಡೆಯಲಿರುವ ಚಿತ್ರೋತ್ಸವದ ‘ವರ್ಲ್ಡ್‌ ಸಿನಿಮಾ’ ವಿಭಾಗದಲ್ಲಿ ‘ಪೆದ್ರೊʼ ಸಿನಿಮಾ ಪ್ರದರ್ಶನಗೊಳ್ಳಲಿದೆ. ನಿರ್ಮಾಪಕ ರಿಷಬ್‌ ಶೆಟ್ಟಿ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಸಿನಿಮಾದ ಟ್ರೈಲರ್‌ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಚೀನಾದ ಪಿಂಗ್ಯಾವೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಚಿತ್ರಕ್ಕೆ ಗೌರವ ಲಭಿಸಿತ್ತು. ಅತ್ಯುತ್ತಮ ನಿರ್ದೇಶನಕ್ಕಾಗಿ ನಟೇಶ್‌ ಹೆಗ್ಡೆ ಪ್ರಶಸ್ತಿ ಪಡೆದಿದ್ದರು. ಸಹಜವಾಗಿಯೇ ಈ ಸಿನಿಮಾ Biffesಗೆ ಆಯ್ಕೆಯಾಗದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಸಿನಿಮಾ ಕೇರಳ ಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು, ನಂತರ ತ್ರಿಷೂರ್‌ ಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಳ್ಳಲಿದೆ.

ಚಿತ್ರದ ನಿರ್ದೇಶಕ ನಟೇಶ್‌ ಹೆಗ್ಡೆ ಈ ಬಗ್ಗೆ ಮಾತನಾಡಿ, “ನಮ್ಮಲ್ಲೇ ನಡೆಯುವ Biffes ನಲ್ಲಿ ನಮ್ಮ ಸಿನಿಮಾ ಪ್ರದರ್ಶನಗೊಳ್ಳಬೇಕಿತ್ತು ಎನ್ನುವುದು ನಮ್ಮೆಲ್ಲರ ಅಭಿಲಾಷೆಯಾಗಿತ್ತು. ಸಬೂಬುಗಳನ್ನು ಹೇಳಿ ನಮ್ಮ ಚಿತ್ರವನ್ನು ಹೊರಗಿಟ್ಟರು. ಸ್ಪರ್ಧೆ ವಿಭಾಗದಲ್ಲಾದರೆ ಸೆನ್ಸಾರ್‌ ಸರ್ಟಿಫಿಕೇಟ್‌ ಅಗತ್ಯವಿತ್ತು. ಅವರಿಗೆ ಆಯ್ಕೆ ಮಾಡಬೇಕು ಎನ್ನುವ ಉದ್ದೇಶವಿದ್ದಿದ್ದರೆ ‘ಪೆದ್ರೊ’ ಏಷ್ಯನ್‌ ಇಲ್ಲವೇ ವರ್ಲ್ಡ್‌ ಸಿನಿಮಾ ವಿಭಾಗದಲ್ಲಾದರೂ ಆಯ್ಕೆಯಾಗಿರುತ್ತಿತ್ತು. ಈ ಬಗ್ಗೆ ಖಂಡಿತ ನಮ್ಮ ತಂಡಕ್ಕೆ ಬೇಸರವಾಗಿದೆ” ಎಂದರು. ಸಿನಿಮಾ ಕೇರಳ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಅವರಿಗೆ ಖುಷಿ ತಂದಿದೆ. ಇದು ಭಾರತದಲ್ಲಿ ನಡೆಯುತ್ತಿರುವ ‘ಪೆದ್ರೊ’ದ ಮೊದಲ ಪಬ್ಲಿಕ್‌ ಸ್ಕ್ರೀನಿಂಗ್‌. ಹಾಗಾಗಿ ಚಿತ್ರತಂಡದ ಎಲ್ಲರೂ ಸ್ಕ್ರೀನಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಚಿತ್ರದ ಪ್ರಮುಖ ಪಾತ್ರದಲ್ಲಿ (ಪೆದ್ರೊ) ನಟೇಶ್ ಹೆಗ್ಡೆ ಅವರ ತಂದೆ ಗೋಪಾಲ್ ಹೆಗ್ಡೆ ಅಭಿನಯಿಸಿದ್ದಾರೆ. ನಟ ರಾಜ್‌ ಬಿ. ಶೆಟ್ಟಿ, ರಾಮಕೃಷ್ಣಭಟ್ ದುಂಡಿ, ಮೇದಿನಿ ಕೆಳಮನೆ, ನಾಗರಾಜ್ ಹೆಗ್ಡೆ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶಿರಸಿ ಬಳಿಯ ಉಮ್ಮಚಿಗಿ ಗ್ರಾಮದ ನಟೇಶ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕುರ್ಲಿ’, ‘ನಮಗೆ ನಾವು ಗೋಡೆಗೆ ಮಣ್ಣು’ ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಅವರಿಗೆ ‘ಪೆದ್ರೊ’ ಮೊದಲ ಫೀಚರ್ ಫಿಲ್ಮ್‌. ತಮ್ಮೂರಿನ ಸುತ್ತಮುತ್ತಲೇ ಸಿನಿಮಾ ಚಿತ್ರಿಸಿದ್ದಾರೆ. ಕ್ರಿಶ್ಚಿಯನ್ ಧರ್ಮದ ಎಲೆಕ್ಟ್ರೀಷಿನ್‌ ಆಕಸ್ಮಿಕವೊಂದರಲ್ಲಿ ಗೋವಿನ ಸಾವಿಗೆ ಕಾರಣನಾಗುತ್ತಾನೆ. ಈ ಘಟನೆಯ ನಂತರ ಸುತ್ತಲಿನ ಸಮಾಜ ಅವನನ್ನು ನೋಡುವ ಬಗೆ, ಆತನ ತಳಮಳಗಳನ್ನು ನೂರಾ ಎಂಟು ನಿಮಿಷಗಳ ಸಿನಿಮಾದಲ್ಲಿ ಹಿಡಿದಿಟ್ಟಿದ್ದಾರೆ ನಟೇಶ್‌. ಕತೆ, ಚಿತ್ರಕಥೆ ರಚನೆ ನಟೇಶ್ ಹೆಗ್ಡೆ ಅವರದೆ. ವಿಶೇಷವೆಂದರೆ ಚಿತ್ರದಲ್ಲಿ ಪ್ರತ್ಯೇಕವಾಗಿ ಹಿನ್ನೆಲೆ ಸಂಗೀತ ಬಳಕೆ ಮಾಡಿಲ್ಲ. ಸ್ವಾಭಾವಿಕವಾದ ಸದ್ದೇ ಚಿತ್ರದಲ್ಲಿದ್ದು, ಶ್ರೇಯಾಂಕ್ ನಂಜಪ್ಪ ಧ್ವನಿ ವಿನ್ಯಾಸಕಾರರಾಗಿ ಕೆಲಸ ಮಾಡಿದ್ದಾರೆ. ವಿಕಾಸ್ ಅರಸ್‌ ಛಾಯಾಗ್ರಹಣ ಇದ್ದು, ಪರೇಶ್ ಕಾಮದಾರ್ ಮತ್ತು ನಟೇಶ್ ಹೆಗ್ಡೆ ಸಂಕಲನವಿದೆ. ಮೇ ತಿಂಗಳಲ್ಲಿ ಚಿತ್ರವನ್ನು ಥಿಯೇಟರ್‌ಗೆ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

LEAVE A REPLY

Connect with

Please enter your comment!
Please enter your name here