ಅಪ್ಪು ‘ಜೇಮ್ಸ್’ಗೆ ಸೆನ್ಸಾರ್ನಿಂದ ‘U/A’ ಸರ್ಟಿಫಿಕೇಟ್ ಸಿಕ್ಕಿದ್ದು, ಇದೇ 17ರಂದು ಅವರ ಜನ್ಮದಿನದಂದು ಸಿನಿಮಾ ತೆರೆಕಾಣಲಿದೆ. ಭಾರತದ ಹಲವೆಡೆ ಹಾಗೂ ಜಗತ್ತಿನ ವಿವಿಧೆಡೆ 4000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ‘ಜೇಮ್ಸ್’ ಸುದ್ದಿಗೋಷ್ಠಿಯಲ್ಲಿ ಚಿತ್ರದಲ್ಲಿ ಕೆಲಸ ಮಾಡಿದ ಕಲಾವಿದರು ಹಾಗೂ ತಂತ್ರಜ್ಞರು ಪುನೀತ್ರನ್ನು ನೆನೆದು ಭಾವುಕರಾದರು.
“ಅಪ್ಪು ನಮ್ಮೊಂದಿಗೆ ಈಗ ಇಲ್ಲ ಎನ್ನುವುದು ‘ಜೇಮ್ಸ್’ ಚಿತ್ರಕ್ಕೆ ಅಡ್ವಾಂಟೇಜ್ ಆಗುತ್ತೆ ಅಂತ ನಾನಷ್ಟೇ ಅಲ್ಲ ಯಾರು ಕೂಡ ಭಾವಿಸೋಲ್ಲ. ಖಂಡಿತ ಹಾಗೆ ಆಗಕೂಡದು. ಅಪ್ಪುನ ಎಲ್ಲಾ ಸಿನಿಮಾಗಳಿಗೆ ಇದ್ದಂಥ ಕ್ರೇಜ್ ಈ ಸಿನಿಮಾಗೂ ಇದ್ದೇ ಇರುತ್ತದೆ. ಅವನು ನಮ್ಮೊಂದಿಗೆ ಸದಾ ಇರುತ್ತಾನೆ. ಎಲ್ಲರೂ ಪ್ರೀತಿಸುವ ಅಪ್ಪು ಸಿನಿಮಾಗೆ ಒಳ್ಳೆಯದಾಗಲಿ” ಎಂದು ಭಾವುಕರಾದರು ಶಿವರಾಜಕುಮಾರ್. ‘ಜೇಮ್ಸ್’ ಚಿತ್ರಕ್ಕೆ ಸೆನ್ಸಾರ್ ಬೋ ರ್ಡ್ನಿಂದ ‘U/A’ ಸರ್ಟಿಫಿಕೇಟ್ ಸಿಕ್ಕಿದ್ದು, ಚಿತ್ರತಂಡ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶಿವರಾಜಕುಮಾರ್ ಮಾತನಾಡಿದರು. “ಅವನಿಲ್ಲದ ದಿನಗಳು ಭಾರ ಎನಿಸುತ್ತವೆ. ನನ್ನ ದಿನಚರಿ, ತಿಂಡಿ, ಊಟ, ಶೂಟಿಂಗ್ ಎಲ್ಲವೂ ನಡೆದುಕೊಂಡು ಹೋಗುತ್ತಿದೆ. ಆದರೆ ಅಪ್ಪು ನೆನಪು ಮಾತ್ರ ಮನಸ್ಸಿನಿಂದ ಮಾಸಿಲ್ಲ. ಅವನು ನೆನಪಾದಾಗೆಲ್ಲಾ ನೋವಾಗುತ್ತೆ” ಎಂದರು.
ಕಿಶೋರ್ ಪ್ರೊಡಕ್ಷನ್ನಲ್ಲಿ ಚೇತನ್ ಕುಮಾರ್ ನಿರ್ದೇಶಿಸಿರುವ ಸಿನಿಮಾ ಕುರಿತಾಗಿ ದಕ್ಷಿಣ ಭಾರತದಲ್ಲಿ ಭಾರೀ ನಿರೀಕ್ಷೆಯಿದೆ. ಅಪ್ಪು ನೆನಪಿನಲ್ಲಿರುವ ಕನ್ನಡಿಗರಂತೂ ಈ ಚಿತ್ರವನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ. ಭಾರತದ ಹಲವೆಡೆ ಹಾಗೂ ಜಗತ್ತಿನ ವಿವಿಧೆಡೆ ಸುಮಾರು 4000 ಸ್ಕ್ರೀನ್ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಚಿತ್ರೀಕರಣ ಅವಧಿಯಲ್ಲಿನ ಪುನೀತ್ ಅವರ ಧ್ವನಿಯನ್ನೇ ಚಿತ್ರದಲ್ಲಿ ಉಳಿಸಿಕೊಳ್ಳಲು ಚಿತ್ರತಂಡ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದರೆ ಶೂಟಿಂಗ್ ಅವಧಿಯ ಮಾತುಗಳು ಸಣ್ಣ ದನಿಯಲ್ಲಿರುವುದು, ಓವರ್ ಲ್ಯಾಪ್ ಆಗಿರುವುದು, ಇತರೆ ತಾಂತ್ರಿಕ ಕಾರಣಗಳಿಂದಾಗಿ ಬಳಕೆ ಮಾಡಲು ಸಾಧ್ಯವಾಗಲೇ ಇಲ್ಲ. ಈ ಮಧ್ಯೆ ನಿರ್ದೇಶಕ ಚೇತನ್ ಕುಮಾರ್ ಮಿಮಿಕ್ರಿ ಕಲಾವಿದರಿಂದ ಅಪ್ಪು ಪಾತ್ರಕ್ಕೆ ಡಬ್ ಮಾಡಿಸಿ ನೋಡಿದ್ದಾರೆ. ಅಲ್ಲಿಯೂ ಕೂಡ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಕೊನೆಗೆ ಶಿವರಾಜಕುಮಾರ್ ಅವರಿಂದ ಡಬ್ ಮಾಡಿಸಲಾಗಿದೆ.
“ಅಪ್ಪುಗೆ ಡಬ್ ಮಾಡಲು ಅವರು ಕೋರಿದಾಗ ನಾನು ಮೊದಲು ಒಪ್ಪಿರಲಿಲ್ಲ. ಅವನ ವಾಯ್ಸ್ನಲ್ಲಿ ಒಂದು soothingness ಇದೆ. ಪಾತ್ರದ ತೂಕ, ಘನತೆಗೆ ತಕ್ಕಂತೆ ಡಬ್ ಮಾಡುವುದು ತುಂಬಾ ಕಷ್ಟದ ಕೆಲಸ. ನನ್ನ ಪಾತ್ರಕ್ಕೆ ನಾನು ಸುಲಭವಾಗಿ ಡಬ್ ಮಾಡಿಬಿಡಬಹುದು. ಹಾಗಾಗಿ ಅವನಿಗೆ ಡಬ್ ಮಾಡುವಾಗ ನಾನು ಹೆದರಿದ್ದೆ. ಕೈಲಾದ ಮಟ್ಟಿಗೆ ಶ್ರದ್ಧೆಯಿಂದ ಡಬ್ ಮಾಡಿದ್ದೇನೆ. ಕೆಲವು ಕಡೆ ನನಗೆ ಸಮಾಧಾನವಾಗಿರಲಿಲ್ಲ. ನನ್ನ ಪಾತ್ರಕ್ಕೆ ಮಾತನಾಡುವಾಗ ಮಾಡ್ಯುಲೇಷನ್ ಅಗತ್ಯವಿದೆ ಎನಿಸಿತ್ತು. ಮೊನ್ನೆ ಮತ್ತೊಮ್ಮೆ ಡಬ್ ಮಾಡಿ ಪೂರ್ಣಗೊಳಿಸಿದ್ದೇನೆ” ಎಂದರು ಶಿವರಾಜಕುಮಾರ್. ಚಿತ್ರದಲ್ಲಿ ಅವರು ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಪಾತ್ರಗಳ ಚಿತ್ರಣವನ್ನು ತೆರೆಯ ಮೇಲೇ ನೋಡಬೇಕೆಂದರು ಅವರು.
ಮೂಲತಃ ಸಿನಿಮಾ ಬರಹಗಾರರಾಗಿ ಚಿತ್ರರಂಗಕ್ಕೆ ಪರಿಚಯವಾಗಿದ ಚೇತನ್ ಕುಮಾರ್ ಅವರಿಗೆ ನಿರ್ದೇಶನದಲ್ಲಿ ಇದು ನಾಲ್ಕನೇ ಸಿನಿಮಾ. ಪುನೀತ್ ಅಗಲಿದ ಕೆಲವು ದಿನಗಳ ಮುನ್ನ ಅವರೊಂದಿಗೆ ಹೆಚ್ಚು ಸಮಯ ಕಳೆದ ಕೆಲವೇ ವ್ಯಕ್ತಿಗಳಲ್ಲಿ ಚೇತನ್ ಕೂಡ ಒಬ್ಬರು. “ಪುನೀತ್ ಸರ್ ಇಲ್ಲದೆ ಸಿನಿಮಾ ಕೆಲಸ ಮಾಡುತ್ತಿರುವುದಕ್ಕಿಂತ ದುಃಖದ ವಿಷಯ ಮತ್ತೊಂದಿಲ್ಲ. ಅಭಿಮಾನಿಗಳಿಗೆ ಇಷ್ಟವಾಗುವಂತೆ ಸಿನಿಮಾ ಮಾಡಿದ್ದೇವೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ” ಎಂದ ಅವರು ಚಿತ್ರಕ್ಕೆ ದುಡಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ಚಿತ್ರದಲ್ಲಿ ಪುನೀತ್ರ ಸ್ನೇಹಿತನಾಗಿ ಅಭಿನಯಿಸಿರುವ ಚಿಕ್ಕಣ್ಣ, “ನಾಯಕನಟ ಇಲ್ಲದೆ ಚಿತ್ರದ ಪ್ರೊಮೋಷನ್ ಇವೆಂಟ್ ಮಾಡುವಂತಹ ಪರಿಸ್ಥಿತಿ ಮುಂದೆ ಯಾವ ಕಲಾವಿದರಿಗೂ ಬರದಿರಲಿ” ಎನ್ನುತ್ತಲೇ ಚಿತ್ರಕ್ಕೆ ಶುಭಾಶಯ ಕೋರಿದರು.
‘ಜೇಮ್ಸ್’ ಚಿತ್ರದ ನಿರ್ಮಾಪಕ ಕಿಶೋರ್ ಪಾತಿಕೊಂಡ ಅವರು ಪುನೀತ್ ರಾಜಕುಮಾರ್ ಅಭಿಮಾನಿ. ನೆಚ್ಚಿನ ನಟನ ಅನುಪಸ್ಥಿತಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ಶಿವರಾಜ್ಕುಮಾರ್ ಅವರಿಗೆ ಧನ್ಯವಾದ ಹೇಳಿದರು. ಕಲಾ ನಿರ್ದೇಶಕ ರವಿ ಸಂತೇಹೈಕ್ಳು, ಸ್ಟಂಟ್ ಮಾಸ್ಟರ್ಗಳಾದ ರವಿವರ್ಮ ಮತ್ತು ಚೇತನ್ ಡಿಸೋಜಾ, ನೃತ್ಯ ನಿರ್ದೇಶಕ ಮೋಹನ್ ಮಾಸ್ಟರ್, ಸಂಗೀತ ಸಂಯೋಜಕ ಚರಣ್ ರಾಜ್, ಕಲಾವಿದರಾದ ತಿಲಕ್ ಇತರರು ಮಾತನಾಡಿದರು. ಚಿತ್ರದ ಬಿಡುಗಡೆಗೂ ಮುನ್ನ ನಡೆಯುವ ಇವೆಂಟ್ನಲ್ಲಿ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರೆಲ್ಲರೂ ಸೇರಲಿದ್ದಾರೆ. ಮಾರ್ಚ್ 17ರಂದು ಸಿನಿಮಾ ತೆರೆಕಾಣಲಿದೆ.