ಪ್ರಸ್ತುತ ಸ್ಟ್ರೀಮ್‌ ಆಗುತ್ತಿರುವ ಸೀಸನ್ 1ನಲ್ಲಿ ಆರು ಎಪಿಸೋಡುಗಳಿವೆ. ಒಂದೊಂದರಲ್ಲಿ ಒಂದು ತರಹದ ವಿಚಿತ್ರ ಗಂಭೀರ ಅಪರಾಧಿಗಳು ಮಾಡುವ, ತಬ್ಬಿಬ್ಬುಗೊಳಿಸುವ ಅಪರಾಧಗಳ ಕೇಸುಗಳಿವೆ. ‘ಲೂಥರ್‌’ ಸರಣಿ ಹಿಂದಿ ಅವತರಣಿಕೆ ‘ರುದ್ರ’ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

BBCಯಲ್ಲಿ ಜನಪ್ರಿಯವಾಗಿದ್ದ ‘ಲೂಥರ್’ ಕ್ರೈಂ – ಥ್ರಿಲ್ಲರ್‌ ವೆಬ್‌ ಸರಣಿಯ ಹಿಂದಿ ಅವತರಣಿಕೆ ‘ರುದ್ರ’. ವಯಸ್ಕ ವೀಕ್ಷಕರಿಗಾಗಿ (A ಸರ್ಟಿಫಿಕೇಟ್) ತಯಾರಿಸಿರುವ ಹಲವು ಗಂಭೀರ ಹಾಗೂ ಗುರುತರ ಅಪರಾಧಗಳಾದ ಸರಣಿ ಕೊಲೆ, ಅತ್ಯಾಚಾರ, ಮಾನಸಿಕ ಅಸ್ವಸ್ಥತೆಯ ಸಮಸ್ಯೆ, ಅನೈತಿಕ ಸಂಬಂಧಗಳ ಪರಿಣಾಮವಾದ ಪ್ಯಾಷನ್ ಕಿಲ್ಲಿಂಗ್‌ ಮುಂತಾದ ಕೇಸುಗಳನ್ನೇ ತನಿಖೆ ಮಾಡಿ ಅವಕ್ಕೆ ಅಂತ್ಯ ಕಾಣಿಸುವ SCU ಎಂಬ ವಿಶೇಷ ಸೆಲ್‌ನವರ ಸಂಬಂಧಗಳು, ಅವರ ವೃತ್ತಿ ಜೀವನದ ಚಿತ್ರ, ವಿಚಿತ್ರ ಸವಾಲೆಸೆಯುವ ಕೇಸುಗಳ ಬಗ್ಗೆ ನಿರ್ದೇಶಕರು ಆಸಕ್ತಿಕರವಾಗಿ ಕತೆ ಹೆಣೆದಿದ್ದಾರೆ.

ನಾಯಕ ಪಾತ್ರದಲ್ಲಿ DCP ರುದ್ರ – ರುದ್ರವೀರಸಿಂಗ್ ಪಾತ್ರದಲ್ಲಿ ಗಂಭೀರ ಮುಖಭಾವದ ಆ್ಯಕ್ಷನ್ ಹೀರೋ ಅಜಯ್ ದೇವಗನ್ ಸಮರ್ಥ ಅಭಿನಯವಿತ್ತು ಜೀವ ತುಂಬಿದ್ದಾರೆ. ಸರಣಿಯಲ್ಲಿ ಈಗಿನ ಕಾಲದ ಒಡೆದ ಕುಟುಂಬಗಳ, ವೈವಾಹಿಕ ಬಿರುಕುಗಳ ಚಿತ್ರಣವೂ ಇದೆ. ನಾಯಕನ ಮದುವೆಯೇ ಪತ್ನಿ ಇಶಾ ಡಿಯೋಲ್‌ (ಧರ್ಮೇಂದ್ರ – ಹೇಮಾಮಾಲಿನಿ ಪುತ್ರಿ) ಪರಪುರುಷನ ಜೊತೆಯ ಅನೈತಿಕ ಸಂಬಂಧದಿಂದ ಇಬ್ಬಾಗವಾಗಿದೆ. ಅವನೇ ಅದರ ರಿಪೇರಿಗೂ ಯತ್ನಿಸುತ್ತಿದ್ದಾನೆ. ಮತ್ತೊಂದೆಡೆ ಅವನನ್ನು ಕಾಡುವ ಅಶಿಸ್ತು, ಮತ್ತು ಡಿಪಾರ್ಟ್‌ಮೆಂಟಿನ ನಿಯಮಗಳ ವಿರುದ್ಧ ಹೊಡೆದಾಡುವ ಗುಣದಿಂದ ಉದ್ಭವವಾದ ಸಮಸ್ಯೆಗಳು, ಇವೆಲ್ಲಾ ನಾಯಕನ ಅವಗುಣಗಳನ್ನು ಬ್ರಿಟಿಷ್ ಅಥವಾ ಅಮೆರಿಕನ್ ಚಿತ್ರದಲ್ಲಿ ಮಾತ್ರ ನಾವು ಕಾಣಲು ಸಾಧ್ಯ. ನಮ್ಮಲ್ಲಿ ಕಥಾನಾಯಕನನ್ನು ಅತಿ ಸಭ್ಯಸ್ಥ, ಎಲ್ಲಾ ಕಡೆಯೂ ಬೆಚ್ಚಗಿರುವಂತೆಯೇ ಚಿತ್ರಿಸುವುದು ಸಂಪ್ರದಾಯ. ಇದರಲ್ಲಿ ಆ ಹೊಸ ವ್ಯತ್ಯಾಸ ಕಾಣಬಹುದು.

ಪ್ರಸ್ತುತ ಸ್ಟ್ರೀಮ್‌ ಆಗುತ್ತಿರುವ ಸೀಸನ್ 1ನಲ್ಲಿ ಆರು ಎಪಿಸೋಡುಗಳಿವೆ. ಒಂದೊಂದರಲ್ಲಿ ಒಂದು ತರಹದ ವಿಚಿತ್ರ ಗಂಭೀರ ಅಪರಾಧಿಗಳು ಮಾಡುವ, ತಬ್ಬಿಬ್ಬುಗೊಳಿಸುವ ಅಪರಾಧಗಳ ಕೇಸುಗಳಿವೆ. ಚಾಣಾಕ್ಷ ಜೀನಿಯಸ್- ಸುಳಿವೇ ಬಿಡದ ತಂದೆತಾಯಿಯರ ಕೊಲೆಗಾರ್ತಿ ಪಾತ್ರಧಾರಿ ನಟಿ ರಾಶಿ ಖನ್ನಾ, ತಂದೆಯ ಹಿಂಸಾತ್ಮಕ ಬೆದರಿಕೆಗೆ ಬಗ್ಗಿ ಪೋಲೀಸರ ಸರಣಿ ಕೊಲೆ ಮಾಡುವ ತಲೆಕೆಟ್ಟ ಸೈನಿಕ, ಸೇಡಿಗಾಗಿ ಮಂಗಳಮುಖಿ ಟ್ಯಾಕ್ಶಿ ಡ್ರೈವರ್ ನೆಡೆಸುವ ಅಪರಿಚಿತ ಯುವತಿಯರ ಹತ್ಯೆ, ಡೈಮಂಡ್ ಸ್ಮಗ್ಲಿಂಗ್‌ ಮಾಡುವ ಆರ್ಟ್ ಡೀಲರ್ ಮತ್ತು ಕ್ರೂರ ಕಿಡ್ನ್ಯಾಪರ್ ಇವೆಲ್ಲದರಲ್ಲೂ ಕ್ರೌರ್ಯ, ಚಿತ್ರಹಿಂಸೆ, ದೌರ್ಜನ್ಯ ಇವೆಲ್ಲಾ ಹಾಸುಹೊಕ್ಕಾಗಿದೆ. ಅಲ್ಲಲ್ಲಿ ಎದೆ ಝಲ್ಲೆನಿಸುವಂತಾ ಕೆಲವು ದೃಶ್ಯಗಳಿದ್ದರೂ ಅತಿರೇಕವೇನಲ್ಲ ಎನ್ನುವುದು ನನ್ನ ಅಭಿಪ್ರಾಯ. ಆ ಜಗತ್ತಿನ ರೀತಿ ರಿವಾಜು, ಕಟು ಸತ್ಯವೇ ಹಾಗೆ.

ಇಂತಹ ಅಪರಾಧ ಲೋಕದವರನ್ನು ಬಲಿ ಹಾಕಲು ಹಿಂದೇಟು ಹೊಡೆಯದ ಕಲ್ಲಿನ ಮನಸ್ಸಿನ ನಾಯಕ ರುದ್ರ, ಅವನ ಮಹಿಳಾ ಬಾಸ್, ಪೋಷಕ ಪಾತ್ರದಲ್ಲಿ ಸಹೋದ್ಯೋಗಿ ಅತುಲ್ ಕುಲಕರ್ಣಿ ಹೀಗೆ ಎಲ್ಲರ ಕತೆಗಳೂ ಇದರಲ್ಲಿ ಸೇರುತ್ತಾ ದೊಡ್ಡ ಸಂಕೀರ್ಣ ಕಥಾಹಂದರವಾಗಿ ಪ್ರತಿ ಎಪಿಸೋಡ್ ಯಾವುದೋ ಕೋನದಲ್ಲಿ ಅಪೂರ್ಣವಾಗಿ ನಿಂತು ಮುಂದಿನ ಸಂಚಿಕೆಯನ್ನು ಕಾತರದಿಂದ ನೋಡುವಂತೆ ಪ್ರೇರೇಪಿಸುತ್ತದೆ. ಒರಿಜಿನಲ್‌ BBCಯ ‘ಲೂಥರ್‌’ ಅಮೇಜಾನ್‌ ಪ್ರೈಮ್‌ನಲ್ಲಿದೆ. ‘ರುದ್ರ’ Disney Hotstar ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಸಸ್ಪೆನ್ಸ್, ತನಿಖೆ, ಓಟ ಎಲ್ಲವೂ ಸಮರ್ಥವಾಗಿ ಈ ವರ್ಗದ ಕಥಾಸರಣಿಗೆ ತಕ್ಕಂತೆ ಮೂಡಿಬಂದಿದೆ. ಮಡಿವಂತರಲ್ಲದವರು ಖಂಡಿತಾ ಸರಣಿಯನ್ನು ಇಷ್ಟಪಡುತ್ತಾರೆ. ಪತ್ತೇದಾರಿ ಲೇಖಕನಾಗಿ ನನಗಂತೂ ಇದು ಭರಪೂರ ರಂಜನೆ ನೀಡಿತು.

LEAVE A REPLY

Connect with

Please enter your comment!
Please enter your name here