ರಾಜಮೌಳಿ ನಿರ್ದೇಶನದ ‘RRR’ ಸಿನಿಮಾ ಇದೇ 25ರಂದು ತೆರೆಕಾಣುತ್ತಿದ್ದು, ರಾಜ್ಯದಲ್ಲಿ KVN ಪ್ರೊಡಕ್ಷನ್ಸ್ ಚಿತ್ರವನ್ನು ವಿತರಿಸುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಚಿಕ್ಕಬಳ್ಳಾಪುರ ಸಮೀಪ ಅಗಲಗುರ್ಕಿಯಲ್ಲಿ ಬಹುದೊಡ್ಡ ಪ್ರೀ ರಿಲೀಸ್ ಇವೆಂಟ್ ಆಯೋಜನೆಗೊಳ್ಳುತ್ತಿದೆ.
ಭಾರತೀಯ ಸಿನಿಮಾರಂಗ ಎದುರುನೋಡುತ್ತಿರುವ ರಾಜಮೌಳಿ ನಿರ್ದೇಶನದ ‘RRR’ ಸಿನಿಮಾ ಮಾರ್ಚ್ 25ರಂದು ತೆರೆಕಾಣಲಿದೆ. ಕರ್ನಾಟಕದಲ್ಲಿ ಚಿತ್ರದ ವಿತರಣೆ ಹೊಣೆ KVN ಪ್ರೊಡಕ್ಷನ್ಸ್‌ನದ್ದು. ‘RRR’ ನಿರ್ಮಿಸಿರುವ DVV ಸಂಸ್ಥೆ ಮತ್ತು KVN ಪ್ರೊಡಕ್ಷನ್ಸ್ ಜಂಟಿಯಾಗಿ ಮಾರ್ಚ್ 19ರಂದು ಅದ್ಧೂರಿ ಪ್ರೀರಿಲೀಸ್ ಇವೆಂಟ್ ಆಯೋಜಿಸುತ್ತಿವೆ. ಈ ಮೆಗಾ ಇವೆಂಟ್‌ನಲ್ಲಿ ಚಿತ್ರತಂಡದ ಜ್ಯೂನಿಯರ್ ಎನ್‌ಟಿಆರ್, ರಾಮ್ ಚರಣ್ ತೇಜಾ, ಅಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ತೆಲುಗು ಮತ್ತು ಕನ್ನಡ ಚಿತ್ರರಂಗದ ಪ್ರಮುಖ ತಾರೆಯರು ಹಾಗೂ ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದಲ್ಲಿ ‘RRR’ ವಿತರಣೆ ಹಕ್ಕು ಪಡೆದಿರುವ KVN ಪ್ರೊಡಕ್ಷನ್ಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅನ್ನು ದಾಖಲೆಯ ಮಟ್ಟದಲ್ಲಿ ಆಯೋಜಿಸಲು ತಯಾರಿ ನಡೆಸಿದೆ. ಕಾರ್ಯಕ್ರಮ ಮಾರ್ಚ್ 19ರಂದು ಸಂಜೆ ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ನಡೆಯಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇವೆಂಟ್ ಸ್ಥಳಕ್ಕೆ 20 ನಿಮಿಷಗಳ ಪ್ರಯಾಣ ಅವಧಿ. ಈ ದಾಖಲೆಯ ಕಾರ್ಯಕ್ರಮವನ್ನು ಅಗಲಿದ ನಟ ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸಲಾಗುತ್ತಿದೆ. ಅವರ ಗೌರವಾರ್ಥ ವಿಶೇಷ ಕಾರ್ಯಕ್ರಮ, ‘RRR’ ಸಂಗೀತ ಸಂಯೋಜಕ ಕೀರವಾಣಿ ಅವರ ಲೈವ್ ಪರ್ಫಾರ್ಮೆನ್ಸ್ ಇರಲಿದೆ.
52 ಸಾವಿರ ಚದುರಡಿಯ ಬೃಹತ್ LED ಸ್ಕ್ರೀನ್ ಹಾಗೂ 42 ಬೃಹತ್ ಲೇಸರ್ ಲೈಟ್‌ಗಳ ಬಹುದೊಡ್ಡ ಸ್ಟೇಜ್ ಇದಕ್ಕಾಗಿ ಸಿದ್ಧವಾಗುತ್ತಿದೆ. ಈ ಲೇಸರ್ ಲೈಟ್‌ಗಳ ಮೂಲಕ ಸಿನಿಮಾವನ್ನು 3D ಮಾದರಿಯಲ್ಲಿ ನೋಡುವ ಅವಕಾಶ ನೆರದಿರುವ ಅಭಿಮಾನಿ ಬಳಗಕ್ಕೆ ಸಿಗಲಿದೆ. ಸುಮಾರು ನೂರು ಎಕರೆ ಜಾಗವಿರುವ ಬೃಹತ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆಯಾಗುತ್ತಿದೆ. ಕಾರ್ಯಕ್ರಮಕ್ಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವ ಡಾ.ಕೆ.ಸುಧಾಕರ್ ಭಾಗವಹಿಸಲಿದ್ದಾರೆ. ಕನ್ನಡ ಚಿತ್ರರಂಗದ ಪರವಾಗಿ ಶಿವರಾಜಕುಮಾರ್ ವಿಶೇಷ ಅತಿಥಿಯಾಗಿ ಇರುತ್ತಾರೆ.