ವರ್ಷದ ಎರಡು ಬಹುನಿರೀಕ್ಷಿತ ಹಿಂದಿ ಚಿತ್ರಗಳಾದ ‘ಅನಿಮಲ್‌’, ‘ಸ್ಯಾಮ್‌ ಬಹದ್ದೂರ್‌’ ಈ ವಾರ ತೆರೆಕಂಡಿವೆ. ‘ಬಿಗ್‌ಬಾಸ್‌’ ಖ್ಯಾತಿಯ ಅರವಿಂದ್‌ ಮತ್ತು ದಿವ್ಯ ಉರುಡುಗ ನಟಿಸಿರುವ ‘ಅರ್ಧಂಬರ್ಧ ಪ್ರೇಮಕಥೆ’, ವಿಶಿಷ್ಟ ಕತೆ, ನಿರೂಪಣೆಯ ಕಾರಣಕ್ಕೆ ಸುದ್ದಿಯಾಗಿರುವ ‘ರಾಂಚಿ’ ಕನ್ನಡ ಚಿತ್ರಗಳು ಥಿಯೇಟರ್‌ಗೆ ಬಂದಿವೆ.

ಅರ್ಧಂಬರ್ಧ ಪ್ರೇಮಕತೆ | ಕನ್ನಡ | ಬಿಗ್‌ಬಾಸ್‌ ಖ್ಯಾತಿಯ ದಿವ್ಯಾ ಉರುಡುಗ ಮತ್ತು ಅರವಿಂದ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ಇದೊಂದು ವಿಭಿನ್ನ ಪ್ರೇಮಕಥೆ. ಇಬ್ಬರ ನಡುವೆ ಪ್ರೀತಿಯಾಗದೇ ಒಬ್ಬರಿಗೊಬ್ಬರೂ ಒಂದಾಗಲು ಬಯಸುತ್ತಾರೆ. ನಂತರ ಇವರಿಬ್ಬರ ಮಧ್ಯೆ ಪ್ರೀತಿ ಶುರುವಾಗಿ ಅದು ಬ್ರೇಕ್‌ ಅಪ್‌ಗೂ ತಿರುಗುತ್ತದೆ. ಪ್ರತಿ ಸಣ್ಣ ವಿಷಯಕ್ಕೂ ಕೋಪ, ಮುನಿಸು. ಪ್ರತಿಬಾರಿ ಸಣ್ಣ ಜಗಳಗಳಾದಾಗೆಲ್ಲಾ ಬೇರಾಗಲು ಬಯಸುವ ಯುವ ಪ್ರೇಮಿಗಳ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಬಕ್ಸಸ್ ಮೀಡಿಯಾ, ಆರ್ ಎ ಸಿ ವಿಷುವಲ್ಸ್ ಮತ್ತು ಲೈಟ್ ಹೌಸ್ ಮೀಡಿಯಾದ ಸಹಕಾರದೊಂದಿಗೆ ಚಿತ್ರ ನಿರ್ಮಾಣವಾಗಿದೆ. Rapper ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಿರಿಯ ನಟ ದ್ವಾರಕೀಶ್ ಪುತ್ರ ಅಭಿಲಾಷ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸೂರ್ಯ ಛಾಯಾಗ್ರಹಣ, ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ ನಿರ್ವಹಣೆಯಿದೆ.

ಶೋಷಿತೆ | ಕನ್ನಡ | 2015ರಲ್ಲಿ ನೆಲ್ಲೂರಿನಲ್ಲಿ ನಡೆದ ಘಟನೆಯೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದರ ಒಂದು ಎಳೆಯ ಕಥೆಯನ್ನು ಚಿತ್ರದಲ್ಲಿ ರೂಪಿಸಲಾಗಿದೆ. ಮಧ್ಯಮ ವರ್ಗದ ಹುಡುಗಿಗೆ ಯಾವ ರೀತಿಯ ಕಷ್ಟಗಳು ಎದುರಾಗುತ್ತವೆ? ಅದನ್ನು ಹೇಗೆ ಎದುರಿಸುತ್ತಾಳೆ? ಸಮಾಜದಲ್ಲಿ ಇಂತಹವರಿಗೆ ಬರುವ ತೊಂದರೆಗಳು, ಗೆಳೆತನ, ಹಣದ ವಿಚಾರದಲ್ಲಿ ನಂಬಿಕೆ ಕಳೆದುಕೊಳ್ಳುವುದು ಇಂತಹ ಸೂಕ್ಷ ವಿಷಯಗಳು ಎಲ್ಲಾ ಕಡೆ ನಡೆಯುತ್ತಲೇ ಇರುತ್ತದೆ. ಇದರಿಂದ ಹೇಗೆ ಜಾಗೃತರಾಗಬೇಕೆಂದು ಅರ್ಥಪೂರ್ಣ ಸನ್ನಿವೇಶಗಳ ಮೂಲಕ ತೋರಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ. ಚಿತ್ರದಲ್ಲಿ ಡಾ ಜಾನ್ವಿ ರಾಯಲ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೂಪ ರಾಯಪ್ಪ, ನವೀನ್‌ ತಾತೇರ್, ಪ್ರಶಾಂತ್, ದರ್ಶನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಸಿಂಗಲ್’ ಹಾಡಿಗೆ ಕೆವಿನ್ ಎಂ ಸಂಗೀತ ಸಂಯೋಜಿಸಿದ್ದಾರೆ. ರವಿವರ್ಮ ಕೆ ಛಾಯಾಗ್ರಹಣ, ಅನುಷಾ ಈಶ್ವರ್ ಸಾಹಿತ್ಯ ಮತ್ತು ಗಾಯನವಿದೆ. ಬೆಂಗಳೂರು, ಹೊಸಕೋಟೆ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾ ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.

https://youtu.be/RasAKF9NTwA

ಯಥಾಭವ | ಕನ್ನಡ | ಪವನ್ ಶಂಕರ್ ಮತ್ತು ಸಹನ ಸುಧಾಕರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರವಾಗುತ್ತದೆ. ಘಟನೆಗೆ ಕಾರಣರಾದವರನ್ನು ಪೊಲೀಸರು ಹುಡುಕಲು ಆರಂಭಿಸುತ್ತಾರೆ. ಸರಿಯಾದ ಸಾಕ್ಷಿ ಆಧಾರಗಳಿಲ್ಲದೇ ಕೇಸು ಮಂದುವರೆಯುತ್ತಲೇ ಇರುತ್ತದೆ. ಅಪರಾಧಿಯನ್ನು ಹುಡುಕುವಲ್ಲಿ ಪೊಲೀಸರು ಯಶಸ್ವಿಯಾಗುತ್ತಾರೋ ಇಲ್ಲವೋ ಎಂಬುದೇ ಚಿತ್ರದ ಕಥಾಹಂದರ. ಹಿರಿಯ ನಟ ರಾಕ್‌ಲೈನ್ ಸುಧಾಕರ್ ಅವರ ಪುತ್ರ ಗೌತಮ್ ಸುಧಾಕರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಬಾಲ ರಾಜವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಮಾಸ್ಟರ್ ಶಮಂತ್, ನೀನಾಸಂ ಆನಂದ್, ಉಮಾ ಹೆಬ್ಬಾರ್, ಮಹೇಶ್ ಕಾಳಿ ಮುಂತಾದವರಿದ್ದಾರೆ. ಉತ್ಸವ್ ಶ್ರೇಯಸ್ ಸಂಗೀತ ಸಂಯೋಜಿಸಿರುವ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸುರೇಶ್ ರೆಡ್ಡಿ ಮತ್ತು ಅಭಿಷೇಕ್ ಅಕ್ಕಣ್ಣನವರ್ ಹಾಡುಗಳನ್ನು ಬರೆದಿದ್ದಾರೆ. Macht Entertainments ಬ್ಯಾನರ್‌ ಅಡಿಯಲ್ಲಿ ಸುಜಾತ ಕುಮಾರಿ ಹಾಗೂ ಅನಿಲ್ ಕುಮಾರ್ ಬಿ ಎನ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಹರ್ಷ್ ಮಿಶ್ರ ಛಾಯಾಗ್ರಹಣ, ಹರೀಶ್ ಚೌಧರಿ ಸಂಕಲನ, ಕುಂಗ್ಫು ಚಂದ್ರು ಸಾಹಸ ನಿರ್ದೇಶನ, ಸುಚಿತ್ ಚವ್ಹಾಣ್, ನೃತ್ಯ ನಿರ್ದೇಶನ, ಸ್ಮಿತ ಕುಲಕರ್ಣಿ ಕಲಾ ನಿರ್ದೇಶನವಿದೆ.

ರಾಂಚಿ | ಕನ್ನಡ | ಶಶಿಕಾಂತ್ ಗಟ್ಟಿ ನಿರ್ದೇಶನದ ಈ ಸಿನಿಮಾವು ನೈಜ ಘಟನೆಗಳನ್ನು ಆಧಾರಿಸಿದೆ. ‘ರೈಲ್ವೆ ಇಲಾಖೆ ಕುರಿತು ಒಂದು ಡಾಕ್ಯುಮೆಂಟರಿ ಮಾಡಿಕೊಡಬೇಕು. ರಾಂಚಿಗೆ ಬನ್ನಿ’ ಎಂಬ ಒಂದು ನಕಲಿ ಕರೆಯಿಂದ ಉಂಟಾಗುವ ಸಮಸ್ಯೆಗಳ ಕುರಿತಾದ ಸಿನಿಮಾ. ಇದು ಸರ್ಕಾರದಿಂದ ಬಂದಿರುವ ಕರೆ ಎಂದು ತಿಳಿದು ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಮೋಸ ಹೋಗಿದ್ದರು. ಈ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾ ರಚನೆಯಾಗಿದೆ. ಈ ಚಲನಚಿತ್ರವನ್ನು ರುದ್ರಾನಂದ ಹಾಗೂ ಅರುಣ್‌ ಕುಮಾರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸುರೇಶ್‌ ಹೆಬ್ಲೀಕರ್‌, ಪ್ರಭು ಮುಂಡ್ಕರ್‌, ದಿವ್ಯಾ ಉರುಡುಗ, ಆರತಿ ನಾಯರ್, ಲಕ್ಷ್ಮಣ್ ಗೌಡ‌ ನಟಿಸಿದ್ದಾರೆ.

ಅನಿಮಲ್‌ | ಹಿಂದಿ | ಚಿತ್ರವು ಸಂಪೂರ್ಣ ತಂದೆ-ಮಗನ ಬಾಂಧವ್ಯದ ಸುತ್ತ ಸುತ್ತುತ್ತದೆ. ಬಲ್ಬೀರ್ ಸಿಂಗ್ ಪಾತ್ರದಲ್ಲಿ ಅನಿಲ್ ಕಪೂರ್ ಹಾಗೂ ಆತನ ಮಗ ಅರ್ಜುನ್ ಸಿಂಗ್ ಆಗಿ ರಣ್‌ಬೀರ್‌ ನಟಿಸಿದ್ದಾರೆ. ಚಿತ್ರಕಥೆಯಲ್ಲಿ ಭೂಗತ ಜಗತ್ತಿನಲ್ಲಿ ತೀವ್ರ ರಕ್ತಪಾತದ ಹಿನ್ನೆಲೆಯೂ ಇದೆ. ತಂದೆ ಮೇಲೆ ಅಪಾರ ಪ್ರೀತಿ ಇರುವ ಮಗ, ತಂದೆ ಬೆದರಿಸಿದರೂ, ದ್ವೇಷಿಸಿದರೂ ತಂದೆಗಾಗಿ ಏನು ಬೇಕಾದರೂ ಮಾಡುವಷ್ಟು ಪ್ರೀತಿಸುತ್ತಾನೆ. ಅವನ ತಂದೆಯ ಮೇಲೆ ದಾಳಿ ನಡೆದಾಗ ಆತ ಮೃಗದಂತೆ ತಿರುಗಿ ಬಿದ್ದರೆ ಏನಾಗುತ್ತದೆ ಎಂಬುದೇ ಚಿತ್ರಕಥೆ. ಬಹಳ ನಿಷ್ಠುರ, ಕಟ್ಟುನಿಟ್ಟಿನ ತಂದೆಯ ಪೋಷಣೆಯಲ್ಲಿ ಬೆಳೆದ ಮಗ ಭೂಗತ ಲೋಕಕ್ಕೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಆದರೂ ತಂದೆಯ ಮೇಲಿನ ಅತಿಯಾದ ಮಮಕಾರದಿಂದ ಮಗ ಕ್ರೂರ ಮನಸ್ಥಿತಿಯವನಾಗಿದ್ದರೂ ಕರುಣೆ ತೋರಿಸುತ್ತಾನೆ. ಕೆಲವು ಸನ್ನಿವೇಶಗಳಲ್ಲಿ ರಶ್ಮಿಕಾ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾವು ಮೂಲ ಹಿಂದಿ ಸೇರಿದಂತೆ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಸ್ಯಾಮ್‌ ಬಹದ್ದೂರ್‌ | ಹಿಂದಿ | ಈ ಚಿತ್ರವು ಅಪ್ಪಟ ದೇಶ ಪ್ರೇಮದ ಕಥೆ. ಸುದೀರ್ಘ 40 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ಮೊದಲ ಏರ್‌ ಫೀಲ್ಡ್‌ ಮಾರ್ಷಲ್‌ ಆಗಿದ್ದ ಸ್ಯಾಮ್‌ ಮಾನೆಕ್‌ ಷಾ ಅವರ ಸೇನಾ ದಿನಗಳು ಮತ್ತು ಪ್ರಮುಖ ಯುದ್ಧದ ಕಥೆಯನ್ನು ಸಿನಿಮಾದಲ್ಲಿ ತೆರೆದಿಡಲಾಗಿದೆ. 1971ರ ಇಂಡೋ- ಪಾಕ್‌ ನಡುವಿನ ಯುದ್ಧದ ಹಿನ್ನೆಲೆಯನ್ನು ಸಿನಿಮಾ ಒಳಗೊಂಡಿದೆ. 1969ರಲ್ಲಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಸ್ಯಾಮ್‌ ಮಾನೆಕ್‌ ಷಾ, ಪಾಕ್‌ ವಿರುದ್ಧದ ಸಮರದಲ್ಲಿ ವಿಜಯ ಸಾಧಿಸುವ ಕೆಲವು ಅಂಶಗಳನ್ನು ಚಿತ್ರ ಹೊಂದಿದೆ. ಇದರ ಪರಿಣಾಮವಾಗಿ 1971ರಲ್ಲಿ ಬಾಂಗ್ಲಾದೇಶದ ಹುಟ್ಟಿಗೂ ಇವರು ಕಾರಣರಾಗುತ್ತಾರೆ. ಈ ಸಿನಿಮಾದಲ್ಲಿ ಯುದ್ಧದ ಜತೆಗೆ ರಾಜಕಾರಣವೂ ಸಿನಿಮಾದಲ್ಲಿ ಬೆಸೆದುಕೊಂಡಿದೆ. ಸ್ವಾತಂತ್ರಪೂರ್ವದ ಜತೆಗೆ ಸ್ವಾತ್ರಂತ್ರ್ಯಾನಂತರದ ಘಟನೆಗಳನ್ನೂ ಸಹ ಇದರಲ್ಲಿ ಕಾಣಬಹುದು. ಈ ಚಿತ್ರವನ್ನು ಮೇಘನಾ ಗುಲ್ಜಾರ್ ಮತ್ತು ರೋನಿ ಸ್ಕ್ರೂವಾಲಾ ನಿರ್ಮಿಸಿದ್ದಾರೆ. ನೀರಜ್ ಕಬಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ರೀಥ್‌ | ತೆಲುಗು | ಚಿತ್ರದ ಪ್ರಮುಖ ಪಾತ್ರಧಾರಿ ಕೆಲವು ವೈದ್ಯಕೀಯ ತೊಂದರೆಗಳಿಗೆ ಸಿಲುಕುತ್ತಾನೆ. ಆ ಸಮಸ್ಯೆಗಳನ್ನು ಅವನು ಹೇಗೆ ನಿಭಾಯಿಸಿ, ಪರಿಹರಿಸುತ್ತಾನೆ ಎಂಬುದೇ ಕಥೆಯ ಮುಖ್ಯ ತಿರುಳು. ಆಸ್ಪತ್ರೆಯೊಂದರಲ್ಲಿ ನಡೆಯುವ ನಿಗೂಢ ಘಟನೆಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ‘ವೈದ್ಯೋ ನಾರಾಯಣೋ ಹರಿಃ’ ಎಂಬುದು ಚಿತ್ರದ ಅಡಿಬರಹ. ಈ ಚಿತ್ರವನ್ನು ವಂಶಿ ಕೃಷ್ಣ ಅಕೆಲ್ಲ ಬರೆದು, ನಿರ್ದೇಶಿಸಿದ್ದಾರೆ. ಕನಿಷ್ಕ್ ಗುಪ್ತಾ ಪ್ರಸ್ತುತ ಪಡಿಸುತ್ತಿರುವ ಚಿತ್ರವನ್ನು ನಂದಮೂರಿ ಜಯಕೃಷ್ಣ ನಿರ್ಮಾಣ ಮಾಡಿದ್ದಾರೆ. ರಾಕೇಶ್ ಹೊಸಮನಿ ಛಾಯಾಗ್ರಹಣ, ಮಾರ್ಕ್ ಕೆ ರಾಬಿನ್ ಸಂಗೀತ ಸಂಯೋಜನೆ, ಬೊಂತಲ ನಾಗೇಶ್ವರ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಡಿಸೆಂಬರ್‌ 2ರಂದು ಸಿನಿಮಾ ತೆರೆಕಾಣಲಿದೆ.

ಉಪೇಂದ್ರ ಗಡಿ ಅಡ್ಡಾ | ತೆಲುಗು | ಒಂದು ಪುಟ್ಟ ನಗರದ ಗಲ್ಲಿಯೊಂದರಲ್ಲಿ ಯಾವುದೇ ಯೋಚನೆಯಿಲ್ಲದೇ ಓಡಾಡಿಕೊಂಡಿರುವ ಯುವಕನ ಸುತ್ತ ಚಿತ್ರಕಥೆ ಸುತ್ತುತ್ತದೆ. ಮನೆಯಲ್ಲಿ ಪ್ರತಿದಿನ ಇವನು ತನ್ನ ಪೋಷಕರಿಂದ ಕಾರಣವಿಲ್ಲದೇ ಬಯ್ಯಿಸಿಕೊಳ್ಳುತ್ತಿರುತ್ತಾನೆ. ನಂತರ ಒಬ್ಬ ಕಾಲೇಜು ಯುವತಿಯ ಮೇಲೆ ಪ್ರೀತಿಯಾಗುವ ಇವನಿಗೆ ಅನೇಕ ಸಂಕಷ್ಟಗಳು ಎದುರಾಗುತ್ತವೆ. ಪೊಲೀಸು, ಕೇಸು, ಹೊಡೆದಾಟ ಇನ್ನು ಅನೇಕ ತೊಂದರೆಗಳನ್ನು ಎದುರಿಸುತ್ತಾನೆ. ಈ ಸಿನಿಮಾವನ್ನು ಆರ್ಯನ್ ಸುಭಾನ್ ಎಸ್ ಕೆ ನಿರ್ದೇಶಿಸಿದ್ದಾರೆ. SSLS Creations ಬ್ಯಾನರ್‌ ಅಡಿಯಲ್ಲಿ ಕಂಚಾರ್ಲ ಅಚ್ಚುತರಾವ್ ನಿರ್ಮಿಸಿದ್ದಾರೆ. ರಾಮು ಅಡ್ಡಂಕಿ ಸಂಗೀತ ಸಂಯೋಜನೆ, ರವೀಂದ್ರ ಸನ್ ಛಾಯಾಗ್ರಹಣ, ಮೇನಗಾ ಶ್ರೀನಿವಾಸ್ ರಾವ್ ಸಂಕಲನವಿದೆ.

ಅನ್ನಪೂರ್ಣಿ | ತಮಿಳು | ಸಾಂಪ್ರದಾಯಿಕ ಬ್ರಾಹಣ ಕುಟುಂಬದ ಯುವತಿಯಾಗಿ ಜನಿಸುವ ಅನ್ನಪೂರ್ಣಿ (ನಯನತಾರಾ) ದೊಡ್ಡ ಚೆಫ್‌ (Cheaf) ಅಗಬೇಕೆಂದು ಹಂಬಲಿಸುವ ಕಥೆ ಚಿತ್ರದಲ್ಲಿದೆ. ಆಕೆಯ ತಂದೆ ತಿರುಚ್ಚಿಯ ಶ್ರೀರಂಗಂನಲ್ಲಿರುವ ದೇವಸ್ಥಾನದಲ್ಲಿ ಅರ್ಚಕರಾಗಿ ಹಾಗೂ ಪ್ರಸಾದವನ್ನು ತಯಾರಿಸುವ ಬಾಣಸಿಗ. ಪೂಜೆ, ಪುನಸ್ಕಾರ, ಪದ್ದತಿ, ನಿಯಮಗಳನ್ನು ಪಾಲಿಸುವ ಕುಟುಂಬದಲ್ಲಿ ಮಾಂಸಹಾರ ಸಂಪೂರ್ಣ ನಿಷಿದ್ದ. ಈ
ವಾತಾವರಣದಲ್ಲಿ ಬೆಳೆದ ಅವಳು ಮಾಂಸ ಖಾದ್ಯಗಳನ್ನು ಯಾವ ರೀತಿ ತಯಾರಿಸುತ್ತಾಳೆ ಮತ್ತು ಅದರ ಬಗ್ಗೆ ತಾತ್ಸಾರವಿರುವ ಅವಳ ಕುಟುಂಬದಿಂದ ಕಣ್ತಪ್ಪಿಸಿ ತನ್ನ ಹೇಗೆ ವೃತ್ತಿಯನ್ನು ನಿಭಾಯಿಸುತ್ತಾಳೆ. ಎಂಬುದು ಚಿತ್ರದ ಕಥಾವಸ್ತು. ಚಲನಚಿತ್ರದಲ್ಲಿ ಕನ್ನಡಿಗ ಅಚ್ಯುತ್‌ ಕುಮಾರ್‌ ನಯನತಾರಾ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಸತ್ಯನ್ ಸೂರ್ಯನ್ ಛಾಯಾಗ್ರಹಣ ನಿರ್ವಹಿಸಿದ್ದು, ಪ್ರವೀಣ್ ಆಂಟೋನಿ ಸಂಕಲನ ಮಾಡಿದ್ದಾರೆ. Zee Studios, Trident Arts ಮತ್ತು Naad S Studios ಸಿನಿಮಾವನ್ನು ಪ್ರಸ್ತುತ ಪಡಿಸುತ್ತಿವೆ.

‌ಪಾರ್ಕಿಂಗ್‌ | ತಮಿಳು | ಹರೀಶ್ ತನ್ನ ಪತ್ನಿ ಇಂಧುಜಾಳೊಟ್ಟಿಗೆ ತಿರುಚ್ಚಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುತ್ತಾನೆ. ಐಟಿ ವೃತ್ತಿಪರನಾದ ಅವನು ಹೊಸ ಕಾರನ್ನು ಮನೆಗೆ ತಂದಾಗ ವಿಷಯಗಳು ತಿರುವು ಪಡೆಯುತ್ತವೆ. ಬಾಡಿಗೆ ಮನೆಯಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಸೀಮಿತವಾಗಿರುವುದರಿಂದ ಮನೆ ಮಾಲೀಕರೊಂದಿಗೆ (ಎಂಎಸ್ ಭಾಸ್ಕರ್) ಜಗಳವಾಡುತ್ತಿರುತ್ತಾರೆ. ಪರಸ್ಪರರ ವಾಹನಗಳಿಗೆ ಹಾನಿ ಮಾಡುವುದು ಸೇರಿದಂತೆ ವಿಷಯಗಳು ತೀವ್ರ ರೂಪ ಪಡೆಯುತ್ತದೆ. ಒಬ್ಬರಿಗೊಬ್ಬರು ಹಾನಿ ಮಾಡಿಕೊಳ್ಳುತ್ತಾರೆ. ನಂತರ ಈ ಇಬ್ಬರೂ ಪೊಲೀಸ್ ಠಾಣೆಗೆ ಬರುತ್ತಾರೆ. ಪಾರ್ಕಿಂಗ್ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ಅವರು ಹರಸಾಹಸ ಪಡುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹರೀಶ್ ಕಲ್ಯಾಣ್ ಮತ್ತು ಇಂಧುಜಾ ರವಿಚಂದ್ರನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸುಧನ್ ಸುಂದರಂ, ಕೆ ಎಸ್ ಸಿನಿಶ್ ನಿರ್ಮಿಸಿದ್ದಾರೆ. ಸ್ಯಾಮ್ ಸಿ ಎಸ್ ಸಂಗೀತ ಸಂಯೋಜನೆ, ಜಿಜು ಸನ್ನಿ ಛಾಯಾಗ್ರಹಣ, ಫಿಲೋಮಿನ್ ರಾಜ್ ಸಂಕಲನ, ಎನ್ ಕೆ ರಾಹುಲ್ ಕಲಾ ನಿರ್ದೆಶನ ಚಿತ್ರಕ್ಕಿದೆ.

ನಾಡು | ತಮಿಳು | ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ತನ್ನ ವಿದ್ಯಾಭ್ಯಾಸ ಮುಗಿದ ನಂತರ ಒಂದು ಕುಗ್ರಾಮದಲ್ಲಿ ಕಾರ್ಯನಿರ್ವಹಿಸಲು ಬರುತ್ತಾಳೆ. ಸಂಪೂರ್ಣ ನಗರ ಜೀವನದಲ್ಲಿ ಬೆಳೆದ ಆ ಯುವತಿಗೆ ಹಳ್ಳಿ ಜೀವನ ಕಷ್ಟವಾಗುತ್ತದೆ. ಆಕೆ ಅಲ್ಲಿನ ಜನರಿಗೆ ಹೊಂದಿಕೊಂಡು ಹೋಗಬೇಕು ಇಲ್ಲವಾದರೆ ಈ ಊರಿನಿಂದ ಹೊರ ನಡೆಯಬೇಕೆಂದು ಆ ಹಳ್ಳಿಯ ಜನರು ಪ್ರತಿಭಟನೆ ಮಾಡುತ್ತಾರೆ. ಅವಳು ಹಳ್ಳಿಗೆ ಹೊಂದಿಕೊಳ್ಳುತ್ತಾಳೋ ಅಥವಾ ಹಳ್ಳಿಯಿಂದ ಹೊರ ನಡೆಯುತ್ತಾಳೋ ಎಂಬುದನ್ನು ಈ ಸಿನಿಮಾ ತೋರಿಸಲಿದೆ. ಈ ಚಿತ್ರವನ್ನು ಎಂ ಸರವಣನ್ ನಿರ್ದೇಶಿಸಿದ್ದಾರೆ. ಸಿ ಸತ್ಯ ಸಂಗೀತ ಸಂಯೋಜಿಸಿದ್ದು, ದರ್ಶನ್, ಮಹಿಮಾ ನಂಬಿಯಾರ್, ಸಿಂಗಂ ಪುಲಿ, ಆರ್ ಎಸ್ ಶಿವಾಜಿ, ಅರುಲ್ ದಾಸ್, ಇಂಬ ರವಿಕುಮಾರ್, ವಸಂತ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆಂಟೊನಿ | ಮಲಯಾಳಂ | ಅವರಣ್ ಎಂಬ ನಗರವು ಕುಖ್ಯಾತ ಕ್ರಿಮಿನಲ್‌ಗಳು ಮತ್ತು ದರೋಡೆಕೋರರಿಂದ ತುಂಬಿದ್ದು, ಅವರಲ್ಲಿ ಅತ್ಯಂತ ಅಪಾಯಕಾರಿಯಾದವನು ಆಂಟೊನಿಯಾಗಿರುತ್ತಾನೆ. ಇವನು ಸಬ್‌ ಇನ್ಸ್‌ಪೆಕ್ಟರ್‌ನನ್ನು ಜೀವಂತ ಸುಡುವುದರಿಂದ ಹಿಡಿದು ಹಲವಾರು ಕೊಲೆಗಳನ್ನು ಮಾಡಿರುತ್ತಾನೆ. ಇವನ ಜೊತೆಯಲ್ಲಿ ‘ಫಾದರ್ ಪಾಲ್’ ಎಂಬ ಪಾತ್ರದಲ್ಲಿ ಚೆಂಬನ್ ವಿನೋದ್ ಜೋಸ್ ಕಾಣಿಸಿಕೊಂಡಿದ್ದಾರೆ. ಕಲ್ಯಾಣಿ ಪ್ರಿಯದರ್ಶನ್‌ ಕಾಲೇಜು ವಿದ್ಯಾರ್ಥಿನಿ, ಅನ್ಯಾಯದ ವಿರುದ್ದ ಹೋರಾಡುವ ವೃತ್ತಿಪರ MMA (Mixed martial arts) ಕ್ರೀಡಾಪಟುವಾಗಿ ಕಾಣಿಸಿಕೊಂಡಿದ್ದಾಳೆ. ಈ ಸಿನಿಮಾದಲ್ಲಿ ಜೋಜು ಜಾರ್ಜ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ನೈಲಾ ಉಷಾ, ಆಶಾ ಶರತ್, ವಿಜಯರಾಘವನ್ ಮತ್ತು ಅಪ್ಪನಿ ಶರತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾವನ್ನು Einstein Media ಬ್ಯಾನರ್‌ ಅಡಿಯಲ್ಲಿ ಐನ್‌ಸ್ಟೀನ್‌ ಝಾಕ್‌ಪಾಲ್ ನಿರ್ಮಿಸಿದ್ದಾರೆ. ರಾಜೇಶ್‌ ವರ್ಮಾ ಚಿತ್ರಕಥೆ ರಚಿಸಿದ್ದು, ರೆನಡಿವ್ ಛಾಯಾಗ್ರಹಣ, ಶ್ಯಾಮ್ ಶಶಿಧರನ್ ಸಂಕಲನ, ಜೇಕ್ಸ್ ಬಿಜಾಯ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಫಿಲಿಪ್ಸ್‌ | ಮಲಯಾಳಂ | ಈ ಕೌಟುಂಬಿಕ ಸಿನಿಮಾದಲ್ಲಿ ತಂದೆ-ಮಗಳ ಬಾಂಧವ್ಯವನ್ನು ತೋರಿಸಲಾಗಿದೆ. ತಾಯಿಯಲ್ಲದೇ ಬೆಳೆಯುವ ಮಗು ತನ್ನ ಸಂಪೂರ್ಣ ಗಮನವನ್ನು ಚೆಸ್‌ ಆಟದಲ್ಲಿ ಕೇಂದ್ರೀಕರಿಸುತ್ತಿರುತ್ತಾಳೆ. ಚೆಸ್‌ ಅಲ್ಲದೇ ಅವಳ ಗಮನವನ್ನು ಬೇರೆ ಕಡೆಗೂ ಸೆಳೆಯಲು ಅವಳ ತಂದೆ ಪ್ರಯತ್ನಿಸುತ್ತಿರುತ್ತಾನೆ. ಈ ಚಿತ್ರವನ್ನು ಆಲ್ಫ್ರೆಡ್ ಕುರಿಯನ್ ಜೋಸೆಫ್ ನಿರ್ದೇಶಿಸಿದ್ದಾರೆ. ಮಾತುಕುಟ್ಟಿ ಕ್ಸೇವಿಯರ್ ಚಿತ್ರಕಥೆ ಬರೆದಿದ್ದಾರೆ. Little
Big Films ಬ್ಯಾನರ್‌ ಸುವಿನ್ ಕೆ ವರ್ಕಿ ಮತ್ತು ಪ್ರಶೋಭ್ ಕೃಷ್ಣ ನಿರ್ಮಿಸಿದ್ದಾರೆ.

ಡ್ಯಾನ್ಸ್‌ ಪಾರ್ಟಿ | ಮಲಯಾಳಂ | ಈ ಚಿತ್ರವು ಸಂಪೂರ್ಣ ಡ್ಯಾನ್‌ ಅನ್ನೇ ವಸ್ತುವಾಗಿಸಿಕೊಂಡು ನಿರ್ಮಾಣಗೊಂಡಿದೆ. ಸ್ನೇಹಿತರ ಗುಂಪೊಂದು ಪ್ರತೀ ಪಾರ್ಟಿಯಲ್ಲೂ ಹೊಸ ರೀತಿಯ ಡ್ಯಾನ್ಸ್ ಅನ್ನು ನಿಯೋಜಿಸಿ ಹೊಸ ಸ್ಟೆಪ್‌ಗಳನ್ನು ಅನ್ವೇಶಿಸುತ್ತಿರುತ್ತಾರೆ. ಇದರ ಜೊತೆಗೆ ಸ್ನೇಹಿತರ ತರಲೆ, ತುಂಟಾಟ, ಜೊತೆಗೆ ಒಂದು ಪ್ರೇಮಕಥೆಯೂ ಚಿತ್ರದಲ್ಲಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಶೈನ್ ಟಾಮ್ ಚಾಕೋ, ವಿಷ್ಣು ಉನ್ನಿಕೃಷ್ಣನ್ ಶ್ರೀನಾಥ್ ಭಾಸಿ, ಶೈನ್ ಟಾಮ್ ಚಾಕೋ, ಪ್ರಯಾಗ್‌ ಮಾರ್ಟಿನ್, ಶ್ರದ್ಧಾ ಗೋಕುಲ್, ಪ್ರೀತಿ ರಾಜೇಂದ್ರನ್, ಜೂಡ್ ಆಂಟೋನಿ, ಲೀನಾ, ಸಾಜು ನವೋದಯ, ಫಕ್ರು ಮೆಕಾರ್ಟಿನ್ ಇತರರು ಕಾಣಿಸಿಕೊಂಡಿದ್ದಾರೆ. ಸೋಹನ್ ಸೀನುಲಾಲ್ ನಿರ್ದೇಶನದ ಚಿತ್ರದಲ್ಲಿ ವಿಷ್ಣು ಉನ್ನಿಕೃಷ್ಣನ್, ಶ್ರೀನಾಥ್ ಭಾಸಿ ಮುಖ್ಯಭೂಮಿಕೆಯಲ್ಲಿದ್ದಾರೆ. ನೈಸಿ ರೆಜಿ ಸಿನಿಮಾ ನಿರ್ಮಿಸಿದ್ದು, ಬಿನು ಕುರಿಯನ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಬೈಜು ಪಾಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಅಸ್ತ್ರ | ಮಲಯಾಳಂ | ನಿಗೂಢ ಅಸ್ತ್ರ ಮತ್ತು ಚಿಹ್ನೆಗಳ ಹಿಂದಿನ ರಹಸ್ಯವನ್ನು ಅನಾವರಣಗೊಳಿಸುವ ಪೊಲೀಸ್ ಅಧಿಕಾರಿಗಳ ಗುಂಪಿನ ರೋಮಾಂಚಕ ಕಥೆಯನ್ನು ಚಲನಚಿತ್ರವು ಒಳಗೊಂಡಿದೆ. ಹಲವು ಘಟನೆಗಳಲ್ಲಿ ಪೊಲೀಸರನ್ನು ನಿರ್ದಯವಾಗಿ ಕೊಂದು ಪದೇ – ಪದೇ ಪೊಲೀಸರ ಮೇಲೆ ಒಂದು ದರೋಡೆಕೋರರ ಗುಂಪು ಹಲ್ಲೆ ಮಾಡುತ್ತಿರುತ್ತದೆ. ಆ ಗುಂಪನ್ನು ಕಂಡು ಹಿಡಿಯಲು ಪೊಲೀಸ್‌ ಇಲಾಖೆ ಹರಸಾಹಸ ಪಡುತ್ತಿರುತ್ತದೆ. ಆ ಸಂದರ್ಭದಲ್ಲಿ ಕಲಾಭವನ್ ಶಾಜೋನ್ ದಕ್ಷ ಅಧಿಕಾರಿಯಾಗಿ ಬಂದು ಈ ಘಟನೆಗಳಿಗೆ ಕಾರಣರಾದವರನ್ನು ಕಂಡು ಹಿಡಿಯಲು ಸಹಾಯ ಮಾಡುತ್ತಾನೆ. ಅಮಿತ್ ಚಕ್ಕಲಕಲ್, ಸುಹಾಸಿನಿ ಕುಮಾರನ್, ಸಂತೋಷ್ ಕೀಜತ್ತೂರ್, ಕಲಾಭವನ್ ಶಾಜೋನ್, ಸುಧೀರ್ ಕರಮಣ, ಸೆಂಥಿಲ್ ಕೃಷ್ಣ, ರೇಣು ಸೌಂಡರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಆಜಾದ್ ಅಲವಿಲ್ ನಿರ್ದೇಶಿಸಿದ್ದಾರೆ. ಪ್ರೇಮ್ ಕಲ್ಲಟ್, ಪ್ರೀನಂದ್ ಕಲ್ಲಟ್ ನಿರ್ಮಿಸಿದ್ದಾರೆ. ವಿನು ಕೆ ಮೋಹನ್ ಮತ್ತು ಜಿಜು ರಾಜ್ ಚಿತ್ರಕಥೆ ರಚಿಸಿದ್ದಾರೆ. ಮಣಿ ಪೆರುಮಾಳ್ ಛಾಯಾಗ್ರಹಣ, ಅಖಿಲೇಶ್ ಮೋಹನ್ ಸಂಕಲನ, ಮೋಹನ್ ಸಿತಾರ ಅವರ ಸಂಗೀತ ಸಂಯೋಜನೆಯಿದೆ.

LEAVE A REPLY

Connect with

Please enter your comment!
Please enter your name here