ಇತ್ತೀಚೆಗೆ ನಾವು ಓಟೀಟಿಯಲ್ಲಿ ನೋಡಿ ಅಭ್ಯಾಸವಾಗಿರುವ ತಿರುವುಗಳು ಈ ಚಿತ್ರದಲ್ಲಿ ಕಡಿಮೆ. ಅವುಗಳ ಹೊರತಾಗಿಯೂ ಚಿತ್ರದಲ್ಲಿ ಕೆಲವು ಅದ್ಭುತವಾದ ಸನ್ನಿವೇಶಗಳಿವೆ. ಇದೊಂದು ಷಡ್ಜಕ್ಕೇರದ ಲಲಿತ ರಾಗ. ಮಲಯಾಳಂ ಸಿನಿಮಾ ‘ಲಲಿತಂ ಸುಂದರಂ’ ಡಿಸ್ನಿ+ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
”ಒಂದೊಮ್ಮೆ ನಾವು ಕಾಲದ ಪುಟಗಳನ್ನು ಹಿಂದೆ ಸರಿಸಿ, ಆಡಿದ ಮಾತುಗಳನ್ನು ವಾಪಸ್ ತೆಗೆದುಕೊಳ್ಳುವಂತಿದ್ದರೆ… ನಮ್ಮ ನಡವಳಿಕೆಯನ್ನು ತಿದ್ದುವಂತಿದ್ದರೆ…” – ಚಿತ್ರದ ಒಂದು ಪಾತ್ರ ಈ ಮಾತನ್ನು ಹೇಳುತ್ತದೆ. ವಯಸ್ಸು ಹಸಿಯಾಗಿದ್ದಾಗ ಸಾಧಾರಣವಾಗಿ ನಮ್ಮ ಯಾವ ನಡೆಗಳ ಬಗ್ಗೆಯೂ ಪಶ್ಚಾತ್ತಾಪ ಇರುವುದಿಲ್ಲ. ವಯಸ್ಸು ಕೊಡುವ ಆತ್ಮವಿಶ್ವಾಸ ಅಂಥಹುದು. ಆದರೆ ನಡುವಯಸ್ಸಿನಲ್ಲಿ ಹೆಜ್ಜೆಯಿಡುವಾಗ ನಮ್ಮದೇ ದೇಹ ನಮ್ಮ ಮಾತು ಕೇಳುವುದಿಲ್ಲ, ನಮ್ಮದೇ ಕೈಕಾಲುಗಳು ನಮಗೆ ಪ್ರತಿರೋಧ ಒಡ್ಡುತ್ತಿರುತ್ತವೆ. ಅದಕ್ಕೆ ಆರ್ಥಿಕ ಸಂಕಷ್ಟವನ್ನು ಕೂಡಿ, ನಮ್ಮ ಕುಟುಂಬ ನಮ್ಮ ಬೆನ್ನಿಗಿದೆ, ಅದಕ್ಕೆ ನಾನು ಬೇಕು ಎನ್ನುವ ವಿಶ್ವಾಸವನ್ನು ಕಳೆದರೆ ಸಿಗುವ ಮೊತ್ತ ‘ಲಲಿತಂ ಸುಂದರಂ’ ಚಿತ್ರದ ಸನ್ನಿ.
ಬಿಜು ಮೆನನ್ ಅದ್ಭುತವಾದ ನಟ. ಅಳದೆ, ಕೂಗಾಡದೆ, ನಮ್ಮ ಹೃದಯಗಳು ಬಿಕ್ಕುವಂತೆ ಮಾಡಬಲ್ಲಾತ. ಜೊತೆಗೆ ಈ ಚಿತ್ರದಲ್ಲಿನ ಪಾತ್ರ ಅವನಿಗಾಗಿಯೇ ಬರೆದಂತಿದೆ. ಆದರೆ ಚಿತ್ರದ ಸರ್ಪ್ರೈಸ್ ಪ್ಯಾಕೇಜ್ ಎಂದರೆ ಸೈಜು ಕುರುಪ್. ಪಾತ್ರ ಚಿಕ್ಕದಾದರೂ ಆತನ ಅನಾಯಾಸ ನಟನೆ ‘ಕಭಿಕಭಿ’ ಚಿತ್ರದ ಶಶಿಕಪೂರ್‌ನನ್ನು ನೆನಪಿಸುತ್ತದೆ. ಚಿತ್ರದ ಆಯಕಟ್ಟಿನ ಸನ್ನಿವೇಶಗಳಲ್ಲಿ ಆತನ ಪ್ರತಿಕ್ರಿಯೆ ಚಿತ್ರಕ್ಕೆ ಇನ್ನೊಂದು ಆಯಾಮ ಕೊಟ್ಟುಬಿಡುತ್ತದೆ. ಈ ಚಿತ್ರ ನೋಡಲು ನನಗಿದ್ದ ಮುಖ್ಯ ಕಾರಣ ಅದು ಮಂಜು ವಾರಿಯರ್ ನಿರ್ಮಾಣ ಸಂಸ್ಥೆಯ ಚಿತ್ರ ಎನ್ನುವುದು. ಆಕೆಯ ಸಹೋದರ ಮಧು ವಾರಿಯರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ನಟಿಯೊಬ್ಬಳು ನಿರ್ಮಾಣ ಸಂಸ್ಥೆಯೊಂದನ್ನು ಪ್ರಾರಂಭಿಸಿ, ಒಳ್ಳೆಯ ಚಿತ್ರಗಳನ್ನು ಕೊಡುವಂತಾದರೆ ಚಿತ್ರೋದ್ಯಮದ ಅನೇಕ ಪವರ್ ಸಮೀಕರಣಗಳಲ್ಲಿ ಬದಲಾವಣೆಗಳನ್ನು ನೋಡಬಹುದೇನೋ ಎನ್ನುವುದು ನನ್ನ ಹಾರೈಕೆ. ಈ ಹಿಂದೆ ಸಹ ಅಂದರೆ ಅಂಜಲಿ, ಸಾವಿತ್ರಿ, ಕನ್ನಡದಲ್ಲಿ ಎಂ.ವಿ.ರಾಜಮ್ಮನವರ ಕಾಲದಲ್ಲೇ ನಟಿಯರು ಚಿತ್ರ ನಿರ್ಮಿಸಿದ್ದಾರೆ. ಆದರೆ ಬದಲಾದ ಈ ಕಾಲಘಟ್ಟದಲ್ಲಿ ಇದು ಕೇವಲ ಸ್ವತಂತ್ರ ಸಂಘಟನೆಯಾಗಿ ಉಳಿಯದೆ, ಸಾಂಸ್ಥಿಕ ರೂಪವೊಂದನ್ನು ಪಡೆದು ಹೆಚ್ಚಿನದೇನಕ್ಕೋ ಕಾರಣವಾಗಬಹುದು ಎನ್ನುವ ಆಸೆ ನನ್ನದು.
ಚಿತ್ರ ನೋಡಲು ಶುರು ಮಾಡಿದ್ದು ಆ ಕಾರಣಕ್ಕಾದರೂ ಚಿತ್ರ ಪ್ರಾರಂಭವಾದ ಮೇಲೆ ಕಥೆಗಿಂತಾ ಹೆಚ್ಚಾಗಿ ಚಿತ್ರದ ಕಲಾವಿದರು ನಮ್ಮನ್ನು ಅಲ್ಲಾಡಲು ಬಿಡುವುದಿಲ್ಲ. ಇದೊಂದು ಮಧುರವಾದ ಕೌಟುಂಬಿಕ ಚಿತ್ರ. ಮೆದುಳಿಗೆ ಹೆಚ್ಚೇನೂ ಕೆಲಸ ಕೊಡದೆ, ಹೆಸರೇ ಹೇಳುವ ಹಾಗೆ ಲಲಿತವೂ ಸುಂದರವೂ ಆಗಿರುವ ಚಿತ್ರ. ಚಿತ್ರದ ವಸ್ತು ಈಗಾಗಲೇ ಹಲವು ಭಾಷೆಗಳಲ್ಲಿ ಬಂದಿರುವುದೇ ಆದರೂ ವಸ್ತುವಿನ ನಿರ್ವಹಣೆ ವಿಭಿನ್ನವಾಗಿದೆ. ಓಟಿಟಿ ಇಂತಹ ಚಿತ್ರಗಳಿಗೆ ಒಳ್ಳೆಯ ವೇದಿಕೆಯನ್ನು ಒದಗಿಸಿದರೆ, ಅದಕ್ಕೆ ಪ್ರತಿಯಾಗಿ ಇಂತಹ ಚಿತ್ರಗಳು ಓಟಿಟಿಯ ವ್ಯಾಪ್ತಿಯನ್ನು ನಿರ್ದಿಷ್ಟ ವಯೋಮಾನ ಮತ್ತು ನಗರ-ಪಟ್ಟಣಗಳಾಚೆಗೂ ಹಿಗ್ಗಿಸುತ್ತವೆ. ಒಂದೊಮ್ಮೆ ಹೇಳುತ್ತಿದ್ದಂತೆ ಯಾವುದೇ ಚಿತ್ರ ಗೆಲ್ಲಬೇಕಾದರೆ ಅದಕ್ಕೆ ಕೌಟುಂಬಿಕ ಪ್ರೇಕ್ಷಕರು ಅಗತ್ಯ. ಇಂತಹ ಚಿತ್ರಗಳು ಆ ಕೆಲಸವನ್ನು ಮಾಡಬಹುದು.
ಒಂದು ಕುಟುಂಬ. ಮೂವರು ಮಕ್ಕಳು. ಕಡೆಯ ಮಗ ಮತ್ತು ಮಿಕ್ಕಿಬ್ಬರ ನಡುವೆ ವಯಸ್ಸಿನಲ್ಲಿ ತುಂಬಾ ಅಂತರ. ಹೀಗಾಗಿ ಆ ಇಬ್ಬರಿಗೂ ಅವನು ‘ಪುಟ್ಟ’, ಒಂದು ರೀತಿಯಲ್ಲಿ ತಮ್ಮದೇ ಮಗುವಿನಂತೆ. ಆ ಕುಟುಂಬವನ್ನು ಒಂದು ಮುಷ್ಟಿಯಾಗಿ ಹಿಡಿದಿಟ್ಟ ಶಕ್ತಿ ಅಮ್ಮ. ವೀಡಿಯೋಗಳ ಮೂಲಕ, ಅವುಗಳ ಮೂಲಕ ಸಂವಹನ ಮಾಡುವುದರ ಮೂಲಕ ಮಕ್ಕಳೊಡನೆ ಒಂದು ಸಂವಾದವನ್ನು ನಿರಂತರವಾಗಿ ಜಾರಿಯಲ್ಲಿಟ್ಟಿರುತ್ತಾಳೆ. ಈಗ ಆ ಅಮ್ಮ ಇಲ್ಲ. ಅವಳ ಸಾವಿನ ದಿನದ ನೆನಪಿನಲ್ಲಿ ಕ್ರಿಸ್ಮಸ್ ಆಚರಣೆಗೆ ಬೇರೆಬೇರೆ ಊರುಗಳಲ್ಲಿರುವ ಮಕ್ಕಳೆಲ್ಲಾ ಮನೆಗೆ ಬರಬೇಕು.
ಆನಿ ಯಶಸ್ವೀ ಮಹಿಳೆ. ಒಂದು ಕಂಪನಿಯ ಸಿಇಓ. ಅವಳ ಗಂಡ ಮರ್ಚೆಂಟ್ ನೇವಿಯಲ್ಲಿದ್ದವನು, ಈಗ ಸ್ಟೇ ಅಟ್ ಹೋಂ ಪತಿ. ಹೆಂಡತಿಯ ದುಡಿಮೆಯ ಬಗ್ಗೆ, ಅವಳ ಯಶಸ್ಸಿನ ಬಗ್ಗೆ ಅವನಿಗೆ ಯಾವುದೇ ಕೀಳರಿಮೆ ಇಲ್ಲ. ಅವನು ಬಯಸಿಯೇ ತೆಗೆದುಕೊಂಡ ಪಾತ್ರ ಅದು. ಇಬ್ಬರು ಮಕ್ಕಳು. ಅಮ್ಮನ ಬ್ಯುಸಿ ಶೆಡ್ಯೂಲಿನ ಬಗ್ಗೆ ಮಕ್ಕಳು ಚುಡಾಯಿಸಿ ಜೋಕ್ ಮಾಡುತ್ತಿರುತ್ತಾರೆ, ಆದರೆ ಅವರಲ್ಲಿ ಆ ಬಗ್ಗೆ ಯಾವುದೇ ಕಹಿ ಉಳಿಯದಂತೆ ಗಂಡ ನೋಡಿಕೊಳ್ಳುತ್ತಿರುತ್ತಾನೆ. ಇಂದಿನ ಚಿತ್ರದಲ್ಲಿ ಹೀಗೆ ಸ್ಟೇ ಅಟ್ ಹೋಂ ಪತಿಯ ಪಾತ್ರವನ್ನು ಪರಿಚಯಿಸಿರುವುದೇ ಹೊಸ ಸಂಗತಿ.
ಸನ್ನಿ ಒಬ್ಬ ಈವೆಂಟ್ ಮ್ಯಾನೇಜರ್. ಇದು ಆತನ ಎಷ್ಟನೆಯದೋ ಸಾಹಸ. ಯಾವುದೂ ಕೈಗೆ ಹತ್ತುತ್ತಿಲ್ಲ. ಅವನ ಹೆಂಡತಿ ಅವನಿಂದ ದೂರಾಗುವ ಹಂತದಲ್ಲಿದ್ದಾಳೆ. ಮನೆಗೆ ದೊಡ್ಡ ಮಗ ಅವನು. ಅವನೆದುರಲ್ಲಿ ಮಕ್ಕಳಾಗಿದ್ದ ತಂಗಿ, ತಮ್ಮ ಇಬ್ಬರೂ ಬದುಕಿನಲ್ಲಿ ಗೆಲುವು ಕಂಡಿದ್ದಾರೆ, ಸ್ಥಿರತೆ ಸಂಪಾದಿಸಿಕೊಂಡಿದ್ದಾರೆ. ಆದರೆ ಇವನು ವೈಯಕ್ತಿಕ ಮತ್ತು ವೃತ್ತಿ ಬದುಕು ಎರಡರಲ್ಲೂ ಸೋತವನು.
ಮೂರನೆಯ ಮಗ ಜೆರ್ರಿ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗದಲ್ಲಿದ್ದಾನೆ. ಸಿಮಿ ಆತನ ಲಿವ್ ಇನ್ ಸಂಗಾತಿ. ಅವನಿಗಿಂತ ನಾಲ್ಕು ವರ್ಷ ದೊಡ್ಡವಳು, ಡಿವೋರ್ಸಿ. ಬಹುಶಃ ಇದೂ ಒಂದು ಹೊಸತೇ! ಅವನಿಗೆ ಅಕ್ಕ ಎಂದರೆ ಅಮ್ಮನಂತೆ, ಅವಳನ್ನು ಅವನು ಕರೆಯುವುದೂ ಆನಿ ಮಾ ಎಂದು. ಆದರೆ ಸನ್ನಿ ಮತ್ತು ಅವನ ನಡುವೆ ಒಂದು ಕಂದಕ ಇದೆ ಮತ್ತು ಅದು ಇವನ ಕಡೆಯಿಂದಲೇ ಇದೆ. ಸನ್ನಿಯ ಮಟ್ಟಿಗೆ ಅವನು ಇಂದಿಗೂ ‘ಪುಟ್ಟ’. ಆದರೆ ಹಿಂದೆ ನಡೆದ ಒಂದು ಘಟನೆಯ ಕಾರಣಕ್ಕೆ ಜೆರ್ರಿ, ಅಣ್ಣನನ್ನು ತನ್ನ ಬದುಕಿನ ಪುಟಗಳಿಂದ ಅಳಿಸಿ ಹಾಕಿದ್ದಾನೆ. ಸನ್ನಿಯ ಮಟ್ಟಿಗೆ ಅದೊಂದು ದೊಡ್ಡ ಹೊಡೆತ.
ಇವರೆಲ್ಲಾ ಊರಿನಲ್ಲಿರುವ ಮನೆಗೆ ಬಂದಿದ್ದಾರೆ. ಅಪ್ಪನಿಗೆ ಮಕ್ಕಳನ್ನು ಕಂಡು ಸಂತಸ. ಆತನ ಬದುಕಿನ ಒಂದೇ ಹೈಲೈಟ್ ಈ ಮಕ್ಕಳ ಬರುವಿಕೆ. ಸನ್ನಿಯ ಹೆಂಡತಿ ಬಂದಿಲ್ಲ, ಅದಕ್ಕಾಗಿ ಏನೋ ನೆಪ ಹೇಳುತ್ತಾನೆ. ಜೆರ್ರಿಯ ಲಿವ್ ಇನ್ ಗೆಳತಿಯ ಬಗ್ಗೆ ಮೊದಲು ಎಲ್ಲರಿಗೂ ಕಸಿವಿಸಿಯಾದರೂ ಆಮೇಲೆ ಎಲ್ಲರೂ ಅವಳನ್ನು ಸ್ವಾಗತಿಸುತ್ತಾರೆ. ಅಮ್ಮನ ವಾರ್ಷಿಕ ತಿಥಿ ಮುಗಿಸಿಕೊಂಡು ಹೊರಟುಬಿಡುತ್ತೇವೆ ಎಂದ ಮಕ್ಕಳನ್ನು ಭಾವನಾತ್ಮಕವಾಗಿ ಕಟ್ಟಿ ಹಾಕಲು ತಂದೆ, ತಾಯಿಯ ಕಡೆಯ ವೀಡಿಯೋ ಹಾಕುತ್ತಾನೆ. ಆ ರೆಕಾರ್ಡಿಂಗ್ ಮಾಡುವಾಗಲೇ ಅಮ್ಮ ಕಡೆ ಉಸಿರೆಳೆದಿರುತ್ತಾಳೆ. ಆನಿಯ ಗಂಡ ಅವಳನ್ನು ಸಂಭಾಳಿಸುತ್ತಾನೆ, ಜೆರ್ರಿಯ ಸಂಗಾತಿ ಅವನನ್ನು ಆತು ಹಿಡಿಯುತ್ತಾಳೆ. ಸನ್ನಿ ಒಬ್ಬನೇ ಹೊರಗೆ ಬಂದು ಬಿಕ್ಕಳಿಸುತ್ತಾನೆ. ಅಮ್ಮನ ಕಡೆ ಆಸೆಯಾಗಿ ಮೂವರು ಮಕ್ಕಳೂ ಕೆಲವು ದಿನ ಅಲ್ಲೇ ಉಳಿಯುವಂತಾಗುತ್ತದೆ. ಆಗ ಅವರೆಲ್ಲರ ಭೂತದ ನೆರಳುಗಳೂ ತಲೆ ಎತ್ತುತ್ತವೆ. ಏಕೆಂದರೆ ಆ ಮನೆಯಲ್ಲಿರುವುದು ಭೂತಕಾಲ ಮಾತ್ರ, ಅದು ಎಲ್ಲರೂ ಮರೆಯಲು ಯತ್ನಿಸುತ್ತಿರುವ ಭೂತಕಾಲ. ಆ ಭೂತ ಮತ್ತು ವರ್ತಮಾನದ ತಿಕ್ಕಾಟ ಚಿತ್ರವನ್ನು ಮುನ್ನಡೆಸುತ್ತದೆ.
ಮನೆಯ ಕೆಲಸದವನಿಗೆ ಮನೆಯಲ್ಲೇ ಇರುವ ಅಳಿಯನ ಬಗ್ಗೆ ಸಸಾರ. ಆದರೆ ಅಳಿಯನ ಆತ್ಮವಿಶ್ವಾಸ ಯಾವ ಮಟ್ಟಿನದು ಎಂದರೆ, ‘ಅಯ್ಯೋ ಹಾಗೇನು ಇಲ್ಲ ಬಿಡು, ನಾನು ನೇವಿಯಲ್ಲೂ ಅಡಿಗೆಯವನೇ ಆಗಿದ್ದೆ’ ಎಂದು ತಮಾಷೆ ಮಾಡುತ್ತಾನೆ ಈ ನೇವಿ ಕ್ಯಾಪ್ಟನ್. ಆ ಊರಿನಲ್ಲೊಬ್ಬ ನಡುವಯಸ್ಸಿನ ಅವಿವಾಹಿತ, ಸನ್ನಿಯ ಸ್ನೇಹಿತ. ಅವನಿಗೆ ಆನಿಯ ಬಗೆಗೆ ಹಳೆಯದೊಂದು ಪ್ರೀತಿ, ಅದು ಸನ್ನಿಗೆ ಮಾತ್ರ ಗೊತ್ತು, ಬಿಟ್ಟರೆ ಆನಿಯ ಗಂಡ ಅದನ್ನು ಗಮನಿಸುತ್ತಾನೆ. ಆ ಬಗ್ಗೆ ಕೇಳಿದಾಗ ಆ ಸ್ನೇಹಿತ ಹೇಳುವುದು, ‘ಗೊತ್ತಲ್ಲಾ, ಆನಿಗೆ ಎಲ್ಲವೂ ಬೆಸ್ಟ್ ಆಗಬೇಕು. ಜೀವನ ಸಂಗಾತಿಯಾಗಿ ಅವಳು ಆಯ್ದುಕೊಂಡಿದ್ದೂ ಸಹ ಬೆಸ್ಟ್ ಅನ್ನೇ!’ ಅಷ್ಟೇ, ಯಾವುದೇ ಕಹಿ ಇಲ್ಲ, ಮೆಲೋಡ್ರಾಮ ಇಲ್ಲ. ಸಣ್ಣಪುಟ್ಟ ಇರಸರಿಕೆಗಳ ನಡುವೆ ಒಂದು ಸಲ ಡೈನಿಂಗ್ ಟೇಬಲ್ ನಲ್ಲಿ ಜೆರ್ರಿ ಅಣ್ಣನನ್ನು ಕಿಚಾಯಿಸಿ ಸತ್ಯದ ಸ್ಫೋಟ ಮಾಡುತ್ತಾನೆ. ಅವನ ಮತ್ತೊಂದು ಬ್ಯುಸಿನೆಸ್ ಸಹ ನೆಲಕಚ್ಚಿರುವುದು, ಮದುವೆ ಮುರಿದಿರುವುದು ಎಲ್ಲವನ್ನೂ ಹೇಳಿಬಿಡುತ್ತಾನೆ.
ಮನೆಯವರೆಲ್ಲರೆದುರಲ್ಲಿ ಸನ್ನಿ ಅನುಭವಿಸುವ ಅವಮಾನ… ನೋವು… ಜೆರ್ರಿ ಮತ್ತು ಸನ್ನಿಯ ನಡುವಲ್ಲಿ ತಲೆ ಎತ್ತಿದ ಆ ಭೂತದ ಬ್ಯಾಗೇಜ್ ಯಾವುದು? ಒಂದೊಮ್ಮೆ ರಾಜ್ಯ ಮಟ್ಟದ ಹಾಡಿನ ಪೈಪೋಟಿಯಲ್ಲಿದ್ದ ಜೆರ್ರಿ ಇಂದು ಏಕೆ ಹಾಡನ್ನು ಕೇಳುವುದನ್ನೂ ದ್ವೇಷಿಸುತ್ತಿದ್ದಾನೆ? ಮನೆಯ ಪುಟ್ಟ ಮಗನಂತಿದ್ದ ಜೆರ್ರಿ ಅಣ್ಣನ ಮೇಲೆ ಕೈ ಮಾಡಿಬಿಡುತ್ತಾನೆ. ನಿಯಂತ್ರಣಕ್ಕೇ ಸಿಗದಂತಿದ್ದ ಅವನನ್ನು ತಡೆದು ನಿಲ್ಲಿಸುವುದು ಆನಿ ಹೇಳುವ ಒಂದು ಮಾತು, ‘ನೀನು ನನ್ನ ಮಗನಾಗಿದ್ದಿದ್ದರೆ ಆಗ ಸರಿಯಾಗಿ ಬುದ್ಧಿ ಕಲಿಸುತ್ತಿದ್ದೆ’, ಅಕ್ಕನನ್ನು ಅಮ್ಮ ಎಂದೇ ಅಂದುಕೊಂಡಿರುವ ಜೆರ್ರಿಗೆ ಅದು ಹೊಡೆತ. ಇದು ಕಥೆಯ ಒಂದು ಹಂತ.
ಇನ್ನೊಂದು ಹಂತದಲ್ಲಿ ಆ ಘಟನೆಯಲ್ಲಿ ಸನ್ನಿ ನಿಜಕ್ಕೂ ಏಕೆ ಹಾಗೆ ನಡೆದುಕೊಂಡ ಎಂದು ಜೆರ್ರಿಗೆ ಗೊತ್ತಾಗುತ್ತದೆ. ಅಂದು ಆನಿಯ ಮಗಳ ಹುಟ್ಟುಹಬ್ಬ. ಅಣ್ಣನಿಗೆ ಸಾರಿ ಹೇಳಬೇಕು ಎಂದುಕೊಳ್ಳುವಷ್ಟರಲ್ಲಿ ಸಮಾರಂಭಕ್ಕೆ ಸನ್ನಿಯ ಹೆಂಡತಿ ಬರುತ್ತಾಳೆ. ಅವರಿಬ್ಬರ ಸಂಸಾರದ ಪಂಚಾಯತಿ… ಹೀಗೆ ಕಥೆ ಮುಂದೆ ನಡೆಯುತ್ತದೆ. ಈ ಸಂದರ್ಭದಲ್ಲಿ ಸನ್ನಿಯ ಹೆಂಡತಿ, ‘ನನ್ನ ಜೊತೆ ಒಂದು ಸಿನಿಮಾಗೆ ಬಂದು ಎಷ್ಟು ದಿನ ಆಯಿತು ಕೇಳಿ’ ಎಂದು ಆರೋಪ ಮಾಡುತ್ತಾಳೆ. ಆನಿ ಅತ್ತಿಗೆಯ ಪರ ನಿಲ್ಲುತ್ತಾಳೆ. ಆನಿಯ ಗಂಡ ಚಕ್ಕನೆ ಹೆಂಡತಿಯ ಕಡೆ ನೋಡುತ್ತಾನೆ. ಏಕೆಂದರೆ ಅವಳೂ ಅದನ್ನೆಲ್ಲಾ ತಪ್ಪಿಸುವಷ್ಟು ಕೆಲಸದಲ್ಲಿ ಮುಳುಗಿದ್ದಾಳೆ.
ಇನ್ನೊಂದು ದೃಶ್ಯದಲ್ಲಿ ಸನ್ನಿ ಆಸ್ಪತ್ರೆಯಲ್ಲಿದ್ದಾನೆ. ಡಾಕ್ಟರು ಒಬ್ಬರು ಮಾತ್ರ ಒಳಗೆ ಹೋಗಿ ಎನ್ನುತ್ತಾರೆ. ಆನಿ ಸನ್ನಿಯ ಹೆಂಡತಿಯನ್ನು ಹೋಗು ಎನ್ನುತ್ತಾಳೆ. ಅವಳು ಮಾವನ ಕಡೆ ನೋಡಿ ಹೋಗಲೇ ಎನ್ನುವಂತೆ ಕೇಳುತ್ತಾಳೆ. ಆದರೆ ಅಷ್ಟರಲ್ಲಿ ಮಾತೇ ಇಲ್ಲದೆ, ತಡೆಯಲಾಗದಂತೆ, ಅದು ತನ್ನ ಹಕ್ಕು ಎನ್ನುವಂತೆ ಜೆರ್ರಿ ಕೋಣೆಯೊಳಗೆ ಹೋಗುತ್ತಾನೆ. ಚಿತ್ರದ ಸುಂದರ ದೃಶ್ಯಗಳಲ್ಲಿ ಇದೂ ಒಂದು.
ಹಾಗೇ ಇಷ್ಟವಾದ ಇನ್ನೊಂದು ಸಂಭಾಷಣೆ, ಆನಿಯ ಮಗಳು ಅನಾಥಾಶ್ರಮದ ಮಕ್ಕಳನ್ನು ನೋಡಿ, ‘ಅನಾಥರು ಎಂದರೆ?’ ಎಂದು ಕೇಳುತ್ತಾಳೆ. ಜೆರ್ರಿಯ ಸಂಗಾತಿ, ‘…ಅಂದರೆ ದೇವರ ಸ್ವಂತ ಮಕ್ಕಳು’ ಎನ್ನುತ್ತಾಳೆ. ಇತ್ತೀಚೆಗೆ ನಾವು ಓಟೀಟಿಯಲ್ಲಿ ನೋಡಿ ಅಭ್ಯಾಸವಾಗಿರುವ ತಿರುವುಗಳು ಈ ಚಿತ್ರದಲ್ಲಿ ಕಡಿಮೆ. ಅವುಗಳ ಹೊರತಾಗಿಯೂ ಚಿತ್ರದಲ್ಲಿ ಕೆಲವು ಅದ್ಭುತವಾದ ಸನ್ನಿವೇಶಗಳಿವೆ. ಇದೊಂದು ಷಡ್ಜಕ್ಕೇರದ ಲಲಿತ ರಾಗ. ಸಂಗೀತ ಮತ್ತು ಛಾಯಾಗ್ರಹಣ ಸೊಗಸಾಗಿದೆ. ಕಡೆಯ ಭಾಗದ ‘ಆಮೇಲೆ ಎಲ್ಲರೂ ಸುಖವಾಗಿದ್ದರು…’ ಎನ್ನುವುದನ್ನು ಹಟಹಿಡಿದು ದೃಶ್ಯವಾಗಿಸದೆ ಇದ್ದಿದ್ದರೆ ಚಿತ್ರ ಇನ್ನೂ ಚೆನ್ನಾಗಿರುತ್ತಿತ್ತು!