ಪ್ಯಾನ್ ಇಂಡಿಯಾ ಸಿನಿಮಾ ‘KGF2’ಗೆ ಅಗತ್ಯವಿರುವ ಹೈಪ್ ಸೃಷ್ಟಿಸುವಂಥ ಪ್ರೊಮೋಷನ್ ಹಮ್ಮಿಕೊಂಡಿದೆ ಹೊಂಬಾಳೆ ಫಿಲ್ಮ್ಸ್. ಸೋಷಿಯಲ್ ಮೀಡಿಯಾವನ್ನು ಚೆನ್ನಾಗಿ ಬಳಕೆ ಮಾಡಿಕೊಂಡ ಚಿತ್ರತಂಡ ಸಿನಿಮಾ ಕುರಿತಾಗಿ ಭಾರತದಾದ್ಯಂತ ಚರ್ಚೆ ಜಾರಿಯಲ್ಲಿರುವಂತೆ ನೋಡಿಕೊಂಡಿತು.
ಬಹುನಿರೀಕ್ಷಿತ ಸಿನಿಮಾ ‘KGF2’ ಇಂದು ಮಧ್ಯರಾತ್ರಿಯಿಂದಲೇ ಸಿನಿಪ್ರಿಯರಿಗೆ ಸಿಗಲಿದೆ. ದೇಶದಾದ್ಯಂತ ದೊಡ್ಡ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾವನ್ನು ಮೊದಲ ದಿನವೇ ಕಣ್ತುಂಬಿಕೊಳ್ಳಬೇಕೆಂದು ದುಬಾರಿ ಟಿಕೆಟ್ ಹಣ ತೆತ್ತು ಜನರು ಟಿಕೇಟು ಖರೀದಿಸಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ ಎನ್ನುವುದು ಒಂದು ಅಂದಾಜು. ಸಿನಿಮಾ ಪ್ರಿಯರಲ್ಲಿ ಇಂಥದ್ದೊಂದು ಕ್ರೇಝ್ ಸೃಷ್ಟಿಸುವಲ್ಲಿ ಹೊಂಬಾಳೆ ಫಿಲ್ಮ್ಸ್ ಹಮ್ಮಿಕೊಂಡ ಪ್ರೊಮೋಷನ್ ಸ್ಟ್ರ್ಯಾಟಜಿ ಗಾಂಧಿನಗರದಲ್ಲಿ ಗಮನ ಸೆಳೆದಿದೆ. ಟ್ರೈಲರ್ ರಿಲೀಸ್ ಮಾಡುವ ಮೂಲಕ ಪ್ರೊಮೋಷನ್‌ಗೆ ಚಾಲನೆ ನೀಡಿದ ತಂಡ ನಂತರ ದೇಶದ ಪ್ರಮುಖ ನಗರಗಳಲ್ಲಿ ಪ್ರೊಮೋಷನಲ್ ಇವೆಂಟ್ಸ್‌ಗಳನ್ನು ಹಮ್ಮಿಕೊಳ್ಳುತ್ತಾ ಬಂತು.
ಕನ್ನಡ ನೆಲದಲ್ಲಿ ನಡೆದ ಟ್ರೈಲರ್ ರಿಲೀಸ್ ಇವೆಂಟ್‌ಗೆ ದೇಶದ ಹಲವೆಡೆಯಿಂದ ಪತ್ರಕರ್ತರು ಆಗಮಿಸಿದರು. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರೆಲ್ಲರೂ ಮೊದಲ ಬಾರಿಗೆ ಅಲ್ಲಿ ಒಟ್ಟಾಗಿ ಕಾಣಿಸಿಕೊಂಡರು. ಬೆಂಗಳೂರು, ದಿಲ್ಲಿ, ಮುಂಬಯಿ ಕಾರ್ಯಕ್ರಮಗಳಲ್ಲಿ ಚಿತ್ರದಲ್ಲಿ ನಟಿಸಿದ ಬಾಲಿವುಡ್ ತಾರೆಯರಾದ ಸಂಜಯ್ ದತ್, ರವೀನಾ ಟಂಡನ್ ಗಮನ ಸೆಳೆದರು. ಅವರ ಪಾಲ್ಗೊಳ್ಳುವಿಕೆಯಿಂದಾಗಿ ಚಿತ್ರದ ಪ್ಯಾನ್ ಇಂಡಿಯಾ ಇಮೇಜಿಗೆ ಬಲ ಬಂದಿದ್ದು ಹೌದು. ಮುಂದೆ ಚೆನ್ನೈ, ಕೊಚ್ಚಿ, ತಿರುಪತಿ, ಹೈದರಾಬಾದ್‌ನಲ್ಲಿ ಹಮ್ಮಿಕೊಂಡ ಪ್ರೊಮೋಷನ್ ಇವೆಂಟ್‌ಗಳ ಮೂಲಕ ಆ ಭಾಗದ ಸಿನಿಪ್ರೇಕ್ಷಕರನ್ನು ತಲುಪಲು ಸಾಧ್ಯವಾಯ್ತು. ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ಹಿರೋಯಿನ್ ಶ್ರೀನಿಧಿ ಶೆಟ್ಟಿ ನೂರಾರು ಸಂದರ್ಶನಗಳನ್ನು ನೀಡಿದರು. ಪ್ರೊಮೋಷನ್ ಇವೆಂಟ್‌ಗಳು ಸಿನಿಮಾ ಪ್ರಚಾರಕ್ಕೆ ದೊಡ್ಡ ಮಟ್ಟದಲ್ಲಿ ನೆರವಾದವು. ಇನ್ನೊಂದೆಡೆ ಚಿತ್ರತಂಡ ಸೋಷಿಯಲ್ ಮೀಡಿಯಾ, #KGFVerse ಮೂಲಕ ಚಿತ್ರದ ಕುರಿತಾಗಿ ಕ್ರೇಝ್ ಜಾರಿಯಲ್ಲಿಟ್ಟಿದೆ.