ನೆನಪಿರಲಿ ಪ್ರೇಮ್ ಸಣ್ಣ ಗ್ಯಾಪ್‌ ನಂತರ ಮತ್ತೆ ಬಣ್ಣ ಹಚ್ಚಿದ್ದಾರೆ. ‘ಅಪ್ಪಾ ಐ ಲವ್ ಯೂ’ ಚಿತ್ರದೊಂದಿಗೆ ಪ್ರೇಮ್ ಪ್ರೇಕ್ಷಕನ ಮುಂದೆ ಬರುತ್ತಿದ್ದಾರೆ. ‘ಟಗರು’ ಚಿತ್ರದ ಖ್ಯಾತಿಯ ನಟಿ ಮಾನ್ವಿತಾ ಹರೀಶ್, ಪ್ರೇಮ್‌ಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.

ಮೊದಲ ಬಾರಿಗೆ ಪ್ರೇಮ್‌ – ಮಾನ್ವಿತಾ ಜೋಡಿ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಅವರ ‘ಅಪ್ಪಾ ಐ ಲವ್ ಯೂ’ ಸಿನಿಮಾ ರಿಲೀಸ್‌ಗೆ ರೆಡಿ ಆಗಿದೆ. ಚಿತ್ರದ ರಿಲೀಸ್ ಡೇಟ್ ಕೂಡ ಘೋಷಣೆಯಾಗಿದ್ದು, ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಅಪ್ಪನ ಪಾತ್ರದಲ್ಲಿ ಹಾಸ್ಯ ನಟ ತಬಲಾ ನಾಣಿ ಅಭಿನಯಿಸಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿದ ಪ್ರೇಮ್‌, ‘ಸಾಮಾನ್ಯವಾಗಿ ಎಲ್ಲ ಮಕ್ಕಳಿಗೆ ತಂದೆಯರೇ ಹೀರೋಗಳು. ನನ್ನ ತಂದೆ ನನಗೆ ಹೀರೋ. ನಾನು ಪ್ಲೇಬ್ಯಾಕ್ ಸಿಂಗರ್ ಆಗಲು ಇಷ್ಟಪಟ್ಟಿದ್ದೆ. ಯಾರಾದರೂ ಏನ್ ಆಗ್ತೀಯಾ ಎಂದು ಕೇಳಿದರೆ ನಾನು ಸಿಂಗರ್ ಆಗ್ತೀನಿ ಎನ್ನುತ್ತಿದ್ದೆ. ನಾನು ಚಿಕ್ಕವನಿದ್ದಾಗ ಎಲ್ಲಾ ರೀತಿಯ ಹುಡುಗರ ಸಹವಾಸ ಮಾಡುತ್ತಿದ್ದೆ. ಆದರೆ ನಮ್ಮ ಅಪ್ಪ ಎಂದೂ ಅನುಮಾನ ಪಡಲೇ ಇಲ್ಲ. ನನ್ನ ಮಗ ಏನು ಅಂತ ಗೊತ್ತು‌ ಎಂದಿದ್ದರು. ಹೀಗಾಗಿ ನಾನು ಕೆಟ್ಟ ಹಾದಿ ತುಳಿಯಲಿಲ್ಲ. ನನಗೆ ಈ ಸಿನಿಮಾದ ಕ್ಲೈಮ್ಯಾಕ್ಸ್ ಬಹಳ‌ ಕನೆಕ್ಟ್ ಆಯ್ತು. ಇದು ನನಗೋಸ್ಕರ ಹುಡುಕಿ ಬಂದ ಪಾತ್ರ. ಹೀಗಾಗಿ ಸಿನಿಮಾ ಒಪ್ಪಿಕೊಂಡೆ’ ಎಂದರು.

ನಿರ್ದೇಶಕ ಅಥರ್ವ್ ಆರ್ಯ ಮಾತನಾಡಿ, ‘ಇದು ಕಾಲ್ಪನಿಕ ಕಥೆಯಲ್ಲ. ಅಪ್ಪ ಎಂಬ ದೇವರ ಸತ್ಯ ಕಥೆ. ಕಾಲ್ಪನಿಕ ಕಥೆ ಮಾಡುವುದು ಸುಲಭ. ಆದರೆ, ನಮ್ಮ ನಿಮ್ಮ ನಡುವೆ ನಡೆಯುವ, ಸಮಾಜದಲ್ಲಿ ವಾಸ್ತವವಾಗಿ ನಡೆಯುವ ಕಥೆಗಳನ್ನು ಎಷ್ಟೋ ಬಾರಿ ಮರೆತುಬಿಟ್ಟಿರುತ್ತೇವೆ. ಆದರೆ, ಅದು ಜೀವನದ ಭಾಗವಾಗಿರುತ್ತದೆ. ಅಂತಹ ಕಥೆಗಳನ್ನು ತೆರೆ ಮೇಲೆ ತರಬೇಕೆಂದು ‘ಅಪ್ಪಾ ಐ ಲವ್ ಯೂ’ ಕಥೆಯನ್ನು ಆಯ್ಕೆ‌ ಮಾಡಿಕೊಂಡೆವು. ಕಥೆ ಹುಟ್ಟಲು ಹಾಗೂ ಅದು ಸಿನಿಮಾ ಆಗಲು ನಾಣಿ ಸರ್ ಮೂಲ ಕಾರಣ. ಅಪ್ಪ ಸಂಸಾರಕ್ಕೆ‌ ಸಮಾಜಕ್ಕೆ ಎಷ್ಟು ಮುಖ್ಯ ಎಂಬುದು ನಾವು ಅಪ್ಪ ಆದಾಗ ಗೊತ್ತಾಗುತ್ತದೆ. ಅಪ್ಪನ ಮಹತ್ವ ಸಾರುವ ಚಿತ್ರವಿದು’ ಎಂದ ಅವರು, ಚಿತ್ರಕ್ಕೆ ನಿಮ್ಮ ಬೆಂಬಲ ಕೋರಿದರು.

ತಬಲಾ ನಾಣಿ ಮಾತನಾಡಿ, ‘ಕಿನ್ನಾಳ್ ರಾಜ್, ಈ ಸಿನಿಮಾಗೆ ಅದ್ಭುತವಾದ ಹಾಡು ಕೊಟ್ಟಿದ್ದಾರೆ. ಕಿನ್ನಾಳ್ ರಾಜ್ ಕೆಜಿಎಫ್ ಸಾಂಗ್ ಒಂದು ರೀತಿಯಾಯ್ತು. ನಮ್ಮ ಚಿತ್ರದಲ್ಲಿ ಅವರು ಬರೆದಿರುವ ಹಾಡನ್ನು ಹಾಡುವಾಗ ವಿಜಯ್ ಪ್ರಕಾಶ್ ಕಣ್ಣಲ್ಲಿ ನೀರು ತುಂಬಿತ್ತು. ಅಂತಹ ಸಾಹಿತ್ಯ. ಅದಕ್ಕೆ ತಕ್ಕನಾದ ಟ್ಯೂನ್ ಅನ್ನು ಆಕಾಶ್ ಕೊಟ್ಟಿದ್ದಾರೆ. ನಟ ವಿಜಯ್ ಚೆಂಡೂರು ಒಳ್ಳೆ ಪಾತ್ರ ಮಾಡಿದ್ದಾರೆ. ಇದೇ‌ ತಿಂಗಳು 12ಕ್ಕೆ ಚಿತ್ರ ತೆರೆಗೆ ಬರ್ತಿದೆ ನಿಮ್ಮ ಬೆಂಬಲ ಇರಲಿ’ ಎಂದರು. ಅಥರ್ವ್ ಆರ್ಯ ‘ಅಪ್ಪಾ ಐ ಲವ್ ಯೂ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. KRS ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾಗೆ ಆಕಾಶ್‌ ಪರ್ವ ಸಂಗೀತ ನೀಡಿದ್ದಾರೆ. ಕೆಜಿಎಫ್ ಕಿನ್ನಾಳ್ ರಾಜ್, ಕವಿರಾಜ್, ವಿ ನಾಗೇಂದ್ರ ಪ್ರಸಾದ್, ಕೆ ಕಲ್ಯಾಣ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಪ್ರೇಮ್ ಹಾಗೂ ಮಾನ್ವಿತಾ ಕಾಮತ್ ಜೊತೆ ಸಂಜಯ್, ಜೀವಿತಾ, ರಂಗಿತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ತಾರಾಬಳಗದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here