ಹಾಸ್ಯನಟನಾಗಿ ಚಿತ್ರರಂಗದಲ್ಲಿ ಚಿರಪರಿಚಿತರಾಗಿರುವ ತರಂಗ ವಿಶ್ವ ‘ಗಿರ್ಕಿ’ ಚಿತ್ರದೊಂದಿಗೆ ನಿರ್ಮಾಪಕರಾಗಿದ್ದಾರೆ. ವೀರೇಶ್‌ ಪಿ.ಎಂ. ನಿರ್ದೇಶನದ ಚಿತ್ರದ ಮುಖ್ಯ ಭೂಮಿಕೆಯಲ್ಲಿ ತರಂಗ ವಿಶ್ವ, ವಿಲೋಕ್‌, ದಿವ್ಯಾ ಉರುಡುಗ, ರಾಶಿ ಮಹದೇವ್‌ ನಟಿಸಿದ್ದಾರೆ.

“ವಿಶ್ವ ನನ್ನ ಬಹುಕಾಲದ ಗೆಳೆಯ. ಇಬ್ಬರೂ ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಹಾಸ್ಯನಟನಾಗಿ ಚಿತ್ರರಂಗ ಪ್ರವೇಶಿಸಿ, ಈಗ ಚಿತ್ರ ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಹೆಮ್ಮೆ. ಇದು ಸುಲಭ ಅಲ್ಲ. ಇದರ ಹಿಂದೆ ಸಾಕಷ್ಟು ಪರಿಶ್ರಮವಿದೆ. ನಾನು ನೂರು ಚಿತ್ರಗಳಲ್ಲಿ ನಟಿಸಿದ ಮೇಲೆ ನಿರ್ಮಾಪಕನಾದೆ. ವಿಶ್ವ ಕೂಡ ಅಷ್ಟೇ ಚಿತ್ರಗಳ ನಂತರ ನಿರ್ಮಾಪಕನಾಗಿದ್ದಾನೆ. ನಿರ್ದೇಶಕ ವೀರೇಶ್ ಕೂಡ ನನಗೆ ಪರಿಚಿತರು. ಚಿತ್ರತಂಡದ ಪರಿಶ್ರಮ ಟೀಸರ್ ನಲ್ಲಿ ಎದ್ದುಕಾಣುತ್ತಿದೆ, ಒಳ್ಳೆಯದಾಗಲಿ” ಎಂದರು ನಟ ಶರಣ್‌. ಅವರು ‘ಗಿರ್ಕಿ’ ಚಿತ್ರದ ಟೀಸರ್‌ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಚಿತ್ರದ ನಟ, ನಿರ್ಮಾಪಕ ತರಂಗ ವಿಶ್ವ ಮಾತನಾಡಿ, “ನಮ್ಮ ಸ್ನೇಹಕ್ಕೆ ಬೆಲೆಕೊಟ್ಟು ಬಂದಿರುವ ಶರಣ್ ಗೆ ಧನ್ಯವಾದ. ಈ ಬೆಳವಣಿಗೆಗೆ ನನ್ನ ತಂದೆಯ ಪ್ರೋತ್ಸಾಹ ಕಾರಣ. ನಿರ್ಮಾಣದ ಜೊತೆಗೆ ನಾನು ಪ್ರಮುಖಪಾತ್ರದಲ್ಲೂ ನಟಿಸಿದ್ದೇನೆ. ಎಲ್ಲರ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮೇ ತಿಂಗಳಿನಲ್ಲಿ ಚಿತ್ರ ಬಿಡುಗಡೆಯಾಗಲಿದೆ” ಎಂದರು.

‘ಗಿರ್ಕಿ’ ಅಂದರೇನು? ಚಿತ್ರದ ನಿರ್ದೇಶಕ ವೀರೇಶ್‌ ಪಿ.ಎಂ. ವಿವರಣೆ ನೀಡಿ, “ಗಿರ್ಕಿ’ ಎಂದರೆ ಸುತ್ತಾಟ ಹಾಗೂ ಪರ್ಯಟನೆ. ಲವ್, ಕಾಮಿಡಿ, ಕೌಟುಂಬಿಕ ಕತೆಯ ಮಿಶ್ರಣ ‘ಗಿರ್ಕಿ’. ಹೆಚ್ಚಾಗಿ ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಿದ್ದೇವೆ. ಮೂರು ಹಾಡುಗಳಿವೆ” ಎಂದರು. ಚಿತ್ರದ ನಾಯಕನಟ ವಿಲೋಕ್‌ ಮಾತನಾಡಿ, “ಹಿಂದೆ ಇದೇ ಸಭಾಂಗಣದಲ್ಲಿ ನಾನು ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದ ಚಿತ್ರವೊಂದರ ಸಮಾರಂಭ ನಡೆದಿತ್ತು. ಆ ತಂಡದವರು ನನ್ನ ವೇದಿಕೆಗೆ ಕರೆಯದೆ ಅವಮಾನ ಮಾಡಿದ್ದರು. ಅದನ್ನು ಗಮನಿಸಿದ್ದ ವಿಶ್ವ ಅವರು, ನಿನ್ನನ್ನು ಹೀರೋ ಮಾಡುತ್ತೇನೆ ಎಂದಿದ್ದರು. ಅಂದಂತೆ ಈಗ ಹೀರೋ ಮಾಡಿದ್ದಾರೆ” ಎಂದು ವಿಶ್ವರಿಗೆ ಕೃತಜ್ಞತೆ ಅರ್ಪಿಸಿದರು. ನಾಯಕಿಯರಾದ ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ತಮ್ಮ ಪಾತ್ರಗಳ ಪರಿಚಯ ಮಾಡಿಕೊಟ್ಟರು. ಚಿತ್ರಕ್ಕೆ ವೀರಸಮರ್ಥ್‌ ಸಂಗೀತ ಸಂಯೋಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here