‘ರಕ್ತದಿಂದ ಬರೆದಿರುವಂತಹ ಕತೆ ಇದು. ಶಾಹಿಯಿಂದ ಮುಂದುವರೆಸೋಕೆ ಆಗೋಲ್ಲ..’
‘ನರಾಚಿ ಸಾಮ್ರಾಜ್ಯವನ್ನು ರಾಕಿ ತನ್ನ ಕೈವಶ ಮಾಡಿಕೊಳ್ಳುತ್ತಾನೆ… with style!’
ಚಿತ್ರದಲ್ಲಿ ನಟ ಪ್ರಕಾಶ್ ರೈ ಪಾತ್ರ ಹೇಳುವ ಎರಡು ಸಂಭಾಷಣೆಗಳಿವು. ‘ಸಿನಿಮಾ ಹೇಗಿದೆ?’ ಎಂದು ಕೇಳಿದರೆ ಚಿತ್ರದಲ್ಲಿನ ಇವೆರೆಡು ಸಂಭಾಷಣೆಗಳ ಮೂಲಕ ಸೂಚ್ಯವಾಗಿ ಉತ್ತರ ಕೊಡಬಹುದು. ಚಿನ್ನದ ಗಣಿಯ ಸಾಮ್ರಾಜ್ಯವೊಂದನ್ನು ಗೆಲ್ಲುವ, ಕೈವಶ ಮಾಡಿಕೊಳ್ಳುವ ಕತೆಯಲ್ಲಿ ರಾಖಿ ಭಾಯ್ ಜೊತೆ ಹತ್ತಾರು ಖಳರಿದ್ದಾರೆ. ಅಧಿಕಾರಶಾಹಿ ಇದೆ. ಈ ರಕ್ತಸಿಕ್ತ ಹಾದಿಯಲ್ಲಿ ಸಾವಿರಾರು ಹೆಣಗಳು ಉರುಳುತ್ತವೆ. ‘KGF’ ಮೊದಲ ಚಾಪ್ಟರ್‌ನಲ್ಲೇ ಈ ಸೂಚನೆ ಸಿಕ್ಕಿತ್ತು. ಅಲ್ಲಿ ಜೀತದ ಆಳುಗಳು ಜೀವ ತೆತ್ತರೆ, ಇಲ್ಲಿ ಗುಂಪುಗಳ ಘರ್ಷಣೆಯಲ್ಲಿ ಜೀವಗಳು ಬಲಿಯಾಗುತ್ತವೆ. ಚಿತ್ರದುದ್ದಕ್ಕೂ ಬಂದೂಕು, ಗುಂಡುಗಳ ಸದ್ದು! ಆಗಾಗ ಅಮ್ಮ, ಪ್ರಿಯತಮೆಯ ಸನ್ನಿವೇಶಗಳಲ್ಲಷ್ಟೇ ಮೌನ, ಆಲಾಪನೆ.
ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದಿನ ‘ಉಗ್ರಂ’, ‘KGF’ ಚಾಪ್ಟರ್ 1ನಲ್ಲೇ ತಮ್ಮ ಮೇಕಿಂಗ್ ಕುರಿತು ರುಜು ಹಾಕಿದ್ದರು. ಅದು ಸ್ಟೈಲಿಷ್ ನಿರೂಪಣೆ. ಪಾತ್ರಗಳ ಪ್ರಸೆಂಟೇಷನ್, ಕ್ಯಾಮೆರಾದಲ್ಲಿ ಸೆರೆಯಾಗುವ ಫ್ರೇಮ್, ನೆರಳು – ಬೆಳಕಿನ ದೃಶ್ಯ, ಹಿನ್ನೆಲೆ ಸಂಗೀತ… ಎಲ್ಲವನ್ನೂ ಒಟ್ಟಂದದಲ್ಲಿ ಕೊಟ್ಟು ಪ್ರೇಕ್ಷಕರಿಗೆ ‘ಫೀಲ್ ಗುಡ್ ಎಕ್ಸ್‌ಪೀರಿಯನ್ಸ್’ ನೀಡುವುದು ಅವರ ಶೈಲಿ. ತಮ್ಮ ಐಡಿಯಾಗಳನ್ನು ಎಗ್ಸಿಗ್ಯೂಟ್ ಮಾಡಲು 70ರ ದಶಕದ ಕಾಲಘಟ್ಟವನ್ನು ಆಯ್ಕೆ ಮಾಡಿಕೊಂಡು ಚಾಪ್ಟರ್ 1ನಲ್ಲಿ ಗೆದ್ದಿದ್ದ ಅವರು ಸರಣಿ ಸಿನಿಮಾದಲ್ಲೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ‘KGF’ ಚಾಪ್ಟರ್ 3ಗೆ ಲೀಡ್ ಕೊಟ್ಟು ಮತ್ತೆ ನಿರೀಕ್ಷೆಯ ಬೀಜ ಬಿತ್ತಿದ್ದಾರೆ!
ಚಾಪ್ಟರ್ 1ರಲ್ಲಿದ್ದ ಪಾತ್ರಗಳ ಜೊತೆ ಸರಣಿ ಸಿನಿಮಾದಲ್ಲಿ ಮತ್ತಷ್ಟು ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಕತೆಗೆ ಪೂರಕವಾಗಿ ಕಟ್ಟಿರುವ ಈ ಪಾತ್ರಗಳನ್ನು ಪ್ರಶಾಂತ್ ನೀಲ್ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ದೊಡ್ಡ ಪರದೆ ಮೇಲೆ ಮೂಡುವ ಪಾತ್ರಗಳನ್ನು ‘ಲಾರ್ಜರ್‌ದ್ಯಾನ್ ಲೈಫ್’ ಇಮೇಜಿನೊಂದಿಗೆ ತೋರಿಸುವುದು ಅವರ ಶೈಲಿ. ಚಾಪ್ಟರ್ 2ರಲ್ಲಿ ‘ರಾಕಿ ಭಾಯ್’ ಯಶ್ ಪಾತ್ರಕ್ಕೆ ಸಮಾನಾಂತರವಾಗಿ ‘ಅಧೀರ’ ಸಂಜಯ್ ದತ್ ಪಾತ್ರವಿದೆ. ಹೀರೋ ಜೊತೆಗೆ ಸಂಘರ್ಷ ನಡೆಸಲು ಅಧೀರ ಪಾತ್ರದ ಜೊತೆ ಇಲ್ಲಿ ರಮೀಕಾ ಸೇನ್ (ರವೀನಾ ಟಂಡನ್), ಗುರು ಪಾಂಡಿಯನ್ (ಅಚ್ಯುತ್ ಕುಮಾರ್) ಪಾತ್ರಗಳಿವೆ. ಹಾಗಾಗಿ ರಾಕಿ ಭಾಯ್ ಸ್ಟೈಲ್, ಬಿಲ್ಡ್‌ಅಪ್‌ಗೆ ಹೆಚ್ಚಿನ ಅವಕಾಶಗಳು! ಹೀಗೆ, ವಿಶಿಷ್ಟ ಪಾತ್ರಗಳ ಮೂಲಕ ನರಾಚಿ ಸಾಮ್ರಾಜ್ಯದ ಕಾಲ್ಪನಿಕ ಕತೆಯನ್ನು ಪ್ರಶಾಂತ್ ನೀಲ್ ಆಕರ್ಷಕವಾಗಿ ಹೇಳುತ್ತಾರೆ.
ನಾಲ್ಕು ವರ್ಷಗಳ ಹಿಂದೆ ತೆರೆಕಂಡ ಚಾಪ್ಟರ್ 1 ಯಶಸ್ಸು ಚಿತ್ರತಂಡಕ್ಕೆ ದೊಡ್ಡ ಜವಾಬ್ದಾರಿ ಹೊರಿಸಿತ್ತು. ಚಾಪ್ಟರ್ 2ನ್ನು ಇನ್ನೂ ದೊಡ್ಡ ಸ್ಕೇಲ್‌ನಲ್ಲಿ ನಿರೂಪಿಸುವ, ಅಚ್ಚುಕಟ್ಟಾಗಿ ಹೇಳುವ ಒತ್ತಡಗಳಿದ್ದವು. ಸರಣಿಯ ಮೊದಲ ಚಿತ್ರದಲ್ಲಿನ ಕತೆಯ ಕ್ಯಾನ್ವಾಸನ್ನು ಸರಣಿಯಲ್ಲಿ ನಿರ್ದೇಶಕ ಪ್ರಶಾಂತ್ ನಾಜೂಕಾಗಿ ವಿಸ್ತರಿಸಿದ್ದಾರೆ. ಆಕರ್ಷಕ ವಿಶ್ಯುಯೆಲ್ಸ್ ಮೂಲಕ ಪ್ರೇಕ್ಷಕರು ತಲೆದೂಗುವಂತೆ ಮಾಡಿದ್ದಾರೆ. ಅವರ ಬೆನ್ನಿಗೆ ನಿಂತಿರುವ ಛಾಯಾಗ್ರಾಹಕ ಭುವನ್ ಗೌಡ, ಸಂಗೀತ ಸಂಯೋಜಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ತೆರೆಯ ಹಿಂದಿನ ಹೀರೋಗಳು. ಕಲ್ಪನೆಗೆ ನಿಲುಕದ ನರಾಚಿ ಸಾಮ್ರಾಜ್ಯವನ್ನು ಸೃಷ್ಟಿಸಿರುವ ಶಿವಕುಮಾರ್, ಕತೆಗೆ ಪೂರಕವಾದ ದೃಶ್ಯಗಳನ್ನು ಡಾರ್ಕ್ ಶೇಡ್‌ನಲ್ಲಿ ಕಟ್ಟಿಕೊಡುವ ಭುವನ್ ಗೌಡ, ಹಿನ್ನೆಲೆ ಸಂಗೀತದೊಂದಿಗೆ ಸಿನಿಮಾದೊಳಕ್ಕೆ ಕರೆದೊಯ್ಯುವ ರವಿ ಬಸ್ರೂರು ಅವರಿಗೆ ವಿಶೇಷ ಅಭಿನಂದನೆ ಸಲ್ಲಬೇಕು.
ತಮಗೆ ಹಿಂದಿ ಮತ್ತು ಹಾಲಿವುಡ್ ಸಿನಿಮಾಗಳ ಇನ್‌ಫ್ಲ್ಯುಯೆನ್ಸ್ ಇದೆ ಎಂದು ನಿರ್ದೇಶಕ ಪ್ರಶಾಂತ್ ಹೇಳಿಕೊಳ್ಳುತ್ತಾರೆ. ‘ರಾಕಿ ಭಾಯ್’ ಪಾತ್ರಕ್ಕೆ 70ರ ದಶಕದಲ್ಲಿ ಸಾಲು, ಸಾಲಾಗಿ ಬಂದ ಅಮಿತಾಭ್ ಬಚ್ಚನ್ ಅವರ ಆಂಗ್ರಿ ಯಂಗ್‌ಮ್ಯಾನ್ ಇಮೇಜಿನ ಪಾತ್ರಗಳ ಪ್ರೇರಣೆ ಇದ್ದೇ ಇದೆ. ಪರದೆ ಮೇಲೆ ನಟಿ ಈಶ್ವರಿ ರಾವ್ ಅವರ ಕೆಲವು ಪೋಸ್ಚರ್‌ಗಳು ‘ಮದರ್ ಇಂಡಿಯಾ’ ಹಿಂದಿ ಸಿನಿಮಾದ ನರ್ಗಿಸ್‌ರನ್ನು ಇಲ್ಲವೇ ನಿರೂಪಾ ರಾಯ್ ಅವರ ತಾಯಿ ಪಾತ್ರಗಳನ್ನು ನೆನಪು ಮಾಡುತ್ತವೆ. CBI ಅಧಿಕಾರಿಯಾಗಿ ತೆಲುಗು ನಟ ರಾವ್ ರಮೇಶ್ ಅವರದ್ದು ಹದವರಿತ ನಟನೆ. ತಣ್ಣನೆಯ ಕ್ರೌರ್ಯ ಮೆರೆಯುವ ‘ಗುರು ಪಾಂಡಿಯನ್’ (ಅಚ್ಯುತ್ ಕುಮಾರ್) ಪಾತ್ರ ವಿಶೇಷವಾಗಿ ಗಮನ ಸೆಳೆಯುತ್ತದೆ.
ಸ್ಟೈಲ್, ಮೇಕಿಂಗ್ ಮತ್ತು ಆಕರ್ಷಕ ಪ್ರಸೆಂಟೇಷನ್‌ಗೆ ‘ರಾಕಿ ಭಾಯ್’ ಯಶ್ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ರೆಟ್ರೋ, ಹಿಪ್‌ಹಾಪ್ ಕಲ್ಚರ್‌ನ ಉಡುಪು, ಆಟಿಟ್ಯೂಡ್ ಅವರ ಪಾತ್ರವನ್ನು ಚೆಂದವಾಗಿಸಿದೆ. ‘KGF’ ಫ್ರಾಂಚೈಸ್‌ಗಳ ನಂತರ ಮುಂದೊಮ್ಮೆ ಹಳ್ಳಿ ಹೈದನಾಗಿ ನಟಿಸಿದರೆ, ಆ ಪಾತ್ರವನ್ನು ಅರಗಿಸಿಕೊಳ್ಳಲು ಅವರ ಅಭಿಮಾನಿಗಳಿಗೆ ಕಷ್ಟವಾಗಬಹುದೇನೋ! ಆಕ್ಷನ್‌ಗೆ ಬೇಕಾದ ಫಿಟ್‌ನೆಸ್, ಆಟಿಟ್ಯೂಡ್ ಯಶ್‌ರಿಗೆ ಒಲಿದಂತಿದೆ. ಸರಣಿ ಚಿತ್ರಗಳಿಗೆ ತಮ್ಮ ಸಮಯ, ಪ್ರತಿಭೆ, ಶ್ರದ್ಧೆಯನ್ನು ಮುಡಿಪಿಟ್ಟ ಅವರಿಗೆ ವಿಶೇಷ ಅಭಿನಂದನೆ ಹೇಳಬಹುದು. ನಾಯಕನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಚಾಪ್ಟರ್ 2ನಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಇದೆ. ಹೀರೋ – ಹಿರೋಯಿನ್ ಪ್ರೀತಿಯ ದೃಶ್ಯಗಳು ಆಕ್ಷನ್ ಮಧ್ಯೆ ಕೊಂಚ ರಿಲೀಫ್ ನೀಡುತ್ತವೆ.
‘ಅಧೀರ’ ಪಾತ್ರಕ್ಕೆ ಚಿತ್ರಕಥೆ ರಚನೆ ಹಂತದಲ್ಲೇ ತಾವು ಸಂಜಯ್ ದತ್ ಅವರನ್ನು ಕಲ್ಪಿಸಿಕೊಂಡಿದ್ದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿಕೊಂಡಿದ್ದರು. ಪ್ರಧಾನ ಮಂತ್ರಿ ‘ರಮೀಕಾ ಸೇನ್’ ಆಗಿ ಬಾಲಿವುಡ್ ನಟಿ ರವೀನಾ ಟಂಡನ್ ಅವರದ್ದು ತೂಕದ ಪಾತ್ರ. ನಿಸ್ಸಂಶಯವಾಗಿ ದತ್ ಮತ್ತು ರವೀನಾ ಅವರಿಗೆ ಇವು ವೃತ್ತಿ ಬದುಕಿನ ವಿಶೇಷ ಪಾತ್ರಗಳಾಗಿ ಉಳಿಯಲಿವೆ. ಚಿತ್ರದಲ್ಲಿ ಕೆಲವು ಮಿತಿಗಳೂ ಇವೆ. ಆಕ್ಷನ್ ಅತಿ ಹೆಚ್ಚಾಯ್ತು, ಕೆಲವೆಡೆ ಮೌನವೂ ಬೇಕಿತ್ತು ಎನಿಸುವುದಿದೆ. ಚಾಪ್ಟರ್ 1ರಲ್ಲಿ ಸೆಳೆದಂತೆ ಸರಣಿ ಚಿತ್ರದಲ್ಲಿ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ರೊಮ್ಯಾಂಟಿಕ್ ಹಾಡನ್ನು ಇನ್ನೂ ಆಕರ್ಷಕವಾಗಿ ರೂಪಿಸಬಹುದಿತ್ತು. ಲಾಜಿಕಲ್ ಅಗಿ ಆಲೋಚಿಸುತ್ತಾ ಹೋದರೆ ಕೆಲವು ತಪ್ಪುಗಳನ್ನು ಪಟ್ಟಿ ಮಾಡಬಹುದು. ಈ ಮಿತಿಗಳ ಹೊರತಾಗಿಯೂ ದೇಶದ ಸಿನಿಪ್ರಿಯರ ನಿರೀಕ್ಷೆಯನ್ನು ಸರಿಗಟ್ಟುವಲ್ಲಿ, ರಂಜಿಸುವಲ್ಲಿ ‘KGF’ ಚಾಪ್ಟರ್ 2 ಯಶಸ್ವಿಯಾಗಿದೆ. ಭಾರತವಷ್ಟೇ ಅಲ್ಲದೆ ಜಾಗತಿಕ ಸಿನಿರಸಿಕರು ಅಚ್ಚರಿಯಿಂದ ನೋಡುವಂತೆ, ನಿರೀಕ್ಷೆಯಿಂದ ಕಾಯುವಂತೆ ಮಾಡಿದ್ದು ಈ ಚಿತ್ರದ ಹೆಗ್ಗಳಿಕೆ. ಇದಕ್ಕಾಗಿ ಈ ಸಿನಿಮಾ ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ಮತ್ತು ಚಿತ್ರತಂಡಕ್ಕೆ ಅಭಿನಂದನೆ ಹೇಳಬೇಕು.