‘ದ ಪೈರೇಟ್ಸ್: ದ ಲಾಸ್ಟ್‌ ರಾಯಲ್ ಟ್ರೆಶರ್’ ಹೆಸರೇ ಹೇಳುವಂತೆ ಒಂದು ಟ್ರೆಶರ್ ಹಂಟ್, ಜತೆಗೆ ಕಡಲ್ಗಳ್ಳರ ಕತೆ. ಸಾಹಸಮಯ ಕತೆ ಮತ್ತು ಸಿನಿಮೀಯ ಸನ್ನಿವೇಶಗಳಿರುವ ಈ ಚಿತ್ರ‌ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿದೆ.

ವಿಶಾಲ ಕಡಲು ಅಂತಾರಾಷ್ಟ್ರೀಯ ಸರಕು ಸಾಗಾಟದ ರಹದಾರಿ. ಶತಮಾನಗಳಿಂದ ಜಗತ್ತಿನಲ್ಲಿ ಏನೇ ಬದಲಾವಣೆಯಾದರೂ ಈ ರಹದಾರಿ ಮಾತ್ರ ಬದಲಾಗಿಲ್ಲ. ಇಂದಿಗೂ ಜಗತ್ತಿನ ಶೇ.90ರಷ್ಟು ಸರಕು ಸಾಗಾಟ‌ ನಡೆಯುವುದು ಹಡಗುಗಳ ಮೂಲಕವೇ. ನಾವಿಕರ ಪಾಲಿಗೆ ಕಡಲೇ‌ ಸ್ವಾತಂತ್ರ್ಯ,ಕಡಲೇ ಬಂಧನ, ಕಡಲೇ‌ ಜೀವನ. ಇಂಥ ಕಡಲಲ್ಲಿ ಕಡಲ್ಗಳ್ಳರ ದೊಡ್ಡದೊಂದು ವರ್ಗವೇ ಇದೆ. ಹಾಗೆಯೇ ಅವರ ಬಗೆಗಿನ ಕಥೆಯನ್ನು ಭಾರಿ ಇಷ್ಟಪಡುವ ಪ್ರೇಕ್ಷಕ ವರ್ಗವೊಂದು ಸಿನಿರಸಿಕರ ವಲಯದಲ್ಲಿದೆ. ಹಾಗಾಗಿಯೇ ‘ಪೈರೇಟ್ಸ್ ಆಫ್ ದ ಕೆರಿಬಿಯನ್’ ಸರಣಿಯ ಐದೂ ಸಿನಿಮಾ ಒಳ್ಳೆ ದುಡ್ಡು ಬಾಚಿದವು. ಅದರ ಕೊನೆಯ ಸರಣಿ ಬೆಳ್ಳಿತೆರೆಗೆ ಅಪ್ಪಳಿಸಿ ಅದಾಗಲೇ ಐದು ವರ್ಷವಾಗಿದೆ. ಅಂಥ ಸಿನಿಮಾಗಳನ್ನು ಇಷ್ಟ ಪಡುವವರ ದಾಹ ತೀರಿಸಲು ಈ ವರ್ಷ ತೆರೆಕಂಡದ್ದು ‘ದ ಪೈರೇಟ್ಸ್: ದ ಲಾಸ್ಟ್‌ ರಾಯಲ್ ಟ್ರೆಶರ್’. ಇದು ಪಶ್ಚಿಮದ ಹಾಲಿವುಡ್ ನಿರ್ಮಾಣವಲ್ಲ, ಬದಲಾಗಿ ನಮ್ಮ ಕಡಲಿನ ಪೂರ್ವ ಭಾಗದ ದೇಶ ಕೊರಿಯನ್ನರಿಂದ ತಯಾರಾದ ಸಿನಿಮಾ.

ಸಾಮಾನ್ಯವಾಗಿ ಹಾಲಿವುಡ್‌ಗೆ ಹೋಲಿಸಿದರೆ ನನಗೆ ಕೊರಿಯ ಮೂಲದ ಸಿನಿಮಾಗಳು ಹೆಚ್ಚು ಆಪ್ತವಾಗುತ್ತವೆ. ಈ ವಿಷಯದಲ್ಲಿ ನಾನು ಅಲ್ಪ ಸಂಖ್ಯಾತನಲ್ಲ, ನನ್ನಂತೆಯೇ ಕೊರಿಯನ್ ಸಿನಿಮಾಗಳನ್ನು ಇಷ್ಟ ಪಡುವ ಮಂದಿ ಭಾರತದಲ್ಲಿ‌ ಹೇರಳವಾಗಿದ್ದಾರೆ. ಕೊರಿಯನ್ನರು ತಮ್ಮ ಸಿನಿಮಾಗಳಲ್ಲಿ‌ ಭಾವನೆಗೆ ಹೆಚ್ಚು ಒತ್ತು ಕೊಡುತ್ತಾರೆ. ಅಲ್ಲೆಲ್ಲೋ ಒಂದು ಪ್ರೇಮಕತೆ ಹಾಕುತ್ತಾರೆ. ಆ ಪ್ರೇಮಿಗಳು ಕಣ್ಣಲ್ಲೇ ಮಾತಾಡುತ್ತಾರೆ. ಕಣ್ ಕಣ್ಣ ಸಲಿಗೆಯಲ್ಲೇ ಹೆಚ್ಚಾಗಿ ಪ್ರೇಮಿಸುವ ನಮಗೆ ಅಮೆರಿಕನ್ನರಿಂತ ಹೆಚ್ಚು ಕೊರಿಯನ್ನರು ಹತ್ತಿರವಾಗುತ್ತಾರೆ.

‘ದ ಪೈರೇಟ್ಸ್: ದ ಲಾಸ್ಟ್‌ ರಾಯಲ್ ಟ್ರೆಶರ್’ನಲ್ಲಿ ವೂ ಮೂ-ಚಿ ಮಾಜಿ ಸೈನಿಕ, ಚಾಣಾಕ್ಷ ಡಕಾಯಿತ. ವೈರಿಗಳ ಜತೆ ಬಡಿದಾಡಿ ಆತ ಬಂದು ಸೇರುವುದು ಕಡಲ್ಗಳ್ಳರ ಹಡಗನ್ನು‌. ಹೇ ರಾಂಗ್ ಎಂಬಾಕೆಯ ನಿರ್ದೇಶನದಲ್ಲಿ ಹೋಗುವ ಕಡಲ್ಗಳ್ಳರ ಹಡಗು ಮಿಕಕ್ಕಾಗಿ ಕಾಯುತ್ತಿರುತ್ತದೆ. ಈ ವೇಳೆಗೆ ಎದುರಾಗುವುದು ಜಪಾನಿಯರ ಹಡಗು. ಬಹು ಕಾಲದ ಹಿಂದೆ ಗೋರಿಯೋ ಸಂಸ್ಥಾನದಿಂದ ಕೊಳ್ಳೆಹೊಡೆದು ಬಚ್ಚಿಟ್ಟಿದ್ದ ಬಹುದೊಡ್ಡ ರಾಜನಿಧಿಯನ್ನು ಹುಡುಕಿ ಹೊರಟವರು ಅವರು. ಅವರ ಮೇಲೆ ದಾಳಿ ಮಾಡುವ ಹೇ ರಾಂಗ್‌ನ ಹಡಗಿಗೆ ಈ ವಿಚಾರ ತಿಳಿದು ಇವರೂ ರಾಜನಿಧಿಯ ಹಿಂದೆ ಬೀಳುತ್ತಾರೆ. ಆದರೆ ಸಹಜವಾಗಿಯೇ ಅಲ್ಲಿ ಮತ್ತೊಂದು ತಂಡ ಅದೇ ನಿಧಿಯ ಹಿಂದೆ ಬಿದ್ದಿರುತ್ತದೆ. ಆ ನಿಧಿಯ ಹುಡುಕಾಟ ಹಾಗೂ ಮತ್ತೊಂದು ತಂಡದ ಜತೆಗಿನ ಸಂಘರ್ಷ ಸಿನಿಮಾದ ಕತೆ.

ಈ‌ ಚಿತ್ರವನ್ನು ನೋಡಿಸುತ್ತಾ ಸಾಗುವುದು ಪಾತ್ರಗಳ ನಡುವಿನ ಸಂಬಂಧ. ಹೇ ರಾಂಗ್ ಮತ್ತು ವೂ ಮೂಚಿ ಮಧ್ಯೆ ಹರಿಯುವ ಗುಪ್ತಗಾಮಿನಿ ಪ್ರೇಮ. ಇಬ್ಬರ ನಡುವಿನ ಅಭಿಪ್ರಾಯ ಭೇದ, ಆದರೂ ಪರಸ್ಪರರ ಸಾಮರ್ಥ್ಯಗಳ ಮೇಲೆ‌ ಇರುವ ನಂಬಿಕೆಯ ನಡುವೆ ಬಂದು ಹೋಗುವ ಪ್ರೀತಿ ತೆರೆಯ‌‌‌‌ ಮೇಲೆ ಮಧುರ ಸನ್ನಿವೇಶ ಸೃಷ್ಟಿಸುತ್ತದೆ. ಮಧುರವಾದರೂ, ಕತೆಯ ಬಹುಭಾಗ ಸಾಗುವುದು ಸಮುದ್ರದ ಮೇಲೆ ಹಾಗೂ‌ ನೀರಿನ ಆಳದಲ್ಲಿ. ಹಾಗಾಗಿ ರೊಮ್ಯಾಂಟಿಕ್ ಎಂಬುದಕ್ಕಿಂತ ಹೆಚ್ಚು ಇಲ್ಲಿ ಎದುರಾಗುವುದು ಚಾಲೆಂಜಿಂಗ್ ಪ್ರೀತಿ.

ನಿಧಿಯ ಬಗ್ಗೆ ಮಾಹಿತಿ‌ ಇದೆ‌ ಎಂಬ ಕಾರಣಕ್ಕೆ ಜಪಾನಿ ಹಡಗಿನಿಂದ ಆಪರೇಶನ್ ಕಮಲದ ಮೂಲಕ ಹೇ ರಾಂಗ್‌ನ ಹಡಗಿಗೆ ಸೇರಿಕೊಳ್ಳುವವ ಮಾಕ್-ಕೀ. ಆತ ಹಾಸ್ಯಗಾರ, ಹಾಗಾಗಿ ನಡುವೆ ಚಿತ್ರಕತೆಗೆ ಸರಕು ಕಡಿಮೆಯಾದಾಗ ಈತನನ್ನು ಕ್ಯಾಪ್ಟನ್ ಹುದ್ದೆಗೆ ಏರಿಸುವುದು ವೀಕ್ಷಕರ ಪಾಲಿಗೆ ಮಜಾ ತೋರಿಸಲು ಮಾಡಿದ ತಂತ್ರ. ಆದರೆ ಹಾಸ್ಯವನ್ನು ಆತನೊಬ್ಬನ ಪಾತ್ರಕ್ಕೇ ಸೀಮಿತಗೊಳಿಸಿಲ್ಲ. ಅಲ್ಲಲ್ಲಿ ಸಂದರ್ಭೋಚಿತ ಹಾಸ್ಯ ಸನ್ನಿವೇಶಗಳಿವೆ. ನಗು ತರಿಸುವಂಥ ಘಟನೆಗಳು ದೃಶ್ಯದ ಜತೆ ಜತೆಗೇ, ಬಡಿದಾಟಗಳ ನಡುವೆ ಸಾಗುವಾಗ ಅಲ್ಲಲ್ಲಿ ಜಾಕಿ ಚಾನ್ ಸಿನಿಮಾಗಳು ನೆನಪಿಗೆ ಬರುತ್ತವೆ.

ನೀರಿನೊಳಗಿನ ದೃಶ್ಯಗಳು ಹೆಚ್ಚಾಗಿ ಇರುವುದರಿಂದ ಕ್ಯಾಮರಾ ಹಿಡಿದವನಿಗೆ ಸಹಜವಾಗಿ ಹೆಚ್ಚಿನ ಕೆಲಸ. ಸಿನಿಮೀಯ ದೃಶ್ಯಗಳಿಗೆ ಕ್ಯಾಮರಾ ತಂಡ ಎಲ್ಲಿಯೂ ಮೋಸ ಮಾಡಿಲ್ಲ. ಇಂಥ ಸಿನಿಮಾಗಳಲ್ಲಿ ವಿಎಫ್‌ಎಕ್ಸ್ ಬಳಕೆ ಹೇರಳವಾಗಿ ಇದ್ದೇ ಇರಬೇಕು. ಗ್ರೀನ್ ಸ್ಕ್ರೀನ್ ಬಳಕೆಯ ದೃಶ್ಯಗಳು ಕರಾರುವಾಕ್ಕಾಗಿಲ್ಲ ಎಂದು ಹಾಲಿವುಡ್ ನಿರ್ಮಾಪಕರು ನೋಡಿದರೆ ಹೇಳಬಹುದು. ಆದರೆ ಅಲ್ಲೆಲ್ಲ ದೃಶ್ಯದ ಜೀವಾಳವಾದ ಪಾತ್ರಗಳು ಮತ್ತು ಸಂಭಾಷಣೆ ನಮ್ಮ ಗಮನವನ್ನು ವಿ‌ಎಫ್‌ಎಕ್ಸ್‌ನ ಕುಂದು‌ ಕೊರತೆಯ ಕಡೆಗೆ ಹರಿಸುವುದಿಲ್ಲ. ಹಾಲಿವುಡ್ ಮಂದಿ ತಾಂತ್ರಿಕತೆಗೆ ಹೆಚ್ಚು ಒತ್ತು ಕೊಟ್ಟರೆ ಕೊರಿಯನ್‌ ಸಿನಿಮಾಗಳು ನಮ್ಮ ಭಾರತೀಯ ಚಲನಚಿತ್ರಗಳಂತೆ ಭಾವನೆಗೆ ಒತ್ತು ಕೊಡುತ್ತದೆ.

ತೆರೆಯ ಮೇಲೆ ಹೆಚ್ಚು ಕಾಲ ಇರುವ ಏಕೈಕ ಹೆಣ್ಣು ಹೇ ರಾಂಗ್. ಆದರೆ ಅವಳ ಧೀರೋದಾತ್ತ ಗುಣಗಳನ್ನು ಮನದಟ್ಟು ಮಾಡಬೇಕಿದ್ದರೆ ಇನ್ನೊಂದು ಸ್ತ್ರೀ ಪಾತ್ರ ಸಮೀಕರಣಕ್ಕೆ ಬೇಕೇ ಬೇಕು. ಭೂಭಾಗದಿಂದ ಅಪಹರಿಸಿ ತಂದಿಟ್ಟ ರಾಜಕುವರಿಗೆ ಇಲ್ಲಿ ಆ ಕೆಲಸ ಕೊಡಲಾಗಿದೆ. ಚಿತ್ರಕತೆಯಲ್ಲಿ ಇದನ್ನು ಯುಕ್ತ ಹಂತದಲ್ಲಿ ಸೂಕ್ತ‌ ರೀತಿ ಸೇರಿಸಿಕೊಂಡದ್ದು ಕತೆಯ ಮಟ್ಟಿಗೆ ಅಚ್ಚುಕಟ್ಟುತನ ಕೊಡುತ್ತದೆ.

ಕಡಲು ಮೇಲೇಳದೆ, ಹಡಗು ಸಂಕಷ್ಟಕ್ಕೆ ಸಿಲುಕದೆ ಇಂಥ ಕತೆಗಳಿಗೆ ಜೀವಂತಿಕೆ ಬರುವುದಿಲ್ಲ. ಆ ನಿಟ್ಟಿನಲ್ಲಿ ಪ್ರೇಕ್ಷಕ ನೋಡಿ ಬೆರಗಾಗಬೇಕಾದ ಸನ್ನಿವೇಶಗಳು ಸಹಜವಾಗಿಯೇ ಇವೆ.‌ ಕತೆಯ ಕೊನೆಗೆ ಏನಾಗುತ್ತದೆ ಎಂದು ಕೇಳಿದರೆ‌ ಕೊಡಬೇಕಾದ ಉತ್ತರ ಒಂದು ಸಾಹಸಮಯ ಕ್ಲೈಮ್ಯಾಕ್ಸು ಎಂಬುದು, ಅದೂ ಇಲ್ಲಿದೆ. ಹಾಗಾಗಿ ‘ದ ಪೈರೇಟ್ಸ್: ದ ಲಾಸ್ಟ್‌ ರಾಯಲ್ ಟ್ರೆಶರ್’ ಹಾಲಿವುಡ್ ಶೈಲಿಯಲ್ಲಿರುವ ಕೊರಿಯನ್ ಭಾವನೆಗಳ ಚಿತ್ರ‌ ಎನ್ನಬಹುದು. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಮಾಡಿ ಎರಡು ಗಂಟೆಯ ಮನರಂಜನೆ ಪಡೆಯಲು ಅಡ್ಡಿಯಿಲ್ಲ.

Previous articleರಾಕಿ ಭಾಯ್‌ ನರಾಚಿ ಸಾಮ್ರಾಜ್ಯದ ಕಥಾನಕ.. with style!
Next articleಸಿನಿಪ್ರಿಯರ ಅತಿಯಾದ ನಿರೀಕ್ಷೆಯನ್ನು ‘KGF2’? ಸರಿಗಟ್ಟಿತೇ?

LEAVE A REPLY

Connect with

Please enter your comment!
Please enter your name here