ಎಲ್ಲಾ ಸಿದ್ಧಸೂತ್ರಗಳನ್ನು, ಸಿದ್ಧಮಾದರಿಗಳನ್ನು ಮೀರಿದ ಕತೆ ಇದು. ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿರುವ ದೋರ್ಜಿಗೆ ಇದು ಮೊದಲ ಚಿತ್ರ. ಅಲ್ಲಿನವರೇ ಆದ ಅವರು ಈ ಚಿತ್ರದಲ್ಲಿ ಭೂತಾನ್ ಪದ್ಧತಿಗಳು, ಅಲ್ಲಿನ ಬೆಟ್ಟ ಗುಡ್ಡ, ಯಾಕ್, ಜನಪದ ಸಂಗೀತ ಎಲ್ಲವನ್ನೂ ಪಾತ್ರಧಾರಿಗಳನ್ನಾಗಿ ಮಾಡಿಕೊಳ್ಳುತ್ತಾರೆ. ನೋಡುತ್ತಿದ್ದಷ್ಟು ಕಾಲವೂ, ನೋಡಿದ ನಂತರವೂ ಚಿತ್ರ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಭೂತಾನ್ ಸಿನಿಮಾ ‘ಲುನಾನ : ಎ ಯಾಕ್ ಇನ್ ದ ಕ್ಲಾಸ್ ರೂಂ’ ಹಿಂದಿ ಭಾಷೆಗೆ ಡಬ್ ಆಗಿ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಭೂತಾನ್ – ದೇಶದ ಸಂಪತ್ತನ್ನು ತನ್ನ ದೇಸಿಗರ ಖುಷಿಯ ಮಟ್ಟದಿಂದ ಅಳೆಯುವ ದೇಶ. ಲುನಾನ ಆ ದೇಶದ ಒಂದು ಸಿನಿಮಾ. ಸಿನಿಮಾಗಳೇ ಅಪರೂಪ ಎನ್ನುವ ನಾಡಿನಿಂದ ಆಸ್ಕರ್‌ಗೆ ನಾಮನಿರ್ದೇಶನಗೊಂಡ ಚಿತ್ರ ಇದು.
ಟೀಚರ್‌ಗಳನ್ನು ಕುರಿತು ಹಲವಾರು ಚಿತ್ರಗಳು ಬಂದಿವೆ. ಅವುಗಳಲ್ಲಿ ಜನಪ್ರಿಯವಾಗಿರುವ ಒಂದು ಮಾದರಿ ಎಂದರೆ, ತುಂಬಾ ಕೆಟ್ಟ ಸ್ಥಿತಿಯಲ್ಲಿರುವ ಒಂದು ಪ್ರದೇಶ, ಆ ಪ್ರದೇಶದಲ್ಲಿ ಇನ್ನೂ ಕೆಟ್ಟ ಸ್ಥಿತಿಯಲ್ಲಿರುವ ಒಂದು ಶಾಲೆ. ಹೀನಾಯ ಸ್ಥಿತಿಯಲ್ಲಿರುವ ಅಲ್ಲಿನ ಮಕ್ಕಳು. ಹೀಗಿರುವಾಗ ಹೊರಗಿನಿಂದ ಅಲ್ಲಿಗೊಬ್ಬ ಉಪಾಧ್ಯಾಯ ಬರುತ್ತಾನೆ. ಆತನ ಪಾಠ ಹೇಳುವ ಕ್ರಮ, ಆತನ ವ್ಯಕ್ತಿತ್ವ ಕಡೆಗೆ ಆ ಮಕ್ಕಳನ್ನು ’ಉದ್ಧರಿಸುತ್ತದೆ’. ’ಟು ಸರ್ ವಿದ್ ಲವ್’ ಮತ್ತು ’ದ ವಯೋಲಿನ್ ಟೀಚರ್’ ಇದೇ ಬಗೆಯ ಚಿತ್ರಗಳು. ಪಾವೋ ಚೋಯ್ನಿಂಗ್ ದೋರ್ಜಿ ನಿರ್ದೇಶನದ ಲುನಾನ ಸಹ ಟೀಚರ್ ಮತ್ತು ವಿದ್ಯಾರ್ಥಿಗಳ ನಡುವಿನ ಚಿತ್ರ. ಆದರೆ ಇಲ್ಲಿ ಅವರಿಬ್ಬರ ನಡುವೆ ಪರಸ್ಪರರಿಂದ ಕೊಡು ಕೊಳ್ಳುವಿಕೆ ಇದೆ. ಇಲ್ಲಿ ಟೀಚರ್ ಕೇವಲ ಕೊಡುವವನಾಗಿ ಮಾತ್ರವಲ್ಲ ಪಡೆಯುವವನಾಗಿಯೂ ಚಿತ್ರಿತಗೊಂಡಿದ್ದಾನೆ. ಅದಕ್ಕೆ ಪೂರಕವಾಗಿ ಬರುವುದು ಅವನ ಊರು, ಅಂದರೆ ಭೂತಾನಿನ ರಾಜಧಾನಿ ಥಿಂಪು ಮತ್ತು ಅವನು ಕೆಲಸ ಮಾಡಲೆಂದು ಹೋಗುವ ಊರು ಲುನಾನ.
ಉಗೇನ್ ಪಟ್ಟಣದಲ್ಲಿರುವವ. ಆತ ಕಡ್ಡಾಯವಾಗಿ 5 ವರ್ಷಗಳು ಸರಕಾರಿ ಶಾಲೆಗಳಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಬೇಕಾಗಿರುತ್ತದೆ. 4 ವರ್ಷಗಳು ಮುಗಿದಿವೆ. ಇನ್ನೊಂದು ವರ್ಷ ಬಾಕಿ ಇದೆ. ಅವನಿಗೆ ತಂದೆ ತಾಯಿಯರಿಲ್ಲ, ಅವನನ್ನು ಸಾಕಿರುವುದು ಅವನ ಅಜ್ಜಿ. ಅಜ್ಜಿಗೆ ಮೊಮ್ಮಗ ಸರ್ಕಾರಿ ನೌಕರಿಯಲ್ಲಿದ್ದಾನೆ ಎನ್ನುವುದು ಹೆಮ್ಮೆ. ಆದರೆ ಉಗೇನ್ ರೆಕ್ಕೆಗಳು ಇನ್ನೂ ವಿಶಾಲವಾದ ಆಕಾಶವನ್ನು ಕನಸುತ್ತಿವೆ. ಆಸ್ಟ್ರೇಲಿಯಾಗೆ ಹೋಗಿ, ಅಲ್ಲಿ ಸಂಗೀತಗಾರನಾಗಿ ಹಾಡುತ್ತಾ ಬದುಕು ಸಾಗಿಸುವುದು ಅವನ ಕನಸು. ಅದಕ್ಕಾಗಿ ಇಂಗ್ಲಿಷ್ ಹಾಡುಗಳನ್ನು ಆಲಿಸುತ್ತಿರುತ್ತಾನೆ, ಅಭ್ಯಾಸ ಮಾಡುತ್ತಿರುತ್ತಾನೆ. ಆಸ್ಟ್ರೇಲಿಯಾವನ್ನು ಕುರಿತ ಒಂದು ಬ್ರೋಷರ್ ಅನ್ನು ತನ್ನೊಂದಿಗೇ ಸದಾ ಇಟ್ಟುಕೊಳ್ಳುತ್ತಾನೆ. ತನ್ನ ಟೀಚರ್ ವೃತ್ತಿಯಲ್ಲಿ ಅವನಿಗೆ ಯಾವ ಆಸ್ಥೆಯಾಗಲಿ, ಹುಮ್ಮಸ್ಸಾಗಲೀ ಇಲ್ಲ. ಇಂತಹ ಸಮಯದಲ್ಲಿ ಅವನಿಗೆ ಲುನಾನಾಗೆ ವರ್ಗವಾಗುತ್ತದೆ. ಅಲ್ಲಿ ಆತ ಒಂದು ವರ್ಷ ಸೇವೆ ಸಲ್ಲಿಸಲೇ ಬೇಕು. ಲುನಾನ, ಭೂಮಿಯ ಮೇಲಿನ ಅತ್ಯಂತ ಹಿಂದುಳಿದ ಶಾಲೆ ಎಂದು ಕರೆಯಲ್ಪಡುತ್ತಿರುತ್ತದೆ. ಗಾಸ ಎನ್ನುವಲ್ಲಿಗೆ ಹೋಗಿ ಅಲ್ಲಿಂದ 8 ದಿನಗಳಷ್ಟು ಕಾಲ ಬೆಟ್ಟಗಳನ್ನು ಏರುತ್ತಲೇ ಹೋದರೆ ಲುನಾನ ಸಿಗುತ್ತದೆ. ಅಲ್ಲಿನ ಜನಸಂಖ್ಯೆ 56. ಅಲ್ಲಿ ಯಾವಾಗಲೋ ಒಮ್ಮೆ ಬೇಸಿಗೆಯಲ್ಲಿ ತಂಗಾಳಿ ಬೀಸಿದ ಹಾಗೆ ವಿದ್ಯುಚ್ಛಕ್ತಿ ಸಿಗುತ್ತದೆ. ಮೊಬೈಲ್ ನೆಟ್‌ವರ್ಕ್ ಊಹಿಸಲೂ ಅಸಾಧ್ಯ. ಸೋ ಕಾಲ್ಡ್ ನಾಗರೀಕತೆ ಒದಗಿಸಬಹುದಾದ ಎಲ್ಲಾ ನಾಗರೀಕ ಸವಲತ್ತುಗಳಿಗೂ ಅದು ದೂರವಾಗಿರುತ್ತದೆ.
ಅಲ್ಲಿಗೆ ಹೋಗಲೆಂದು ಗಾಸಾಕ್ಕೆ ಬಂದಿಳಿಯುವ ಉಗೇನ್‌ನನ್ನು ಕರೆದುಕೊಂಡು ಹೋಗಲು ಲುನಾನಾದಿಂದ ಇಬ್ಬರು ಬಂದಿರುತ್ತಾರೆ. ಅವರಿಬ್ಬರಿಗೆ ಇವನನ್ನು ಕಂಡರೆ ಎಷ್ಟೋ ಪ್ರೀತಿ, ತಮ್ಮೂರಿನ ಮಕ್ಕಳಿಗೆ ಪಾಠ ಕಲಿಸಲು ಬಂದವನು ಎನ್ನುವ ಅಭಿಮಾನ. ಆದರೆ ಉಗೇನ್ ಅವರನ್ನು ಮನಸ್ಸಿನೊಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಅವರು ಮಾತನಾಡುತ್ತಿದ್ದರೆ ತನ್ನ ಪಾಡಿಗೆ ತಾನು ತನ್ನದೇ ಕೋಶದಲ್ಲಿ ಬಂಧಿಯಾಗಿ, ತನ್ನ ಮೊಬೈಲ್‌ನಲ್ಲಿ ವ್ಯಸ್ತನಾಗಿರುತ್ತಾನೆ. ಒಂದು ರೀತಿಯಲ್ಲಿ ಅವನು ನಮ್ಮೆಲ್ಲರನ್ನೂ ಪ್ರತಿನಿಧಿಸುತ್ತಾನೆ. ನಮಗೆ ಸಿಕ್ಕಿರುವ ಈ ಎಲ್ಲಾ ಆಧುನಿಕ ಸಲಕರಣೆಗಳೂ ಹೇಗೆ ನಮ್ಮನ್ನು ಜೊತೆಯವರಿಂದ ಪ್ರತ್ಯೇಕಿಸಿ ಹಾಕುತ್ತಿವೆ ಎನ್ನುವುದನ್ನು ಈ ಚಿತ್ರ ಆಡದೆಯೂ ಹೇಳುತ್ತದೆ. ಹಳ್ಳಿಗಾಡಿನ ಊಟ, ಅವರ ಆಚರಣೆಗಳು ಎಲ್ಲದರ ಬಗ್ಗೆ ಅವನಿಗೆ ಉಪೇಕ್ಷೆ. ನಿಧಾನವಾಗಿ ಬೆಟ್ಟಗಳನ್ನು ಏರಲಾರಂಭಿಸುತ್ತಾರೆ. ಅವರು ತಂಗುವ ಮೊದಲ ಮನೆಯಲ್ಲಿ ಗಂಡ, ಹೆಂಡತಿ ಮತ್ತು ಪುಟ್ಟ ಮಗ ಇರುತ್ತಾರೆ. ಮಗುವಿನ ಕಾಲಿನಲ್ಲಿ ಬಣ್ಣಬಣ್ಣದ ರಬ್ಬರ್ ಶೂ ಇದ್ದರೆ, ಅಪ್ಪನದು ಬರಿಗಾಲು. ಇವನು ಕೊಂಡ ಸ್ಪೋರ್ಟ್ಸ್ ಶೂಗಳ ಪರಿಸ್ಥಿತಿ ಅಧ್ವಾನವಾಗಿರುತ್ತದೆ. ಪಟ್ಟಣದ ನಾಜೂಕಿಗೆ ತಯಾರಾದವುಗಳು ಗುಡ್ಡಗಾಡಿನಲ್ಲಿ ಒಂದು ಜೋಕ್ ಆಗಿರುತ್ತದೆ.
ಬೆಟ್ಟದ ಚಳಿಯಲ್ಲಿ ಕೆಲಸಕ್ಕೆ ಬರುತ್ತದೆ ಎಂದು ಗೆಳೆಯ ಕೊಟ್ಟಿರುವ ಪಾನ್ ಅನ್ನು ಅವನು ಬ್ಯಾಗಿನ ಮೂಲೆಗೆ ಸೇರಿಸಿದ್ದಾನೆ. ಅವನ ಆ ಪರಮ ಸಂಕಷ್ಟದ ಬೆಟ್ಟದೇರಿನಲ್ಲಿ ಅವನನ್ನು ಕಾಯುವುದು ಅದೇ ಆಸ್ಟ್ರೇಲಿಯಾದ ಬ್ರೋಷರ್ ಹುಟ್ಟಿಸುವ ಭರವಸೆ. ಅಲ್ಲಿ ಒಂದೆಡೆ ತಂಗಿದಾಗ ಅವನನ್ನು ಕರೆದುಕೊಂಡು ಹೋಗಲು ಬಂದಿರುವವರು ತಮ್ಮ ಗುಡ್ಡಗಾಡಿನ ಹಾಡೊಂದನ್ನು ಹಾಡುತ್ತಿರುತ್ತಾರೆ. ತನ್ನ ಹೆಡ್ ಫೋನ್ ತೆಗೆದು ಒಂದು ನಿಮಿಷ ಅದನ್ನು ಆಲಿಸಿದರೂ, ನಮ್ಮೊಂದಿಗೆ ಹಾಡಿ ಎಂದು ಅವರು ವಿನಂತಿಸಿದಾಗ ಅವನು ಹೇಳುವುದು ಒಂದೇ ಮಾತು. ’ನಾನು ಇಂತಹ ಹಾಡುಗಳನ್ನು ಹಾಡುವುದಿಲ್ಲ’. ಆ ಅದೇ ಹಾಡನ್ನು ಬದುಕನ್ನು ಕಾಯುವ ಸಂಜೀವಿನಿಯಂತೆ ಅವನು ಎದೆಗಪ್ಪಿಕೊಂಡು ಹಿಡಿದುಕೊಳ್ಳುವಂತೆ ಆಗುತ್ತದೆ ಎನ್ನುವುದರಲ್ಲಿ ಕಥೆಯ ಬೆಳವಣಿಗೆ ಮತ್ತು ಅವನ ಪಾತ್ರದ ಪ್ರಯಾಣ ಇದೆ. ಸ್ವಲ್ಪ ಹೊತ್ತಿನಲ್ಲೇ ಅವನ ಫೋನ್‌ನ ಚಾರ್ಜ್ ಖಾಲಿಯಾಗುತ್ತದೆ. ಹೆಡ್ ಫೋನ್ ತೆಗೆದ ಅವನು ಮೊಟ್ಟಮೊದಲ ಬಾರಿಗೆ ಹಕ್ಕಿಯ ಕುಕಿಲನ್ನು, ಬೆಟ್ಟಗಳ ಮಾತನ್ನು ಆಲಿಸುತ್ತಾನೆ.
ತಮ್ಮೂರಿಗೆ ಬರುವ ಟೀಚರ್‌ನನ್ನು ಸ್ವಾಗತಿಸಲು ಆ ಊರಿನ ಸರ್ವಸಮಸ್ತರೂ ಎರಡು ಗಂಟೆಗಳು ಪ್ರಯಾಣ ಮಾಡಿ ಬಂದಿರುತ್ತಾರೆ. ತಮ್ಮ ಮಕ್ಕಳ ಭವಿಷ್ಯದ ಕೀಲಿಕೈ ಶಿಕ್ಷಕರು ಎಂದು ಅವರೆಲ್ಲರೂ ಪ್ರಾಮಾಣಿಕವಾಗಿ ನಂಬಿರುತ್ತಾರೆ. ಅವನು ಶಾಲೆಗೆ ಬರುತ್ತಾನೆ. ಅಲ್ಲಿ ಒಂದು ಕಪ್ಪು ಬೋರ್ಡ್ ಸಹ ಗತಿ ಇಲ್ಲ, ಶಿಕ್ಷಕರಿಗಾಗಿ ಇರುವ ಮನೆ, ಅಲ್ಲಿನ ಶೌಚಾಲಯ ನೋಡಿ ಇವನು ಕಂಗಾಲಾಗುತ್ತಾನೆ. ಅಲ್ಲಿನ ಶೌಚಾಲಯದ ಮೇಲೆ ಯಾರೋ ಏನೋ ಕಿಚನ್ ಎಂದು ಬರೆದಿರುತ್ತಾರೆ. ಟಾಯ್ಲೆಟ್ ಸೀಟ್ ಕವರ್ ಮಕ್ಕಳು ಬಾಸ್ಕೆಟ್ ಬಾಲ್ ಆಡಲು ಬಳಸುವ ಹೂಪ್ ಆಗಿರುತ್ತದೆ. ನಿಂತನಿಲುವಿನಲ್ಲೇ ತಾನು ಅಲ್ಲಿರಲಾರೆ, ಹಿಂದಿರುಗುತ್ತೇನೆ ಎಂದು ಘೋಷಿಸಿಬಿಡುತ್ತಾನೆ. ಮಕ್ಕಳೆಲ್ಲಾ ಮಂಕಾಗುತ್ತಾರೆ. ಊರಿನ ಮುಖಂಡನಿಗೆ ನಿರಾಸೆಯಾದರೂ ಸಹ, ಅವನನ್ನು ಬಲವಂತ ಮಾಡುವುದಿಲ್ಲ, ನಿನ್ನೊಡನೆ ಬಂದವರಿಗೆ ಸುಸ್ತಾಗಿದೆ, ಅವರು ಸುಧಾರಿಸಿಕೊಂಡ ಮೇಲೆ ಹಿಂದಿರುಗಬಹುದು ಎಂದು ಹೇಳುತ್ತಾನೆ. ಆದರೆ ಶಿಕ್ಷಕನ ಸೌಕರ್ಯಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಾನೆ.
ಮರುದಿನ ಮುಂಜಾನೆ ನಿದ್ದೆಯಲ್ಲಿರುವ ಅವನ ಮನೆ ಬಾಗಿಲು ಬಡಿಯುವುದು ಏಳು ವರ್ಷಗಳ ಪುಟ್ಟ ದೇವತೆ ಪೆಮ್ ಜಾಮ್. ಅವಳು ಶಾಲೆಯ ಮಾನಿಟರ್. ಮೇಷ್ಟ್ರು ಇನ್ನೂ ಶಾಲೆಗೆ ಬಂದಿಲ್ಲ ಎಂದು ನೋಡಲು ಬಂದಿರುತ್ತಾಳೆ. ಸರಿ ಇಲ್ಲಿರುವವರೆಗೂ ಕೆಲಸ ಮಾಡಿದರಾಯ್ತು ಎಂದು ಉಗೇನ್ ಸಾಂಪ್ರದಾಯಿಕ ಉಡುಪು ಧರಿಸಿ ಶಾಲೆಗೆ ಬರುತ್ತಾನೆ. ಎಲ್ಲರ ಪರಿಚಯ ಮಾಡಿಕೊಳ್ಳುತ್ತಾನೆ. ದೇವತೆಯಂತಿರುವ ಆ ಪೆಮ್ ಜಾಮ್ ತಂದೆ ಮಹಾ ಕುಡುಕ, ಬೇಜವಾಬ್ದಾರಿ ಮನುಷ್ಯ. ತಾಯಿ ಮನೆಯಲ್ಲಿರುವುದಿಲ್ಲ. ಆ ಮಗು ಅಜ್ಜಿಯ ಹತ್ತಿರ ಬೆಳೆಯುತ್ತಿರುತ್ತದೆ. ಅಪ್ಪ ಅಮ್ಮನ ಹೆಸರು ಹೇಳಿದ ತಕ್ಷಣ ಕಣ್ಣಲ್ಲಿ ನೀರು ತುಂಬಿಕೊಳ್ಳುವ ಆ ಪುಟಾಣಿ ಮರುಕ್ಷಣದಲ್ಲೇ ತನಗೇನೂ ಆಗೇ ಇಲ್ಲ ಎನ್ನುವಂತೆ ನಗುತ್ತಾಳೆ. ಅವಳನ್ನು ಕಂಡರೆ ಉಗೇನ್ ಗೆ ಮಮತೆ. ಅವನನ್ನು ಆ ಊರಿಗೆ ಬೆಸೆಯುವ ಮೊದಲ ತಂತು ಅವಳು. ಹೀಗಿರುವಾಗ ಒಂದು ಸಲ ಅವನೊಂದು ದೈವಿಕ ಹಾಡನ್ನು ಕೇಳುತ್ತಾನೆ. ಅದನ್ನು ಹಾಡುತ್ತಿರುವಾಕೆಯ ಹೆಸರು ಸಾಲ್ಡಾನ ಎಂದು ಗೊತ್ತಾಗುತ್ತದೆ.
ಒಲೆಗೆ ಬೇಕಾದ ಬೆರಣಿ ಹುಡುಕಲು ಯಾಕ್ ಸಗಣಿ ಹುಡುಕಿಕೊಂಡು ಹೋದವನಿಗೆ ಎದುರಿನ ಎತ್ತರೆತ್ತರ ಬೆಟ್ಟಗಳೆದುರಲ್ಲಿ ಒಂಟಿಯಾಗಿ ಕುಳಿತು ಜಗತ್ತಿನ ಪರಿವೆ ಇಲ್ಲದೆ ಹಾಡುತ್ತಿರುವ ಆಕೆ ಸಿಗುತ್ತಾಳೆ. ಯಾರೂ ಇಲ್ಲದ ಇಲ್ಲಿ ಯಾರಿಗಾಗಿ ಹಾಡುತ್ತಿರುವೆ ಎನ್ನುವ ಇವನ ಪ್ರಶ್ನೆಗೆ ಅವಳು ಹೇಳುವುದು ಅವಳ ಮಟ್ಟಿಗೆ ಹಾಡೆನ್ನುವುದು ತಮ್ಮನ್ನು ಕಾಯುವ ಪ್ರಕೃತಿಗೆ ಆಕೆ ಸಲ್ಲಿಸುವ ಆರಾಧನೆ. ಆಕೆ ಹಾಡುತ್ತಿರುವ ಹಾಡು ’ಯಾಕ್ ಲೇಬಿ ಲಾಡರ್’ – ತನ್ನ ಪ್ರೀತಿಯ ಯಾಕ್ ನೆನಪಿನಲ್ಲಿ ಅದನ್ನು ಪಾಲಿಸುವವ ಹಾಡುವ ಹಾಡು. ಆಕೆ ಅವನಿಗೆ ಈ ಹಾಡು ಕಲಿಸಲು ಒಪ್ಪುವುದಷ್ಟೇ ಅಲ್ಲ, ಅವನ ಬೆರಣಿಗಾಗಿ ತನ್ನಲ್ಲಿದ್ದ ವಯಸ್ಸಾದ ಯಾಕ್ ಒಂದನ್ನು ತಂದು ಕೊಡುತ್ತಾಳೆ. ಆದರೆ ಅದನ್ನು ಹೊರಗೆ ಥಂಡಿಯಲ್ಲಿ ಕಟ್ಟಬಾರದು, ಶಾಲೆಯ ಕೊಠಡಿಯೊಳಗೇ ಉಳಿಸಿಕೊಳ್ಳಬೇಕು ಎನ್ನುವುದು ಅವಳ ಬೇಡಿಕೆ! ಹೀಗೆ ಮಕ್ಕಳ ಜೊತೆಗೆ ಒಂದು ಯಾಕ್ ಸಹ ಸೇರಿಕೊಳ್ಳುತ್ತದೆ.
ಹೊರಡುವುದನ್ನು ಮುಂದೂಡುವ ಉಗೇನ್ ಹಳ್ಳಿಯವರ ನೆರವಿನಿಂದಿಗೆ ಶಾಲೆಗೊಂದು ಬ್ಲಾಕ್ ಬೋರ್ಡ್ ತಯಾರಿಸುತ್ತಾನೆ, ಸೀಮೆಸುಣ್ಣ ತಯಾರಿಸುತ್ತಾನೆ. ಆ ಊರಿನಲ್ಲಿ ಪೇಪರ್ ಎಂದರೆ ಬಂಗಾರಕ್ಕೂ ಮಿಗಿಲು. ಈಗ ಅವನ ಪ್ರೀತಿಯ ಆಸ್ಟ್ರೇಲಿಯಾ ಬ್ರೋಷರ್ ಮೇಲೆ ಅವನು ಆ ಹಾಡಿನ ಸಾಲುಗಳನ್ನು ಬರೆದಿಟ್ಟುಕೊಳ್ಳುತ್ತಾನೆ. ಮಕ್ಕಳು ಬರೆಯಲು ಹಾಳೆ ಖಾಲಿಯಾದಾಗ ಥಂಡಿ ಗಾಳಿ ಒಳಗೆ ಬರಬಾರದೆಂದು ಕಿಟಕಿಗಳಿಗೆ ಹೊಡೆದಿದ್ದ ದಪ್ಪಹಾಳೆಯನ್ನು ತೆಗೆದು ಮಕ್ಕಳಿಗೆ ಬರೆಯಲು ಕೊಡುತ್ತಾನೆ. ಹೀಗೆ ನಿಧಾನವಾಗಿ ಅವನು ಆ ಮಕ್ಕಳ ಭಾಗವಾಗುತ್ತಾ ಹೋಗುತ್ತಾನೆ. ಪಟ್ಟಣದಲ್ಲಿ ಅವನದು ಒಂದು ಕೆಲಸ ಮಾತ್ರ. ಆದರೆ ಹಳ್ಳಿಯಲ್ಲಿ ಅವನ ಕೆಲಸಕ್ಕೆ ಸಿಗುವ ಮನ್ನಣೆ ಅವನ ಕೆಲಸದ ಬಗ್ಗೆ ಅವನಲ್ಲೂ ಗೌರವ, ಪ್ರೀತಿ ಹುಟ್ಟಿಸುತ್ತದೆ. ಚಿತ್ರದಲ್ಲಿ ಒಂದು ಸನ್ನಿವೇಶವಿದೆ, ಮಕ್ಕಳಿಗೆ A, B, C ಕಲಿಸುವಾಗ, C for Car ಎಂದು ಹೇಳುತ್ತಾನೆ. ಆ ಶಾಲೆಯ ಯಾವ ಮಕ್ಕಳೂ ಕಾರ್ ನೋಡಿರುವುದಿಲ್ಲ, ಅವಕ್ಕೆ ಅದೇನು ಎಂದು ಸಹ ಗೊತ್ತಿರುವುದಿಲ್ಲ. ಅದು ಅವನಿಗೆ ಕಣ್ತೆರೆಸಿದ ಘಟನೆ, ಕಡೆಗೆ ಅವನು ಅದನ್ನು C for Cow ಎಂದು ತಿದ್ದುತ್ತಾನೆ. ಇದು ಕೃಷಿಯ ಮಣ್ಣಿನೊಳಗೆ ಒಮ್ಮೆಯೂ ಹೆಜ್ಜೆಯಿಡದವರು ಏಸಿ ಕೊಠಡಿಗಳಲ್ಲಿ ಕೂತು ಕೃಷಿನೀತಿ ಬರೆಯುವಂತಹ, ಪಟ್ಟಣಗಳನ್ನು ಬಿಟ್ಟು ಹೊರಗೆ ಹೆಜ್ಜೆಯಿಡದವರು ಏಕರೂಪಿ ಶಿಕ್ಷಣ ನೀತಿಯನ್ನು ರಚಿಸುವ ವಿಡಂಬನೆಯನ್ನು ಈ ದೃಶ್ಯ ನಮಗೆ ತೋರಿಸುತ್ತದೆ. ಆಗಾಗ ಮಿಣಕ್ ಮಿಣಕ್ ಎಂದು ಮಿನುಗುವ ಕರೆಂಟ್‌ನಿಂದ ಮೊಬೈಲ್ ಚಾರ್ಜ್ ಆಗಿರುತ್ತದೆ. ಆದರೆ ಅವನ ಜಗತ್ತಿನಲ್ಲಿ ಈಗ ಮೊಬೈಲ್ ಇಲ್ಲ, ಅವನು ತನ್ನ ಸುತ್ತಲಿನ ಜಗತ್ತಿನ ಭಾಗವಾಗಿದ್ದಾನೆ.
ಅವನಿಗೆ ಆಸ್ಟ್ರೇಲಿಯಾ ವೀಸಾ ಸಿಕ್ಕಿತೆ? ಸಿಕ್ಕಿದರೆ ಅವನು ಹೋಗುತ್ತಾನೆಯೋ ಅಥವಾ ಇಲ್ಲೇ ಉಳಿಯುತ್ತಾನೆಯೋ ಇದು ಚಿತ್ರದ ಕಥೆ. ಎಲ್ಲಾ ಸಿದ್ಧಸೂತ್ರಗಳನ್ನು, ಸಿದ್ಧಮಾದರಿಗಳನ್ನು ಮೀರಿದ ಕಥೆ ಇದು. ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿರುವ ದೋರ್ಜಿಗೆ ಇದು ಮೊದಲ ಚಿತ್ರ. ಅಲ್ಲಿನವರೇ ಆದ ಅವರು ಈ ಚಿತ್ರದಲ್ಲಿ ಭೂತಾನ್ ಪದ್ಧತಿಗಳು, ಅಲ್ಲಿನ ಬೆಟ್ಟ ಗುಡ್ಡ, ಯಾಕ್, ಜನಪದ ಸಂಗೀತ ಎಲ್ಲವನ್ನೂ ಪಾತ್ರಧಾರಿಗಳನ್ನಾಗಿ ಮಾಡಿಕೊಳ್ಳುತ್ತಾರೆ. ನೋಡುತ್ತಿದ್ದಷ್ಟು ಕಾಲವೂ, ನೋಡಿದ ನಂತರವೂ ಚಿತ್ರ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಪ್ರೈಮ್‌ನಲ್ಲಿರುವ ಈ ಚಿತ್ರ ಹಿಂದಿ ಭಾಷೆಗೆ ಡಬ್ ಆಗಿದೆ. ಇಂಗ್ಲಿಷ್‌ನಲ್ಲಿರುವ ಸಬ್ ಟೈಟಲ್ ಜೊತೆಜೊತೆಗೆ ಚಿತ್ರವನ್ನು ನೋಡಬಹುದು. ಸ್ಥಳೀಯರನ್ನು, ಅಲ್ಲಿನ ಮಕ್ಕಳನ್ನೇ ತೆಗೆದುಕೊಂಡು ಚಿತ್ರಿಸಿರುವ ಈ ಚಿತ್ರ ಆ ಕಾರಣಕ್ಕೆ ಹೆಚ್ಚು ಸಹಜವಾಗಿ, ಮೇಕಪ್ ಇಲ್ಲದೆ ಬಂದಿದೆ. ಒಟ್ಟಿನಲ್ಲಿ ನೋಡಬಹುದಾದ, ನೋಡಬೇಕಾದ ಚಿತ್ರ ಇದು.