ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿರುವ ‘ಕ್ರೈಂ ಸ್ಟೋರಿಸ್: ಇಂಡಿಯಾ ಡಿಟೆಕ್ಟಿವ್ಸ್’ ಅಬ್ಬರ – ವೈಭವೀಕರಣವಿಲ್ಲದೆ ತಲ್ಲಣ ಹುಟ್ಟಿಸುವ ನಾಲ್ಕು ಎಪಿಸೋಡುಗಳ ಸೀರೀಸ್. ಬೆಂಗಳೂರಲ್ಲೇ ನಡೆಯುವ ಘಟನೆಗಳಾದ ಕಾರಣ ಕನ್ನಡಿಗರಾದ ನಮಗೆ ಇನ್ನಷ್ಟು ಹತ್ತಿರವಾಗುತ್ತದೆ.

ಅಪರಾಧ ಲೋಕದ ವಿವರ ನಮ್ಮನ್ನು ಸದಾ ಸೆಳೆಯುತ್ತದೆ. ಹಾಗೆಂದು ವಸ್ತುಶಃ ನಾವು ಅಪರಾಧಗಳನ್ನು ಇಷ್ಟಪಡುತ್ತೇವೆ ಎಂದಲ್ಲ. ನಾವು ಕಾಣದ ಪ್ರಪಂಚವನ್ನು, ದೂರದಿಂದ ಕಾಣುವ ಲೋಕವನ್ನು ಹತ್ತಿರದಿಂದ ನೋಡಬೇಕು ಅನಿಸುವ ಕುತೂಹಲದ ಪ್ರತಿಬಿಂಬವದು. ನನಗೆ, ನಿಮಗಷ್ಟೇ ಅಲ್ಲ, ಇದೊಂದು ಜಾಗತಿಕ ಮನಸ್ಥಿತಿ ಎಂಬುದಕ್ಕೆ ಎಲ್ಲಾ ದೇಶಗಳಲ್ಲೂ ಓಡುವ ಕ್ರೈಂ ಸಿನಿಮಾಗಳೇ ಸಾಕ್ಷಿ. ನ್ಯೂಸ್ ಚಾನಲ್‌ಗಳಲ್ಲಿ ಅತಿಹೆಚ್ಚು ಟಿಆರ್‌ಪಿ ಕದಿಯುವುದು ಕಳ್ಳತನದ ಸುದ್ದಿಗಳೇ‌. ಸೆಳೆಯುವುದು ಕ್ರೈಂ ಡೈರಿ, ಕ್ರೈಂ ಸ್ಟೋರಿಗಳೇ.

ಸುದ್ದಿವಾಹಿನಿಗಳ ಕೃಪೆಯಿಂದ ನಮಗೆ ಕ್ರೈಂ ಸ್ಟೋರಿಗಳನ್ನು ಕರ್ಕಶ ಧ್ವನಿಯಲ್ಲೇ ಕೇಳಿ ಅಭ್ಯಾಸ. ಹೀಗಿರುವಾಗ ಅಪರಾಧ ಲೋಕವನ್ನು ಹೀಗೂ ಪರಿಚಯಿಸಬಹುದು ಎಂದು ತೋರಿಸುವುದು ನೆಟ್‌ಫಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿರುವ ‘ಕ್ರೈಂ ಸ್ಟೋರಿಸ್: ಇಂಡಿಯಾ ಡಿಟೆಕ್ಟಿವ್ಸ್’. ಅಬ್ಬರ, ವೈಭವೀಕರಣವಿಲ್ಲದಿದ್ದರೂ ತಲ್ಲಣ ಹುಟ್ಟಿಸುವ ನಾಲ್ಕು ಎಪಿಸೋಡುಗಳ ಸೀರೀಸ್. ಬೆಂಗಳೂರಲ್ಲೇ ನಡೆಯುವ ಘಟನೆಗಳಾದ ಕಾರಣ ಕನ್ನಡಿಗರಾದ ನಮಗೆ ಇನ್ನಷ್ಟು ಹತ್ತಿರವಾಗುವ ಪ್ರಕರಣಗಳ ಭೇದಿಸುವಿಕೆ ಸ್ಕ್ರಿಪ್ಟ್ ಇಟ್ಟು ಮಾಡಿದ ಸ್ಟೋರಿಗಳಲ್ಲ, ಘಟನೆ ನಡೆಯುವಾಗಲೇ ಚಿತ್ರಿಸಿದ ಸಾಕ್ಷ್ಯಚಿತ್ರ.

ಪ್ರತಿ ಅಧ್ಯಾಯ ತೆರೆದುಕೊಳ್ಳುವುದು ಕಂಟ್ರೋಲ್ ರೂಮಿಗೆ ಬರುವ ಮಾಹಿತಿಯಿಂದ. ನೋಡುವ ನಮಗೆ ಆ ಪ್ರಕರಣ ಬಿಡಿಸಲಾರದ ಒಗಟು, ಪೊಲೀಸರಿಗೆ ದಿನನಿತ್ಯದ ಕಗ್ಗಂಟು. ಅಂಥ ಗಂಟನ್ನು ಪೊಲೀಸರು ನಿಧಾನವಾಗಿ ಒಂದೊಂದೇ ಎಳೆ ಬಿಡಿಸುವ ಬಗೆ ಆಸಕ್ತಿ ಕೆರಳಿಸುತ್ತದೆ. ಹಾಗೆಂದು ಆಸಕ್ತಿ ಕೆರಳಿಸುವಂಥ ಯಾವುದೇ ಸನ್ನಿವೇಶವನ್ನು ಉದ್ದೇಶಪೂರ್ವಕ ಸೃಷ್ಟಿಸಿಲ್ಲ, ಅದರೂ ಅಂಥ ಪರಿಣಾಮ ಉಂಟುಮಾಡುವುದು ಸೋಜಿಗ. ಅಪರಾಧಿಗಳ ಬಗ್ಗೆಯಾಗಲೀ ಪೊಲೀಸರ ಕುರಿತಾಗಲಿ ಯಾವುದೇ ವಿಶ್ಲೇಷಣೆಯನ್ನು ಚಿತ್ರ ನಿರೂಪಕರು ಮಾಡದಿರುವುದು ನಿರ್ಮಾಣದ ಹಿಂದಿನ ಪ್ರೌಢಿಮೆ.

ಕೊಲೆ ಕೇಸಿನ ಆರೋಪಿ ತನ್ನ ಮೇಲಿನ ಆರೋಪ ಅಲ್ಲಗಳೆಯುವಾಗ “ಬೇರೆಯೇ ರೀತಿಯ ವಿಣಾರಣೆ”ಯೂ ನಮಗೆ ಗೊತ್ತಿದೆ ಎಂದು ಇನ್ಸ್ಪೆಕ್ಟರ್ ಹೇಳುವ ಮಾತು, “ಸರ್, ಸ್ವಲ್ಪ ಆಚೆ ಇರಿ, ವಿಚಾರಣೆ ಆದ‌ ಮೇಲೆ ಕರೀತೀವಿ” ಎಂದು ಕ್ಯಾಮರಾ ತಂಡವನ್ನು ಹೊರಗೆ ಕಳಿಸುವ ಸನ್ನಿವೇಶಗಳಿಗೆ ಕತ್ತರಿ ಹಾಕಬಹುದಿತ್ತು. ಆದರೆ ಹಾಗೆ ಮಾಡದೆ ಪ್ರೇಕ್ಷಕ ಮಹಾಪ್ರಭುವಿಗೆ ನ್ಯಾಯ ಒದಗಿಸಲಾಗಿದೆ. ವಿಶ್ಲೇಷಣೆಗಳನ್ನು ನೋಡುಗರ ವಿವೇಚನೆಗೆ ಬಿಡುವ ಕಲೆಗಾರಿಕೆಗೆ ಒತ್ತು ಕೊಡಲಾಗಿದೆ. ಪೊಲೀಸರ ಇಂಥ ನಡೆ ತಪ್ಪು ಎಂದು ಮೇಲ್ನೋಟಕ್ಕೆ ಅನಿಸಿದರೂ “ವಿಚಾರಣೆ ಸಂದರ್ಭದಲ್ಲಿ ಕೆಲವೊಮ್ಮೆ ನಿರಪರಾಧಿಗಳೂ ತೊಂದರೆ ಎದುರಿಸಬೇಕಾಗುತ್ತದೆ. ಆದರೆ ಅದು ಉದ್ದೇಶಪೂರ್ವಕ ಅಲ್ಲ” ಎಂದು ಪೊಲೀಸ್ ಕಮಿಷನರ್ ಹೇಳುವ ಮಾತು ಕೇಳುವಾಗ ಇಲಾಖೆಗೊಂದು ಮಾಫಿ ನೀಡೋಣ ಎಂದು ಅನಿಸುವುದು ಸುಳ್ಳಲ್ಲ. ಗಂಡನ ಕೊಲೆಯ ಆರೋಪ ಹೆಂಡತಿಯ ಮೇಲೆಯೇ ಬರುವಾಗ, ಸೊಸೆಯೇ ಅಪರಾಧಿ ಎಂದು ಅತ್ತೆ ಕೂಗಿ ಹೇಳಿದಾಗ್ಯೂ ಪೊಲೀಸರ ನಡೆ ಇಲಾಖೆಗಿರುವ ಸಂಯಮದ ಗುಣವನ್ನು ಕಟ್ಟಿಕೊಟ್ಟಿದೆ.

ವಿಚಾರಣೆಯ ವಿವಿಧ ಹಂತಗಳಲ್ಲಿ ಪೊಲೀಸರ ಮಾತುಗಳನ್ನು ದಾಖಲಿಸುವುದರ ಜತೆಗೇ ಖಾಕಿಯ ಒಳಗಿರುವ ಸಾಮಾನ್ಯ ಮನುಷ್ಯನನ್ನೂ ‘ಕ್ರೈಂ ಸ್ಟೋರೀಸ್’ ಪರಿಚಯ ಮಾಡುತ್ತದೆ. ಮಹಿಳಾ ಪೊಲೀಸ್ ತನ್ನೂರಲ್ಲಿ ಇರುವ ಪುಟ್ಟ ಮಗನ ಜತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುವಾಗ, ಭಿನ್ನ ಸ್ವಭಾವದ ತನ್ನ ಮಗನ ಬಗ್ಗೆ ಖಡಕ್ ಅಧಿಕಾರಿ ಅಸಹಾಯಕನಾಗುವಾಗ ನಮ್ಮ ಭಾವನೆಗಳನ್ನು ಒಂಚೂರು ಹಿಂಡಿಬಿಡುತ್ತದೆ.

ವೇಶ್ಯೆಯೊಬ್ಬಳ ಕೊಲೆ ಪ್ರಕರಣ ಭೇದಿಸುವ ಜವಾಬ್ದಾರಿ ಮಹಿಳಾ ಸಿಬ್ಬಂದಿಯ ಹೆಗಲಿಗೇರುವುದು ಸ್ವಾಭಾವಿಕ. ಆದರೆ “ವೇಶ್ಯೆಯರ ಮೇಲೆ ನನಗೆ ಮೊದಲಿನಿಂದಲೂ ಒಳ್ಳೆಯ ಅಭಿಪ್ರಾಯವಿಲ್ಲ” ಎಂದು ಮಹಿಳಾ ಸಿಬ್ಬಂದಿಯೇ ಹೇಳುವುದು ನಮ್ಮನ್ನು ಚಿಂತನೆಗೆ ದೂಡುವ ವಿಚಾರ. ಕ್ರಮೇಣ ಆ ಮಹಿಳಾ ಸಿಬ್ಬಂದಿ ಪ್ರಕರಣದ ಒಳಹೋಗಿ ದೇಹ ಮಾರಿಕೊಳ್ಳುವ ಒಂದಷ್ಟು ಮಂದಿಯನ್ನು ಮಾತನಾಡಿಸುವುದು ವಿಚಾರಣೆಗೆ ಅನಿವಾರ್ಯ. ಈ ಪ್ರಕ್ರಿಯೆಯಲ್ಲಿ ಅವರ ಕಷ್ಟ ಕಾರ್ಪಣ್ಯ ಕಂಡು ಮರುಗಿ ಅದೇ ಮಹಿಳಾ ಸಿಬ್ಬಂದಿಯ ಬದಲಾದ ಮನಸ್ಥಿತಿಯ ಹೇಳಿಕೆಯನ್ನು ಕೊನೆಗೆ ದಾಖಲಿಸಲಾಗಿದೆ. ವೇಶ್ಯಾವೃತ್ತಿಯ ಬಗೆಗೆ ಇಲಾಖೆಯ ಒಳಗೂ ಇಂಥ ಮಡುಗಟ್ಟಿದ ಅಭಿಪ್ರಾಯವಿರುವುದು ಅಚ್ಚರಿ ಹುಟ್ಟಿಸುವ ಅಂಶ. ತರಬೇತಿ ಹಂತದಲ್ಲಿ ಇವುಗಳ ಬಗೆಗೆಲ್ಲಾ ತಿಳಿಯುವುದಿಲ್ಲವೇ‌ ಎಂಬ ಪ್ರಶ್ನೆಯೂ ಮೂಡುತ್ತದೆ.

ಈಗಿನ ಕಾಲದಲ್ಲಿ ತಂತ್ರಜ್ಞಾನದ ಬಳಕೆಯಿಲ್ಲದೆ ಬದುಕು ಅಸಾಧ್ಯ. ಹಾಗೆಯೇ ಪೊಲೀಸರ ವಿಚಾರಣೆಯೂ. ಮೊಬೈಲ್ ಫೋನ್ ಲೊಕೇಶನ್, ಕಾಲ್ ಲಿಸ್ಟ್ ವಿಶ್ಲೇಷಣೆ, ಫೇಸ್ಬುಕ್‌ನ ಒಳಹೊಗ್ಗುವಿಕೆ, ಸಿಸಿ ಕ್ಯಾಮರಾ ಪರಿಶೀಲನೆ‌ಮಾಡುವ ಹಂತಗಳಲ್ಲಿ ಇಲಾಖೆ ಠಾಣೆಗಳಲ್ಲಿ ಮೇಲ್ನೋಟಕ್ಕೆ ಕಾಣುವುದಕ್ಕೂ ವಿಚಾರಣೆ ಕೈಗೊಳ್ಳವು ಕ್ರಮಕ್ಕೂ ಸಾಕಷ್ಟು ವ್ಯತ್ಯಾಸವಿದೆ‌ ಎಂಬುದನ್ನು ನಿರೂಪಣೆಯ ಧ್ವನಿಯಲ್ಲಿ ಹೇಳದೆಯೇ ದಾಖಲಿಸಿದೆ.

ಇದ್ದೂ ಇಲ್ಲದಂತಿರುವ ಹಿನ್ನೆಲೆ ಸಂಗೀತ, ತೀರಾ ಅಗತ್ಯ ಸನ್ನಿವೇಶಗಳಲ್ಲಷ್ಟೇ ಮುನ್ನೆಲೆಗೆ ಬಂದು ಸಂಪೂರ್ಣ ಸೀರೀಸ್‌ಗೆ ನ್ಯಾಯ ಒದಗಿಸಿದೆ. ಕೆಲವೊಮ್ಮೆ ಪೊಲೀಸ್ ಜೀಪುಗಳನ್ನು ಹಿಂಬಾಲಿಸುತ್ತಾ ಮತ್ತು ಕೆಲವೊಮ್ಮೆ ಜೀಪಿನ ಒಳಗೂ ಹೋಗುವ ಕ್ಯಾಮೆರಾ ಕಲೆಗಾರಿಕೆಯಲ್ಲಿ ಲೋಪ ಹುಡುಕುವುದು ಕಷ್ಟ. ದ್ರೋಣ್ ಕ್ಯಾಮರಾ ಬಳಸಿದ ದೃಶ್ಯಗಳಂತೂ ಬೆಂಗಳೂರು ಅದೆಂಥಾ ಮಹಾನಗರವೆಂಬ ಬೆರಗನ್ನು ಸೆರೆಹಿಡಿದಿದೆ. ಅಲ್ಲಲ್ಲಿ ಬರುವ ಹದ್ದು ಮನಸ್ಸಿಗೊಪ್ಪುವ ರೂಪಕ.

ಪ್ರತಿ ಎಪಿಸೋಡಿನ ಕೊನೆಗೆ ಮುಂದಿನ ಪ್ರಕರಣದ ತುಣುಕು ಸೇರಿಸಿರುವುದು ಕೆಲವೊಮ್ಮೆ ಸೀರೀಸ್ ನಿರ್ದೇಶಕರ ಮೇಲೆ ಸಿಟ್ಟು ಬರಿಸುತ್ತದೆ. ಈ ಒಂದು ಎಪಿಸೋಡ್ ನೋಡಿಬಿಡೋಣ ಅನಿಸಿ ಒಂದರ ಮೇಲೊಂದು ನೋಡಿಸಿಯೇ ಬಿಡುವುದು ಆ ಸಿಟ್ಟಿಗೆ ಕಾರಣ. ಇಂಥ ಬುದ್ಧಿವಂತಿಕೆಯ ಚಿತ್ರಿಕೆಯ ನಡುವೆ ಆರೋಪಿಗಳಿಗೂ ತಮ್ಮ ಮಾತನ್ನು ದಾಖಲಿಸುವುದಕ್ಕೆ ಅವಕಾಶ‌ ಮಾಡಿಕೊಟ್ಟದ್ದರಿಂದ ಎಲ್ಲಿಯೂ ಏಕಪಕ್ಷೀಯ ಅನಿಸುವುದಿಲ್ಲ. ಮೊದಲ ಮೂರೂ ಪ್ರಕರಣಗಳು ಕೊಲೆಯ ಹಿನ್ನೆಲೆಯವು. ಕೊನೆಯದ್ದು ಮಾತ್ರ ಬೀದಿ ಬದಿಯ ಪುಟ್ಟ ಮಗುವೊಂದರ ಅಪಹರಣ. ಅದರ ಬಗ್ಗೆ ಇಲ್ಲಿ ಹೆಚ್ಚು ಹೇಳುವುದು ಬೇಡ. ನೋಡುವುದಕ್ಕೆ ಮಾತ್ರ ಪೊಲೀಸರಷ್ಟೇ ಗಟ್ಟಿ ಮನಸ್ಸು ನಮಗೂ ಬೇಕು ಎಂಬ ಸಣ್ಣ ಸೂಚನೆ ಸಾಕು.

LEAVE A REPLY

Connect with

Please enter your comment!
Please enter your name here