ಸಿನಿಮಾ ನಿರ್ದೇಶನಕ್ಕಿಳಿದು ಆಕಸ್ಮಾತಾಗಿ ಆ ಚಿತ್ರದಲ್ಲಿ ನಟಿಸಿದ ವಿಶೃತ್ ನಾಯಕ್ ಅತ್ಯುತ್ತಮ ನಟ ರಾಜ್ಯಪ್ರಶಸ್ತಿ ಪಡೆದದ್ದು ಒಂದು ರೀತಿ ಸೋಜಿಗ. ವಿಶೃತ್ ತಮ್ಮ ಸಿನಿ ಪಯಣದ ಬಗ್ಗೆ ಮಾಹಿತಿ ನೀಡಿ ತಮಗೆ ನೆರವಾದವರಿಗೆ ಧನ್ಯವಾದ ಅರ್ಪಿಸಿದರು.
“ನಾನು ಮೂಲತಃ ಕುಣಿಗಲ್‌ನ ಹೊಸಕೆರೆಯವನು. ಅಲ್ಲಿಂದ ಬೆಂಗಳೂರಿಗೆ ಬಂದೆ. ಟ್ರಾವೆಲ್ ಒಂದರ ಓನರ್ ಆದೆ. ಕಾರಣಾಂತರದಿಂದ ಅದನ್ನು ಮಾರಿದೆ. ನಂತರ ಮುಂದೇನು? ಯೋಚಿಸುತ್ತಿದಾಗ, ನನ್ನ ಹೆಂಡತಿ ನನ್ನನ್ನು ಕಾನ್ಫಿಡಾಗೆ ಸೇರಿಸಿದಳು. ಅಲ್ಲಿ ಹಿರಿಯ ನಿರ್ದೇಶಕರಾದ ಸಿದ್ದಲಿಂಗಯ್ಯ, ನಾಗಾಭರಣ, ಕೋಡ್ಲು ರಾಮಕೃಷ್ಣ ಅವರಂತಹ ದಿಗ್ಗಜರ ಮಾರ್ಗದರ್ಶನ ದೊರೆಯಿತು. ನಂತರ ನಿರ್ದೇಶಕನಾದೆ. ನನಗೆ ಬರವಣಿಗೆಯಲ್ಲಿ ಆಸಕ್ತಿ ಹೆಚ್ಚು. ಓದುವ ಹವ್ಯಾಸ ನನಗೆ ಬೆಳೆದಿದ್ದು ರವಿ ಬೆಳಗೆರೆ ಅವರಿಂದ” ಎಂದರು ವಿಶೃತ್ ನಾಯಕ್. ಅವರಿಗೆ ‘ಮಂಜರಿ’ ಚಿತ್ರಕ್ಕಾಗಿ 2017ನೇ ಸಾಲಿನ ಅತ್ಯುತ್ತಮ ನಟ ರಾಜ್ಯಪ್ರಶಸ್ತಿ ಸಂದಿದೆ.
‘ಮಂಜರಿ’ ಚಿತ್ರ ನಿರ್ದೇಶನಕ್ಕೆ ತೊಡಗಿದ ಅವರಿಗೆ ಆರಂಭದಲ್ಲಿ ಕೊಂಚ ತೊಡಕಾಯ್ತು. ಪಾತ್ರಧಾರಿಯೊಬ್ಬರು ಚಿತ್ರತಂಡದಿಂದ ಹೊರನಡೆದಾಗ ಅವರು ಏನು ಮಾಡಬೇಕೆಂದು ಗೊಂದಲಕ್ಕೀಡಾಗಿದ್ದರು. ನಿರ್ಮಾಪಕ ಶಂಕರ್, “ನೀವೇ ಆ ಪಾತ್ರ ನಿರ್ವಹಿಸಿ” ಎಂದಾಗ ವಿಶೃತ್ ಅವರೇ ಪಾತ್ರದಲ್ಲಿ ಕಾಣಿಸಿಕೊಂಡರು. “ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಅನಂತು ಎಂಬುವವರು ನನ್ನನ್ನು ಕರೆದು ರಾಜ್ಯ ಪ್ರಶಸ್ತಿಗೆ ನೊಂದಾಯಿಸಿರುವ ಬಗ್ಗೆ ವಿಚಾರಿಸಿದರು. ಇಲ್ಲ ಅಂದೆ. ಮೊದಲು ನೊಂದಾಯಿಸಿ ಎಂದರು. ನಾನು ಪ್ರಶಸ್ತಿಗೆ ಅರ್ಜಿ ಹಾಕುವಾಗ, ಖಂಡಿತವಾಗಿಯೂ ನಿರೀಕ್ಷೆ ಇರಲಿಲ್ಲ. ಆತ್ಮೀಯರೊಬ್ಬರ ಮೂಲಕ ನನಗೆ ಪ್ರಶಸ್ತಿ ಬಂದಿರುವ ವಿಷಯ ತಿಳಿದು ಸಂತೋಷವಾಯಿತು” ಎಂದರು ವಿಶೃತ್.
“ಶ್ರೇಷ್ಠ ನಟ ಪ್ರಶಸ್ತಿ ಪಡೆಯುವುದು ಅಷ್ಟು ಸುಲಭವಲ್ಲ. ಪೈಪೋಟಿಗೆ ಸಾಕಷ್ಟು ಜನ ಇರುತ್ತಾರೆ. ಹಾಗಿರುವಾಗ ವಿಶೃತ್ ನಾಯಕ್ ಅವರಿಗೆ ಪ್ರಶಸ್ತಿ ಬಂದಿರುವು ಖುಷಿಯ ವಿಷಯ” ಎಂದರು ನಿರ್ಮಾಪಕ ಭಾ.ಮ.ಹರೀಶ್. “ನಮ್ಮ ಚಿತ್ರದಲ್ಲಿ ಅಭಿನಯಿಸಲು ಒಪ್ಪಿ, ಈಗ ಪ್ರಶಸ್ತಿ ಪಡೆದುಕೊಂಡಿರುವ ವಿಶೃತ್ ನಾಯಕ ಅವರಿಂದ ನಮ್ಮ ಚಿತ್ರಕ್ಕೂ ಹೆಸರು ಬಂದಿದೆ, ಒಳ್ಳೆಯದಾಗಲಿ” ಎಂದರು ‘ಮಂಜರಿ’ ಚಿತ್ರದ ನಿರ್ಮಾಪಕ ಶಂಕರ್. “ಒಬ್ಬ ನಟನಿಗೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಬಂದರೆ, ಅವರ ಉತ್ಸಾಹ ಇನ್ನಷ್ಟು ಹೆಚ್ಚುತ್ತದೆ” ಎಂದು ಗೆಳೆಯ ವಿಶೃತ್ ನಾಯಕ್ ಅವರಿಗೆ ಶುಭಕೋರಿದರು ನಟ ಜೆಕೆ.