‘KGF2’ ಚಿತ್ರದ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಸದ್ದು ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್‌ ನೂತನ ಸಿನಿಮಾ ಘೋಷಿಸಿದೆ. ವರನಟ ಡಾ.ರಾಜಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜಕುಮಾರ್‌ ಪುತ್ರ ಯುವ ರಾಜಕುಮಾರ್‌ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಸಂತೋಷ್‌ ಆನಂದ್‌ರಾಮ್‌ ಈ ಚಿತ್ರದ ನಿರ್ದೇಶಕ.

ಹೊಂಬಾಳೆ ಸಂಸ್ಥೆಯಿಂದ ನೂತನ ಸಿನಿಮಾಗಳ ನಿರ್ಮಾಣದ ಸರಣಿ ಆರಂಭವಾಗಿದೆ. ಮೊನ್ನೆಯಷ್ಟೇ ಖ್ಯಾತ ನಿರ್ದೇಶಕಿ ಸುಧಾ ಕೊಂಗರ ಅವರ ನಿರ್ದೇಶನದಲ್ಲಿ ನೂತನ ಚಿತ್ರ ಘೋಷಿಸಿತ್ತು ಸಂಸ್ಥೆ. ಮತ್ತೊಂದು ಹೊಸ ಸಿನಿಮಾದ ಬಗ್ಗೆ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಸುಳಿವು ನೀಡಿತ್ತು. ಇಂದು ಮಾಹಿತಿ ಹೊರಬಿದ್ದಿದೆ. ವರನಟ ರಾಜಕುಮಾರ್‌ ಮೊಮ್ಮಗ ಯುವ ರಾಜಕುಮಾರ್ ನಟನೆಯ ನೂತನ ಸಿನಿಮಾ ಆರಂಭಿಸುವುದಾಗಿ ಸಂಸ್ಥೆ ಹೇಳಿದೆ. ಯಶಸ್ವೀ ಸಿನಿಮಾಗಳ ನಿರ್ದೇಶಕ ಸಂತೋಷ್ ಆನಂದರಾಮ್ ಈ ಚಿತ್ರದ ಸಾರಥ್ಯ ವಹಿಸುತ್ತಿದ್ದಾರೆ. ಸದ್ಯಕ್ಕೆ ಇಷ್ಟು ಮಾಹಿತಿ ನೀಡಿರುವ ಹೊಂಬಾಳೆ ಫಿಲಂಸ್, ನಂತರದ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿಕೊಂಡಿದೆ.

ರಾಜಕುಮಾರ್‌ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಖ್ಯಾತ ವೃತ್ತಿ ರಂಗಭೂಮಿ ಕಲಾವಿದರು. ಮುಂದೆ ಇವರ ಪುತ್ರ ಮುತ್ತೂರಾಜ, ರಾಜಕುಮಾರ್‌ ಹೆಸರಿನಲ್ಲಿ ಇತಿಹಾಸ ಸೃಷ್ಟಿಸಿದ್ದು ತಿಳಿದೇ ಇದೆ. ನಂತರ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಕಲಾಕುಟುಂಬದ ಮೂರನೇ ತಲೆಮಾರನ್ನು ಪ್ರತಿನಿಧಿಸಿದರು. ನಾಲ್ಕನೇ ತಲೆಮಾರಿನ ಹೀರೋ ಆಗಿ ರಾಘವೇಂದ್ರರ ಪುತ್ರ ವಿನಯ್‌ ಈಗಾಗಲೇ ನಾಲ್ಕೈದು ಚಿತ್ರಗಳ ನಟ. ಇದೀಗ ವಿನಯ್‌ ಸಹೋದರ ಯುವ ರಾಜಕುಮಾರ್‌ ಸಿನಿಮಾ ಪ್ರವೇಶಕ್ಕೆ ವೇದಿಕೆ ಸಿದ್ಧವಾದಂತಾಗಿದೆ. ಅದರಲ್ಲೂ ಹೊಂಬಾಳೆ ಸಂಸ್ಥೆಯಡಿ ಅವರು ಪರಿಚಯವಾಗುತ್ತಿರುವುದು ರಾಜ್‌ ಕುಟುಂಬದ ಅಭಿಮಾನಿಗಳಿಗೆ ಸಿಹಿ ಸುದ್ದಿ.

ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ನಿರ್ಮಾಪಕ ವಿಜಯ್ ಕಿರಗಂದೂರು. ಪುನೀತ್ ರಾಜಕುಮಾರ್ ಅವರ ಜೊತೆ ಸಂಸ್ಥೆಯ ಮೊದಲ ಚಿತ್ರವಾಗಿ ‘ನಿನ್ನಿಂದಲೇ’ ತಯಾರಾಗಿತ್ತು. ನಂತರ ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಪುನೀತ್ ಅವರು ಅಭಿನಯಿಸಿದ್ದ ‘ರಾಜಕುಮಾರ’ ನಿರ್ಮಾಣವಾಯ್ತು. ಈ ಮೂವರ ಸಂಗಮದಲ್ಲಿ ಬಂದಿದ್ದ ‘ಯುವರತ್ನ’ ಚಿತ್ರ ಸಹ ಎಲ್ಲರ ಮನಗೆದ್ದಿತ್ತು. ಸಂತೋಷ್ ಆನಂದರಾಮ್ ಹಾಗೂ ಪುನೀತ್ ರಾಜ್‍ಕುಮಾರ್ ಅವರ ಕಾಂಬಿನೇಶನಲ್ಲಿ ಮತ್ತೊಂದು ಹೊಸ ಚಿತ್ರ ಆರಂಭಕ್ಕೆ ಸಿದ್ದತೆ ನಡೆದಿತ್ತು. ಆದರೆ ಇದು ಸಾಕಾರವಾಗಲಿಲ್ಲ. ಈಗ ಅದೇ ಕುಟುಂಬದ ಯುವ ರಾಜಕುಮಾರ್ ಅವರು ನಾಯಕರಾಗಿ ನಟಿಸುತ್ತಿರುವ ಆಕ್ಷನ್ ಓರಿಯಂಟೆಡ್ ಚಿತ್ರವನ್ನು ವಿಜಯ್ ಕಿರಗಂದೂರ್ ನಿರ್ಮಿಸುತ್ತಿದ್ದಾರೆ. ಸಂತೋಷ್ ಆನಂದರಾಮ್ ನಿರ್ದೇಶನದ ಚಿತ್ರಕ್ಕೆ ಸದ್ಯದಲ್ಲೇ ಚಾಲನೆ ಸಿಗಲಿದೆ.

‘ನಿನ್ನಿಂದಲೇ’ ಚಿತ್ರದಿಂದ ಆರಂಭಿಸಿ, ಯಶ್ ಅಭಿನಯದ ‘ಕೆಜಿಎಫ್’, ‘ಮಾಸ್ಟರ್ ಪೀಸ್’, ‘ರಾಜಕುಮಾರ’, ‘ಯುವರತ್ನ’, ‘ಕೆ‌ಜಿಎಫ್2’ ಹೀಗೆ ಒಂದರ ಹಿಂದೆ ಒಂದು ಅದ್ಧೂರಿ ಚಿತ್ರ ನಿರ್ಮಾಣ ಮಾಡಿರುವ ವಿಜಯ್ ಕಿರಗಂದೂರ್ ಅವರು ಸದ್ಯ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಜೋಡಿಯ ‘ಸಲಾರ್’, ಜಗ್ಗೇಶ್ ಅವರ ‘ರಾಘವೇಂದ್ರ ಸ್ಟೋರ್ಸ್’ , ರಿಷಭ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ‘KGF2’ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಎತ್ತರಕ್ಕೆ ಕೊಂಡೊಯ್ದ ಹೊಂಬಾಳೆ ಸಂಸ್ಥೆಯಿಂದ ಯುವ ರಾಜಕುಮಾರ್‌ ಅವರಿಗೆ ಸಿನಿಮಾ ತಯಾರಾಗುತ್ತಿರುವುದು ರಾಜ್‌ ಕುಟುಂಬದ ಕುಡಿಯ ಸಿನಿಮಾ ಭವಿಷ್ಯಕ್ಕೆ ವರವಾಗಲಿದೆ ಎಂದು ಗಾಂಧಿನಗರದವರು ಮಾತನಾಡಿಕೊಳ್ಳುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here