ಮಧ್ಯ ಪ್ರಾಚ್ಯ ದೇಶಗಳ ನಡುವೆ ಸುಮಾರು 5000 ಮೈಲಿಗಳಷ್ಟು ಓಡಾಡಿ, 13 ದೇಶಗಳನ್ನು ಸಂದರ್ಶಿಸಿದ ಲೆವಿಸನ್ ವುಡ್ ಈ ಪಯಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ Arabia : A journey through the heart of the Middle East ಎನ್ನುವ ಪುಸ್ತಕವನ್ನು ಬರೆದಿದ್ದಾನೆ. ಅದನ್ನು ಆಧರಿಸಿದ ಸಾಕ್ಷಚಿತ್ರ ಡಿಸ್ಕವರಿ ಪ್ಲಸ್ನಲ್ಲಿದೆ. ಮಧ್ಯಪ್ರಾಚ್ಯ ದೇಶಗಳ ಬಗ್ಗೆ, ಇತಿಹಾಸದ ಬಗ್ಗೆ ಆಸಕ್ತಿ ಇರುವ ಎಲ್ಲರೂ ಆಸಕ್ತಿಯಿಂದ ನೋಡಬಹುದಾದ ಚಿತ್ರ ಇದು.
ಮಧ್ಯ ಪ್ರಾಚ್ಯ ದೇಶಗಳೆಂದರೆ ಹಲವು ಧರ್ಮಗಳ ಜನ್ಮಸ್ಥಳ. ಇಲ್ಲಿ ಜರುಸಲೇಂ ಇದೆ, ಬೆತ್ಲೆಹಾಂ ಇದೆ. ಇಸ್ಲಾಂ, ಕ್ರೈಸ್ತ ಮತ್ತು ಯಹೂದಿಗಳು ತಮ್ಮ ಧರ್ಮ ಸ್ಥಳ ಎಂದು ಇಲ್ಲೇ ಪೊಡಮಡುತ್ತಾರೆ. ಶಾಂತಿದೂತ ಏಸುಕ್ರಿಸ್ತ ಓಡಾಡಿದ್ದು ಇಲ್ಲಿ. ಜಗತ್ತಿನ ಪ್ರೀತಿಯನ್ನೆಲ್ಲಾ ಎದೆಯಲ್ಲಿ ತುಂಬಿಕೊಂಡ, ಜಗತ್ತನ್ನೇ ತನ್ನ ನುಡಿಗಳ ಮೂಲಕ ಲಾಲಿಸಿದ ಖಲೀಲ್ ಗಿಬ್ರಾನ್ ಲೆಬನಾನಿನವನು. ಅನೇಕ ಸಾದು ಸಂತರು, ಪೀರ್ ಪೈಗಂಬರರು ಹರಸಿದ ನಾಡು ಇದು. ಆದರೆ ಇಂದು ಇಲ್ಲಿನ ಬಹುಪಾಲು ದೇಶಗಳು ಯುದ್ಧ ಮತ್ತು ಅಂತರ್ಯುದ್ಧಗಳಿಂದ ಬಳಲಿವೆ. ಈ ದೇಶಗಳ ನಡುವೆ ಸುಮಾರು 5000 ಮೈಲಿಗಳಷ್ಟು ಓಡಾಡಿ, 13 ದೇಶಗಳನ್ನು ಸಂದರ್ಶಿಸಿದ ಲೆವಿಸನ್ ವುಡ್ ಈ ಪಯಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ Arabia : A journey through the heart of the Middle East ಎನ್ನುವ ಪುಸ್ತಕವನ್ನು ಬರೆದಿದ್ದಾನೆ. ಅದನ್ನು ಆಧರಿಸಿದ ಸಾಕ್ಷಚಿತ್ರ ಡಿಸ್ಕವರಿ ಪ್ಲಸ್ನಲ್ಲಿದೆ. ಮಧ್ಯಪ್ರಾಚ್ಯ ದೇಶಗಳ ಬಗ್ಗೆ, ಇತಿಹಾಸದ ಬಗ್ಗೆ ಆಸಕ್ತಿ ಇರುವ ಎಲ್ಲರೂ ಆಸಕ್ತಿಯಿಂದ ನೋಡಬಹುದಾದ ಚಿತ್ರ ಇದು.
ಚಿತ್ರ ಒಟ್ಟು 5 ಭಾಗಗಳಲ್ಲಿ ಅರೇಬಿಯಾದ ಈ ಪಯಣವನ್ನು ವಿವರಿಸುತ್ತದೆ. ಸಿರಿಯಾ ಮತ್ತು ಇರಾಕ್ ಗಡಿಯಲ್ಲಿ ಚಿತ್ರ ಶುರುವಾಗುತ್ತದೆ. ಮೊದಲ ಮಹಾಯುದ್ಧವನ್ನು ಕುರಿತು ಗಿಬ್ರಾನ್, ’ಇದು ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ನಡೆದ ಯುದ್ಧವಲ್ಲ, ಹೆಚ್ಚಿನ ಬುದ್ಧಿವಂತಿಕೆಗಾಗಿ ನಡೆದ ಯುದ್ಧ. ಆ ಹೆಚ್ಚಿನ ಬುದ್ಧಿವಂತಿಕೆಯೇ ಇಂದಿನ ದೇಶಗಳಿಗೆ ಈ ಸಲದ ಗೆಲುವು ಪ್ರಪಂಚಕ್ಕೆ ಹೆಚ್ಚಿನ ಸ್ವಾತಂತ್ರ್ಯ ಕೊಡುತ್ತದೆ ಎಂದು ಯುದ್ಧವನ್ನು ಕುರಿತಾದ ಸೋಲಿಸಲಾಗದ ಸಂಕಲ್ಪಶಕ್ತಿಯನ್ನು ಕೊಟ್ಟಿದೆ.’ ಎಂದು ಹೇಳುತ್ತಾನೆ. ಹಾಗೆ ಯುದ್ಧದ ಬೆಲೆ ತೆತ್ತು ಸ್ವಾತಂತ್ರವನ್ನು ಕೊಳ್ಳುತ್ತೇವೆ ಎಂದುಕೊಂಡ ದೇಶಗಳನ್ನು ಲೆವಿಸನ್ ಒಂದಾದ ಮೇಲೊಂದರಂತೆ ತೋರಿಸುತ್ತಾ ಹೋಗುತ್ತಾನೆ. ಗಡಿಯಲ್ಲಿ ಆತ ಭೇಟಿ ಮಾಡುವ ಪುಟ್ಟಪುಟ್ಟ ಮಕ್ಕಳ ಮೈಮೇಲಿನ ಆಯುಧಗಳನ್ನು ನೋಡಿ ಆತ ನಿಟ್ಟುಸಿರು ಬಿಡುವುದರೊಂದಿಗೆ ಚಿತ್ರ ಮುನ್ನಡೆಯುತ್ತದೆ.
ಸದ್ದಾಂ ಹುಸೇನ್ ಇರಾಕ್ ಅನ್ನು ಆಳುತ್ತಿದ್ದಾಗಿನಿಂದ ಸ್ವತಂತ್ರ ಅಸ್ಮಿತೆಗಾಗಿ ಕರ್ದಿಷ್ ಜನರ ಹೋರಾಟ ನಡೆಯುತ್ತಿರುತ್ತದೆ. ವುಡ್ ಅಲ್ಲಿಗೆ ಹೋದಾಗ ಅಲ್ಲಿ ಈ ಬಗ್ಗೆ ಜನಮತ ಸಂಗ್ರಹ ನಡೆಯುತ್ತಿರುತ್ತದೆ. ಹೇಗಾದರೂ ಆ ಗಡಿ ದಾಟಿ ವುಡ್ ಇರಾಕ್ನೊಳಗೆ ಹೋಗಲೇಬೇಕು. ಗಂಟೆಗಳ ಕಾಲ ಕಾದು, ಹೇಗೋ ಆತ ಇರಾಕ್ ಸೇನಾನೆಲೆ ಸೇರಿಕೊಳ್ಳುತ್ತಾನೆ. ಅಲ್ಲಿ ಪಯಣಿಸುವಾಗ ಅವನು ಒಂದು ಮಾತು ಹೇಳುತ್ತಾನೆ, ’ಇಲ್ಲಿನ ಜನರು ಅಷ್ಟೇನೂ ಸ್ನೇಹಶೀಲರಾಗಿ ಕಾಣಿಸುತ್ತಿಲ್ಲ’ – ಬಹುಶಃ ಪಶ್ಚಿಮದ ಸಮೃದ್ಧತೆಯಿಂದ, ನಿರಾಳತೆಯಿಂದ ಬಂದವರು ಮಾತ್ರ ಹೇಳಬಹುದಾದ ಮಾತಿದು! ಪಶ್ಚಿಮದ ಮದ್ದು, ಗುಂಡು, ರಾಕೆಟ್, ಬಾಂಬುಗಳು ದಶಕಗಳ ಕಾಲ ಇಲ್ಲಿನ ಮಣ್ಣನ್ನು, ಅವರ ಬದುಕನ್ನು ಛಿದ್ರಗೊಳಿಸಿದೆ. ಯುದ್ಧ ಇನ್ನೂ ನಿಂತಿಲ್ಲ. ಮನೆ, ಮಾರು, ನೆಂಟರು, ಸ್ನೇಹಿತರು ಎಲ್ಲರನ್ನೂ ಅವರು ಕಳೆದುಕೊಳ್ಳುತ್ತಲೇ ಬಂದಿದ್ದಾರೆ. ಈಗ ಕಾರೊಂದರಲ್ಲಿ ಹಾದುಹೋಗುತ್ತಿರುವ ಈ ವಿದೇಶಿಗನನ್ನು ನೋಡಿ ಅವರು ಆನಂದದಿಂದ ಕೈಬೀಸಲು ಸಾಧ್ಯವೆ?!
ಇರಾಕ್ ಸೇನೆ ಆಗಷ್ಟೇ ಆ ಊರಿನಿಂದ ಐಸಿಸ್ ಗುಂಪನ್ನು ಹಿಮ್ಮೆಟ್ಟಿಸಿದೆ. ಊರಿನ ಹೆಂಗಸರು ಮಕ್ಕಳನ್ನು ಹ್ಯೂಮನ್ ಶೀಲ್ಡ್ ಆಗಿ ಬಳಸುತ್ತಿದ್ದ ಅವರಿಂದ ಊರಿಗೆ ಈಗಷ್ಟೇ ಮುಕ್ತಿ ಸಿಕ್ಕಿದೆ. ಸೈನಿಕರು ಮಕ್ಕಳಿಗೆ ನೀರಿನ ಬಾಟಲ್ಗಳನ್ನು ಹಂಚುತ್ತಿದ್ದಾರೆ. ನನ್ನ 2 ತಿಂಗಳ ಮಗ ಕಾಣಿಸುತ್ತಿಲ್ಲ…ನನ್ನ 2 ತಿಂಗಳ ಮಗು ಎಂದು ತಾಯಿಯೊಬ್ಬಳು ಬಿಕ್ಕುತ್ತಿದ್ದಾಳೆ. ಮಧ್ಯವಯಸ್ಸಿನ ಹೆಂಗಸೊಬ್ಬಳು ಈ ಐಸಿಸ್ನವರಿಗೆ ಹೆದರಿ ಮನೆಯಲ್ಲಿ ಕೂತುಕೂತು ನನ್ನ ಕೂದಲು ಬೆಳ್ಳಗಾಯಿತು ಎಂದು ಸಿಟ್ಟಿನಲ್ಲಿ ಹೇಳುತ್ತಿದ್ದಾಳೆ. ದಾರಿಯಲ್ಲಿ ಇನ್ನೂ ಬಿಸಿ ಆರಿರದ ಕಾಡುತೂಸು, ಗ್ಯಾಸ್ ಸಿಲೆಂಡರ್ಗಳು, ಐಸಿಸ್ ಸೈನಿಕರ ಆತ್ಮಹತ್ಯಾ ಸಮವಸ್ತ್ರ ಬಿದ್ದು ಚೆಲ್ಲಾಡಿರುತ್ತದೆ.
ಮುಂದೆ ಅವನು ಬರುವುದು ಮೊಸಲ್ ಎನ್ನುವ ಊರಿಗೆ. ಊರಿನ ಬೀದಿಗಳಲ್ಲಿ ಒಬ್ಬಳೂ ಹೆಣ್ಣುಮಗಳಿಲ್ಲ. ಇರಾಕ್ ಸೇನೆ ಐಸಿಸ್ ಗುಂಪನ್ನು ಹೆಜ್ಜೆಹೆಜ್ಜೆಯಾಗಿ ಹಿಮ್ಮೆಟ್ಟಿಸುತ್ತಿದೆ. ವುಡ್ ಅವರೊಂದಿಗೆ ಹೋಗುತ್ತಿದ್ದಾನೆ. ಅಲ್ಲೇ ಮರಳುಗಾಡಿನಲ್ಲಿ ಊಟ, 250 ಮೀಟರ್ಗಳಾಚೆ ಗುಂಡಿನ ಸುರಿಮಳೆ. ಅಲ್ಲೇ ಓಡಾಡುತ್ತಿರುವ ಪುಟ್ಟ ಪೋರಿಗೆ ಗುಂಡಿನ ಸದ್ದು ಎಷ್ಟು ಅಭ್ಯಾಸವಾಗಿದೆ ಎಂದರೆ ಅವುಗಳೆಲ್ಲದರ ನಡುವೆ ಆಕೆ ಆರಾಮಾಗಿ ಓಡಾಡಿಕೊಂಡಿದ್ದಾಳೆ. ಇಲ್ಲಿ ಕಾರಿನ ವೈಪರ್ ಮಳೆಯ ನೀರನ್ನು ಒರೆಸಿ ಹಾಕಿದಂತೆ ಅಲ್ಲಿ ಮರಳಿನ ಕಣಗಳನ್ನು ಒರೆಸುತ್ತಾ ಇರುತ್ತದೆ.
ವುಡ್ ಅಲ್ಲೊಬ್ಬ ಸ್ನೈಪರ್ – ಗುರಿಕಾರನನ್ನು ಭೇಟಿಯಾಗುತ್ತಾನೆ. ಸರ್ಜನ್ ಒಬ್ಬ ತಣ್ಣಗಿನ ದನಿಯಲ್ಲಿ ತಾನು ಮಾಡಿದ ಶಸ್ತ್ರಕ್ರಿಯೆಗಳ ವಿವರ ಕೊಡುವ ಹಾಗೆ ಆ ಗುರಿಕಾರ ತಾನು ಎಷ್ಟು ಜನ ಐಸಿಸ್ರನ್ನು ಬೇಟೆಯಾಡಿದೆ ಎಂದು ಹೇಳುತ್ತಿರುತ್ತಾನೆ. ಅವನ ದನಿ ಮತ್ತು ಅವನ ಮುಖದಲ್ಲಿರುವ ನಿರ್ಭಾವುಕತೆ ತಣ್ಣನೆಯ ಚೂರಿಯಂತೆ ಇರಿಯುತ್ತದೆ. ಐಸಿಸ್ ಅವನ ತಲೆಗೆ ಲಕ್ಷಾಂತರ ಡಾಲರ್ ಬೆಲೆ ಕಟ್ಟಿರುತ್ತದೆ. ಅವನು ಇದುವರೆವಿಗೂ ಹೊಡೆದುರುಳಿಸಿದವರ ಸಂಖ್ಯೆ 343! ಅವನ ಹೆಸರು ಅಬು ತೆಹಸೀನ್. ಈ ಸಂದರ್ಶನ ನಡೆದ ಏಳು ದಿನಗಳಲ್ಲಿ ಐಸಿಸ್ ಅವನ ಬೇಟೆಯಾಡುತ್ತದೆ.
ಅಲ್ಲೇ ಒಂದೆಡೆ ತಿಕ್ರಿತ್ನಲ್ಲಿ ಸದ್ದಾಂ ಹುಸೇನ್ ಅಡಗಿಕೊಂಡಿದ್ದ ಸುರಂಗ ಕಾಣಿಸುತ್ತದೆ. ಸುರಂಗ ಎಂದರೇನು, ಅದೊಂದು ಬಿಲವೇ ಸರಿ. ಅಷ್ಟು ವೈಭೋಗದಲ್ಲಿ ಬದುಕಿದ, ಅಮೇರಿಕಾದಂತಹ ಅಮೇರಿಕಾಗೆ ಸಡ್ಡುಹೊಡೆದು ಎದುರಿಸಿದ ಸದ್ದಾಂ, ಅಲ್ಲಿ ಕೊನೆಯಾದ ಎಂದು ನೋಡುವಾಗ ನಿಟ್ಟುಸಿರು. ಅಷ್ಟು ಯುದ್ಧ ನಡೆದ ಮೇಲೂ, ಸದ್ದಾಂನನ್ನು ಕಳೆದುಕೊಂಡ ಮೇಲೂ ಬಾಗ್ದಾದ್ ಮಾಮೂಲಿನಂತೆಯೇ ಇದೆ. ’ಕೋಟೆಕಟ್ಟಿ ಮೆರೆದೋರೆಲ್ಲಾ ಏನಾದರು?’ ಎನ್ನುವ ರಾಜಕುಮಾರ್ ಹಾಡು ಹಿನ್ನೆಲೆಯಲ್ಲಿ ತೇಲಿ ಬರುತ್ತಿದೆಯೇನೋ ಅನ್ನಿಸಿತು. ದಕ್ಷಿಣ ಇರಾಕ್ ಸುತ್ತಿ, ಎರಡುವಾರಗಳಲ್ಲಿ ವುಡ್ ಕುವೈತ್ ತಲುಪುತ್ತಾನೆ.
ಇಲ್ಲಿ ವುಡ್ಗೆ ಜೊತೆಯಾಗುವುದು ಜೆಬೆಲ್ ಅಖ್ತರ್ ಎನ್ನುವ 60ರ ಗೈಡ್. ಇಲ್ಲಿ ಅವನಿಗಿರುವ ಗುರಿ Empty Quarter ಎಂದು ಕರೆಯಲ್ಪಡುವ ಜಗತ್ತಿನ ಅತಿ ದೊಡ್ಡ, ಸುಮಾರು 1000 ಕಿಮೀಗಳಷ್ಟು ಉದ್ದದ ಮರುಭೂಮಿಯನ್ನು ದಾಟುವುದು. ಆ ಮರುಭೂಮಿ ಹೆಚ್ಚುಕಮ್ಮಿ ಇಡೀ ಫ್ರಾನ್ಸ್ ದೇಶದಷ್ಟು ವಿಶಾಲವಾಗಿರುತ್ತದೆ! ಅದಕ್ಕಾಗಿ ಆತ ತೆಗೆದುಕೊಳ್ಳುವ ಸಮಯ ಸುಮಾರು ಎರಡು ವಾರಗಳು. ಎಲ್ಲೂ ಜನರ ಸುಳಿವೇ ಇಲ್ಲದ ಆ ಮರುಭೂಮಿಯಲ್ಲಿ ಗೈಡ್ ಜೊತೆ ಯಾವುದೋ ವಿಷಯಕ್ಕೆ ಮನಸ್ತಾಪವಾಗಿ ಆ ಗೈಡ್ ಸ್ವಲ್ಪ ಕಾಲ ಮಾತನಾಡುವುದನ್ನೇ ನಿಲ್ಲಿಸುತ್ತಾನೆ. ಆಗ ವುಡ್ಗೆ ಬರುವ ಯೋಚನೆ ಇವನೀಗ ಒಂಟಿಯಾಗಿ ಎದ್ದು ಹೊರಟುಬಿಟ್ಟರೆ ಗತಿ ಏನು ಎನ್ನುವುದು!
ಆ ಮರುಭೂಮಿಯನ್ನು ದಾಟಿದ ನಂತರ ದೋಫಾರ್ ಪರ್ವತಗಳನ್ನು ದಾಟಿ ಅವನಿಗೆ ಯಮನ್ ದೇಶಕ್ಕೆ ಹೋಗಬೇಕಿರುತ್ತದೆ. ಆಗ ಅವನ ಪಯಣಕ್ಕೆ ನೆರವಾಗುವುದು ಬೆಟ್ಟದ ಒಂಟೆಗಳು! ನಾನು ಇದುವರೆಗೂ ಮರುಭೂಮಿಯ ಒಂಟೆಗಳ ಬಗ್ಗೆ ಮಾತ್ರ ಕೇಳಿದ್ದೆ. ಅವುಗಳ ಪಾದಗಳು ಹೇಗೆ ಮರಳಿನ ಮೇಲೆ ನಡೆಯಲು ಸಜ್ಜುಗೊಂಡಿರುತ್ತದೆ ಎನ್ನುವುದು ಗೊತ್ತಿತ್ತು. ಆದರೆ ಈ ಒಂಟೆಗಳ ಪಾದಗಳು ನಿರಾಯಾಸವಾಗಿ ಜಾರುವ ಕಲ್ಲು ನುರುಜುಗಳನ್ನು ಸಂಭಾಳಿಸುತ್ತಾ ಬೆಟ್ಟ ಹತ್ತುತ್ತಿದ್ದವು. ಆತ ಬರುವ ಸಮಯಕ್ಕೆ ಯೆಮನ್ ಅಂತರ್ಯುದ್ಧದ ಕಾರಣದಿಂದ ಕಂಗೆಟ್ಟಿರುತ್ತದೆ. ಆಲ್ ಖೈದಾ ಅಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿರುತ್ತದೆ. ಜನ ಯುದ್ಧದ ಹೆದರಿಕೆಯಿಂದ ಊರುಗಳನ್ನು ಬಿಟ್ಟು ಹೋಗುತ್ತಿರುತ್ತಾರೆ. ಗಡಿಗಳನ್ನು ಮುಚ್ಚಲಾಗಿದೆ.
ಅಲ್ಲಿಂದ ಆತ ಹೋಗುವುದು ಸೊಮಾಲಿಯಾಗೆ. ಅದಂತೂ 30 ವರ್ಷಗಳ ಯುದ್ಧ ಕಂಡ ಊರು. ಅಲ್ಲಿ ಹಣದುಬ್ಬರ ಯಾವ ಮಟ್ಟ ಮುಟ್ಟಿರುತ್ತದೆ ಎಂದರೆ ಜನ ಅಕ್ಷರಶಃ ತಳ್ಳುಗಾಡಿಗಳಲ್ಲಿ ನೋಟಿನ ಕಟ್ಟುಗಳನ್ನು ಕೊಂಡುಹೋಗುತ್ತಿರುತ್ತಾರೆ. ಹಣವಿನಿಮಯ ಮಾಡುತ್ತಿದ್ದವನ ಬಳಿ ಹೋಗುವ ವುಡ್ 100 ಡಾಲರ್ ಕೊಟ್ಟರೆ, ಅವನ ಕೈಗೆ ಬರುವುದು ಸುಮಾರು 5 ಲಕ್ಷ ಸ್ಥಳೀಯ ಹಣ!
ವರ್ಷ ನೆನಪಿಗೆ ಬರುತ್ತಿಲ್ಲ, ಆದರೆ ಬೆಂಗಳೂರಿನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಥೀಮ್ ’ಯುದ್ಧ’ಕ್ಕೆ ಸಂಬಂಧಿಸಿತ್ತು. ಆಗ ಮಧ್ಯಪ್ರಾಚ್ಯ ದೇಶಗಳಲ್ಲಿನ ನಗರಗಳು ಯುದ್ಧದ ಕಾರಣಕ್ಕೆ ಛಿದ್ರಗೊಂಡು, ನಗರಗಳೆಲ್ಲಾ ಕಟ್ಟಡದ ಅವಶೇಷಗಳು ಕಣ್ಣುಗಳನ್ನು ಚುಚ್ಚುತ್ತಿದ್ದವು. ಈ ಸಾಕ್ಷ್ಯಚಿತ್ರ ಸರಣಿಯಲ್ಲೂ ಅದೇ ಕಂಡಿತು. ಆ ಅವಶೇಷಗಳ ನಡುವೆ ಬಿದ್ದಿದ್ದ ಒಂದು ಫ್ಯಾಮಿಲಿ ಫೋಟೋ ಆಲ್ಬಂ ಮನಸ್ಸನ್ನು ಕಲಕಿ ಹಾಕುತ್ತಿತು. ಮನೆಗಳ ಒಳಗೆ ಚೆಲ್ಲಾಪಿಲ್ಲಿಯಾಗಿದ್ದ ಬಟ್ಟೆಗಳು, ಬಾಂಬ್ ದಾಳಿಗೆ ಒಳಗಾಗಿದ್ದ ತನ್ನದೇ ಮನೆಯ ಕಿಟಕಿ, ಬಾಗಿಲುಗಳನ್ನು ಕೊಂಡು ಹೋಗಲು ಸೈಕಲ್ನಲ್ಲಿ ಬರುತ್ತಿದ್ದ ಒಬ್ಬ ಅಜ್ಜ, ಅದೇ ಅವಶೇಷಗಳ ನಡುವೆ ಆಟ ಆಡುತ್ತಿದ್ದ ಮಕ್ಕಳು… ಒಂದೆಡೆ ಯುದ್ಧದ ಪಾಶವೀಯತೆ, ಇನ್ನೊಂದೆಡೆ ಮನುಷ್ಯರ ಅದಮ್ಯ ಜೀವನಪ್ರೇಮ.
ಸೌದಿ ಅರೇಬಿಯಾದಲ್ಲಿ ಆತ ಒಂದು ಕ್ಷತ್ರಿಯ ಬುಡಕಟ್ಟನ್ನು ಭೇಟಿಯಾಗುತ್ತಾನೆ. ಅಲ್ಲೆಲ್ಲೂ ಹೆಂಗಸರು ಕಣ್ಣಿಗೆ ಬೀಳುವುದಿಲ್ಲ. ಪುಟ್ಟಪುಟ್ಟ ಗಂಡುಮಕ್ಕಳು ಸಹ ಸದಾ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡೇ ಓಡಾಡುತ್ತಾರೆ. ಜೆಡ್ಡಾ, ಮೆಕ್ಕಾ ನಂತರ ಅವನು ಹೋಗುವುದು ಜೋರ್ಡಾನ್ಗೆ. ಅಲ್ಲೇ ಪ್ರಪಂಚದ ಪುರಾತನ ನಗರಗಳಲ್ಲಿ ಒಂದಾದ ಪೆಟ್ರಾ ಇದೆ. ಸಮೀಪದ ಇಸ್ರೇಲ್ ಗಡಿಯ ಬಳಿ ಪ್ಯಾಲೆಸ್ತೇನಿ ಮಕ್ಕಳು ಇರಾಕ್ ಸೈನಿಕರೊಡನೆ ಕಣ್ಣಾಮುಚ್ಚಾಲೆ ಆಡುತ್ತಿರುತ್ತಾರೆ. ಉಹೂ ಇದು ಆಟವಲ್ಲ, ಯುದ್ಧ. ಟೈರ್ಗಳಿಗೆ ಬೆಂಕಿ ಹಾಕಿ ಆ ಹೊಗೆಯಲ್ಲಿ ಅವರ ಸೇನಾನೆಲೆಗಳ ಬಳಿ ಹೋಗಿ ಕ್ಯಾಟರ್ ಬಿಲ್ನಿಂದ ಸೈನಿಕರ ಮೇಲೆ ಕಲ್ಲು ಹೊಡೆಯುತ್ತಿರುತ್ತಾರೆ. ಸೈನಿಕರು ಹಿಡಿಯಲು ಬಂದರೆ ಈ ಹುಡುಗರು ಓಡಿಬರುತ್ತಾರೆ. ಆದರೂ ಕೆಲವು ಮಕ್ಕಳು ಸಿಕ್ಕಿಹಾಕಿಕೊಳ್ಳುತ್ತಾರಲ್ಲ. ಹಾಗೆ ಸಿಕ್ಕು, ಇಂದಿಗೂ ಇಸ್ರೇಲಿಗಳ ಬಂಧನದಲ್ಲಿ ಇರುವ ಮಕ್ಕಳ ಅಧಿಕೃತ ಸಂಖ್ಯೆ ಸುಮಾರು 350. ಇಸ್ರೇಲಿಗಳು ಪ್ಯಾಲಿಸ್ತೀನಿ ಮನೆಗಳ ಮೇಲೆ ಕೂಡ ದಾಳಿ ಮಾಡುತ್ತಾರೆ. ಮನೆಯಲ್ಲಿ ಓಡಾಡುತ್ತಿದ್ದ ಮಗುವಿನ ತಲೆಗೆ ಮೂರು ಸಲ ಗಾಯವಾಗಿತ್ತು ಎಂದು ತಂದೆಯೊಬ್ಬ ನೋವಿನಿಂದ ವಿವರಿಸುತ್ತಿದ್ದ. ಅವರ ಸೈನಿಕರು ಗುರಿಯ ತರಬೇತಿ ಪಡೆಯಲು ಬಳಸುವುದು ಪ್ಯಾಲಿಸ್ತೇನಿಯರ ಮನೆಗಳ ನೀರಿನ ಟ್ಯಾಂಕ್ಗಳು ಎಂದು ಎಲ್ಲೋ ಓದಿದ್ದು ನೆನಪಾಯಿತು.
ಜೆರುಸಲೇಂನಲ್ಲಿ ಒಂದು ಯುದ್ಧ ತರಬೇತಿ ಕೇಂದ್ರಕ್ಕೆ ವುಡ್ ಹೋಗುತ್ತಾನೆ. ಅಲ್ಲಿನ ಅಧಿಕಾರಿ ಪ್ಯಾಲಿಸ್ತೀನಿಯರಿಂದ ನಾವೆಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಹೇಳುತ್ತಾ, ಒಂದು ಮಾತನ್ನು ಕೋಟ್ ಮಾಡುತ್ತಾನೆ, ’ಪ್ಯಾಲಿಸ್ತೇನಿಯರು ಬಂದೂಕು ಕೆಳಗಿಳಿಸಿದ ದಿನ ಶಾಂತಿ ನೆಲೆಸುತ್ತದೆ, ಆದರೆ ಇಸ್ರೇಲ್ ಬಂದೂಕು ಇಳಿಸಿದ ದಿನ ಇಸ್ರೇಲ್ ಮಣ್ಣಾಗುತ್ತದೆ.’ ಈ ವಾಕ್ಯ ಎಷ್ಟೆಲ್ಲಾ ಹೇಳುತ್ತದೆ. ಬಂದೂಕು ಕೈಗೆ ತೆಗೆದುಕೊಳ್ಳುವ ಮೊದಲು ಯೋಚನೆ ಮಾಡಬೇಕೆ ಹೊರತು, ಲೋಡು ಮಾಡಿದ ಬಂದೂಕು ಹುಲಿಸವಾರಿಯ ಹಾಗೆ. ಇಳಿದ ಮರುಕ್ಷಣ ಹುಲಿ ಬಾಯಿಗೆ ಹಾಕಿಕೊಳ್ಳುತ್ತದೆ. ಐಸಿಸ್ ಮಾಡಿರುವ ಹಾನಿ ದಾರಿಯುದ್ದಕ್ಕೂ ಕಾಣಿಸುತ್ತಲೇ ಇರುತ್ತದೆ. ಸಿರೀಯಾದಲ್ಲಿ ಆಸೀಸ್ ಎನ್ನುವ ಸರ್ವಾಧಿಕಾರಿಯನ್ನು ಎದುರಿಸಲು ಸಹಾಯ ಮಾಡುತ್ತೇವೆ ಎಂದು ನುಸುಳಿದ ಐಸಿಸ್ ದೇಶದ ಆರ್ಥಿಕತೆ, ಕಲೆ, ಸಂಸ್ಕೃತಿ ಎಲ್ಲವನ್ನೂ ನಾಶ ಮಾಡಿರುತ್ತದೆ. ಅಲ್ಲಿನ ಮ್ಯೂಸಿಯಂಗಳು ಬೀಗ ಹಾಕಿಕೊಳ್ಳುವುದರ ಮೂಲಕ ತಮ್ಮಲ್ಲಿರುವ ಸಂಪತ್ತನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತವೆ.
ನಂತರ ಅವನು ಹೋಗುವುದು ಖಲೀಲ್ ಗಿಬ್ರಾನನ ದೇಶ ಲೆಬನಾನಿಗೆ. ಮೊನ್ನೆಮೊನ್ನೆ ತಾನೆ ಗಿಬ್ರಾನನ್ನು ಕುರಿತ ಪುಸ್ತಕದ ಅನುವಾದ ಮುಗಿಸಿದ ನನಗೆ ಲೆಬನಾನ್ ಎಂದರೆ ನನ್ನದೇ ಮಣ್ಣಿನಷ್ಟು ಪ್ರೀತಿ. ಅಲ್ಲಿನ ಊರು, ಸೀಡಾರ್ ಪರ್ವತಗಳು, ವಾದಿ ಖದೀಶ, ಮೇರೊನೈಟ್ ಚರ್ಚ್, ಗಿಬ್ರಾನನ ಸಮಾಧಿ ಇರುವ ವಿರಕ್ತ ಮಠ ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ. ಆದರೆ ಇಲ್ಲಿ ನಾನು ಕಂಡ ದೇಶ ಅದಲ್ಲ, ಬೆಟ್ಟಕಣಿವೆಗಳಲ್ಲಿ ಆ ಶಾಂತಿ ಇಲ್ಲ, ಜನಗಳ ಕಣ್ಣಲ್ಲಿ ಆ ನೆಮ್ಮದಿ ಇಲ್ಲ. ಐಸಿಸ್ ಅಲ್ಲಿನ ಬದುಕಿಗೆ ಮತ್ತು ಶ್ರೀಮಂತ ಸಂಸ್ಕೃತಿಗೆ ಬೆಂಕಿ ಇಟ್ಟಿದ್ದಾರೆ. ಸಾವಿರಾರು ವರ್ಷಗಳ ಹಿಂದೆ ಕಟ್ಟಿದ ನಗರ ಪಾಲ್ಮಿರಾ. ಅಲ್ಲಿನ ಭವ್ಯ ಕಟ್ಟಡಗಳು ಮತ್ತು ಪ್ರಾರ್ಥನಾ ಮಂದಿರ ಐಸಿಸ್ ದಾಳಿಕೋರರ ಕಣ್ಣುಕುಕ್ಕುತ್ತಿರುತ್ತದೆ. ಆ ಕಟ್ಟಡದ ಮುಖ್ಯಸ್ಥನನ್ನು ಹಿಡಿದ ಅವರು ಚಿನ್ನ ಎಲ್ಲಿದೆ ಎಂದು ಕೇಳುತ್ತಾರೆ. ಆತ ಚಿನ್ನ ಎಂದರೆ ಈ ಊರಿನ ತುಂಬಾ ಇರುವ ಕಟ್ಟಡಗಳು, ಅದೇ ಇಲ್ಲಿನ ಸಂಪತ್ತು ಎನ್ನುತ್ತಾನೆ. ಅವರಿಗೆ ಕಾವ್ಯ ಅರ್ಥವಾಗುತ್ತದೆಯೆ? ಅವರು ಎಲ್ಲರೆದುರಲ್ಲಿ ಈತನ ಗಂಟಲು ಕೊಯ್ದು ಸಾಯಲು ಬಿಡುತ್ತಾರೆ. ಒಂದೊಮ್ಮೆ ಅದ್ಭುತಗಳಾಗಿದ್ದ, ಸಾವಿರಾರು ವರ್ಷಗಳ ಕಾಲದ ಹೊಡೆತವನ್ನು ತಡೆದು ನಿಂತಿದ್ದ ಭವ್ಯ ಕಟ್ಟಡಗಳು ಐಸಿಸ್ ದಾಳಿಗೆ ಸಿಕ್ಕಿ ಪುಡಿಪುಡಿಯಾಗಿವೆ. ಇವೆಲ್ಲವನ್ನೂ ಪುನರ್ ನಿರ್ಮಾಣ ಮಾಡಬಹುದೆ ಎಂದು ವುಡ್ ಕೇಳುವ ಪ್ರಶ್ನೆಗೆ, ಗಂಟಲು ಹರಿದು ಸತ್ತ ಆ ಮುಖ್ಯಸ್ಥನ ಮಗ ವಿಷಾದದಿಂದ ಕೇಳುತ್ತಾನೆ, ’ಮಾಡಬಹುದು, ಆದರೆ ಆಗ ಅವು ಮೊದಲಿನಂತೇ ಆಗುವುದೆ?’ ಹೌದಲ್ಲವೆ…. ಹಾಳಾಗಿದ್ದೆಲ್ಲವನ್ನೂ ಪುನರ್ನಿರ್ಮಾಣ ಮಾಡಬಹುದು, ಆದರೆ ಆ ಬಿರುಕುಗಳೆಲ್ಲಾ ಇಲ್ಲವಾಗುವವೆ?
ಕಡೆಗೆ ಲೆವಿಸನ್ ವುಡ್ ಬರುವುದು ಲೆಬನಾನಿನ ಕಡಲತೀರದ ಪಟ್ಟಣ ಬಿಬ್ಲೋಸ್ ಗೆ. ಅಲ್ಲಿನ ಸಮುದ್ರದ ರೌದ್ರ ಚೆಲುವಂತೂ ಮನಮೋಹಕ. ಅರೇಬಿಯಾದ ದೇಶಗಳ ಆತನ ಪಯಣ ಐದು ತಿಂಗಳಲ್ಲಿ ಕೊನೆಯಾಗುತ್ತದೆ. ನಿಜಕ್ಕೂ ಇದೊಂದು ರೀತಿಯಲ್ಲಿ ಇತಿಹಾಸವನ್ನು ಹೊಕ್ಕು ಬಂದಂತೆ. ಯಾವುದೇ ಪ್ರವಾಸಿಗನ ಕನಸು ಮಧ್ಯಪ್ರಾಚ್ಯ. ಆದರೆ ಈಗ ಆ ದೇಶಗಳಿಗೆ ಪ್ರವಾಸ ಹೋಗುವುದು ಒಂದು ಕನಸೇ ಸರಿ. May be this is the nearest we can go. ಜರುಸಲೇಂ, ಜೋರ್ಡನ್ ಮತ್ತು ಲೆಬನಾನ್ ನೋಡುವ ನನ್ನ ಕನಸು ಇನ್ನೂ ಜೀವಂತವಾಗಿದೆ. ನೋಡೋಣ…. ಆ ಮಟ್ಟಿಗೆ ಈ ಸಾಕ್ಷ್ಯಚಿತ್ರ ಚೆನ್ನಾಗಿದೆ ಅನ್ನಿಸಿದರೂ ಈ ಎಲ್ಲಾ ದೇಶಗಳನ್ನೂ ನೋಡುವಾಗ ಲೆವಿಸನ್ ವುಡ್ ತನ್ನ ಪಶ್ಚಿಮದ ಕನ್ನಡಕವನ್ನು ಗಳಿಗೆಯಾದರೂ ತೆಗೆದಿಟ್ಟಿಲ್ಲ ಎನ್ನಿಸಿತು. ಆ ಮಟ್ಟಿಗೆ ಅವನದು ರಕ್ಷಕ ಅಥವಾ ಉದ್ಧಾರಕನ ಮನೋಭಾವ. ಅವನ ಸರಿತಪ್ಪುಗಳ ನೆಲೆಯಲ್ಲೆ ಅವನು ಅವರನ್ನು ವಿಶ್ಲೇಷಿಸುತ್ತಿರುತ್ತಾನೆ. ಕೆಲವೊಮ್ಮೆ ಅದು ಅಹಂ ಆಗಿಯೂ ಕಂಡು ಬರುತ್ತದೆ. ಅವನ ಒಬ್ಬ ಮಾರ್ಗದರ್ಶಿ ಅದನ್ನೇ ಹೇಳುತ್ತಾನೆ. ’ನೀವೇಕೆ ನಮ್ಮನ್ನು ನಮ್ಮ ಪಾಡಿಗೆ ಬಿಡಬಾರದು’ ಎಂದು.
ಅರೇಬಿಯಾದ ಶ್ರೀಮಂತ ಸಂಸ್ಕೃತಿ, ಕಲೆ, ಸಾಹಿತ್ಯ, ಭವ್ಯಕಟ್ಟಡಗಳ ನಿರ್ಮಾಣದಲ್ಲಿ ಆ ದೇಶಗಳ ಕೊಡುಗೆ ಅನನ್ಯವಾದದ್ದು. ಆದರೆ ಜನಾಂಗೀಯ ಯುದ್ಧ ಮತ್ತು ಅಂತರ್ಯುದ್ಧಗಳು ಅವನ್ನು ಇಂದು ಪರಿಸ್ಥಿತಿಗೆ ತಂದೊಡ್ಡಿವೆ. ರೆಹಮತ್ ತರೀಕೆರೆ ಒಂದು ಮಾತು ಹೇಳುತ್ತಾರೆ, ’ಚರಿತ್ರೆಯಲ್ಲಿ ಯಾವುದಾದರೂ ಒಂದು ದೇಶ, ತನ್ನ ಜೊತೆ ಬಾಳುತ್ತಿರುವ ಸಮುದಾಯದವರ ಮೇಲೆ ದ್ವೇಷ ಹಬ್ಬಿಸಿ ಅಥವಾ ದಮನಿಸಿ ಏಳಿಗೆ ಸಾಧಿಸಲು ಸಾಧ್ಯವಾಗಿದೆಯೇ? ಮತೀಯ ನಂಜಿನಿಂದ ಕೆಲವರಿಗೆ ಲಾಭವಾಗಬಹುದು. ಆದರೆ ಒಟ್ಟಾರೆ ಸಮಾಜ ಗಾಯಗೊಳ್ಳುತ್ತದೆ. ಅಮಾನುಷವಾಗುತ್ತದೆ. ಭಾರತ ಹೀಗಾಗದಿರಲಿ’. ಉದ್ದಕ್ಕೂ ನೆನಪಾಗುವುದು ಈ ನುಡಿ, ಮನಸಲ್ಲಿ ಉಳಿಯುವುದು ಈ ಹಾರೈಕೆ.