ವೇಗದ ಚಿತ್ರಕಥೆಯ ಹತ್ತು ಎಪಿಸೋಡುಗಳ ಸರಣಿ ‘ಗಿಲ್ಟಿ ಮೈಂಡ್ಸ್’ ವಾಸ್ತವದ ಕೋರ್ಟು ಕಲಾಪಗಳನ್ನು ತೆರೆದಿಡುತ್ತದೆ. ಅವುಗಳ ಜತೆಗೆ ವಕೀಲರ ಕತೆಯೂ ಸೇರಿದೆ. Amazon Prime Videoದಲ್ಲಿ ಸ್ಟ್ರೀಮ್‌ ಆಗುತ್ತಿರುವ ಈ ಸರಣಿ ನೀವು ಹೂಡುವ ಸಮಯಕ್ಕೆ ಮೋಸ‌ ಮಾಡುವುದಿಲ್ಲ.

ಸಿನಿಮಾದಲ್ಲಿ ಕಾಣುವ ಕೋರ್ಟು ‌ಕಲಾಪಗಳಿಗೂ, ವಾಸ್ತವದಲ್ಲಿ ನಡೆಯುವ ಕಲಾಪಗಳಿಗೂ ಹಗಲು-ರಾತ್ರಿಯಷ್ಟು ವ್ಯತ್ಯಾಸ. ಕೋರ್ಟ್ ರೂಂ ಡ್ರಾಮಾ ಅಡಿಯಲ್ಲಿ ಬರುವ ಸರಕುಗಳಲ್ಲೂ ಡ್ರಾಮಾವೇ ಹೆಚ್ಚು ತುಂಬಿರುತ್ತದೆ. ಇಂಥ ಸಂದರ್ಭದಲ್ಲಿ ‘ಗಿಲ್ಟಿ‌ ಮೈಂಡ್ಸ್’ ಅಗ್ದಿ ನೈಜ ಕಲಾಪಗಳನ್ನು ತೆರೆಯ ಮೇಲೆ ತಂದಿದೆ. ಇಲ್ಲಿನ ವಕೀಲರು ನಾಟಕೀಯವಾಗಿ ಮಾತಾಡುವುದಿಲ್ಲ, ಅವರ ಬುದ್ಧಿವಂತಿಕೆ ಕಂಡು ನ್ಯಾಯಾಧೀಶರು ಬೆರಗಾಗುವುದಿಲ್ಲ, ಕೋರ್ಟು ಸ್ಟುಡಿಯೋ ಸೆಟ್ಟಿನಂತೆಯೂ, ಕಲಾಪ ಕೇಳಲು ಕೂತವರು ಸಹಕಲಾವಿದರಂತೆ ಕಾಣುವುದಿಲ್ಲ.

ಹತ್ತು ಎಪಿಸೋಡುಗಳಲ್ಲಿ ಹರಡಿರುವ‌ ಈ ವೆಬ್‌ ಸರಣಿ ಕೋರ್ಟ್ ಕಲಾಪಗಳನ್ನು ಹಾಗ್ಹಾಗೇ ಉಣಬಡಿಸುತ್ತದೆ. ನಮ್ಮ ನ್ಯಾಯಾಲಯಗಳಲ್ಲಿ ಪ್ರಕರಣ ಇತ್ಯರ್ಥವಾಗಲು ವರ್ಷಾನುಗಟ್ಟಲೆ ಆಗುವುದು ಇಲ್ಲಿ ಬೇಗಬೇಗ ಇತ್ಯರ್ಥವಾಗುತ್ತದೆ‌ ಎಂಬುದಷ್ಟೇ ವ್ಯತ್ಯಾಸ. ಪ್ರತಿ‌ ಎಪಿಸೋಡಿನಲ್ಲಿಯೂ ಒಂದೊಂದು ಕೇಸು ವಿಚಾರಣೆಯಾಗಿ ಇತ್ಯರ್ಥವಾಗುತ್ತದೆ. ಆ ಒಂದೊಂದು ಕೇಸೂ ಒಂದೊಂದು ರೀತಿಯವು. ಅವೆಲ್ಲದರ‌ ಜತೆಗೆ ವಕೀಲರ ಬದುಕು, ಪ್ರಕರಣಕ್ಕೆ ಸಂಬಂಧಿಸಿ ಅವರ ವೈರತ್ವ, ಅದರ ಆಚೆಗೆ ಸಹಜ ಸ್ನೇಹಾಚಾರ ವಾಸ್ತವಕ್ಕೆ ಹತ್ತಿರವಿದೆ. ಎಲ್ಲಾ ವಾದ ವಿವಾದಗಳ ನಡುವೆ ವಕೀಲಿಕೆ‌ ಮಾಡುವ ಎರಡು ಗುಂಪಿನವರ ಕತೆ ಇಡಿಯಾಗಿ ಸರಣಿಯನ್ನು ಪೋಣಿಸುತ್ತದೆ.

ಸಿನಿಮಾ ನಿರ್ದೇಶಕನ ಮೇಲೆ ನಟಿಯೊಬ್ಬಳು ಹೂಡುವ ಅತ್ಯಾಚಾರ ಆರೋಪ, ಫಿಶ್ ಐ ಚಾಲೆಂಜ್, ಬ್ಲೂ ವೇಲ್‌ನಂಥ ವಿಡಿಯೋ ಗೇಮ್‌ನಿಂದ ಆಗುವ ಅನಾಹುತ, ಚಾಲಕ ರಹಿತ‌ ಕಾರು ಅಪಘಾತವಾದರೆ ಹೊಣೆಗಾರರು ಯಾರಾಗುತ್ತಾರೆ ಎಂಬ ಜಿಜ್ಞಾಸೆ ಮತ್ತು ಕೋಲಾ ಕಂಪನಿ ಮತ್ತು ರೈತರ ನಡುವೆ ನಡೆಯುವ ಹೋರಾಟದ ದಾವೆಗಳಿಗೆ ಅತೀವ ವೇಗವಿದೆ. ಒಡನೆಯೇ‌ ಸೂಕ್ಷ್ಮಗಳ ಕಡೆಗೆ ಬೆಳಕು ಚೆಲ್ಲುತ್ತಾ ಸಾಗುತ್ತದೆ. ಹೈ ಪ್ರೊಫೈಲ್ ಅತ್ಯಾಚಾರದಂಥ ಪ್ರಕರಣ ನಿಭಾಯಿಸುವಾಗ ಸಾಮಾನ್ಯವಾಗಿ ಆರೋಪಿಯಾದವನು ವಕೀಲರಿಗೂ ಪೂರ್ತಿ ಸತ್ಯ ಹೇಳಿರುವುದಿಲ್ಲ. ಮೊದಲು‌ ತಾನು‌ ಸ್ಫಟಿಕದಷ್ಟೇ‌ ಪರಿಶುದ್ಧ ಎಂದವ ಕೊನೆಗೆ ಅದೊಂದು ಒಪ್ಪಿತ‌ ಸಂಬಂಧ ನಮ್ಮಿಬ್ಬರ ನಡುವೆ ಇತ್ತು ಎಂದು ಒಪ್ಪಿಕೊಳ್ಳುವುದು ಸ್ವತಃ ವಕೀಲರ ಪಾಲಿಗೂ ನುಂಗಲಾರದ ತುಪ್ಪ ಎನ್ನುವುದನ್ನು ಬಿಂಬಿಸಿದ ರೀತಿ‌ ವಾಸ್ತವಕ್ಕೆ ತೀರಾ ಹತ್ತಿರವಾದುದು. ಕೊನೆಗೆ ವಕೀಲರು ತಾಂತ್ರಿಕ ಕಾರಣಗಳನ್ನು‌ ಮುಂದಿಟ್ಟು ಕೇಸು ಗೆಲ್ಲುವುದು‌ ಎಂಬುದಕ್ಕಿಂತ ಹೆಚ್ಚು ಆರೋಪಿಯನ್ನು ಶಿಕ್ಷೆಯಿಂದ ಬಚಾವು ಮಾಡುವ ಪ್ರಯತ್ನವೂ ವಾಸ್ತವಕ್ಕೇ ಹಿಡಿದ ಕನ್ನಡಿ. ಈ ಎಲ್ಲ ಅಪಸವ್ಯಗಳ ಮಧ್ಯೆ ಅದೊಂದು ಹೀನ ಕೃತ್ಯಕ್ಕೆ ಬಲಿಯಾದವಳು ಕೇಸು ಗೆದ್ದರೂ ಅನುಭವಿಸುವ ಬೇಗುದಿ ಚಿತ್ರನಟಿಯ ಪಾತ್ರ ವಾಸ್ತವದ ನೆಲೆಯಲ್ಲೇ ಬಿಂಬಿಸಿದೆ, ಅತಿಶಯೋಕ್ತಿ ಹಾಗೂ ನಾಟಕೀಯತೆಯನ್ನು ದೂರವಿಡಲಾಗಿದೆ.

ಎಲ್ಲಾ ಪ್ರಕರಣವನ್ನೂ ಆಶಯದಂತೆ ದಡ ಸೇರಿಸುವ ಪ್ರಯತ್ನವನ್ನು ‘ಗಿಲ್ಟಿ ಮೈಂಡ್ಸ್’ ಮಾಡುವುದಿಲ್ಲ. ಕೋಲಾ ಕಂಪನಿ ಮತ್ತು ರೈತರ ನಡುವಿನ ಹೋರಾಟದಲ್ಲಿ ಕಂಪನಿಯ ವಂಚನೆ ಬಯಲಾದರೂ ದಂಡ ಕಟ್ಟಿ ಮುನ್ನಡೆಯುವ ಅವಕಾಶ ಕಂಪನಿಗೆ ಸಿಗುತ್ತದೆಯೇ ವಿನಃ ಕಂಪನಿಗೆ ಬಾಗಿಲು ಜಡಿಯಬೇಕು ಎಂಬ ರೈತರ ಆಶಯ ಈಡೇರುವುದಿಲ್ಲ. ಐವಿಎಫ್ ಮೂಲಕ ಮಕ್ಕಳನ್ನು ಕರುಣಿಸುವ ಕಂಪನಿಯ‌ ಕರಾಳತೆ ಕೊನೆಗೆ ರಾಜಿಯಲ್ಲಿ ಮುಕ್ತಾಯವಾಗುವ ಪ್ರಕರಣವನ್ನೂ ಕತೆಗಾರರು ರಾಜಿಯಲ್ಲಿ ಮುಗಿಸುತ್ತಾರೆಯೇ ವಿನಃ ಸಂದೇಶ ಸಾರುವ ಆದರ್ಶದಲ್ಲಿ ನಂಬಿಕೆಯಿಟ್ಟಿಲ್ಲ.

ಡೇಟಿಂಗ್ ಆ್ಯಪ್‌ಗೆ ಕಾಸು ಕೊಟ್ಟು ಮೋಸ ಹೋಗಿದ್ದೇವೆ ಎಂಬ ಪ್ರಕರಣ ಕೋರ್ಟ್ ಮೆಟ್ಟಿಲೇರಿದಾಗ ನ್ಯಾಯಾಧೀಶರಿಗೂ ಈಗಿನ ತಲೆಮಾರಿನ ಯುವ ಜನಾಂಗಕ್ಕೂ ಇರುವ ಜನರೇಶನ್ ಗ್ಯಾಪ್ ಸೊಗಸಾಗಿ ತೆರೆಯ ಮೇಲೆ ಕಾಣುತ್ತದೆ. ಆ ಗ್ಯಾಪುಗಳನ್ನು ಮೀರಿ ಪ್ರಕರಣ ಅರ್ಥೈಸಿಕೊಳ್ಳಬೇಕಾದ ನ್ಯಾಯಾಧೀಶರ ಮುಂದಿರುವ ಸವಾಲಿಗೆ ಕನ್ನಡಿ‌ ಹಿಡಿಯಲು ಹಾಸ್ಯವನ್ನು ಆಶ್ರಯಿಸಿರುವುದು ಪರಿಣಾಮಕಾರಿಯಾಗೂ ಇದೆ. ವಿವಿಧ ನ್ಯಾಯಾಧೀಶರಲ್ಲೂ ವಿವಿಧ‌ ನಮೂನೆಯ ಮನಸ್ಥಿತಿ ಇರುವವರು ಇರುತ್ತಾರೆ ಎಂಬುದು ಕೋರ್ಟಿಗೆ ಹೆಚ್ಚು ಓಡಾಡಿದವರ ಗಮನಕ್ಕೆ ಬರುತ್ತದೆ. ಕೆಲವರು ಬೈಯುವುದು ಹೆಚ್ಚಾದರೆ, ಕೆಲವು ಜಡ್ಜುಗಳು ಎಲ್ಲಾವನ್ನೂ‌ ಲಘುವಾಗಿ ನಿಭಾಯಿಸಬಲ್ಲವರು, ಕೆಲವರು‌ ಹರಿತ ಮಾತಿವರಾದರೆ‌ ಇನ್ನು‌ ಕೆಲವರು ತೀರಾ‌ ಮೌನಿಗಳು. ಆ‌‌ ಎಲ್ಲಾ ರೀತಿಯ ಜಡ್ಜುಗಳನ್ನೂ ನೀವಿಲ್ಲಿ ಕಾಣಬಹುದು.

ಈ ಸರಣಿಯ ತಂಡ ಸಾಕಷ್ಟು ಸಂಶೋಧನೆ ಮಾಡಿಕೊಂಡಿರುವುದು ಸರಣಿಯುದ್ದಕ್ಕೂ ಕೆಲಸ ಮಾಡಿದೆ. ಇಲ್ಲಿ ತೋರಿಸಲಾಗಿರುವ ಪ್ರಕರಣಗಳು‌‌ ಸ್ಥೂಲವಾಗಿ ಕಲ್ಪಿತವೇ ಆಗಿದ್ದರೂ ವಾದ ವಿವಾದಗಳಲ್ಲಿ ಉಲ್ಲೇಖಿಸುವ ಕೇಸುಗಳು ವಾಸ್ತವದವುಗಳೇ, ಅವು ನಮ್ಮ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಂದು ಇತ್ಯರ್ಥವಾದ ಪ್ರಕರಣಗಳು. ಜನಸಾಮಾನ್ಯರಿಗೆ ಅವುಗಳ ಅರಿವಿಲ್ಲದಿದ್ದರೂ ಸಾಕಷ್ಟು ವಕೀಲರು ಕೂತು ಸರಣಿಯನ್ನು ನೋಡುತ್ತಾರೆ ಎಂಬುದು ತಂಡಕ್ಕೆ ಚೆನ್ನಾಗಿ ತಿಳಿದಿದೆ. ಚಿತ್ರಕಥೆಗೆ ವೇಗ ನೀಡಬೇಕಾದ ತಂತ್ರಗಾರಿಕೆಯನ್ನೆಲ್ಲ ಬಳಕೆ ಮಾಡಿರುವುದು ಸಾಮಾನ್ಯ ನೋಡುಗನ ಪಾಲಿಗೆ ವರ. ಅಗತ್ಯಕ್ಕಿಂತ ದೊಡ್ಡದಿದೆ ಎಂದನಿಸುವ ದೃಶ್ಯಗಳು ವಿರಳಾತಿ ವಿರಳ. ಹಾಗಾಗಿ ಮೊದಲ ಐದು ಎಪಿಸೋಡು ತುದಿಗಾಲ‌ಲ್ಲಿ ಕೂರಿಸಿ ನೋಡಿಸುತ್ತದೆ. ಆದರೆ ನಡುವೆ ಎರಡು ಕಂತುಗಳು ಕೂರುತ್ತಾ ಕುಂಟುತ್ತಾ ಸಾಗುವುದು ಒಂದು‌ ಮಟ್ಟಿಗಿನ ತೊಡಕು. ಪ್ರಕರಣಗಳ ಬಗೆಗಲ್ಲದೆ ವಕೀಲರ ಜೀವನದ ಕಡೆಗೆ ಕತೆ ವಾಲುವಾಗ ಅದು ಆಯಾ ವ್ಯಕ್ತಿಗಳ ಕತೆಯಾಗುತ್ತದೆಯೇ ವಿನಃ ವಕೀಲಿಕೆಯ ಸೋಜಿಗ ಅಥವಾ ನ್ಯಾಯಾಲಯದ ವಿಚಾರದ ಆಚೆಗೆ ನಿಲ್ಲುತ್ತದೆ. ಈ ಹಂತದಲ್ಲಿ ಸರಣಿ ಒಂದಷ್ಟು ಹಾದಿ ಬದಲಿಸುವಾಗ ನಮ್ಮ ಆಸಕ್ತಿಯನ್ನು ಅರಂಭದಂತೆ ಸೆಳೆದಿಡುವುದಿಲ್ಲ. ಆದರೆ ಕೊನೆಯಾಗುವ ಮೊದಲು ಆ ಇಳಿಯಿಂದ ಮೇಲೆ ಬರುತ್ತದೆ ಬರುತ್ತದೆ. ಹಾಗಾಗಿ ಎರಡನೇ ಆವೃತ್ತಿಗೆ ಹಾತೊರೆಯಲು ವೀಕ್ಷಕನನ್ನು ತಯಾರು ಮಾಡಿ ಸರಣಿ ಕೊನೆಗೊಳ್ಳುತ್ತದೆ.

ನಟನೆಯ ಮಟ್ಟಿಗೆ ಎಲ್ಲಾ ಪಾತ್ರಗಳೂ ಉತ್ತಮ ಅನಿಸುವ ಅಭಿನಯವನ್ನೇ ನೀಡಿರುವ‌ ಕಾರಣ ಪಾತ್ರಧಾರಿಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಸೀರೀಸ್ ಎಂದರೆ ಸಲಿಂಗ ಕಾಮ ಇರಲೇಬೇಕು ಎಂಬ ಫಾರ್ಮುಲಾಕ್ಕೆ ಇಲ್ಲಿಯೂ ಜೋತುಬಿದ್ದಿರುವುದು ಅನಗತ್ಯ. ವಕೀಲೆ ಸಲಿಂಗಿಯೇ ಆಗಿದ್ದರೂ ಉಭಯ ಲಿಂಗಿಯೇ ಆದರೂ ವಾದ ಮಾಡುವ ಕೇಸಿನ ಮೇಲೆ ಅದು ಹೇಗೂ ಪ್ರಭಾವ ಬೀರುವುದಿಲ್ಲ. ಸವಾಲುಗಳನ್ನು ಎದುರಿಸುವ ಮೂಲಕ ಪಾತ್ರಗಳನ್ನು ಬೆಳೆಸುವುದು ಸರಿಯಾದ ಸೂತ್ರವೇ ಆದರೂ ಆ ಸವಾಲು ಪ್ರತಿಬಾರಿಯೂ ಸಲಿಂಗ ಕಾಮವೇ ಅಗುತ್ತಿರುವುದು ಬಹುಶಃ ವೆಬ್ ಸರಣಿಗಳ ಬರಹಗಾರರು ಇನ್ನಷ್ಟು ಕ್ರಿಯಾಶೀಲರಾಗಬೇಕು ಎಂಬುದನ್ನು ಎತ್ತಿಹಿಡಿಯುತ್ತದೆ. ಅಲ್ಲಲ್ಲಿ ಬಂದು ಹೋಗುವ ರೊಮ್ಯಾನ್ಸು-ಸೆಕ್ಸೂ‌ ಇಲ್ಲಿದೆ. ಅದೃಷ್ಟವಶಾತ್ ಅವುಗಳನ್ನು ಕತೆಗೆ ಬೇಕಾದಷ್ಟೇ ಬಳಕೆ ಮಾಡಿರುವ ಕಾರಣ ಸಲಿಂಗ ಕಾಮಿಗಳನ್ನು ಉದ್ರೇಕಿಸುವುದಿಲ್ಲ, ಪರಲಿಂಗ ಪ್ರೇಮಿಗಳನ್ನು ಪ್ರೇರೇಪಿಸುವುದಿಲ್ಲ ಎಂಬುದು ಸಮಾಧಾನಕರ ಬಹುಮಾನ.

LEAVE A REPLY

Connect with

Please enter your comment!
Please enter your name here