ಕುಟುಂಬ ದ್ವೇಷದ ನಡುವಿನ ಎಷ್ಟೋ ಪ್ರೇಮಕತೆಗಳಿಗಿಂತ ‘ಈದ’ ಯಾಕೆ ಭಿನ್ನ ಅಂದರೆ ಕೇಸರಿ ಮತ್ತು ಕೆಂಪು ಬಾವುಟದ ಸಂಘಟನೆಗಳನ್ನು ತೋರಿಸಿರುವ ಅಥೆಂಟಿಕ್ ರೀತಿಯಿಂದ. ‘ಈದ’ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಈ ಹುಡುಗನ ಹೆಸರು ಶೇನ್ ನಿಗಮ್. ನೋಡೋಕೆ ಸೋನು ನಿಗಮ್ ತರವೇ ಕಾಣುವ ಈ ಹುಡುಗನ ನಗುವಲ್ಲಿ ಗುಳಿ ಕೆನ್ನೆಯ ಹುಡುಗಿಯ ನಗುವಿನಷ್ಟೇ ಸೆಳೆತವಿದೆ. ಸಾಮಾನ್ಯವಾಗಿ ಮಲಯಾಳಂ ನಾಯಕನಟರಲ್ಲಿ ಇರುವ ಒರಟು ಮೀಸೆ, ಗಡ್ಡದ ಹುಡುಗನಲ್ಲದ ಚಾಕೋಲೇಟ್ ಬಾಯ್ ಇವನು. ‘ಈದ’ (eeda) ಶೇನ್ ನಟನೆಯ ಸಿನೆಮಾ. ದಿ ಗ್ರೇಟ್ ಇಂಡಿಯನ್ ಕಿಚನ್, ನಾಯಟ್ಟು ಮುಂತಾದ ಸಿನೆಮಾಗಳ ಅಮೋಘ ನಟನೆಯ ನಿಮಿಷಾ ಇದರ ನಾಯಕಿ.

ಆನಂದ್ (ಶೇನ್) ಮತ್ತು ಐಶ್ವರ್ಯ (ನಿಮಿಷ) ಎಂಬ ಹೆಸರಿನ ಇವರಿಬ್ಬರೂ ಕೇರಳದ ಕಣ್ಣೂರಿನ ಎರಡು ತದ್ವಿರುದ್ಧ ಸೈದ್ಧಾಂತಿಕ ನಿಲುವಿನ ಕುಟುಂಬಕ್ಕೆ ಸೇರಿದವರು. ಆನಂದ್ ಮೈಸೂರಿನಲ್ಲಿ ಇನ್ಶುರೆನ್ಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಐಶ್ವರ್ಯ ಓದಲು ಅಲ್ಲಿ ಬಂದಿದ್ದಾಳೆ. ಪರರಾಜ್ಯದಲ್ಲಿ ನಮ್ಮ ಭಾಷೆಯವರು ಸಿಕ್ಕಾಗ ಉಂಟಾಗುವ ಸಹಜ ಸ್ನೇಹ, ಪ್ರೇಮವಾಗಿ ಬದಲಾಗುತ್ತದೆ. ಆದರೆ ಬದ್ಧ ದ್ವೇಷಿಗಳಾದ ಎರಡೂ ಕುಟುಂಬದವರ ಮುಂದೆ ಇದನ್ನು ತಿಳಿಸುವುದು ಕೂಡ ಅಸಾಧ್ಯ ಅನ್ನುವ ಸ್ಥಿತಿ.

ಕುಟುಂಬ ದ್ವೇಷದ ನಡುವಿನ ಎಷ್ಟೋ ಪ್ರೇಮಕತೆಗಳಿಗಿಂತ ‘ಈದ’ ಯಾಕೆ ಭಿನ್ನ ಅಂದರೆ ಕೇಸರಿ ಮತ್ತು ಕೆಂಪು ಬಾವುಟದ ಸಂಘಟನೆಗಳನ್ನು ತೋರಿಸಿರುವ ಅಥೆಂಟಿಕ್ ರೀತಿಯಿಂದ. ಸಂಘಟನೆಯ ಒಳಗಿನ ಸಂಗತಿಗಳು, ಕಾರ್ಯಕರ್ತರ ರೀತಿಗಳು ಇದನ್ನೆಲ್ಲ ಬಹಳ ಸಣ್ಣ ಸಣ್ಣ ವಿವರಗಳೊಂದಿಗೆ ಚಿತ್ರಿಸಿದ್ದಾರೆ. ಇಲ್ಲಿನ ಘಟನೆಗಳು, ಸಂಘಟನೆಯ ಹಿರಿಯರ ನಿರ್ಧಾರಕ್ಕೆ , ಸಿದ್ಧಾಂತಕ್ಕೆ ಜೀವ ಬೇಕಾದರೂ ಕೊಡುವ ಅಮಾಯಕ ಕಾರ್ಯಕರ್ತರು. ಏಟಿಗೆ ಏಟು. ಜೀವಕ್ಕೆ ಜೀವ ಪಡೆವ ರೀತಿ ಎಲ್ಲವೂ ಎರಡು ಸಂಘಟನೆಗಳು ವ್ಯವರಿಸುವ ರೀತಿಯನ್ನು ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ ಸಿನಿಮಾ. ತಮ್ಮ ಮನೆಯ, ಪ್ರೀತಿಯ ಜೀವ ಬಲಿ ಪಡೆದ ಸಂಘಟನೆಯ/ ಕುಟುಂಬದ ಒಂದು ಜೀವವನ್ನು ಪರಸ್ಪರ ದೂರದೇ ಪ್ರೀತಿಸುವ ಅನಿವಾರ್ಯತೆ.

ಪ್ರೇಮವನ್ನು ಮುರಿಯಲಿಕ್ಕೂ ಸಂಘಟನೆಗಳ ಬಳಿ ಅಸ್ತ್ರವಿರುತ್ತದೆ. ಅದಕ್ಕೆ ಬಲಿಯಾಗಿಯೂ ಅದನ್ನು ಮೀರುವ, ಸಿದ್ಧಾಂತಗಳು ಮನುಷ್ಯದ್ವೇಷವಾಗುವ ಮಟ್ಟಕ್ಕೆ ಹೋದರೆ ಹೇಗೆ ಇಡೀ ಊರೇ ನಾಶವಾಗುತ್ತದೆನ್ನುವ, ಪ್ರೇಮ ಬಾವುಟದ ಬಣ್ಣ ನೋಡಿ ಆಗುವುದಿಲ್ಲವೆಂಬ ಸಂದೇಶ ಸಿನೆಮಾದಲ್ಲಿದೆ. ಪಪ್ಪು ಸಿನೆಮಾಟೋಗ್ರಫಿ ಯಲ್ಲಿ ಕಣ್ಣೂರು, ಮೈಸೂರಿನ ಒಳಬೀದಿಗಳು ಸುಂದರವಾಗಿ ತೆರೆದುಕೊಂಡಿವೆ. ಎರಡು ಧರ್ಮಗಳ ನಡುವಿನ ಪ್ರೇಮಕತೆಗಳು ಎಷ್ಟೋ ಬಂದಿವೆ. ಎರಡು ಸಿದ್ಧಾಂತಗಳ ನಡುವಿನ ಪ್ರೇಮಕತೆಯನ್ನು ಇಷ್ಟು ಸೊಗಸಾಗಿ ಹೇಳಿದ ನಿರ್ದೇಶಕ ಅಜಿತ್‌ಗೆ ಅಭಿನಂದನೆ ಹೇಳಲೇಬೇಕು.

LEAVE A REPLY

Connect with

Please enter your comment!
Please enter your name here