ಪ್ರಪಂಚದ ಎಲ್ಲಾ ಭಾಷೆಗಳ ರಿವೇಂಜ್ ಸ್ಟೋರಿಗಳ ಪೈಕಿ ಸದಾ ನೆನಪಿನಲ್ಲಿ ಉಳಿಯುವ ಸಿನಿಮಾ ‘ಸಾನಿ ಕಾಯಿದಂ’. ಇದರ ಬಗ್ಗೆ ಎರಡೇ ವಾಕ್ಯದಲ್ಲಿ ಹೇಳಿಬಿಡುವುದು ಅಸಾಧ್ಯ. Amazon Prime Videoದಲ್ಲಿ ಸ್ಟ್ರೀಮ್ ಆಗುತ್ತಿರುವ ಚಿತ್ರದ ವಿಮರ್ಶೆ ಇಲ್ಲಿದೆ.
ಅದೊಂದು ಪಾಳು ಬಿದ್ದ ಕಟ್ಟಡ, ಶಾಲೆಯಂತೆ ಉದ್ದಕ್ಕೆ ಕೋಣೆಗಳಿವೆ. ಒಂದು ಬದಿಯಿಂದ ಹೆಣ್ಣೊಬ್ಬಳು ಚೀರಾಡುತ್ತಿದ್ದಾಳೆ. ಅದೇ ಕಟ್ಟಡದ ಇನ್ನೊಂದು ಕೊಠಡಿಯಲ್ಲಿ ನಿಂತು ಚೀರಾಟಕ್ಕೂ ತನಗೂ ಸಂಬಂಧವಿಲ್ಲದಂತೆ ಕಿಟಕಿಯ ಆಚೆ ನೋಡುತ್ತಾ ಸಂಗಯ್ಯ ಬೀಡಿ ಸೇದುತ್ತಿದ್ದಾನೆ. ಅವನ ಬಳಿಗೆ ಪೊನ್ನಿ ಕೋಪದಲ್ಲಿ ಬಂದಾಗ ಅಲ್ಲಿ ಇನ್ನೂ ಒಬ್ಬ ಹೆಂಗಸಿದ್ದಾಳೆ ಎಂದು ನಮಗೆ ತಿಳಿಯುತ್ತದೆ. ಕೊಠಡಿಯ ಕಡೆಗೆ ಸಂಗಯ್ಯ ಹೋಗುತ್ತಾನೆ, ನಮಗೆ ಅಷ್ಟು ಹೊತ್ತು ಕೇಳುತ್ತಿದುದು ಆ ಹೆಂಗಸಿಗೆ ಪೊನ್ನಿ ಚೂರಿಯಿಂದ ಇರಿಯುತ್ತಿದ್ದಾಗಿನ ಚೀರಾಟ ಎಂಬುದು ಆಗಷ್ಟೇ ಗೋಚರ. ಅವಳ ಸಂಕಟ ತನಗೆ ಕೇಳುತ್ತಲೇ ಇಲ್ಲವೆಂಬಂತೆ ಸಂಗಯ್ಯನೂ ಒಂದೆರಡು ಸಲ ಇರಿಯುತ್ತಾನೆ. “ಚುಚ್ಚಿ ಕೊಲ್ಬೇಡ. ನಾನವಳನ್ನು ಜೀವಂತ ಸುಡಬೇಕು” ಪೊನ್ನಿಯದ್ದು ಖಡಕ್ ಧ್ವನಿ. ಚಾಕುಗಳನ್ನೆಲ್ಲ ಸಂಗಯ್ಯ ಚೀಲಕ್ಕೆ ಹಾಕಿ ಅಲ್ಲಿಂದ ಹೊರ ಹೋಗುವಷ್ಟರಲ್ಲಿ ಪೊನ್ನಿ ಆ ಹೆಂಗಸಿನ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುತ್ತಾಳೆ. ಅವಳ ದೇಹ ಕೂತಲ್ಲೇ ಸುಡುತ್ತದೆ.
ಇಂಥದ್ದೊಂದು ದೃಶ್ಯದಿಂದ ತಣ್ಣಗೆ ಆರಂಭವಾಗುವ ಸಿನಿಮಾ ‘ಸಾನಿ ಕಾಯಿದಂ’. ಸಮಚಿತ್ತದ ಯಾರೂ ಹಿಂಸೆಯನ್ನು ಆಸ್ವಾದಿಸುವುದಿಲ್ಲ. ಆದರೆ ಮುಂದಿನ ಅರ್ಧ ಗಂಟೆಯಲ್ಲಿ ನಮ್ಮ ಕಣ್ಣೆದುರು ತೆರೆದುಕೊಳ್ಳುವ ಪೊನ್ನಿಯ ಇತಿಹಾಸ ಆ ಹಿಂಸೆಗೊಂದು ತರ್ಕ ಕೊಡುತ್ತದೆ, ಅಂಥದ್ದೊಂದು ಹಿಂಸೆ ಸರಾಸಗಟು ತಪ್ಪಲ್ಲ ಎಂದು ನಮ್ಮ ಮನಸು ನಿಧಾನವಾಗಿ ಒಪ್ಪಿಕೊಳ್ಳುವ ಹಂತಕ್ಕೆ ಬರುತ್ತದೆ. ಹೀಗೆ ಹಿಂಸೆಗೊಂದು ತರ್ಕ ನೀಡಿ ಪ್ರೇಕ್ಷಕ ಅದನ್ನು ಒಪ್ಪುವಂತೆ ಮಾಡುವ ಹಾಲಿವುಡ್ ನಿರ್ದೇಶಕ ಕ್ವೆಂಟಿನ್ ಟರಾಂಟಿನೋ ಛಾಪು ಅರುಣ್ ಮಾಥೇಶ್ವರನ್‌ನಲ್ಲಿ ಕಾಣುತ್ತದೆ. ‘ಕಿಲ್ ಬಿಲ್’ನ ಬ್ರೈಡ್ ಪಾತ್ರ ಅತೀವ ಹಿಂಸೆಯಲ್ಲಿ ತೊಡಗಿದರೂ ಅವಳಿಗಾಗಿ ಹೇಗೆ ಮನ ಮಿಡಿಯುತ್ತದೋ ‘ಸಾನಿ ಕಾಯಿದಂ’ನಲ್ಲಿ ಪೊನ್ನಿಗೆ ನ್ಯಾಯ ಸಿಗಲಿ ಎಂದು ನಮ್ಮ ಮನಸ್ಸು ಮೆಲ್ಲಗೆ ಕೂಗುತ್ತದೆ. ಟರಾಂಟಿನೋ ಸೂತ್ರಗಳಂತೆ ಇಲ್ಲಿಯೂ ಆರು ಅಧ್ಯಾಯಗಳಲ್ಲಿ ಕತೆಯನ್ನು ವಿಂಗಡಿಸಲಾಗಿದೆ. ಹಾಗೆಂದು ಅರುಣ್ ಇಲ್ಲಿ ನಕಲು ಮಾಡಿದ್ದಾರೆ ಎಂದರೆ ತಪ್ಪಾದೀತು. ಏಕೆಂದರೆ ‘ಸಾನಿ ಕಾಯಿದಂ’ ಚಿತ್ರಗಾರಿಗೆಯಲ್ಲಿ ಸ್ಫೂರ್ತಿ ಪಡೆದಿದ್ದರೂ ಪಕ್ಕಾ ತಮಿಳು ಚಿತ್ರವಾಗಿ ನಿಲ್ಲುತ್ತದೆ.
ಅದು ಎಂಭತ್ತರ ದಶಕದಲ್ಲಿ ನಡೆಯುವ ಕತೆ. ಪೊನ್ನಿ ಒಬ್ಬ ಸಾಮಾನ್ಯ ಪೊಲೀಸ್ ಪೇದೆ. ಅವಳಿಗೆ ಎಂಟ್ಹತ್ತು ವರ್ಷದ ಮಗಳಿದ್ದಾಳೆ. ಗಂಡ ಊರಿನ ಗಿರಣಿಯೊಂದರಲ್ಲಿ ದಿನಗೂಲಿ ನೌಕರ. ಊರ ರಾಜಕಾರಣದಲ್ಲಿ ಆತ ಮತ್ತೊಂದು ಪಕ್ಷದ ಪರ ವಹಿಸಿದ್ದಕ್ಕೆ ಅವನ ಮೇಲೆ ಮಾಲೀಕರಿಗೆ ಅಸಹನೆ. ಹಾಗಾಗಿ ವಿನಾಕಾರಣ ಅವನ ಜತೆ ಜಗಳ ಕಾದು ಕೆಲಸದಿಂದ ಅಟ್ಟುತ್ತಾರೆ. ಪೊನ್ನಿ ಠಾಣೆಯಲ್ಲಿ ಪೊಲೀಸ್ ಆದರೂ ಮನೆಯಲ್ಲಿ ಪ್ರೀತಿಯ ಮಡದಿ ಎಂಬುದನ್ನು ಒಂದೇ ಒಂದು ಪುಟ್ಟ ದೃಶ್ಯದಲ್ಲಿ ಕಟ್ಟಿಕೊಟ್ಟ ರೀತಿ ಬಲು ಸೊಗಸು. ಹೋದ ಕೆಲಸ ಮತ್ತೆ ಪಡೆಯಲು ಪಾಪದ ಗಂಡ ಕ್ಷಮೆ ಕೇಳಲು ಹೊರಟಾಗ ಅಲ್ಲಿ ಅವನ ಕೀಳುಜಾತಿಯ ಪ್ರಸ್ತಾಪ ಬರುತ್ತದೆ. ತಪ್ಪಿಗೆ ಪಶ್ಚಾತ್ತಾಪವಾಗಿ ಸಂಡಾಸು ತೊಳಿ, ಇಲ್ಲದಿದ್ದರೆ ನಿನ್ನ ಹೆಂಡತಿಯನ್ನು ನಮ್ಮ ಜತೆ ಕಳಿಸು ಎಂಬ ಮಾತು ಬಂದಾಗ ಸಹಜವಾಗಿ ಅವನಿಗೆ ಪಿತ್ತ ನೆತ್ತಿಗೆ ಏರಿ ಮುಖಕ್ಕೆ ಉಗಿಯುತ್ತಾನೆ.
ಉಗಿಸಿಕೊಂಡವರು ಸಮಾಜದಲ್ಲಿ ಒಳ್ಳೆಯ ಸಂಪರ್ಕ ಇರುವವರು. ಹಾಗಾಗಿ ಪೊನ್ನಿಯ ಠಾಣೆಯ ಸಬ್ ಇನ್ಸ್ಪೆಕ್ಟರ್ ಮೂಲಕವೇ ಅವಳನ್ನು ಇವರ ಬಿಡಾರಕ್ಕೆ ಕರೆಸುತ್ತಾರೆ. ಅವಳಿಗೆ ಹೊಡೆದು-ಬಡಿದು ದೇಹವನ್ನು ನಿಸ್ತೇಜ ಮಾಡಿ, ನಾಲ್ಕೈದು ಮಂದಿ ಒಬ್ಬರಾದ ಮೇಲೊಬ್ಬರು ಅತ್ಯಾಚಾರಗೈಯುತ್ತಾರೆ. ತೆಳ್ಳಗೆ ಬೆಳ್ಳಗೆ ಇರುವ ಪೊನ್ನಿಯ ಜಾತಿ ಅತ್ಯಾಚಾರದ ವೇಳೆಗೆ ಅಡ್ಡಬರುವುದಿಲ್ಲ. ಉಗಿಸಿಕೊಂಡವನ ಹಗೆತನ ಅಲ್ಲಿಗೇ ನಿಲ್ಲುವುದಿಲ್ಲ. ಪೊನ್ನಿಯ ಗಂಡ ಮತ್ತು ಮಗಳು ಮಲಗಿದ್ದ ಗುಡಿಸಲಿಗೆ ಹೊರಗಿನಿಂದ ಚಿಲಕ ಹಾಕಿ ಸುಟ್ಟಾಗಲೇ ಅವರಿಗೆ ಸಮಾಧಾನ. ಇಷ್ಟೆಲ್ಲ ನಡೆದ ಮೇಲೆ ಅವರೆಲ್ಲರ ಸರ್ವನಾಶಕ್ಕೆ ಪೊನ್ನಿ ಟೊಂಕ ಕಟ್ಟಿ ನಿಲ್ಲುವಾಗ ಆಕೆ ಮಾಡುತ್ತಿರುವುದೂ ತಪ್ಪೆಂದು ಅನಿಸುವುದಿಲ್ಲ. ಅದು ಚಿತ್ರಕತೆ ಬರೆದ ನಿರ್ದೇಶಕನ ಚತುರತೆ.
ಪೊನ್ನಿಯ ಬದುಕು ಬಾಲ್ಯದಿಂದಲೇ ಮುಳ್ಳಿನ ಹಾದಿಯ ಮೇಲೆ ನಡೆದು ಬಂದ ಬಗೆಯನ್ನು ಚಿತ್ರಿಸಿದ ರೀತಿ ಅನನ್ಯ. ಅವಳ ತಾಯಿ ಸಂಗಯ್ಯನ ಹೆಂಡತಿಗೆ ಎರಡನೇ ಪತ್ನಿ. ನೀನೂ ನಿನ್ನ ಮಗಳೂ ಸರ್ವ ನಾಶವಾಗುತ್ತೀರಿ ಎಂಬ ದೊಡ್ಡಮ್ಮನ ಶಾಪ ಅವಳ ನೆನಪಿನಿಂದ ಮರೆಯಾಗಿಲ್ಲ. ಕತೆಗಿರುವ ಈ ಹಿಂದಿನ ಕೊಂಡಿ ಇಲ್ಲಿ ಕತೆಯ ರೂಪದಲ್ಲಿ ಬರದೆ ಒಂದು ನೆನಪಿನ ರೀತಿ ಬಂದು ಹೋಗುವುದೂ ಸಿನಿಮಾದ ಒಟ್ಟಾರೆ ನಿರೂಪಣೆಗೆ ಸೊಗಸಾಗಿ ಒಗ್ಗಿಕೊಂಡಿದೆ. ಜತೆಗೆ ಸರಿಯಾದ ಸಮಯದಲ್ಲಿ ಬಂದು ನೋಡುಗನ ಮೇಲೆ ಪರಿಣಾಮ ಬೀರುತ್ತದೆ.
ಈ ಸಿನಿಮಾದ ದೃಶ್ಯಗಳ ಆಂತರ್ಯದಲ್ಲಿ ಕ್ರೌರ್ಯವಿದೆ. ಆದರೆ ಅದರ ಚಿತ್ರಿಕೆಯಲ್ಲಿ ಕ್ರೌರ್ಯ ನೇರಾನೇರ ರಾಚುವುದಿಲ್ಲ. ಚೌಕಟ್ಟಿನ ಆಚೆ ಕೇಳುವ ಧ್ವನಿ, ಕತ್ತಿ ಹಿಡಿದು ಕಡಿಯುವ ಪಾತ್ರದ ಮುಖದಲ್ಲಿ ಕಾಣುವ ಕ್ರೋಧ, ಫಟಕ್ಕನೆ ಚಿಮ್ಮವ ನೆತ್ತರು ಒಟ್ಟಾಗಿ ಸೇರಿ ಕ್ರೌರ್ಯವನ್ನು ಕಟ್ಟುತ್ತದೆ. ಆ ನೆಲೆಯಲ್ಲಿ ಮಚ್ಚು ಲಾಂಗು ಹಿಡಿದು ಕಡಿಯುವ ರೌಡಿಸಂ ಚಿತ್ರದ ತೆರನಾಗಿ ಹಿಂಸೆಯ ವೈಭವೀಕರಣವಿಲ್ಲ. ಇದು ತಲ್ಲಣ ಹುಟ್ಟಿಸುವ ಹಿಂಸೆ, ಹೃದಯ ಕಲಕುವ ಕ್ರೌರ್ಯ. ಪೊನ್ನಿ ತನ್ನ ಮೊದಲ ಬಲಿ ಪಡೆಯುವಾಗ ರೇಡಿಯೋದಲ್ಲಿ ಪ್ರಸಾರವಾಗುವ ಮಹಾಭಾರತದಲ್ಲಿ ದ್ರೌಪದಿಯ ಶಪಥ ಕೇಳುತ್ತದೆ. ಅಂತ ಅಷ್ಟೂ ಪರಿಣಾಮಕಾರಿ ದೃಶ್ಯಗಳಲ್ಲಿ ಯಾಮಿ ಯಜ್ಞಮೂರ್ತಿಯ ಮಾಂತ್ರಿಕ ಮಸೂರ ಅದ್ಭುತ ಕಾರ್ಯ ನಿಭಾಯಿಸಿದೆ. ರೇಪ್ ಸೀನುಗಳು ಬಹಳ ಸಿನಿಮಾಗಳಲ್ಲಿ ಬಂದು ಹೋಗಿರುವುದನ್ನು ನೀವೂ ನೋಡಿರುತ್ತೀರಿ. ಆದರೆ ಚೀರಾಟ ತೋರಿಸದೆ, ಬಟ್ಟೆಯ ಎಳೆದಾಟವಿಲ್ಲದೆ, ಕ್ಯಾಮರಾ ಇಟ್ಟ ಕೋನದಿಂದಲೇ ಪ್ರೇಕಕ್ಷರ ಬೆನ್ನ ಹುರಿಗೆ ಬೆಂಕಿ ಇಟ್ಟ ಅನುಭವ ಮೂಡಿಸುವ ಯಾಮಿಯ ಕ್ಯಾಮರಾ ಕಲೆಗಾರಿಕೆ ಬಗ್ಗೆ ಇಲ್ಲಿ ಹೇಳಲೇ ಬೇಕು. ಬೆಳಕು ಸಂಯೋಜನೆಯ ಶ್ರೇಯಸ್ಸೂ ಆಕೆಗೇ.
ದೃಶ್ಯಗಳ ಪರಿಣಾಮ ತೀವ್ರಗೊಳಿಸುವ ಜತೆಗೆ ಸಿನಿಮಾಕ್ಕೊಂದು ದೇಸಿ ಸೊಗಡು ಮೂಡಿಸುವುದು ಹಿನ್ನೆಲೆ ಸಂಗೀತ. ಅದೇನು ವಾದ್ಯಗಳನ್ನು ಬಳಕೆ ಮಾಡಿದ್ದಾರೆ ಎಂದು ತಿಳಿಯಲು ಕಣ್ಣು ಮುಚ್ಚಿ ಕೇವಲ ಧ್ವನಿಯ ಕಡೆಗೆ ಧೇನಿಸಬೇಕು. ವಾದ್ಯಗಳು ಮತ್ತು ಅದರ ಮಟ್ಟುಗಳು ನಮಗೇ ತಿಳಿಯದಂತೆ ನಮ್ಮನ್ನೂ ದೃಶ್ಯದ ಭಾಗವಾಗಿ ಸೆಳೆದು ಬಿಡುತ್ತದೆ. ಇನ್ನು ನಟನೆಯ ಮಟ್ಟಿಗೆ ಹೇಳುವುದಾದರೆ ಕೀರ್ತಿ ಸುರೇಶ್ ಅಭಿನಯವನ್ನು ಅಕ್ಷರಗಳಲ್ಲಲ್ಲ, ತೆರೆಯ ಮೇಲೆ ನೋಡಿಯೇ ಅನುಭವಿಸಬೇಕು. ಆಕೆಯ ಮುಖದ ಹೊರತು ಬೇರೇನೂ ತೋರಿಸದ ಸುದೀರ್ಘ ದೃಶ್ಯವೊಂದರಲ್ಲಿ ಪೊನ್ನಿಯ ಬೇಗುದಿ, ಹೃದಯ ಹಿಂಡುವ ನೋವು, ಮನಸ್ಸು ಅನುಭವಿಸುತ್ತಿರುವ ಹಿಂಸೆ, ತನ್ನವರ ಕಳೆದುಕೊಂಡ ಆಲಾಪ, ಪ್ರತೀಕಾರ ತೀರಿಸಿಯೇ ಸಿದ್ಧವೆಂದ ಪ್ರಲಾಪಗಳೆಲ್ಲ ಏಕಕಾಲಕ್ಕೆ ಕಾಣುವ ಕೀರ್ತಿಯ ನಟನೆಯನ್ನು ಅಕ್ಷರಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಸಂಗಯ್ಯನ ಪಾತ್ರದ ಸೆಲ್ವ ರಾಘವನ್ ಕೀರ್ತಿಯ ಅಭಿನಯಕ್ಕೆ ಸಮನಾದ ಪೋಷಕ ಪಾತ್ರ.
ಚಿತ್ರದುದ್ದಕ್ಕೂ ಕಾಣುವ ಅಂಧ ಬಾಲಕನ ಪಾತ್ರದ ಏರಿಳಿತದ ಬಗ್ಗೆ ನಾನಿಲ್ಲಿ ಹೇಳಿಬಿಟ್ಟರೆ ನಿಮ್ಮ ರಸಾಸ್ವಾದನೆಗೆ ಧಕ್ಕೆ ತಂದಂತೆ. ಕತೆಯ ಬಗೆಗಿನ ಬೇರೆಲ್ಲಾ ವಿವರ ನಿಮಗೆ ತಿಳಿದರೂ ಅದರ ತೆರೆಯ ಮೇಲಿನ ಪ್ರಭಾವ ಬೇರೆಯೇ ಇದೆ. ಇಷ್ಟು ವಿವರ ಓದಿದ ಮೇಲೆ ಇನ್ನೊಂದು ವಿಷಯ ಹೇಳಬೇಕಾದ ಅಗತ್ಯವಿಲ್ಲ, ಆದರೂ ಹೇಳಿಬಿಟ್ಟರೆ ನಾನು ನಿರಪರಾಧಿ. ಈ ಸಿನಿಮಾ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ, ವಯಸ್ಕರಲ್ಲೂ ಗಟ್ಟಿ ಮನಸ್ಸಿನವರಿಗೆ ಮಾತ್ರ, ಗಟ್ಟಿ ಮನಸ್ಸಿದ್ದೂ ಮೃದು ಹೃಯವಿದ್ದವರಿಗೆ ಮಾತ್ರ. ಆ ಮೂರೂ ವರ್ಗಕ್ಕೆ ನೀವು ಸೇರಿದ್ದರೆ ‘ಸಾನಿ ಕಾಯಿದಂ’ ನೀಡುವ ಅದ್ಭುತ ಅನುಭವ ನಿಮ್ಮದು.