ಮೊದಲಾರ್ಧ ಚಿತ್ರಕಥೆಯಲ್ಲಿ ಹೊಸತನ ಬೇಕಿತ್ತು ಎನಿಸಿದರೂ ದ್ವಿತಿಯಾರ್ಧದಲ್ಲಿ ಬಹುತೇಕ ಪಾತ್ರಗಳು ಕಾಡುತ್ತ ನಮ್ಮ ಗೆಳೆಯರನ್ನು ನೆನಪಿಸಿಕೊಳ್ಳುವಂತೆ ಮಾಡುತ್ತವೆ. ಬೆಟ್ಟಿಂಗ್ಗೆ ಬಲಿಯಾಗಿ ಬದುಕು ಹಾಳುಮಾಡಿಕೊಳ್ಳುವ ಯುವ ಸಮೂಹಕ್ಕೆ ಇದು ಒಳ್ಳೆಯ ಸಂದೇಶ.
ಐಪಿಎಲ್ ಬೆಟ್ಟಿಂಗ್ನಿಂದ ಬದುಕನ್ನು ಹೈರಾಣಾಗಿಸಿಕೊಂಡವರ ಕಣ್ಣೀರಿನ ಕತೆಯಿದು. ಐಪಿಎಲ್ನಿಂದ ಜೀವನ ಹಾಳು ಮಾಡುಕೊಂಡವರ ಸತ್ಯ ಕತೆಗಳು ಆಗಿಂದಾಗ್ಗೆ ನಮ್ಮ ಕಿವಿಗಳ ಮೇಲೆ ಬೀಳುತ್ತಿರುತ್ತವೆ. ಅಂತಹ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾಗೆ ಚಿತ್ರಕಥೆ ಮಾಡಿದ್ದಾರೆ. ಕುಂದಾಪುರ, ಮಂಡ್ಯ, ಬೆಂಗಳೂರು, ಬೆಳಗಾವಿ ಈ ನಾಲ್ಕು ಪ್ರದೇಶಗಳ ಹಿನ್ನೆಲೆಯಲ್ಲಿ ಕತೆಗಳನ್ನು ಹೆಣೆದು ಐಪಿಎಲ್ ಬ್ಯಾನ್ ಆಗ್ಬೇಕು ಎನ್ನುವಂತ ಗಂಭೀರ ವಿಷಯವನ್ನು ತಿಳಿಹಾಸ್ಯದ ನಿರೂಪಣೆಯೊಂದಿಗೆ ಅರ್ಥೈಸುವ ಪ್ರಯತ್ನ ಮಾಡಲಾಗಿದೆ.
ಕೋರ್ಟ್ ಸನ್ನಿವೇಶದೊಂದಿಗೆ ಐಪಿಲ್ ಬ್ಯಾನ್ ಆಗ್ಬೇಕು ಎನ್ನುವ ವಕಾಲತ್ತಿನೊಂದಿಗೆ ತೆರೆದುಕೊಳ್ಳುತ್ತದೆ ಸಿನಿಮಾ. ಕುಂದಾಪುರದ ಮುಗ್ದ ನವಪ್ರೇಮಿಗಳ ಸಲ್ಲಾಪ, ಬೆಳಗಾವಿಯ ಆಟೋಚಾಲಕ, ಬೆಂಗಳೂರ ಐಟಿ ಕಂಪನಿಯ ಉದ್ಯೋಗಿಯ ಸಂಸಾರ, ಮಂಡ್ಯದಳ್ಳಿ ಸಣ್ಣ ಹುಡುಗರನ್ನು ಐಪಿಎಲ್ ಹೇಗೆಲ್ಲಾ ಸುತ್ತಿಕೊಳ್ಳುತ್ತದೆ ಎನ್ನುವುದನ್ನು ಉದಾಹರಿಸುವುದೇ ಚಿತ್ರಕಥೆ. ಚಿತ್ರದಲ್ಲಿ ತಬಲ ನಾಣಿ ಲಾಯರ್ ಆದ್ರೆ, ಸುಚೇಂದ್ರ ಪ್ರಸಾದ್ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಘು ಪಾಂಡೇಶ್ವರ್, ದಿನೇಶ್ ಮಂಗಳೂರು. ಯಶ್ ಶೆಟ್ಟಿ, ಅರುಣಾ ಬಾಲರಾಜ್, ತರಂಗ ವಿಶ್ವ, ರಾಜೇಶ್ ನಟರಂಗ, ಅಪೂರ್ವರಂತಹ ಅನುಭವಿ ಕಲಾವಿದರೊಂದಿಗೆ ಮಾಸ್ಟರ್ ಪುಟ್ಟರಾಜು, ಮಾಸ್ಟರ್ ಮಹೇಂದ್ರ ಅಲ್ಲದೇ ಹೊಸ ಪರಿಚಯದಲ್ಲಿ ಹೊಸಬರು ಎನಿಸಿಕೊಳ್ಳದಂತೆ ನವ ಪ್ರೇಮಿಗಳ ಪಾತ್ರಗಳಿಗೆ ಯಶಸ್ ಅಭಿ ಹಾಗೂ ದೀಪಾ ಜಗದೀಶ್ ಜೀವ ತುಂಬಿದ್ದಾರೆ.
ಈ ಹಿಂದೆ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಚಿತ್ರ ನಿರ್ದೇಶಿಸಿದ್ದ ಕುಮಾರ್ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ವೀರ್ ಸಮರ್ಥ್ ಸಂಗೀತ, ಶಿವ ಸೇನಾ ಮತ್ತು ಶಿವಶಂಕರ್ ಛಾಯಗ್ರಹಣ ಕತೆಗೆ ಪೂರಕವಾಗಿದೆ. ಮೊದಲಾರ್ಧ ಚಿತ್ರಕಥೆಯಲ್ಲಿ ಹೊಸತನ ಬೇಕಿತ್ತು ಎನಿಸಿದರೂ ದ್ವಿತಿಯಾರ್ಧದಲ್ಲಿ ಬಹುತೇಕ ಪಾತ್ರಗಳು ಕಾಡುತ್ತ ನಮ್ಮ ಗೆಳೆಯರನ್ನು ನೆನಪಿಸಿಕೊಳ್ಳುವಂತೆ ಮಾಡುತ್ತವೆ. ಪ್ರಸ್ತುತ ಸಮಾಜದಲ್ಲಿ ಐಪಿಎಲ್ ಬೆಟ್ಟಿಂಗ್ನಲ್ಲಿ ಸರಳ ಬದುಕನ್ನು ಕಠಿಣಗೊಳಿಸಿಕೊಳ್ಳುತ್ತಾ, ತಮ್ಮ ಬದುಕನ್ನು ತಾವೇ ಹಾಳುಮಾಡುಕೊಳ್ಳುತ್ತಿರುವ ಯುವ ಸಮೂಹಕ್ಕೆ ಈ ಸಿನಿಮಾ ಒಂದೊಳ್ಳೆಯ ಸಂದೇಶ ದಾಟಿಸುತ್ತದೆ.